Homeರಾಜಕೀಯಹೆಗಡೆ ಮಗಳು ಕೈ ಕ್ಯಾಂಡಿಡೇಟಾದರೆ ಅನಂತ್ಮಾಣಿಗೆ ಸೋಲು ಗ್ಯಾರಂಟಿ!

ಹೆಗಡೆ ಮಗಳು ಕೈ ಕ್ಯಾಂಡಿಡೇಟಾದರೆ ಅನಂತ್ಮಾಣಿಗೆ ಸೋಲು ಗ್ಯಾರಂಟಿ!

- Advertisement -
- Advertisement -

ಶುದ್ಧೋದನ |

ಉತ್ತರ ಕನ್ನಡದಲ್ಲಿ ಲೋಕಸಭೆ ಚುನಾವಣೆಯ ಸಂಭಾವ್ಯ ಪೈಲ್ವಾನಕುರಿತು ರಂಗು-ರಂಗಿನ ಮಾತುಕತೆ ನಡೆಯಲಾರಂಭಿಸಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾದ ಬ್ರಾಹ್ಮಣರೂ ಅಧಿಕ ಪ್ರಸಂಗಿ ಸಂಸದ ಅನಂತ್ಮಾಣಿಯ ಹಾವಳಿಗೆ ರೋಸತ್ತು ಹೋಗಿದ್ದಾರೆ. ಸ್ವಪಕ್ಷದೊಳಗಿನ ಬ್ರಾಹ್ಮಣ ಲಾಬಿಯೂ ಆತನಿಗೆ ತಿರುಗಿ ಬಿದ್ದಿರೋದು ಚುನಾವಣಾ ಕಣಕ್ಕೆ ರೋಚಕತೆಯನ್ನು ತಂದುಕೊಟ್ಟಿದೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ, ಶಿರಸಿ ಶಾಸಕ-ಕಾಗೇರಿ ಹೆಗಡೆ ವಗೈರೆ ವಿಪ್ರೋತ್ತಮರ ವಿರೋಧಿ ಪಡೆ ಅನಂತ್ಮಾಣಿಗೆ ಗೇಟ್‌ಪಾಸ್ ಕೊಡಿಸುವ ಹಠಕ್ಕೆ ಬಿದ್ದಿದೆ. ಈಚೆಗೆ ನಿಧನರಾದ ಕೇಂದ್ರ ಮಂತ್ರಿ ಅನಂತ ಕುಮಾರ್ ಶಾಸ್ತ್ರೀಯ ಇಂಗಿತವೂ ಇದೇ ಆಗಿತ್ತು. ಹಿಂದುತ್ವದ ಇತಿಹಾಸ ‘ತಜ್ಞ’ ಸೂಲಿಬೆಲೆ ಚಕ್ರವರ್ತಿಯನ್ನು ಉತ್ತರಕನ್ನಡದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಮಾಡುವ ಪ್ರಯತ್ನ ಬಿರುಸಾಗಿ ನಡೆಯುತ್ತಿದೆ. ಇದು ಸಾಧ್ಯವಾಗದಿದ್ದರೆ ಅನಂತ್ಮಾಣಿಯ ಆಜನ್ಮ ಶತ್ರು ಕಾಗೇರಿ ಹೆಗಡೆಯನ್ನು ಕೇಸರಿ ಪಾಳೆಯದ ಕಪ್ಪುಕುದುರೆ ಮಾಡಿ ಯುದ್ಧಕ್ಕಿಳಿಸುವ ಪ್ಲಾನ್-ಬಿ ಕೂಡ ಹೆಣೆಯಲಾಗಿದೆ.

ಈಗಾಗಲೇ ನಡೆದಿರುವ ಸಮೀಕ್ಷೆಗಳೆಲ್ಲವೂ ಮಾಣಿ ಗೆಲ್ಲುವುದು ಅನುಮಾನ ಎಂತಲೇ ಹೇಳಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಎಚ್ಚರಿಕೆಯ ಒಮ್ಮತದ ಗೇಮ್‌ಪ್ಲ್ಯಾನ್ ಹೆಣೆದರೆ ಅನಂತ್ಮಾಣಿಯನ್ನು ಮಾಜಿ ಮಾಡೋದು ಕಷ್ಟದ ಕೆಲಸವೇನೂ ಅಲ್ಲ. ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಎರಡನ್ನು ಏಕಕಾಲದಲ್ಲಿ ನಿಭಾಯಿಸಬಲ್ಲ ಆರ್.ವಿ.ದೇಶಪಾಂಡೆ ದಗಲುಬಾಜಿತನ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮೈತ್ರಿಕೂಟದ ಹುರಿಯಾಳು ನಿರಾಯಾಸವಾಗಿ ಗೆಲ್ಲಬಹುದು. ಹಾಗಂತ ದೇಶಪಾಂಡೆ, ಕಳೆದ ಬಾರಿ ಬರೋಬ್ಬರಿ ಒಂದು ಮುಕ್ಕಾಲು ಲಕ್ಷ ಮತದಂತರದಲ್ಲಿ ಸೋತಿರುವ ತನ್ನ ಮಗ ಪ್ರಶಾಂತನನ್ನೇ ಮತ್ತೆ ಅಭ್ಯರ್ಥಿಯಾಗಿಸಿದರೆ ಅದು ಕಾಂಗ್ರೆಸ್ಸಿಗೇ ಲುಕ್ಸಾನು. ಯಾಕೆಂದರೆ ಜಿಲ್ಲೆಯ ಎರಡು ಪ್ರಬಲ ಜಾತಿಯಾದ ಹವ್ಯಕ ಬ್ರಾಹ್ಮಣರು ಮತ್ತು ದೀವರನ್ನು ದೇಶಪಾಂಡೆ ಎದುರು ಹಾಕಿಕೊಂಡಿರೋದು ಅವರಿಗೆ ಮುಳುವಾಗಲಿದೆ.

ಮಗನಲ್ಲದಿದ್ದರೆ, ಡಿಸಿಸಿ ಅಧ್ಯಕ್ಷನೂ ಕಳೆದ ಅಸೆಂಬ್ಲಿ ಇಲೆಕ್ಷನ್ನಲ್ಲಿ ಶಿರಸಿಯಲ್ಲಿ ಸೋತಿರುವ ಭೀಮಣ್ಣ ನಾಯ್ಕನನ್ನಾದರು ಅಭ್ಯರ್ಥಿಯಾಗಿಸುವ ಸಾಹಸಕ್ಕೆ ದೇಶಪಾಂಡೆ ಸಾಹೇಬರು ಕೈಹಾಕಬಹುದು. ಆದರೆ ಸ್ವಜಾತಿ ದೀವರ ನಡುವೆಯೇ ಲೀಡರ್‌ಗಿರಿ ಬೆಳೆಸಿಕೊಳ್ಳಲಾಗದ ಭೀಮಣ್ಣನಿಗೆ ಎಂಪಿಗಿರಿ ಕ್ಯಾಂಡಿಡೇಟಾಗುವ ವರ್ಚಸ್ಸಿಲ್ಲ ಅನ್ನೋದು ಮಾತ್ರ ಸತ್ಯ. ಇನ್ನು ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌ರಿಗೆ ಉತ್ತರಕನ್ನಡದಿಂದ ಎಂಪಿಗಿರಿಗೆ ಸ್ಪರ್ಧಿಸುವ ಯೋಚನೆಯಿದ್ದಂತಿದೆ. ಆದರೆ ಈಡಿಗರ ನಾಯಕನೆಂಬ ಬ್ರ್ಯಾಂಡೇ ಹರಿಪ್ರಸಾದ್‌ಗೆ ಮುಳುವಾಗಿದೆ. ಯಾಕೆಂದರೆ ಜಿಲ್ಲೆಯಲ್ಲಿ ದೀವರ ವಿರುದ್ದ ಇತರ ಸಣ್ಣ ಪುಟ್ಟ ಜಾತಿಗಳು-ಬ್ರಾಹ್ಮಣರು ಒಂದಾಗುವ ದ್ವೇಷದ ವಾತಾವರಣವಿದೆ. ಇದು ಹಿಂದುತ್ವದ ಅಡ್ಡ ಪರಿಣಾಮ! ಬ್ರಾಹ್ಮಣಿಕೆಯ ತಂತ್ರಗಾರಿಕೆ!!

ಜೆಡಿಎಸ್‌ನ ಆನಂದ ಅಸ್ನೋಟಿಕರ್ ತಾನೊಬ್ಬ ಹಿಂದುಳಿದ ವರ್ಗದ ನಾಯಕಾಗ್ರೇಸ ಎಂಬಂತೆ ಪೋಸು ಕೊಡುತ್ತಿದ್ದಾನೆ. ಆದರೆ ಅಸ್ನೋಟಿಕರ್‌ಗೆ ಕಾರವಾರದಾಚೆಗೆ ಮತ ಪಡೆಯುವ ಶಕ್ತಿಯಿಲ್ಲ. ಬಿಜೆಪಿಯ ಅನಂತ್ಮಾಣಿ ಸೋಲಿಸಲು ಮೈತ್ರಿಕೂಟ ಆತನದೇ ಜಾತಿಯ ಹವ್ಯಕ ಅಭ್ಯರ್ಥಿ ನಿಲ್ಲಿಸುವ ಸ್ಟಾçಟಜಿ ಮಾಡಬೇಕಾಗಿದೆ. ಅನಂತ್ಮಾಣಿ ಬಗ್ಗೆ ಬೇಸರದಲ್ಲಿರುವ ಹವ್ಯಕರ ಮತ ಈ ತಂತ್ರಗಾರಿಕೆಯಿಂದ ಸಲೀಸಾಗಿ ಪಡೆಯಬಹುದು. ದೇಶಪಾಂಡೆ ಖಾನ್‌ದಾನ್ ಇಲೆಕ್ಷನ್ ಕಣದಿಂದ ದೂರಾದರೆ ದೀವರು ಮತ್ತಿತರ ಹಿಂದುಳಿದ ಸಮುದಾಯದ ಮತವೂ ಮೈತ್ರಿಕೂಟಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್‌ನಲ್ಲಿ ಅಂಥ ದೈತ್ಯ(ಅನಂತ್ಮಾಣಿ) ಸಂಹಾರಕ ಹವ್ಯಕ ಕಾಣಿಸುತ್ತಿಲ್ಲ. ಜೆಡಿಎಸ್‌ನಲ್ಲಿರುವ ಶಶಿಭೂಷಣ ಹೆಗಡೆ ಇಡೀ ಜಿಲ್ಲೆಯಲ್ಲಿ ಪ್ರಭಾವಳಿಯಿದೆ. ಹೆಗಡೆಜೀ ಮೊಮ್ಮಗನೆಂಬ ಬಲವಿದೆ. ಹವ್ಯಕರ ಮತ ಪಡೆಯಬಲ್ಲ ಶಶಿಭೂಷಣ್‌ಗೆ ಇತರ ವರ್ಗದ ಮತಕ್ಕೆ ಹಸ್ತ ಚಿಹ್ನೆ ಅನಿವಾರ್ಯ. ತೆನೆಹೊತ್ತ ಮಹಿಳೆಯಿಂದ ಇದು ಸಾಧ್ಯವಾಗದು. ಅಂದರೆ ಶಶಿ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ, ದೇಶಪಾಂಡೆ ಶುದ್ಧಿಯಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ.

ಇದಕ್ಕೆ ದೇಶಪಾಂಡೆ ಒಪ್ಪುವುದು ಅನುಮಾನ. ಹಾಗೆಯೇ ಅನಂತ್ಮಾಣಿ ಬಗ್ಗೆ ಏನೋ ಒಂಥರ ಸೆಳೆತವಿರುವ ಶಶಿ ಆತನ ವಿರುದ್ಧ ನಿಲ್ಲಲಾರನೆಂಬ ಅಭಿಪ್ರಾಯ ಕಾಂಗ್ರೆಸ್-ಜೆಡಿಎಸ್-ಬಿಜೆಪಿಯಲ್ಲಿದೆ. ಈ ಒಳರಾಜಕಾರಣದ ಸುಳಿ ಸಂಕಷ್ಟ, ಜಿಲ್ಲೆಯ ಸೋಷಲ್ ಇಂಜಿನಿಯರಿಂಗ್, ಕ್ಯಾಸ್ಟ್ ಕೆಮಿಸ್ಟ್ರಿ ಲೆಕ್ಕಹಾಕಿರುವ ಕಾಂಗ್ರೆಸ್‌ನ ಒಂದು ಬಣ ತಣ್ಣಗೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿಯನ್ನು ಮೈತ್ರಿಕೂಟದ ಅಭ್ಯರ್ಥಿಯಾಗಿಸುವ ಪ್ಲಾನು ಹಾಕಿಕೊಂಡು ಆಕೆಯ ಹೆಸರು ತೇಲಿ ಬಿಡಲಾರಂಭಿಸಿದೆ. ಇದು ಸೂಕ್ತ ಆಯ್ಕೆ ಮತ್ತು ರಣತಂತ್ರ ಎಂದು ಜನಸಾಮಾನ್ಯರೂ ಹೇಳುತ್ತಿದ್ದಾರೆ. ಬಿಜೆಪಿಯ ಅನಂತ್ಮಾಣಿಯನ್ನು ಮನೆಗೆ ಕಳಿಸುವ ಮೂಡ್‌ನಲ್ಲಿರುವ ಮತದಾರರಿಗೆ ಹೆಗಡೆಜೀ ಖಾನ್‌ದಾನ್ ಹೆಸರು ಕೇಳುತ್ತಿದ್ದಂತೆಯೇ ಮೈತ್ರಿಕೂಟದತ್ತ ನೋಟ ಹರಿದಿದೆ.

ಇವತ್ತಿಗೂ ಉತ್ತರ ಕನ್ನಡದಲ್ಲಿ ಹೆಗಡೆಜೀ ಮತ್ತು `ಬಂ’ ನಾಮ ಬಿಲದ ವಿಚಿತ್ರ ಸೆಳೆತವಿದೆ. ಹೆಗಡೆಜೀ ಅಂದರೆ ಆತನ ಜಾತಿಬಂಧುಗಳಾದ ಹವ್ಯಕರಲ್ಲಿ ಕಮಲ-ಅನಂತ್ಮಾಣಿಯನ್ನು ಮರೆಸುವಷ್ಟು ಮೇನಿಯಾ ಇದೆ. ಹೆಗಡೆಜೀ ವಂಶದ ಮಮತಾ ಕಾಂಗ್ರೆಸ್ ಅಭ್ಯರ್ಥಿ ಅಂತಾದರೆ ಹವ್ಯಕರು ಕಣ್ಮುಚ್ಚಿ ಓಟು ಹಾಕೋದು ಖಂಡಿತ. ಹಾಗೆಯೇ ನಾಡಾವರು, ಪಟಗಾರರು.. ಮುಂತಾದ ಸಣ್ಣ-ಪುಟ್ಟ ಸಮುದಾಯಕ್ಕೆ ಹೆಗಡೆಜೀ ಬಗ್ಗೆ ಅಭಿಮಾನವಿದೆ. ಬಿಜೆಪಿಯಲ್ಲಿರುವ ಹೆಗಡೆಜೀ ಶಿಷ್ಯ ಬಳಗವೂ ‘ಗುರುಕಾಣಿಕೆ’ ನೀಡದೇ ಇರಲಾರದು. ದೇಶಪಾಂಡೆಗೂ ತನ್ನನ್ನು ಈ ಮಟ್ಟಕ್ಕೆ ಬೆಳೆಯಲು ಆರಂಭದಲ್ಲಿ ನೀರೆರೆದ ಹೆಗಡೆಜೀ ಋಣ ತೀರಿಸಲು ಇದೊಂದು ಅವಕಾಶ. ದೇಶಪಾಂಡೆ ತನ್ನ ಜನ್ಮಜಾತ ದ್ರೋಹ ಗುಣ-ಧರ್ಮ ಬಿಟ್ಟು ಕೃತಜ್ಞತೆಯಿಂದ ಕೆಲಸ ಮಾಡಿದರೆ ಮೈತ್ರಿಕೂಟದ ಮಮತಾ ನಿರಾಯಾಸವಾಗಿ ಗೆಲ್ಲುತ್ತಾರೆ. ಮಮತಾ ಹೆಗಡೆ(ನಿಚ್ಚಾನಿ)ಯನ್ನು ಹಠ ಹಿಡಿದು ಮೈತ್ರಿಕೂಟದ ಕ್ಯಾಂಡಿಡೇಟ್ ಮಾಡಿದರೆ ಆತ ಹೆಗಡೆಜೀಗೆ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ್ತವೂ ಆಗುತ್ತದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...