ಹೆಂಗಸರ ಯೋಚನಾ ಧಾಟಿ

0

 ಡಾ. ವಿನಯಾ ಒಕ್ಕುಂದ |

‘ನನ್ನ ಕೆಲ್ಸದಾಕಿಹಂಗ ನೋಡಬ್ಯಾಡ್ರಿ, ನಾನೂ ದೊಡ್ಡ ಮನತನದಾಕಿ ಇದ್ನಿ. ಏನ್ಮಾಡ್ಲಿ? ಇಲ್ಲಿಗ ಬಂದ ನಿಂತೀನಿ’ ಅಂತಾನೇ ಮನೆಯ ಹೊಸ್ತಿಲು ದಾಟಿ ಒಳಬಂದಿದ್ದರಿಂದ ಪಾರ್ವತಮ್ಮನ ಜೊತೆ ನನ್ನ ವ್ಯವಹಾರ, ಹೇಳುವ-ಕೇಳುವ ಎಂಬ ನಿಯಮವನ್ನು ದಾಟಿಯಾಗಿತ್ತು. ಏನಿದ್ದರೂ ಪಾರ್ವತಮ್ಮ ಹೇಳುವುದು, ನಾನು ಕೇಳುವುದು. ರೊಟ್ಟಿ ಮಾಡಿಕೊಟ್ಟು ಹೋಗುವ ಒಂದರ್ಧ ತಾಸಿನಲ್ಲಿ, ‘ತಂಗಿ ಕರಿ ನನ್ನ ಮೊಮ್ಮಕ್ಕಳನ್ನ ಬಿಸೇದ ತಿಂದ್ರ ರೊಟ್ಟಿ ರುಚಿ ಅನ್ನಸತಾವ’ ಎಂತಲೋ, ‘ಯಾಕೋ ನನ್ನ ತಮ್ಮ ಭಾಳ ಗಡಿಬಿಡಿಯಂವಾ ಅದ್ಹಾಂಗದಾನ, ನೀನ ಜರಾ ಸಂಭಾಳಿಸ್ಗೊ’ ಅಂತಲೋ ಹೇಳುತ್ತ ಮನೆಯ ಹಿರೀಕರ ಸ್ಥಾನ ತುಂಬುತ್ತಿದ್ದರು. ನಾನು ‘ಅಮ್ಮಾ’ ಅಂತ ಕರೆದಾಗೆಲ್ಲ ಪಾರ್ವತಮ್ಮನ ಸಪ್ಪೆ ಮುಖದ ಮೇಲೆ ನಗೆಯ ಎಳೆಗೆರೆಗಳು ಮೂಡುತ್ತಿದ್ದವು. ದಿನದ ಒಂದರ್ಧ ಗಂಟೆಯಲ್ಲಿಯೇ ನಾವು ನಮ್ಮ ಬದುಕುಗಳ ಯಾವುದೋ ಹರಕೆಯನ್ನು ತುಂಬಿಕೊಳ್ಳಲು ಯತ್ನಿಸುತ್ತಿರುವಂತಿತ್ತು. ‘ಅಮ್ಮ, ರೊಟ್ಟಿ ಜರಾ ತೆಳ್ಳಗಾಗಬೇಕಂತ. ನಿಮ್ಮ ತಮ್ಮ ಅಂತಿದ್ರು ನೋಡ್ರಿ’ ಅಂದಿದ್ದೆ. ಯಾವತ್ತಿನದೋ ಮಾತಿಗೆ ಇನ್ನು ಯಾವತ್ತೋ ಉತ್ತರಿಸೋದು ಪಾರ್ವತಮ್ಮನ ಸ್ವಭಾವ. ನಾನು ಮಾತ್ರ ಆ ಮಾತಿನ ಎಳೆಗಳನ್ನು ಜೋಡಿಸಿಕೊಳ್ಳುವುದರಲ್ಲಿ ದಿಗಿಲು ಬೀಳುತ್ತಿದ್ದೆ. ಮೊನ್ನೆ ಪಾರ್ವತಮ್ಮ ಹೇಳತೊಡಗಿದ್ದರು. ‘ತಂಗಿ, ಮೊದಲೆಲ್ಲ ನನ್ನ ರೊಟ್ಟಿ ಪೇಪರ್‍ಕಿನ್ನಾ ತೆಳ್ಳಗಾಗತಿದ್ವು. ಒಬ್ಬರ ಮಾರಿ ಒಬ್ಬರಿಗೆ ಕಾಣೂ ಕನ್ನಡಿ ಹಳ್ಳಾಗತಿದ್ವು. ಬಡಿಸ್ಗೊಂಡು ಬಡಿಸ್ಗೊಂಡು ಕೈ ರೆಟ್ಟಿ ನರ ಎಲ್ಲಾ ಸತ್ತೇ ಹೋಗ್ಯಾವವ್ವಾ. ಒಮ್ಮೊಮ್ಮೆ ರೆಟ್ಟಿ ಮೂಲದಿಂದ ಬ್ಯಾನಿ ಎದ್ದಿತೂ ಅಂದ್ರ ಯಾಕಾರ ಈ ಜೀಂವಾ ಹಿಡ್ದು ಎಳದಾಡತೇನೋ ಅನ್ನಿಸಿಬಿಡ್ತದ…’ ಅಂತ ಕಣ್ಣಿಗೆ ಸೆರಗೊತ್ತಿಕೊಂಡರು. ‘ಬಿಡ್ರಿ ಅಮ್ಮಾ, ಹಿಂದಿದ್ದ ನೆನಸಿ ಹಿತ್ತಲಾಗ ಕುಂತು ಅತ್ರ ಬಂದದ್ದೇನು ಅಂತಾರಲ್ಲ… ಸಮಾಧಾನ ಮಾಡ್ಕೋರಿ. ನಿಮ್ಮ ತಮ್ಮಗ ಹಲ್ಲ ಗಟ್ಟಿ ಅದಾವ ಬಿಡ್ರಿ’ ಅಂತ ಹೇಳಿ ಸಮಾಧಾನ ಮಾಡಿದೆ. ಆಮೇಲಿಂದ ಅಮ್ಮ ತಮ್ಮ ಕಥೆಯ ಬುತ್ತಿ ಆಗೊಂದಿಷ್ಟು ಈಗೊಂದಿಷ್ಟು ಬಿಚ್ಚುತ್ತಿದ್ದರು.
ಕಟ್ಟಾ ಬಯಲುಸೀಮೆಯ ಉರಿಬಿಸಿಲಿನ ನಾಡು. ಯಥಾಪ್ರಕಾರ ಬಾಲ್ಯ ಕಳೆದದ್ದು ಬಿಸಿಲ ಎಳೆಗಳೇ ಸರಪಳಿಗಳಾದ ಬಯಲುನಾಡಿನ ಸಂಸ್ಕøತಿಯ ಉರಿಯಲ್ಲಿ. ತವರಲ್ಲಿ ದುಡಿದರೆ ಊಟಕ್ಕಿಡುವಷ್ಟೇ ಶ್ರೀಮಂತಿಕೆ. ಸಾಲಿಗೆ ಹೋಗಿದ್ದು ಖರೆ. ಮನಸ್ಸು ಕೊಟ್ಟು ಕಲಿಯೋದಕ್ಕೆ ಆಗಲಿಲ್ಲ. ಈಗ 5-6 ದಶಕಗಳ ಮೇಲೆ ಹಿಂದಿರುಗಿ ನೋಡಿದರೆ ಅನ್ನಿಸೋದು, ಬಳೆ-ಸರ-ರಿಬ್ಬನ್ನಿನ ಕಡೆಯ ಎಳತವೇ ಜಾಸ್ತಿಯಾಗಿಬಿಟ್ಟಿತ್ತು ಎಂಬ ಸತ್ಯ. ಸಣ್ಣ ಪ್ರಾಯದಲ್ಲೇ ಮದುವೆ ಆಯ್ತು. ಐನೂರು ಎಕರೆ ಜಮೀನಿನ ಮಾಲಕತಿ ಆಕ್ಕೀನಿ ಅನ್ನೋ ಆನಂದದಲ್ಲಿ ಮೂರನೇ ಸಂಬಂಧಕ್ಕೆ ಹೂಂ ಅಂದಾಗಿತ್ತಂತೆ. ಅಪ್ಪ ಮಾತ್ರ ‘ಸ್ವಲ್ಪ ಯೋಚ್ನೆ ಮಾಡು ಪಾರು. ನಂಗ್ಯಾಕೋ ಬ್ಯಾಡ ಅನ್ನಸಾಕತ್ತದ„’ ಅಂತ ಹೇಳ್ತಾನೇ ಇದ್ದನಂತೆ. ಹಾಳು ಬಡತನಕ್ಕೆ ಬೇಸರ ಅದೆಷ್ಟಿತ್ತು ಎಂದರೆ, ಮದ್ವೆಯಾಗೋ ಗೌಡನನ್ನ ನೋಡ್ಬೇಕು ಅನ್ನಿಸಿರಲಿಲ್ಲ. ಅವನ ಮೊದಲ ಹೆಂಡತಿಯರು ಅಷ್ಟಷ್ಟು ಬೇಗ ಇಲ್ಲವಾಗಲು ಕಾರಣಗಳೇನಿರಬಹುದು- ಎಂಬ ಯೋಚನೆ ಬರಲಿಲ್ಲ. ದೊಡ್ಡ ದೊಡ್ಡ ಮಕ್ಕಳನ್ನು ಸಂಭಾಳಿಸಿಕೊಂಡು ಬಾಳೇವು ಮಾಡುವುದು ಕಷ್ಟವಾಗಬಹುದು ಅನ್ನಿಸಲಿಲ್ಲ. ಕಣ್ಣು ವಾರೆಯಿರುವ ಬಡವರ ಮಗಳಿಗೆ ಇದಕ್ಕಿಂತ ಒಳ್ಳೆಯ ಸಂಬಂಧ ಬರಬಹುದು ಎಂಬ ನಿರೀಕ್ಷೆಯಂತೂ ಪಾರ್ವತಿಗೆ ಇರಲಿಲ್ಲ. ತಪಸ್ಸು ನಿಂತಾದರೂ ಶಿವನನ್ನೇ ಪಡೀತೇನೆ- ಎನ್ನಲು ಇವಳೇನು ಪರ್ವತರಾಜನ ಮಗಳಲ್ಲವಲ್ಲ.
ಆಯಿತು ಮದುವೆ. ಮೈತುಂಬ ದಾಗಿನದ ಸಂಭ್ರಮ. ಮೊದ ಮೊದಲು ಎಲ್ಲ ಚೆನ್ನಾಗಿಯೇ ಇತ್ತು. ತುಸು ಕಷ್ಟವಾಗಿತ್ತು- ಹೆಣ್ಣುದೇಹವನ್ನು ಗೆಲ್ಲುವ ಪುರುಷ ಮದವನ್ನು ಅರಗಿಸಿಕೊಳ್ಳುವ ಸಂಕಟ ಸಣ್ಣದಿರಲಿಲ್ಲ. ಹಿರಿಯ ಹೆಂಡತಿಯರು ಬಸಿರಲ್ಲಿ -ಬಾಣಂತನದಲ್ಲಿ ಯಾಕೆ ಸತ್ತಿರಬಹುದು ಎಂಬ ಸರಿಯಾದ ಅಂದಾಜು ಪಾರ್ವತಿಗೆ ಸಿಕ್ಕಿತ್ತು. ಆದರೆ ಮಾಡುವುದೇನು? ಕಳೆದಿದ್ದವು ಒಂದಲ್ಲ ಎರಡಲ್ಲ ಅಖಂಡ 30 ವರ್ಷಗಳು. ಗೌಡಶಾನಿಯಾಗಿ ತಾಯಿಯ ಜಾಗೆಯಲ್ಲಿ ನಿಂತು ತನಗಿಂತ ಸ್ವಲ್ಪೇ ಚಿಕ್ಕ ಜೀವಗಳನ್ನು ಮದುವೆ ಮಾಡಿಸಿ, ಬದುಕಿನ ದಂಡಿಗೆ ಹಚ್ಚಿ ನಿಲ್ಲಿಸಿಯಾಗಿತ್ತು. ಉಮೇದಿಯಿತ್ತು- ಗೌಡ ತನ್ನ ರೊಟ್ಟಿ, ಹೋಳಿಗಿ ಹೊಗಳಿ ತಿನ್ನುವಾಗ ಹಿರಿಯರು ನಮ್ಮ ಪಾರ್ವತಿ, ಜಬರ್ದಸ್ತ ಗೌಡಶ್ಯಾನಕಿ ನಡಿಸಿದ್ಲು. ಹಡದ ಹೊಟ್ಟಿ ತಣ್ಣಗಿರಿಸಿದ್ಲು ಎನ್ನುವಾಗ, ಮದ್ವೆ ಮಾಡಿಕೊಂಡು ಹೋಗಿ ಬಂದು ಮಾಡುವ ಹೆಣ್ಮಕ್ಕಳು ‘ಯವ್ವಾ ಬರತೀವಬೇ’ ಅಂತ ಕಾಲಿಗೆ ನಮಸ್ಕರಿಸುವಾಗ, ತುಂಬ ಖುಷಿಯಾಗಿದ್ದದ್ದು ಗೌಡನ ಜೋಡಿ ಕಣದಾಗ ಸುಗ್ಗಿ ದಿನಗಳಲ್ಲಿ ಉಳ್ಕೋತಿದ್ದಾಗ, ಗೌಡನೂ ಖುಷಿಯಾಗಿದ್ದ. ಆದ್ರೆ ಗೌಡನಿಗೆ ಪಾರ್ವತಿ ತನ್ನ ಮೂರನೇ ಹೆಂಡತಿ. ತನಗಿಂತ ಮೂರು ಪಟ್ಟು ಸಣ್ಣವಳು ಎಂಬ ವಿಚಾರ ತಲೆತಿನ್ನುತ್ತಿತ್ತು. ಇಬ್ಬರು ಗಂಡುಮಕ್ಕಳು ಹುಟ್ಟಿ ಬೆಳೆದು ಲಗ್ನದ ವಯಸ್ಸಿಗೆ ಬಂದರೂ ಗೌಡನ ಕಿರಿಕಿರಿ ಅನುಮಾನ ತಪ್ಪಿರಲಿಲ್ಲ. ನಿಂತಿಯಾಕ, ಕುಂತಿಯಾಕ, ನಕ್ಕಿಯಾಕ ಎಂಬ ಕಣ್ಣ ಉರಿಗಳು. ತನಗ ತಾನ ಏನೋ ಅಂದುಕೊಂಡು ಏನೋ ಧೇನಿಸಿಕೊಂಡು ಸಿಕ್ಕಿದ್ದು ತಗೊಂಡು ಚಚ್ಚೋದು. ಪಾರ್ವತಮ್ಮನ ಕಿವಿಯ ಆಲಿಗಳು ಮುರಿದು ಜೋತಾಡುತ್ತಿವೆ. ಎಡಗೈ ಹೆಬ್ಬೆರಳು ಕೈಗೆ ಸಂಬಂಧವಿಲ್ಲದ ಹಾಗೆ ಆಗಾಗ ವಾಲಿಕೊಂಡುಬಿಡುತ್ತದೆ. ಇಂತಹ ದಿನಗಳಲ್ಲೇ ಈಗೊಂದು ಹದಿನೈದು ವರ್ಷದ ಕೆಳಗೆ, ಈ ಹಿಂಸೆಯ ನರಕ ತಾಳದೇ ಮನೆಬಿಟ್ಟು ಬಂದಾಗಿದೆ. ‘ಬಡತನವನ್ನಾದರೂ ತಾಳಬೋದು, ಹೊಲಸು ಮಾತು ಎಷ್ಟು ತಾಳೋದು ಹೇಳು?’ ಇದು ಈಗಲೂ ಪಾರ್ವತವ್ವನ ಪ್ರಶ್ನೆ.
ಪಾರ್ವತವ್ವ ಬಂದ ಈ ವರ್ಷಗಳಲ್ಲಿ ಅವಳೇ ಹೆತ್ತು ಹಾಲೂಡಿ ಬೆಳೆಸಿದ ಮಕ್ಕಳ ಮದುವೆಯಾಗಿದೆ. ಬೆಳೆಸಿದ ಹೆಣ್ಮಕ್ಕಳು ಮತ್ತೆ ತಾಯಂದಿರಾಗಿದ್ದಾರೆ. ಗೌಡ, ನಾಕು ರೊಟ್ಟಿ ತಿನ್ನುದರಿಂದ ಎರಡು ರೊಟ್ಟಿಗೆ ಇಳದಾಗಿದೆ. ಆದರೆ ಯಾರಿಗೂ ಪಾರ್ವತವ್ವ ಬೇಕೇ ಬೇಕು ಅನ್ನಿಸಲಿಲ್ಲ. ‘ನಡತಿಗೆಟ್ಟ ಚಿನಾಲಿ’ ಅಂತ ಗೌಡ ಒದರಿದ್ದೇ ಅವಳ ಹೆಸರಿನ ಮೇಲಿನ ಅಂಟುಪಟ್ಟಿಯಾಗಿ ಹೋಗಿದೆ. ‘ಹಿಂಗಂತಾರಲ್ಲ, ಒಂದ ವಿಚಾರಣಿ. ಒಂದ ಕೇಳೂದು ಹೇಳೂದು ಏನಾರ ನಡ್ಸಲಿಲ್ಲ. ಹೊಡ್ತ ತಾಳದ ಬಂದ್ರ ಅದಾಳೋ ಸತ್ತಾಳೋ ಕೇಳಲಿಲ್ಲ. ಗೌಡ ಹೋಗ್ಲಿ, ಮಕ್ಕಳೂ. ಅವಕ ಮಗ್ಗಲಿಗೆ ಹೆಂಡ್ತಿರು ಬಂದ್ರು. ಇನ್ನು ಅವ್ವ ಯಾಕ?’ ಅಂತ ದಳದಳ ಕಣ್ಣೀರು ಹರಿಸುವ ಪಾರ್ವತವ್ವನ ಒಡಲನೋವಿಗೆ ಮುಲಾಮು ನನ್ನ ಬಳಿ ಇರಲಿಲ್ಲ. ಈಗಲೂ ಗುಳದಾಳಿಗೆ ಕುಂಕುಮ ಏರಿಸಿಕೊಂಡು, ಮೊಬೈಲ್‍ನಲ್ಲಿ ಮಕ್ಕಳ ಮೊಮ್ಮಕ್ಕಳ ಫೋಟೋ ಇಟ್ಟುಕೊಂಡು, ‘ಇಂದು ನನ್ನ ಮಗನ ಹುಟ್ಟಿದ ದಿನಾ ಐತಿ ತಂಗಿ, ಸೋಮೇಶ್ವರಕ್ಕ ಹೋಗಿ ಹಣ್ಣಕಾಯಿ ಮಾಡ್ಕೊಂಬರ್ತೀನಿ ಎಲ್ಯರ ಇರ್ಲಿ ಚೆನ್ನಾಗಿರ್ಲಿ’ ಎಂದು ಹತ್ತ ಮನಿ ರೊಟ್ಟಿ-ಚಪಾತಿ ಮಾಡಿಕೊಂಡು ಬಾಳೇ ಮಾಡ್ತಿರೋ ಪಾರ್ವತವ್ವ ಈ ನೆಲದ ಸತು ಕಾದ ಎರೆಹುಳದಂತ ಹೆಣ್ತನಕ್ಕೊಂದು ಉದಾಹರಣೆ. ಇಷ್ಟೇ ಆಗಿದ್ದರೆ ಇದು ಹತ್ತರಲ್ಲಿ ಹನ್ನೊಂದು. ಆದರೆ…
ಪಾರ್ವತವ್ವ ಬಾಡಿಗೆ ಖೋಲಿ ಮಾಡಿಕೊಂಡಿರೋದು, ಬಡವರೇ ಇರುವ ಏರಿಯಾದಲ್ಲಿ. ಬಡತನವೆಂಬ ಸಮಾನತೆ ಹೊಚ್ಚಿದ ಬಾಳದು. ಎಲ್ಲ ಧರ್ಮ-ಜಾತಿಗಳ ಬೆರಕೆ. ಇವಳಿರೋದು ಮುಸ್ಲಿಮರ ಮನೆಯ ಖೋಲಿಯಲ್ಲಿ. ಆ ಮನೆಯವಳ ಒಳ್ಳೆಯತನ ಅದೆಷ್ಟು ತಾರೀಫು ಮಾಡಿದರೂ ಮುಗಿಯದ್ದು. ಪಾರ್ವತವ್ವ ಜ್ವರ ಬಂದು ಹಾಸಿಗೆ ಹಿಡಿದಾಗ ಆಕಿ ನೋಡಕೊಂಡ ರೀತಿ, ಈಗ್ಲೂ, ಮಸಾಲಿ ಉಪ್ಪಿಟ್ಟ ಮಾಡೀನಿ. ಸುದ್ದಾಚಾರಲೇ ಮಾಡೀನಿ. ತಿಂದ ಮಕ್ಕೋ’ ಅನ್ನೋ ಅವಳ ಕಕ್ಕುಲಾತಿ ಹೇಳುವಾಗ ಅಮ್ಮನ ಗಂಟಲು ಬಿಗೀತದೆ. ‘ಎಲ್ಲಿ ಜಾತಿ, ಎಲ್ಲಿ ಧರ್ಮ ಸತ್ತಾಗ ಎತ್ತಂತ’- ತತ್ವ ಆಡ್ತಾಳೆ ಪಾರ್ವತಮ್ಮ. ಮೊನ್ನೆ ಮೊನ್ನೆ ಅವರ ಮನಿಯವರ ಜೋಡಿ ಎಲ್ಲಮ್ಮನ ಗುಡ್ಡಕ್ಕ ಹಿರೇಕುಂಬಿಯ ದರ್ಗಾಕ್ಕ ಹೋಗಿ ಬಂದಾಗಿದೆ. ಅಲ್ಲಿ ಬೇಡಿಕೊಂಡು ಗುಡ್ಡದ ಕಲ್ಲ ಏರಿಸಿ ಬಂದರ ವರ್ಷದೊಳಗ ಬೇಡಿಕೊಂಡಿದ್ದು ಈಡೇರ್ತದಂತ. ‘ಆಕೀನ, ನಿನ್ನ ಕಣ್ಣೀರು ನೋಡಾಕಾಗ್ದು. ನಿನ್ನ ಮಕ್ಕಳಿಗೆ ನಿನ್ನ ನೆಪ್ಪ ಬರಲಿ ಬಾ’ ಅಂತ ಜುಲ್ಮಿ ಮಾಡಿ ಕರಕೊಂಡೋದ್ಲು ಅಂದಿದ್ದಳು ಪಾರ್ವತವ್ವ.
ಒಂದಿನ ಒಳಗೆ ಬರ್ತಾ ಟಿ.ವಿ.ಯ ವಾರ್ತೆ ನೋಡಿ ‘ಏನೋ ಬೈಯಾಕತ್ಯಾನಲ್ಲ ತಾಲೇವಾನ ಬ್ಯಾರೆ ದಗ್ದ ಇಲ್ಲ ಇವಂಗ. ಓಟೇನ ಮುಸಲರು ಹಾಕಿಲ್ಲಾಂತನಂತಲ್ಲ ತಂಗಿ. ಯಾಕೋ ಭಾಳ ಜಿಗದಾಡತಾನ. ನಂಗೊತ್ತಿಲ್ಲೇನ ಇವ್ನ ಪರತಾಪ? ಮುಸಲರಾಕಿ ಹಿಂದ ಹೋಗಿ ಇಕ್ಕರಿಸಿಕೊಂಡಿದ್ದ. ಬಿಡಸಿ ಇವ್ನ ಬಾಸಿಂಗ ಕಟ್ಸಿದಾಕಿ ನಾ ಅದೇನಿ. ಅರವುಗೆಟ್ಟಾಂವ.’ ಅಂತ ಬೈಯ್ಕೋತ ಬಂದಳು. ಕರುನಾಡಿನ ಹಾಲಿ ಜನಪ್ರತಿನಿಧಿಯೊಬ್ಬ ಅವಳು ನೆತ್ತಿ ನೀರುಣಿಸಿ ಬೆಳಸಿದ್ದ ಮಗಾ ಆಗಿದ್ದರಿಂದ, ಅವನ ಇಂದಿನ ನೀಚ ಮಾತುಗಳಿಗೆ ವರ್ತನೆಗಳಿಗೆ ಪಾರ್ವತಮ್ಮನ ಪ್ರತಿಕ್ರಿಯೆ ವಜನುದಾರಿಕೆಯದಾಗಿತ್ತು. ‘ನಮ್ಮ ಮನಿತನದ ಗಂಡಸೂರಿಗೆ ಬುದ್ದೀನ ಕಮ್ಮಿ ಐತ ತಂಗಿ ನಾ ಯೇನ ಕಲ್ತಾಕಿಯಲ್ಲ ಖರೆ. ಬಾಳೇವು ಕಂಡೀನಿ. ನಮ್ಮೂರ ಮುಸಲರು, ಹೊಲೇರು ದುಡಿದಿರಾಕಿಲ್ಲ ಅಂದ್ರ ಇವ್ರ ಹೊಲಮನಿ ಬಾಳೇ ನಡ್ಯಾಂಗಿಲ್ಲ. ಆದ್ರೂ ಎಷ್ಟ ಬೇವರ್ಸಿತನದ ಜಬರ್ ಮಾಡ್ತಾರಂತೀನಿ. ಮೊದ್ಲು ಇಂವಾ ಇಷ್ಟ ಕೆಟ್ಟಿರಾಕಿಲ್ಲ. ಇವ್ನ ದೋಸ್ತ ಅಲಿಸಾಬ್ ಯಾವತ್ತೂ ನಮ್ಮನಿ ಜಗಲಿಯಾಗ ಇರ್ತಿದ್ರು…’ ಅಂತೆಲ್ಲ ನೆನಪಿಸಿಕೊಂಡಿದ್ದಳು. ಪಾರ್ವತವ್ವ ಮಾಡಿಟ್ಟ ಬಿಸಿರೊಟ್ಟಿಗೆ ಅವಳಿಂದ ಕೇಳಿ ಮಾಡಿಸಿಕೊಂಡಿದ್ದ ಬಳ್ಳೊಳ್ಳಿ ಚಟ್ನಿ ಹಚ್ಚಿಕೊಂಡು ಚಪ್ಪರಿಸುವಾಗ, ಹೆಂಗಸರ ಯೋಚನಾ ಧಾಟಿಯೊಂದು ಬೇರೆಯಿದೆ, ಅದು ಈ ಬಾಳನ್ನು ಕಾದಿದೆ- ಅನ್ನಿಸುತ್ತಿತ್ತು. ಅದು ಹಾಗಿರಲಿ ಎಂಬ ಹಂಬಲವೂ.

LEAVE A REPLY

Please enter your comment!
Please enter your name here