ಸೂಫಿಗಾಯಕಿ ರೇಶ್ಮಾ

- Advertisement -
- Advertisement -

ಈಚೆಗೆ ಪಾಕಿಸ್ತಾನದ ಜನಪದ ಸೂಫಿಗಾಯಕಿ ರೇಶ್ಮಾ ಅವರು ಪರ್ವೇಜ್ ಮೆಹ್ದಿ ಅವರ ಜತೆಗೂಡಿ ಹಾಡಿರುವ `ಓ ಗೋರಿ, ಮೈ ಜಾಣಾ ಪರದೇಸ್’ ಹಾಡನ್ನು ಕೇಳಿದೆ. ಎಷ್ಟುಸಲ ನೋಡಿದರೂ ಕೇಳಿದರೂ ಮಾಸದ ಮಧುರವಾದ ಹಾಡಿಕೆಯಿದು. ಕಪ್ಪುಬಿಳುಪಿನ ಈ ಹಾಡಿಕೆಯನ್ನು 1974ರಲ್ಲಿ ಚಿತ್ರಿಸಲಾಗಿದೆ. `ನಾನು ಪರದೇಶಕ್ಕೆ ಹೋಗಬೇಕಿದೆ’ ಎಂದು ನಲ್ಲ ಹೇಳಿದರೆ, `ಹೋಗದಿರು, ನೀನಿಲ್ಲದೆ ನಾನಿರಲಾರೆ’ ಎಂದು ನಲ್ಲೆ ಉತ್ತರಿಸುವ ಪ್ರಶ್ನೋತ್ತರ ಮಾದರಿಯಲ್ಲಿ ವಿನ್ಯಾಸದಲ್ಲಿ ಈ ಹಾಡಿದೆ. ಪಂಜಾಬಿ ಕವಿ ಹರಿಂದರ್ ಸಿಂಗ್ ಮಹಬೂಬ್ ರಚಿಸಿದ ಹಾಡಿದು. ಹಾಡಿಕೆಯ ವಿಶೇಷತೆಯೆಂದರೆ, ಎಲೆಅಡಿಕೆ ಜಗಿಯುತ್ತ ಕುಳಿತಿರುವ ರೇಶ್ಮಾ, ಸಹಜವಾಗಿ ವಿರಾಮವಾಗಿ ನಿರಾಳವಾಗಿ ಯಾವುದೇ ಶ್ರಮವಿಲ್ಲದೆ ಜಗಲಿಯಲ್ಲಿ ಕೂತು ಹರಟೆ ಹೊಡೆದಂತೆ ಹಾಡುವುದು; ತಮ್ಮ ಸರದಿ ಬರುವವರೆಗೂ ಹಾಡುವರೊ ಇಲ್ಲವೊ ಎಂಬಷ್ಟು ನಿರ್ಲಿಪ್ತವಾಗಿ ಕುಳಿತು ತಟ್ಟನೆ ಹಾಡುಹೊಮ್ಮಿಸುವುದು. ಪರ್ವಿಜ್‍ರ ಗಡಸು ಮಾಧುರ್ಯದ ಕಂಠದಿಂದ ದನಿಯುಕ್ಕುವ ಪರಿಯೂ ಅಷ್ಟೇ ಮೋಹಕವಾಗಿದೆ. ಸ್ವಾಭಾವಿಕವಾಗಿಯೇ ಗಂಡುಹೆಣ್ಣು ಶಾರೀರಗಳು ಭಿನ್ನವಾಗಿದ್ದು, ತಮ್ಮ ಭಿನ್ನತೆಯ ಕಾರಣದಿಂದಲೇ ಕೂಡುವುದರ ಸೊಗಸು ಈ ಹಾಡಿನಲ್ಲಿ ವ್ಯಕ್ತವಾಗುತ್ತದೆ.
ಈ ಹಾಡಿಕೆ ಏರ್ಪಟ್ಟಿರುವುದು ಟಿವಿ ಸ್ಟುಡಿಯೋನ ಮೆಹಫಿಲ್ (ಸಂಗೀತಸಭೆ)ಯಲ್ಲಿ. ಉಳಿದಂತೆ ಮೆಹಫಿಲ್‍ಗಳು ಸಾಮಾನ್ಯವಾಗಿ ಸಿರಿವಂತರೂ ಭೂಮಾಲೀಕರೂ ದೊಡ್ಡ ವ್ಯಾಪಾರಿಗಳೂ ಆಧುನಿಕ ಮನಸ್ಸಿನ ಉದಾರವಾದಿಗಳÀೂ ತಮ್ಮ ಕಲಾಭಿರುಚಿ ಮತ್ತು ವಿಲಾಸಕ್ಕೆಂದು ಸೇರುವ ದಿವಾನಖಾನೆಗಳು. ಇವು ಪಾಕಿಸ್ತಾನ್ ಪಂಜಾಬಿನ ಭೂಮಾಲೀಕತ್ವದ ಭಾಗ ಕೂಡ. ಈ ಉಳ್ಳವರ್ಗಕ್ಕೆ ತಮ್ಮ ವಾಡೆಗಳಲ್ಲಿ ಮೆಹಫಿಲ್ ಏರ್ಪಡಿಸುವುದು ಪ್ರತಿಷ್ಠೆಯ ಸಂಕೇತ ಕೂಡ. ಈ ಮೆಹಫಿಲ್‍ಗಳಿಗೆ ಚಿಂತಕರೂ ಬುದ್ಧಿಜೀವಿಗಳೂ ಲೇಖಕರೂ ಕಲಾವಿದರೂ ಬರುವುದುಂಟು. ಇಲ್ಲಿ ಸೇರುವ ಸ್ತ್ರೀಯರಾದರೂ ಬುರ್ಖಾಧಾರಿಗಳಲ್ಲ. ಆಂಗ್ಲಶಿಕ್ಷಣ ಪಡೆದು ಸುಶಿಕ್ಷಿತರಾಗಿರುವ, ಗಂಡಸರ ಜತೆ ಸರಿಸಮನಾಗಿ ಕೂರುವ ಸ್ವತಂತ್ರರು. ಪುರುಷರಲ್ಲೂ ಗಡ್ಡಧಾರಿ ಧಾರ್ಮಿಕರು ಕಡಿಮೆ. ಇಲ್ಲಿ ರಸಿಕರು ವಿರಾಮವಾಗಿ ಮೆತ್ತನೆಯ ತೆಕ್ಕೆಲೋಡುಗಳಿಗೆ ಒರಗಿಕೊಂಡು ಚಹ ಹುಕ್ಕಾ ಸೇವಿಸುತ್ತ ಬೀಡಜಗಿಯುತ್ತ, ಸಂಗೀತವನ್ನೂ ಸಾಹಿತ್ಯವನ್ನೂ ಸವಿಯುವ ಅವಕಾಶವಿರುತ್ತದೆ. ಗಾಯಕರನ್ನು ಪೋಷಿಸುವ ಮುಖ್ಯ ಸಂಸ್ಥೆಗಳಲ್ಲಿ ಈ ಮೆಹಫಿಲುಗಳ ಪಾತ್ರವಿದೆ. ಭಾರತದ ಗಜಲ್ ಗಾಯನದಲ್ಲೂ ಹಿಂದೂಸ್ತಾನಿ ಸಂಗೀತದ ಬೆಳವಣಿಗೆಯಲ್ಲೂ ಮೆಹಫಿಲ್/ಜಲಸಾಗಳ ಪಾತ್ರವಿದೆ. ಸವಾಯಿ ಗಂಧರ್ವರ ಪುಣ್ಯತಿಥಿ ಕುಂದಗೋಳದಲ್ಲಿ ಈಗಲೂ ನಡೆಯುವುದು ನಾಡಿಗೇರ ವಾಡೆಯಲ್ಲಿ. ಅಮೀರ್‍ಬಾಯಿ ಗೋಹರಬಾಯಿ ಗಂಗೂಬಾಯಿ ಭೀಮಸೇನಜೋಶಿ ಮಲ್ಲಿಕಾರ್ಜುನ ಮನ್ಸೂರ, ಬೇಗಂಅಖ್ತರ್, ಅಬಿದಾಪರ್ವಿನ್, ಗುಲಾಂಅಲಿ, ನುಸ್ರತ್ ಫತೇಅಲಿಖಾನ್, ಮೆಹ್ದಿ ಹಸನ್, ರೇಶ್ಮಾ -ಇಂತಹ ಮೆಹಫಿಲ್‍ಗಳ ಮೂಲಕ ರೂಪುಗೊಂಡರು. ಈ ಮೆಹಫಿಲ್‍ಗಳು ಸಾರ್ವಜನಿಕವಾಗಿ ನಡೆಯುವ ಜನಸಂದಣಿಯುಳ್ಳ ಉರುಸಿನ ಹಾಡಿಕೆಗಿಂತ ಭಿನ್ನ; ಗುರುದೀಕ್ಷೆ (ಬೈಯತ್) ಸ್ವೀಕರಿಸಿರುವ ಶಿಷ್ಯರು ಗುರುವಿನ ಸಾನಿಧ್ಯದಲ್ಲಿ ಸೇರುವ ರಾತ್ರಿಸಭೆಗಳಿಗಿಂತಲೂ ಭಿನ್ನ. ಮುಂದೆ ಇಂತಹ ಮೆಹಫಿಲ್‍ಗಳನ್ನು ಪ್ರಾಯೋಜನೆಯನ್ನು ನಂತರ ಸಂಗೀತ ಆಲ್ಬಂ ತಯಾರಿಸುವ ಕಂಪನಿಗಳು ವಹಿಸಿಕೊಂಡವು.
ಬೇರೆ ಗಾಯಕರಿಗೆ ಹೋಲಿಸಿದರೆ ರೇಶ್ಮಾ ಹಿನ್ನೆಲೆ ವಿಶಿಷ್ಟವಾಗಿದೆ. ಅಲೆಮಾರಿಗಳಾದ ಬಂಜಾರ ಸಮುದಾಯಕ್ಕೆ ಸೇರಿದ ಅವರು ರಾಜಸ್ಥಾನದ ಬಿಕನೇರ್ ಭಾಗದಲ್ಲಿ ಹುಟ್ಟಿದವರು. ಅನಕ್ಷರಸ್ಥೆಯಾದ ಅವರು ತಮ್ಮ ಸಹಿ ಮಾಡುವುದನ್ನು ಕಲಿತರು. ಹೀಗಾಗಿಯೇ ಅವರು ಹಾಡುವಾಗ ಯಾವುದೇ ನೋಟ್‍ಬುಕ್ ಇರುತ್ತಿರಲಿಲ್ಲ. ಎಲ್ಲವನ್ನು ಕಂಠಸ್ಥ ಮಾಡಿಕೊಂಡೇ ಹಾಡುವ ಪಕ್ಕಾ ಜನಪದ ಗಾಯಕಿ. ನುಸ್ರತ್ ಫತೇಅಲಿಖಾನ್, ಮೆಹ್ದಿಹಸನ್ ಮುಂತಾದವರಿಗೆ ಇರುವಂತೆ ಅವರಿಗೆ ಕ್ಲಾಸಿಕಲ್ ತರಬೇತಿ ಕೂಡ ಇರಲಿಲ್ಲ. ರಾಜಸ್ಥಾನವು ಮೊದಲಿಂದಲೂ ಇಂತಹ ಅಲೆಮಾರಿ ಗಾಯಕರ ತವರುಮನೆ. ಕಬೀರ್ ಹಾಡಿಕೆಗೆ ಪ್ರಸಿದ್ಧರಾಗಿರುವ ತಿಪಾನಿಯ, ಜನಪದ ಸೂಫಿಹಾಡಿಕೆಗೆ ಖ್ಯಾತರಾಗಿರುವ ಮುಖ್ತಿಯಾರ್ ಅಲಿ, ಇದೇ ಚಾರಣ ಗಾಯಕ ಸಮುದಾಯಕ್ಕೆ ಸೇರಿದವರು. ಖ್ಯಾತ ಗಾಯಕಿ-ಚಿತ್ರನಿರ್ದೇಶಕಿ ಶಬನಂ ಅವರ ಕಬೀರ್ ಡಾಕ್ಯುಮೆಂಟರಿ ಚಿತ್ರಗಳಲ್ಲಿ ಎರಡೂ ದೇಶಗಳ ಬಹುತೇಕ ಚಾರಣ ಗಾಯಕರು ಹಾಡಿದ್ದಾರೆ.
ಗಡಿಯ ಹಂಗಿಲ್ಲದೆ ವಿಶಾಲ ವಲಯದಲ್ಲಿ ಸುತ್ತಾಡುತ್ತಿದ್ದ ಈ ಗಾಯಕ ಸಮುದಾಯಗಳು ದೇಶವಿಭಜನೆಯಾದೊಡನೆ ತಮ್ಮಿಚ್ಛೆಗೆ ವಿರುದ್ಧವಾಗಿ ಎರಡು ದೇಶಗಳಲ್ಲಿ ಹಂಚಿಹೋದವು. ಆದರೆ ಅವರ ಹಾಡು ಮತ್ತು ರಾಗಗಳು ಮಾತ್ರ ಹಾಗೆಯೇ ಉಳಿದುಕೊಂಡವು, ದೇಹ ಬೇರೆಯಾದರೂ ಉಳಿಯುವ ನೆನಪುಗಳಂತೆ. `ಓ ಗೋರಿ’ ಹಾಡು ಶಿವರಂಜಿನಿ ರಾಗದಲ್ಲಿ ಹಾಡಲಾಗಿದ್ದು, ಪಾಕಿಸ್ತಾನದಲ್ಲಿ ಇದನ್ನು ಮಾಲತಿ ಎನ್ನುವರು. ಒಂದೇ ರಾಗ. ವಿಭಿನ್ನ ಹೆಸರು. ದೇಶವಿಭಜನೆಯಲ್ಲಿ ರೇಶ್ಮಾಕುಟುಂಬ ಕರಾಚಿಗೆ ವಲಸೆಹೋದಾಗ ರೇಶ್ಮಾ ಪುಟ್ಟಮಗು. 12 ವರ್ಷದ ಬಾಲೆಯಾಗಿದ್ದಾಗ, ಸಿಂಧ್ ಪ್ರಾಂತ್ಯದ ಸೆಹವಾನ್‍ನಲ್ಲಿರುವ ಶಬಹಾಸ್ ಖಲಂದರ್ ದರ್ಗಾದ ಆವರಣದಲ್ಲಿ ಹಾಡುತ್ತಿರುವಾಗ, ಪಾಕಿಸ್ತಾನದ ರೇಡಿಯೊ ಕಾರ್ಯಕ್ರಮ ನಿರ್ವಾಹಕ ಸಲೀಂ ಜೀಲಾನಿಯವರ ಕಣ್ಣಿಗೆ ಬಿದ್ದರು. ಚಿಕ್ಕಹುಡುಗಿಯ ಸ್ನಿಗ್ಧಕಂಠದ ಹಾಡಿಕೆಗೆ ಮಾರುಹೋದ ಜೀಲಾನಿ, ರೇಶ್ಮಾಗೆ ರೇಡಿಯೊದಲ್ಲಿ ಹಾಡಿಸಿದರು. ಅದು ಶಹಬಾಸ್ ರಚಿಸಿದ, ಮತ್ತೊಬ್ಬ ಸೂಫಿಕವಿ ಬುಲ್ಲೆಶಾ ಪರಿಷ್ಕರಿಸಿದ `ಓ ಲಾಲ್ ಮೇರಿ’ ಮುಖಡಾದಿಂದ ಶುರುವಾಗುವ `ದಮಾದಂ ಮಸ್ತ್ ಖಲಂದರ್’ ಹಾಡು. ಬೆಳಕು ಹರಿಯುವುದರೊಳಗೆ ಈ ಹಾಡು ಸಂಗೀತಪ್ರಿಯರನ್ನು ಸೆಳೆದುಬಿಟ್ಟಿತು. ರೇಶ್ಮಾ ದೊಡ್ಡ ಗಾಯಕಿಯಾಗಿ ಬೆಳೆದು ಇಡೀ ಲೋಕವನ್ನು ತಿರುಗಿದರು. ಇಂದಿರಾಗಾಂಧಿ ಅವರಿಗೆ ಪ್ರಿಯರಾಗಿದ್ದ ಅವರು ಭಾರತಕ್ಕೂ ಬಂದರು. ಭಾರತದಲ್ಲಿ ಅವರ ಅಭಿಮಾನಿಗಳು ಸಾಕಷ್ಟಿದ್ದಾರೆ.
`ದಮಾದಂ’ ಹಾಡನ್ನು ನುಸ್ರತ್ ಫತೇಅಲಿ, ನೂರಜಹಾನ್, ಅಬಿದಾ ಪರವೀನ್, ಸಾಬ್ರಿ ಬ್ರದರ್ಸ್ ಒಳಗೊಂಡಂತೆ ಪಾಕಿಸ್ತಾನ-ಭಾರತದ ಅನೇಕರು ಹಾಡಿದ್ದಾರೆ. ಇವುಗಳಲೆಲ್ಲ ರೇಶ್ಮಾರದ್ದು ಹಾಡಿಕೆ ನಿಧಾನಗತಿಯ ಭೋರ್ಗರತೆಯಿಲ್ಲದೆ ಹರಿವ ತುಂಬುನದಿಯಂತಿದೆ. ಪಂಜಾಬಿ ಶೈಲಿಯಲ್ಲಿ ಉರ್ದುವನ್ನು ಮಾತಾಡುತ್ತಿದ್ದ ರೇಶ್ಮಾ ಗುರುದ್ವಾರಗಳಲ್ಲಿ ಹಾಡುವ ಶÀಬದ್‍ಗಳನ್ನು ಸಹ ಹಾಡುತ್ತಿದ್ದರು. ಅವರು ಹಾಡುತ್ತಿದ್ದ ಅನೇಕ ಸೂಫಿರಚನೆಗಳು ಸಿಖ್ಖರ ಗುರುಗ್ರಂಥದÀಲ್ಲಿ ಸೇರಿಹೋಗಿದ್ದರಿಂದ, ಅವರಿಗೆ ಸಿಖ್-ಸೂಫಿಸಂ ಎರಡೂ ಬೇರೆ ಕೂಡ ಅನಿಸಲಿಲ್ಲ. `ದಮಾದಂ’ ರಚಿಸಿದ ಸಂತಕವಿ ಶಹಬಾಸ್ ಖಲಂದರ್ ಬಗ್ಗೆ ತುಸು ವಿವರ ಹೇಳಬೇಕು. ಶಹಬಾಸ್, 13ನೇ ಶತಮಾನದಲ್ಲಿದ್ದ ಸಂತ. ಈ ಸಂತನಿಗೆ ನಡೆದುಕೊಳ್ಳುವ ಫಕೀರರು ಖಲಂದರ್ ಮತ್ತು ಮಲಂಗ್ ಶಾಖೆಗೆ ಸೇರಿದವರು. ಹಾಡುವ ಕುಣಿವ ಉನ್ಮತ್ತರು. ಅವರ ಮೇಲೆ ನಾಥಶೈವಜೋಗಿಗಳ ಪ್ರಭಾವವಿದೆ. ಬಾಬಾಬುಡನಗಿರಿಯ ಸೂಫಿಯೂ ಖಲಂದರ್ ಪಂಥಕ್ಕೆ ಸೇರಿದ್ದು ಅಲ್ಲಿನ ಉರುಸಿನಲ್ಲೂ ಈ ಫಕೀರರು ಸೇರುವರು. ಈ ಪಂಥದ ಸೂಫಿಗಳು ಧರ್ಮದ ಎಲ್ಲೆಯಾಚೆ ಹೋಗುವವರು. ಈಗಲೂ ಸೆಹವಾನಿನಲ್ಲಿ ಸಿಂಧ್ ಪ್ರದೇಶದ ಹಿಂದೂಗಳು ದೀಪಹಚ್ಚುವ ಮೂಲಕ ದರ್ಗಾದ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಐಎಸ್ ಉಗ್ರಗಾಮಿಗಳು 2017ರಲ್ಲಿ ಆತ್ಮಹತ್ಯಾ ಬಾಂಬುಕೋರನನ್ನು ಈ ಧರ್ಮಾತೀತ ದರ್ಗಾದೊಳಗೆ ನುಗ್ಗಿಸಿ 88 ಜನರ ಹತ್ಯೆ ಮಾಡಿದರು. ಈ ಆಕ್ರಮಣವನ್ನು ಪ್ರತಿಭಟಿಸಲು ಪಾಕಿಸ್ತಾನದ ಸೂಫಿಗಾಯಕರು ಮತ್ತು ಧಮಾಲ್ ನೃತ್ಯಗಾರರು ಅಂದೇ ಸಂಜೆ ದರ್ಗಾದ ಆವರಣದಲ್ಲಿ ಹಾಡಿ ಕುಣಿದು, ಈ ಹಲ್ಲೆಗೆ ಮಣಿಯುವುದಿಲ್ಲ ಎಂದು ತೋರಿಸಿದರು.
ಇಂತಹ ಜಾತ್ಯತೀತ ಜಾನಪದ ಸೂಫಿ ಪರಂಪರೆಗೆ ಸೇರಿದ ರೇಶ್ಮಾ ಕೂಡ ಮನುಷ್ಯರನ್ನು ವಿಭಜಿಸುವ ಧರ್ಮಗಳಲ್ಲಿ ನಂಬಿಕೆಯಿಲ್ಲದವರು. ಅವರು ಜೀವನದುದ್ದಕ್ಕೂ ಹಾಡಿದ್ದು ಎಲ್ಲ ಧರ್ಮಗಳ ಏಕತೆಯ ಬಗ್ಗೆ; ತುಂಡಾದ ಎರಡು ದೇಶಗಳ ದುರಂತದ ಬಗ್ಗೆ, ತುಂಡಾಗದೆ ಇನ್ನೂ ಉಳಿದಿರುವ ರಾಜಸ್ಥಾನ ಪಂಜಾಬುಗಳ ಸೂಫಿ ಸಂಸ್ಕøತಿಯ ಬಗ್ಗೆ ಮಾತಾಡುತ್ತಿದ್ದರು. ಬ್ರಿಟಿಷ್ ಭಾರತದಲ್ಲಿ ಹುಟ್ಟಿ, ವಿಭಜನೆಗೊಂಡ ಎರಡು ದೇಶಗಳಲ್ಲಿ ಬದುಕಬೇಕಾದ ಸಾವಿರಾರು ಜನರ ತಲ್ಲಣಗಳ ಪ್ರತಿನಿಧಿಯಂತೆ ಆಕೆಯಿದ್ದರು. ತಾನು ಹುಟ್ಟಿದ ಊರಿಗೆ ಹೋಗುವುದು ಪರದೇಶ್ ಜಾಣಾ ಆಗಿದ್ದು ಅವರಿಗೆ ನೋವು ತರುತ್ತಿತ್ತು. ಲಾಹೋರ್ ಬಸ್ ಯಾತ್ರೆಯಲ್ಲಿ ಆಕೆ ತನ್ನ ಇಡೀ ಕುಟುಂಬದ ಸಮೇತ ಪಯಣಿಸಿದ್ದರು. ರಾಷ್ಟ್ರೀಯತೆಯು ಮತೀಯ ಸನ್ನಿಯಾಗಿ ಎರಡು ದೇಶಗಳನ್ನು ನಡುವಣ ಸಂಬಂಧವನ್ನು ವಿಷಮಯಗೊಳಿಸಲು ಬಿಡಬಾರದು; ಆಹಾರ ಆರಾಧನೆ ಗಾಯನ ಕಾವ್ಯ ಇತಿಹಾಸ ಎಲ್ಲದರಲ್ಲೂ ಸಮಾನ ಪರಂಪರೆ ಹೊಂದಿರುವ ದೇಶಗಳು, ಧರ್ಮದ ಹೆಸರಲ್ಲಿ ಇಬ್ಭಾಗವಾದರೂ, ಕಲಾವಿನಿಮಯದ ವ್ಯಾಪಾರಿ ವಿನಿಮಯದ ಸಂಬಂಧ ಇರಿಸಿಕೊಳ್ಳಬಹುದು ಎಂದು ಪರಿಭಾವಿಸಿದ್ದವರ ಪ್ರತಿನಿಧಿಯಂತಿದ್ದವರು. ರೇಶ್ಮಾ ಮುಂಬೈಗೆ ಬಂದು ಅನೇಕ ಸಿನಿಮಾಗಳಿಗೆ ಹಾಡಿದರು ಕೂಡ. ನನ್ನ ಆತ್ಮ ಭಾರತದಲ್ಲಿದೆ; ಭಾರತ-ಪಾಕಿಸ್ತಾನ ನನ್ನ ಎರಡು ಕಣ್ಣುಗಳು ಎಂದು ಹೇಳುತ್ತಿದ್ದರು. ಭಾರತದ ಜನ ಕೊಟ್ಟ ಪ್ರೀತಿಯನ್ನು ನೆನೆಯುತ್ತಿದ್ದರು.
ಪಾಕಿಸ್ತಾನ-ಭಾರತದ ಆಳುವವರ್ಗಗಳು ಯುದ್ಧಮಾಡಿ ದೇಶಪ್ರೇಮ ಸಾಬೀತುಮಾಡುವುದಕ್ಕೆ ಹಾಗೂ ಚುನಾವಣೆ ಗೆಲ್ಲುವುದಕ್ಕೆ ಕಾದಿರುವ; ಎರಡೂ ಕಡೆಯ ಮತಭ್ರಾಂತರು ದ್ವೇಷವನ್ನೇ ಆಯುಧ ಮಾಡಿಕೊಂಡು ಕುಣಿಯುತ್ತಿರುವ ಸನ್ನಿವೇಶದಲ್ಲಿ, ಗಡಿಸೀಮೆಗಳಾಚೆ ಚಿಂತಿಸುವ ರೇಶ್ಮಾ ತರಹದ ಕಲಾವಿದರ ದನಿ ಕ್ಷೀಣವೆನಿಸಬಹುದು. ವಾಘಾಗಡಿಯ ಎರಡೂ ಕಡೆ ನಡೆಯುವ ದೇಶಭಕ್ತಿಯ ವಿಕೃತ ಪ್ರದರ್ಶನಗಳಲ್ಲಿ ಇಂತಹ ಕಲಾವಿದರ ಹಾಡಿಕೆ, ಅದರೊಳಗಿನ ತುಡಿತ ಅಸಂಬದ್ಧವೆಂದೂ ತೋರಬಹುದು. ಆದರೆ ಎರಡೂ ದೇಶಗಳು ಕೇವಲ ದ್ವೇಷದ ಬುನಾದಿಯ ಮೇಲೆಯೇ ಬದುಕುತ್ತ ಹೋದರೆ ಆಗುವ ನಷ್ಟದ ಬಗ್ಗೆ ಚಿಂತಿಸುವ ಲೇಖಕರು ಕಲಾವಿದರು ಚಿಂತಕರು ಇನ್ನೂ ಇದ್ದಾರೆ. ಆದರೆ ರಾಜಕಾರಣಿಗಳ ಮತಭ್ರಾಂತರ ಉಗ್ರಗಾಮಿಗಳ ದೊಡ್ಡಗಂಟಲಿನ ಎದುರು, ಅವರ ದನಿ ಉಡುಗಿದೆ. ಈಚೆಗೆ ಭಾರತವನ್ನು ಪ್ರೀತಿಸುತ್ತಿದ್ದ ಕವಿ ಫೈಜ್ ಅಹಮದರ ಕಾರ್ಯಕ್ರಮಕ್ಕೆ ಬಂದ ಅವರ ಮಗಳನ್ನು-ಭಾರತ ಪಾಕಿಸ್ತಾನಗಳು ದ್ವೇಷದಾಚೆ ಬರಬೇಕು ಎಂದು ಚಿಂತಿಸುವ ಚಿಂತಕಿಯನ್ನು- ದೆಹಲಿ ಸರ್ಕಾರದಲ್ಲಿ ಭಾಗವಹಿಸಿದಂತೆ ಮಾಡಲಾಯಿತು. ಭಾರತದ ಕಲಾವಿದರಿಗೆ ಪಾಕ್ ಸರ್ಕಾರವೂ ಹೀಗೆ ಮಾಡುತ್ತದೆ.
ಸಿಂಧ್-ರಾಜಸ್ಥಾನದ ಮರುಭೂಮಿ ಹೀರ್-ರಾಂಜಾ ತರಹದ ನೂರಾರು ಪ್ರೇಮಕಥಾನಕಗಳನ್ನು ಹುಟ್ಟಿಸಿದೆ. ಈ ಭಾಗದ ಸೂಫಿಗಳಿಗೂ ಈ ಹಾಡುಪರಂಪರೆಗೂ ಸಂಬಂಧವಿದೆ. ಕೃಷಿಸಂಸ್ಕøತಿ ಪ್ರೇಮಿಗಳನ್ನು ಗಂಡುಹೆಣ್ಣನ್ನು ಅಗಲಿಸುವುದಿಲ್ಲ. ವ್ಯಾಪಾರ ಯುದ್ಧಗಳು ಅಗಲಿಸುತ್ತವೆ. ಹಾಗೆ ಅಗಲಿದ ಜೀವಗಳು ಮಿಲನಕ್ಕೆ ಹಾತೊರೆಯುತ್ತವೆ. ದೈವಿಕತೆಯಿಂದ ಗುರುವಿನಿಂದ ಅಗಲಿದ ಜೀವಗಳು ಮಿಲನಕ್ಕೆ ಹಾತೊರೆಯುವುದು ಸೂಫಿಗಳಲ್ಲಿ ಆಧ್ಯಾತ್ಮಿಕ ಹುಡುಕಾಟದ ಭಾಗ. ಹೀಗಾಗಿ ರೇಶ್ಮಾ ಹಾಡಿದ `ಲಂಬೀ ಜುದಾಯಿ’ (ಸುದೀರ್ಘ ಅಗಲಿಕೆ) ಹಾಡು ಕೇವಲ ಪ್ರೇಮಿಗಳ ವಿರಹಗೀತೆಯಲ್ಲ. ಅಗಲಿದ ದೈವಿಕತತ್ವಗಳ ಮಿಲನಾಕಾಂಕ್ಷೆಯ ಆಧ್ಯಾತ್ಮಿಕ ತುಡಿತವೂ ಹೌದು. ವಿಭಜಿತ ದೇಶಗಳ ಜನಮಾನಸದ ವಿವೇಕಾದಾಳದಲ್ಲಿ ತುಡಿಯುತ್ತಿರಬಹುದಾದ ಮಿಲನದ ದನಿಯೂ ಇರಬಹುದು ಎಂದು ಅನಿಸುತ್ತದೆ. ಎಳವೆಯಲ್ಲಿ ಭಾರತದಿಂದ ಅಗಲಿದ ನೋವಿನೆಳೆ ಅವರ ಹಾಡಿಕೆಗೆ ತೀವ್ರತೆ ತಂದಿತ್ತು ಅನಿಸುತ್ತದೆ. ನನಗೆ ಭಾರತ ಮತ್ತು ಪಾಕಿಸ್ತಾನ ಎರಡು ಕಣ್ಣುಗಳು ಎಂದು ರೇಶ್ಮಾರ ಸಾವು (2013) ಕುದಿಯುವ ದೇಶಗಳನ್ನು ಜೋಡಿಸುವ ಕಲಾತ್ಮಕಕೊಂಡಿಯ ಮುರಿತದಂತೆ ಕಾಣುತ್ತದೆ.
`ಅಖಿಯಾ ರಹನೇ ದೇ’ `ಲಾಲು ಮೇರಿ’ ಇತ್ಯಾದಿ ರಚನೆಗಳನ್ನು ರೇಶ್ಮಾ ತಮ್ಮ ಜೀವನದ ಬೇರೆಬೇರೆ ಹಂತಗಳಲ್ಲಿ ಹಾಡಿದ್ದಾರೆ. ಅವರ ಉತ್ಕಂಠವಾದ ಅವರ ಕೊರಳಿನ ಕಸುವು ತೀಕ್ಷ್ಣತೆ ಮಾಂತ್ರಿಕತೆಗಳು ಕ್ರಮೇಣ ಕ್ಷೀಣಿಸುತ್ತ ಹೋಗಿರುವುದನ್ನು ಗಮನಿಸಬಹುದು. ನೀಳಮೊಗದ ದುಂಡುಮುಖದ ಸುಂದರಿಯ ಮುಖ ಕೊನೆಯ ದಿನಗಳಲ್ಲಿ ತೆಂಗಿನಚಿಪ್ಪಿನಂತಾಗಿತ್ತು. ಮುಪ್ಪು ಬೇನೆಗಳು ಮನುಷ್ಯನಿಗೆ ಕೊಡುವ ರೂಪಾಂತರದ ಘೋರವನ್ನು ಕಾಣಿಸುವಂತಿತ್ತು. ಮಧುರವಾದ ದನಿಯನ್ನು ಹೊರಡಿಸುತ್ತಿದ ರೇಶ್ಮಾ ಗಂಟಲ ಕ್ಯಾನ್ಸರಿನಿಂದ ತೀರಿಕೊಂಡರು. ಗಂಟಲ ಕ್ಯಾನ್ಸರ್, ಎರಡೂ ದೇಶದ ಕಲಾವಿದರ ಸಾಂಸ್ಕøತಿಕ ಅನುಸಂಧಾನದ ಅಭಿವ್ಯಕ್ತಿ ಲೋಕಕ್ಕೆ ಬಡಿದ ಕಾಯಿಲೆಯ ರೂಪಕದಂತೆಯೂ ಕಾಣುತ್ತದೆ. ಕೆಲವು `ಲಂಬಿಜುದಾಯಿ’ ಬೇಗನೆ ಕೊನೆಗೊಳ್ಳುವುದಿಲ್ಲ.

 

ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...