Homeರಾಜಕೀಯಕುರುಬ್ರು ವಿಶ್ವನಾಥನ ಹಿಂದೋದ್ರೆ?

ಕುರುಬ್ರು ವಿಶ್ವನಾಥನ ಹಿಂದೋದ್ರೆ?

- Advertisement -
- Advertisement -

ಕಾಲ ಎಂತೆಂತಹ ವಿಚಿತ್ರ ಸನ್ನಿವೇಶಗಳನ್ನು. ಸೃಷ್ಟಿ ಮಾಡುತ್ತದಲ್ಲವೆ! ಕಳೆದ ಚುನಾವಣೆಯಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಎಂದು ಹೋದಲ್ಲಿಬಂದಲ್ಲಿ ಭಾಷಣ ಬಿಗಿದಿದ್ದ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಇನ್ನ ಬಾಕಿ ಇರುವಾಗಲೇ ಕುಮಾರಸ್ವಾಮಿ ಮನೆಯ ಕರೆಗಂಟೆ ಒತ್ತಿ ಕೈಕಟ್ಟಿ ನಿಂತಿದ್ದಾರಲ್ಲಾ. ಆಗ ಸಿದ್ದು ನಮ್ಮಪ್ಪನಾಣೆ ನೀನೇ ಮುಖ್ಯಮಂತ್ರಿ ಎನ್ನುವುದೊಂದು ಬಾಕಿ ಇತ್ತು. ಸಿದ್ದು ಸ್ಥಿತಿ ನೋಡಿ ನಗು ಅದುಮಿಕೊಂಡ ದೇವೇಗೌಡರು ಮಗ ಮುಖ್ಯಮಂತ್ರಿ ಯಾದರೂ ಬಿಡದೆ, ಸಿದ್ದು ಬಗೆಗಿನ ಸೇಡನ್ನು ಮುಂದುವರಿಸುವ ಸಲುವಾಗಿ, ವಿಶ್ವನಾಥನನ್ನೇ ಪಾರ್ಟಿ ಪ್ರೆಸಿಡೆಂಟು ಮಾಡಿಬಿಟ್ಟಿದ್ದಾರಲ್ಲಾ, ಈ ಬಗ್ಗೆ ಸಿದ್ದುವನ್ನು ಕೇಳಬೇಕೆಂದು ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್‍ಠೋನ್ “ಕರಿಯ ಕಂಬಳಿ ಗದ್ದುಗೆ ಮಾಡಿ ವೀರದೊಳ್ಳತಂದಿರಿಸಿದರೊ, ವೀರದೊಳತಂದಿರಿಸಿದರೊ. ವಿಶ್ವನಾಥನ ಭಜಿಸಿದರೊ….. ಹಲೊ.
“ಯಾರು.”
“ನಾನು ಸಾರ್ ಯಾಹೂ.”
“ಏನ್ರಿ ಯಾಹೂ.”
“ಏನ್ ಸಾರ್ ಮುಖ್ಯಮಂತ್ರಿಯಾದಾಗ ನೋಡಕ್ಕೂ ಸಿಗಲಿಲ್ಲ, ಈಗ್ಲು ಸಿಗದಿ¯ವಲ್ಲ ಸಾರ್ ಅಷ್ಟು ಬಿಜಿನ.”
“ಅಂಗೇನಿಲ್ಲ ಹೇಳಿ.”
“ನಿಮ್ಮ ಸರಕಾರ ಸೋತಿದ್ದರ ಬಗ್ಗೆ ನೀವೇನೇಳ್ತಿರಿ ಸಾರ್.”
“ಜನ ಮೋಸ ಮಾಡಿದ್ರು.”
“ನಿಮ್ಮ ಭಾಗದ ತಪ್ಪುಗಳೇನಾದ್ರು ಇದ್ದವೆ?’’
“ಆಂಂ.’’
“ನೀವೇನಾರ ತೆಪ್ಪು ಮಾಡಿದ್ರ ಸಾರ್.”
“ನಾನೇನು ಮಾಡಿದೇ.”
“ ಮೊದಲನೆದಾಗಿ ನಿಮ್ಮ ಪ್ರತಿ ಭಾಷಣದಲ್ಲಿ ಎಡೂರಪ್ಪನ ಜೈಲಿನ ವಿಷಯ ಪ್ರಸ್ತಾಪ ಮಾಡಿದ್ರಿ? ಜನ ಚಪ್ಪಾಳೆ ತಟ್ಟಿದ್ರು, ಆದ್ರೆ ಲಿಂಗಾಯಿತ್ರು ಎಡೂರಪ್ಪನ ಹಿಂದೆ ಒಗ್ಗಟ್ಟಾದ್ರು. ಆಮೇಲೆ ಕುಮಾರಸ್ವಾಮಿಯ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ್ಲ ಅಂದ್ರಿ. ಅದ್ಯಂಗಾಗಲ್ಲ ನೋಡನ ಅಂತ ಒಕ್ಕಲಿಗರೆಲ್ಲ ಒಂದಾದ್ರು. ಅಂತೂ ನಿಮ್ಮ ಭಾಷಣನೆ ಜಾತಿಜನ ಒಟ್ಟು ಮಾಡ್ತು. ಇದೇ ಕಾರಣ ಸೋಲಿಗೆ ಅಂತ ನಮ್ಮ ಲೆಕ್ಕಾಚಾರ.”
“ಈಗಾಯ್ತಲ್ಲ ಬುಡ್ರಿ ಆ ಸುದ್ದಿ ತಗಂಡೇನು.”
“ವಿಶ್ಲೇಷಣೆ ಮಾಡ್ಬೇಕಲ್ಲವಾ ಸಾರ್.”
“ಈಗ ಮಾಡಿ ಏನು ಪ್ರಯೋಜನ.”
“ಮುಂದೆ ರಾಜಕಾರಣ ಮಾಡೋರಿಗೆ ಒಂದು ಅನುಭವ ಆಗುತ್ತೆ ಸಾರ್.”
“ಆ….”
“ಅಷ್ಟೊಂದು ಹಟದ ಅಗತ್ಯ ಇರಲಿಲ್ಲ, ಆ ಮುಸ್ಲಿಮರು ಏನು ಕೇಳ್ತಾರೆ ಅದನ್ನ ಮಾತ್ರ ಕೊಡಬೇಕು. ಅದು ಬುಟ್ಟು ಏನೇನೋ ಕೊಡಕೋದ್ರೆ ಅದವುರಿಗೂ ಬೇಕಿರಲಿಲ್ಲ. ಬೇರೆ ಜನಗಳೂ ಅದನ್ನ ಸಯಿಸದಿಲ್ಲ ಸಾರ್.”
“ಸಯಿಸದಿಲ್ಲ ಅಂತ ನಾವು ಮಾಡದನ್ನ ಬಿಡಬಾರ್ದು, ಅಧಿಕಾರ ಸಿಕ್ಕಿದಾಗ ದುರ್ಬಲರಿಗೆ ಸಹಾಯ ಮಾಡ್ಳೇಬೇಕು.”
“ನಿಮ್ಮ ಸಹಾಯ ಸಾಲಮನ್ನಾ, ಬಿಟ್ಟಿ ಅನ್ನ, ಹಲವಾರು ಭಾಗ್ಯ, ಸರಕಾರಿ ಕವರ್iಜಾರಿಗಳ ಸಂಬಳ ಏರಿಸಿ, ದಲಿತ್ರ ಸಾಲ ಮನ್ನ ಮಾಡಿದ್ರೂ ಜನ ಕೈ ಹಿಡಿಲಿಲ್ಲವಲ್ಲ. ಇದರ ಕಾರಣ ಗೊತ್ತಾಯ್ತಾ ಸಾರ್.”
“ಇಲ್ಲ ಹೇಳಿ.”
“ಜನ ಜಾತ್ಯಂದ್ರಾದಾಗ ಏನು ಕೊಟ್ರೂ ಜಾತಿ ಮಕ್ಕಳಾಗೇ ವರ್ತುಸ್ತಾರೆ, ಜೊತೆಗೆ ನೀವು ತಿರಗ ನಾನೇ ಮುಖ್ಯಮಂತ್ರಿ ಅಂದ್ರೆ ಅದು ರಿವರ್ಸಾಯ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದ ಜನ ಹಗಲುರಾತ್ರಿ ಓಡಾಡಿ ಬಿಜೆಪಿಗೆ ಓಟು ಮಾಡಿಸಿದ್ರು ಗೊತ್ತಾ.”
“ಹೋಗ್ಲಿಬುಡಿ.”
“ಬುಡದಲ್ಲ ಸಾರ್, ಅಧಿಕಾರದ ಅಂತ್ಯದಲ್ಲಿ ಯಲ್ಲಾರಿಗೂ ಅಹಂಕಾರ ಬತ್ತದೆ, ನಿಮಿಗೊಂಚೂರು ಜಾಸ್ತಿನೆ ಬಂತು.”
“ನಾನೇನು ಮಾಡಿದೆ.”
“ನಿಮ್ಮನ್ನ ಕಾಂಗ್ರೆಸಿಗೆ ಕರೆತಂದ ವಿಶ್ವನಾಥನ್ನ ಕಾಸಿಗಿಂತ ಕಡೆಮಾಡಿದ್ರಿ, ನೀವು ಗೆಲ್ಲಲಿ ಅಂತ ಓಡಾಡಿದ ರೇವಣಸಿದ್ದಯ್ಯನ್ನ ಐದೊರ್ಸ ಎಲ್ಯವುರೆ ಅಂತ ನೋಡಲಿಲ್ಲ, ಚಾಮುಂಡೇಶ್ವರಿಗಾರ ಟಿಕೆಟ್ ಕೊಡಬವುದಿತ್ತು. ಅಂಗೇ ನೋಡಿದ್ರೆ ಕಾಂಗ್ರೆಸ್ ಸೋಲಿನ ದೊಡ್ಡಪಾಲು ನಿಮ್ಮದೆ ಸಾರ್.”
“ಸೋತಾಯ್ತಲ್ಲ ಬುಡಿ.”
“ಇನ್ನೋಂದು ವಿಷಯ ಸಾರ್.”
“ಏನು.”
“ದೇವೇಗೌಡ್ರು ವಿಶ್ವನಾಥನ್ನ ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಮಾಡ್ಯವುರೇ.”
“ಮಾಡ್ಲಿ ಬುಡ್ರಿ.”
“ಅದರಿಂದ ನಿಮಗೇನು ಬೇಜಾರಾಗಿಲ್ವೇ.”
“ಬೇಜಾರ್ಯಾಕೆ, ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದೆ, ನನ್ನ ಹುಟ್ಟುಹಬ್ಬದ ದಿನವೇ ದೇವೇಗೌಡ ನನ್ನನ್ನ ತಗದು ಆ ತಿಪ್ಪಣ್ಣನ್ನ ಪ್ರೆಸಿಡೆಂಟ್ ಮಾಡಿದ್ರು, ಅವುರು ಪಾರ್ಟಿ ಬುಟ್ಟು ಬಿಜೆಪಿಗೋದ್ರು, ಅಂಗೆ ಒಂದಿನ ಈ ಅಪ್ಪ ಮಕ್ಕಳಿಗೆ ಬೇಜಾರಾದ್ರೆ ವಿಶ್ವನಾಥನ್ನ ತೆಗೆದಾಕ್ತರೆ. ಆದ್ರಿಂದ ವಿಶ್ವನಾಥ ನನ್ನ ಎದುರಾಳಿನೂ ಅಲ್ಲ, ಸ್ಪರ್ಧಿನೂ ಅಲ್ಲ.”
“ಕುರುಬ್ರು ವಿಶ್ವನಾಥನ ಹಿಂದೋದ್ರೆ.”
“ಹೋಗ್ಲಿ ಬುಡ್ರಿ ನಂಗೇನು.”
“ಥೂತ್ತೇರಿ.”

-ಯಾಹೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...