Homeಅಂಕಣಗಳುಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

ಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

- Advertisement -
- Advertisement -

ಧಾರವಾಡದಲ್ಲಿ ನಡೆಯಲಿರುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭಕ್ಕೆ, ಸಮ್ಮೇಳನಾಧ್ಯಕ್ಷರಿಗೆ ಸಾವಿರ ಮಂದಿ ‘ಸುಮಂಗಲಿ’ಯರಿಂದ ಪೂರ್ಣಕುಂಭ ಸ್ವಾಗತದ ವಿಚಾರ ಪತ್ರಿಕೆಗಳಲ್ಲಿ ಬರುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಸಾಹಿತ್ಯ ಮತ್ತು ಶಿಕ್ಷಣದ ವಿಚಾರದಲ್ಲಿ ನಾಡಿಗೆ ಹೆಸರಾಗಿರುವ ಧಾರವಾಡದ ಚಿಂತಕಿಯರು (ಮತ್ತು ಚಿಂತಕರೂ ಕೂಡಾ) ಹಾಗೂ ರಾಜ್ಯದ ಇತರೆಡೆಗಳ ಪ್ರಗತಿಪರ ಹೋರಾಟಗಾರ್ತಿಯರು, ಬರಹಗಾರ್ತಿಯರು ತೀವ್ರವಾಗಿ ಈ ಪೂರ್ಣಕುಂಭ ಸ್ವಾಗತದ ಸಂಗತಿಯನ್ನು ವಿರೋಧಿಸಿದರು. “‘ಸುಮಂಗಲಿ’ಯರಿಂದ ಸ್ವಾಗತ ಎಂದರೆ ಹಾಗಾದರೆ ಅಮಂಗಲೆಯರು ಯಾರು?”, “ಪೂರ್ಣಕುಂಭದ ಸ್ವಾಗತಕ್ಕೆ ಅಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೋ ಸಾಹಿತ್ಯಿಕ ಕಾರ್ಯಕ್ರಮವೋ?”, “ಧಾರವಾಡದ ನೆಲಕ್ಕೆ ಬಂಡಾಯದ ಮೂಲಗುಣವಿದೆ, ಇಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಆಚರಣೆಗಳಿಗೆ ಹೇಗೆ ಅವಕಾಶ ನೀಡಲು ಸಾಧ್ಯ?” ಇವೇ ಮೊದಲಾದ ಪ್ರಶ್ನೆಗಳು ಧಾರವಾಡಿಗರು ಮತ್ತು ಇತರೆಡೆಗಳ ಸಾಹಿತ್ಯಪ್ರಿಯರಿಂದ ತೂರಿಬಂದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರನ್ನೇ ಗುರಿಯಾಗಿಸಿ ಆನ್‍ಲೈನ್ ಪತ್ರ ಚಳವಳಿಯೂ ನಡೆದು ಈ ವಿಷಯ ಗಂಭೀರ ತಿರುವು ಪಡೆದುಕೊಳ್ಳುವ ಲಕ್ಷಣ ಕಾಣಿಸಿತು. ಕನ್ನಡದ ಪತ್ರಿಕೆಗಳೂ ಕೂಡಾ ತಕ್ಷಣವೇ ಈ ವಿಚಾರಕ್ಕೆ ಸ್ಪಂದಿಸಿ ‘ಪೂರ್ಣಕುಂಭಕ್ಕೆ ವಿರೋಧ’ ಎಂಬ ಪತ್ರಗಳನ್ನು ಪ್ರಕಟಿಸಿದವು. ಒಟ್ಟಿನಲ್ಲಿ ಈ ಎಲ್ಲ ವಿರೋಧಗಳ ಬಿಸಿ ತಟ್ಟಿ ಕೊನೆಗೂ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಈ ಆಚರಣೆಯಿಂದ ಹಿಂದೆ ಸರಿದಿದೆ. ಸಂಘಟಕರು ತಮ್ಮ ನಿರ್ಧಾರವನ್ನು ಸಮರ್ಥಿಸುವ ಅನೇಕ ವಾದಗಳನ್ನು ಮುಂದಿಟ್ಟರೂ ಕೂಡಾ ಅಂತಿಮವಾಗಿ ಪೂರ್ಣಕುಂಭದ ವಿಚಾರವನ್ನು ಕೈಬಿಡುವ ಹಾಗೆ ಕಾಣುತ್ತಿದೆ. ಇದು ಬಹಳ ಪ್ರಮುಖವಾದ ಬೆಳವಣಿಗೆ.
‘ಪೂರ್ಣಕುಂಭದ ಸ್ವಾಗತ ನಡೆಯುತ್ತಿರುವುದು ಇದೇ ಮೊದಲ ಸಲವಲ್ಲ; ಈ ಹಿಂದೆಯೂ ನಡೆಯುತ್ತಾ ಬಂದಿದೆ; ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್‍ರಂತಹ ಬಂಡಾಯದ ಸಾಹಿತಿಗಳ ಅಧ್ಯಕ್ಷತೆಯಲ್ಲೂ ಕೂಡಾ ಇಂತಹವೆಲ್ಲ ನಡೆದಿದ್ದವು. ಆದರೆ ಈ ಬಾರಿ ಮಾತ್ರ ವಿರೋಧ ಯಾಕೋ ಅರ್ಥವಾಗುತ್ತಿಲ್ಲ’ ಎಂಬಂತೆ ಸಾಹಿತ್ಯ ಪರಿಷತ್ತು ಸಮರ್ಥನೆ ಕೊಟ್ಟುಕೊಂಡಿದೆ. ಈ ಹಿಂದೆ ಒಂದು ವೇಳೆ ಇಂತಹವು ನಡೆದದ್ದು ನಿಜವಾದರೆ ಅದೂ ಕೂಡಾ ಖಂಡನಾರ್ಹ. ಆದರೆ, ಹಿಂದೆ ನಡೆದಿತ್ತು; ಪ್ರಗತಿಪರರೇ ಇದ್ದಾಗ ನಡೆದಿತ್ತು ಎಂಬುದರ ಅರ್ಥ ಈಗಲೂ ನಡೆಯಲಿ ಎಂಬುದಂತೂ ಆಗಬಾರದು. ಈ ಬಾರಿ ವಿರೋಧ ಬಂದಿದೆ, ವಿರೋಧ ಸಕಾರಣವಾದುದಾಗಿದೆ. ಆದ್ದರಿಂದ ಇಂತಹ ಆಚರಣೆ ನಿಲ್ಲಬೇಕು, ಈ ಬಾರಿ ಮಾತ್ರವಲ್ಲ ಮುಂದೆಯೂ ನಡೆಯಬಾರದು ಎಂಬುದಂತೂ ಖಚಿತ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಆಚರಣೆಗಳು ಸದ್ದಿಲ್ಲದೆ ನುಸುಳುತ್ತಾ ಸಾರ್ವಜನಿಕ ಸಭೆ ಸಮಾರಂಭಗಳ ಭಾಗವಾಗುತ್ತಿರುವುದು ಸಹಜವೆಂಬಂತೆ ನಡೆಯುತ್ತಿದೆ. ಈ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭದ ವಿಚಾರಕ್ಕೆ ಬಂದ ಸಮರ್ಥನೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಈ ಹಿಂದೆ ನಡೆದಿತ್ತೆಂಬುದಷ್ಟೇ ಅಲ್ಲ, ಇದು ನಮ್ಮ ದೇಶದ ಸಂಸ್ಕøತಿ, ಅದನ್ನು ಆಚರಿಸಿದರೆ ತಪ್ಪೇನಿದೆ ಎಂಬರ್ಥದಲ್ಲಿ ಹಲವಾರು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರಲ್ಲೂ ಮಹಿಳಾ ಚಿಂತಕಿಯರು ಯಾರು ಇದನ್ನೆಲ್ಲ ವಿರೋಧಿಸುತ್ತಿದ್ದರೋ, ಅವರುಗಳನ್ನು ಸಂಸ್ಕøತಿ ವಿರೋಧಿಗಳೆಂಬಂತೆ ಪರೋಕ್ಷವಾಗಿ ದೂಷಿಸುವ ಕೆಲಸವೂ ನಡೆಯಿತು. ಇದು ನಿಜಕ್ಕೂ ಈ ದೇಶದ ಸಾಮಾನ್ಯ ಸಂಪ್ರದಾಯಕ್ಕೆ ವಿರುದ್ಧವಾದುದೆಂಬುದು ಹೆಚ್ಚು ಮುನ್ನೆಲೆಗೆ ಬರಲಿಲ್ಲ. ಸಾರ್ವಜನಿಕ ಕಾರ್ಯಕ್ರಮವೊಂದು ಧರ್ಮ ನಿರಪೇಕ್ಷವಾಗಿರಬೇಕು ಹಾಗೂ ತನ್ನ ಮೂಲ ಆಶಯಕ್ಕೆ ಪೂರಕವಾದ ರೀತಿಯಲ್ಲಿ ನಡೆಯಬೇಕು ಎಂಬುದು ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಈ ದೇಶದ ಸಾಮಾನ್ಯ ಜ್ಞಾನ. ಅಸಂಖ್ಯಾತ ಧರ್ಮಗಳಿರುವ ಈ ದೇಶದಲ್ಲಿ ಸೌಹಾರ್ದತೆ ಉಳಿಯಬೇಕಾದರೆ ಪಾಲಿಸಲೇಬೇಕಾದ ಮೂಲಭೂತ ಸಂಗತಿಗಳಲ್ಲಿ ಇದೂ ಒಂದು. ಆದರೆ, ಈ ಸಾಮಾನ್ಯ ಜ್ಞಾನವನ್ನು ಮೀರುವ ರೀತಿಯಲ್ಲಿ ಸಾಂಸ್ಕøತಿಕ ಹೇರಿಕೆಯ ವಾತಾವರಣ ಬಲಿಯುತ್ತಿರುವುದು ಆತಂಕದ ಸಂಗತಿ. ಆದ್ದರಿಂದಲೇ, ಈ ಹಿಂದೆ ಅಷ್ಟು ಚರ್ಚೆಗೆ ಗ್ರಾಸವಾಗದಿದ್ದ ಪೂರ್ಣಕುಂಭದಂತಹ ವಿಚಾರಗಳು ಶಾಂತಿ ಸೌಹಾರ್ದತೆ ಬಯಸುವವರು ಈ ವಾತಾವರಣದಲ್ಲಿ ಹೆಚ್ಚು ಎಚ್ಚರಿಕೆಯ ನೋಟ ಹೊಂದುತ್ತಿರುವುದರಿಂದ ಕಂಡುಬಂದಿರಲೂ ಬಹುದು.
ಇಲ್ಲೊಂದು ವೈರುಧ್ಯವಿರುವುದನ್ನೂ ಗಮನಿಸಬೇಕು. ಒಂದೆಡೆ, ಕನ್ನಡದ ಸಾಹಿತ್ಯ ಲೋಕ ಹೆಚ್ಚು ಸಂವೇದನಾಶೀಲವಾದುದು, ಜಾತ್ಯತೀತವಾದುದು ಮತ್ತು ಜನಪರ ಕಾಳಜಿಗಳಿಗೆ ಬೇಗ ತನ್ನನ್ನು ತಾನು ಒಗ್ಗಿಸಿಕೊಂಡಂಥದ್ದು ಎಂಬ ಒಂದು ವಿಚಾರ. ಅದೇ ಸಮಯದಲ್ಲಿ ಮತ್ತೊಂದೆಡೆ ಈ ದೇಶದ ಸಾಂಸ್ಕøತಿಕ ಸಾಮಾಜಿಕ ಇತಿಹಾಸವು ಅನೇಕಾನೇಕ ತಾರತಮ್ಯ, ವಿರೋಧಾಭಾಸ ಮತ್ತು ಶ್ರೇಣೀಕರಣಗಳನ್ನು ಹೊಂದಿ, ಅವುಗಳನ್ನು ಆಚರಿಸುತ್ತಾ, ವಿರೋಧ ಬಂದಾಗೆಲ್ಲ ಎತ್ತಿಹಿಡಿದು ಬಲವಾಗಿ ಸಮರ್ಥಿಸುತ್ತಾ ಬಂದಿರುವಂಥದ್ದು. ಆದ್ದರಿಂದಲೇ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಕಾಯಕ್ರಮಗಳೂ ಎಷ್ಟೋ ಬಾರಿ ಇಂತಹ ಶ್ರೇಣೀಕರಣ ಅಥವಾ ಅಸೂಕ್ಷ್ಮತೆಗಳನ್ನು ಪ್ರದರ್ಶಿಸುವಂತಿರುತ್ತವೆ. ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಬೋವಿ ಸಮುದಾಯದ ಪುರುಷರು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಿದ್ದ ಆಚರಣೆ ನೆನೆಯಬಹುದು. ಆದ್ದರಿಂದ, ಎಲ್ಲ ಬಗೆಯ ತಾರತಮ್ಯದ ಆಚರಣೆಗಳಿಂದ ಮುಕ್ತಿ ಬಯಸುವ ವಿಚಾರವಂತರು ಸದಾ ಎಚ್ಚರದಲ್ಲೇ ಇರಬೇಕಾಗುವ, ಸ್ವಲ್ಪ ಮೈಮರೆತರೂ ಇಂತಹ ಅನೇಕ ಆಚರಣೆಗಳು ಸಹಜವೆಂಬಂತೆ ಒಳತೂರುವ ಸನ್ನಿವೇಶವೇ ಇಂದೂ ಇದೆ (ಅಥವಾ ಈ ಅಪಾಯ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ) ಎಂಬ ವಾಸ್ತವವನ್ನು ಮರೆಯಲು ಸಾಧ್ಯವಿಲ್ಲ! ಕೆಲವೊಮ್ಮೆ ಸ್ವಲ್ಪ ಅತಿ ಎನ್ನಿಸಿದರೂ, ಇಂತಹವನ್ನು ವಿರೋಧಿಸಬೇಕಾದ್ದು ಇಂದು ಅನಿವಾರ್ಯವೂ ಕೂಡಾ.
ಆದ್ದರಿಂದ, ‘ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ’ದ ಆಚರಣೆಯನ್ನು ಬಹಳ ಬೇಗ ಗಮನಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಕನ್ನಡದ ಎಚ್ಚೆತ್ತ ಮಹಿಳೆಯರನ್ನು ‘ನ್ಯಾಯಪಥ’ ಅಭಿನಂದಿಸುತ್ತದೆ. ಇಂತಹ ಎಚ್ಚರ ಇಂದಿನ ತುರ್ತು. ಆದ್ದರಿಂದ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು ಹಸಿವಿನಿಂದ...