ರಾಜಕೀಯ ಸಾಧನವಾಗಿ ಅತ್ಯಾಚಾರದ ಕಲ್ಪನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದು ಹೀಗೆ..

ಹತ್ರಾಸ್ ಭೀಕರ ಅತ್ಯಾಚಾರದ ಘಟನೆಯನ್ನು ಕೆಲವರು ಸಮರ್ಥಿಸಿಕೊಳ್ಳುತ್ತಿರುವುದು ಏಕೆ? ಅತ್ಯಾಚಾರದ ಕುರಿತು ಸಂಘಪರಿವಾರದ ಐಕಾನ್ ವಿ.ಡಿ ಸಾವರ್ಕರ್ ಏನು ಹೇಳಿದ್ದರು?

0

‘ಆಸೀಫಾ ಸತ್ತಿದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ದೊಡ್ಡವಳಾಗಿ ಆತಂಕವಾದಿಯಾಗುತ್ತಿದ್ದಳು’…!!!
ಇಡಿ ದೇಶಕ್ಕೆ ದೇಶವೇ ಆಸೀಫಾ ಎಂಬ ಹಸುಗೂಸಿನ ಆ ಸಾವಿಗೆ ಮರುಗುತ್ತಿದ್ದಾಗ ಧರ್ಮಾಂಧ ಕ್ರಿಮಿಗಳು ಹೀಗೆ ಬಹಿರಂಗವಾಗಿ ಬರೆದುಕೊಂಡು ತಮ್ಮ ನೀಚತನವನ್ನು ಜಾಹೀರುಮಾಡಿಕೊಂಡಿವೆ. ಅಷ್ಟೇ ಅಲ್ಲ, ಕೇರಳದ ಆರೆಸ್ಸೆಸಿಗನೊಬ್ಬ ಆಸೀಫಾ ಸಾವನ್ನು ಸಂಭ್ರಮಿಸಿದರೆ ಬಿಜೆಪಿಯ ನಂದಕುಮಾರ್ ಸಿಂಗ್ ‘ಕಥುವಾ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡವಿದೆ’ ಎಂಬ ಮಿಥ್ಯ ನುಡಿದ. ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಒಂದು ಹೆಜ್ಜೆ ಮುಂದೆಹೋಗಿ ‘ಇಂತಹ ಸುಳ್ಳು ಆರೋಪಗಳು ಸಾಮಾನ್ಯ’ ಎನ್ನುವ ಮೂಲಕ ಇಡೀ ಪ್ರಕರಣವನ್ನೇ ಸುಳ್ಳಾಗಿಸಲು ಯತ್ನಿಸಿದ. ಇನ್ನೊಬ್ಬ ಬಿಜೆಪಿಗ ಚಂದ್ರಪ್ರಕಾಶ್ ಗಂಗ ‘ಇಂತಹ ಘಟನೆಗಳು ಸಾಮಾನ್ಯ’ ಎಂದರೆ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಕಂ ಸಂಸದೆ ಮೀನಾಕ್ಷಿ ಲೇಖಿ ‘ಇಂತಹ ಘಟನೆಗಳಿಗೆ ಹೆಚ್ಚು ಪ್ರಚಾರ ಕೊಡಬೇಡಿ’ ಕಟ್ಟಪ್ಪಣೆ ಹೊರಡಿಸಿದ್ದರು. ಇನ್ನು ಉನ್ನಾವೋ ವಿಚಾರದಲ್ಲಿ ಸ್ವತಃ ಆರೋಪಿಯಾದ ಬಿಜೆಪಿ ಶಾಸಕ ‘ಮೂರು ಮಕ್ಕಳ ತಾಯಿಯನ್ನ ಯಾರಾದರು ಅತ್ಯಾಚಾರ ಮಾಡುತ್ತಾರ?’ ಎಂದು ಪ್ರಶ್ನಿಸಿದ್ದೂ ಆಯ್ತು!

ಇವೆಲ್ಲ ಹೇಳಿಕೆಗಳು ಸಂಘಪರಿವಾರದವರು ಈ ದಿಕ್ಕಿನಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ನೀಡುತ್ತಿರುವ ಹೇಳಿಕೆಗಳಂತೆ ಕಂಡುಬಂದರು, ಆ ಹೇಳಿಕೆಗಳ ಹಿನ್ನೆಲೆಯನ್ನು ಕೆದಕುತ್ತಾ ಸಾಗಿದರೆ ಅತ್ಯಾಚಾರದ ಬಗ್ಗೆ ಅವರಿಗಿರುವ ಸೈದ್ಧಾಂತಿಕ ಸೈರಣೆಯ ಆಘಾತಕಾರಿ ವಿವರಣೆ ತೆರೆದುಕೊಳ್ಳುತ್ತದೆ. ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುವ ಇಂತಹ ಮನಸ್ಥಿತಿಗಳಿಗೆ ಇರುವ ಧೈರ್ಯ ಎಲ್ಲಿಯದು? ಅತ್ಯಾಚಾರ ಮತ್ತು ಕೊಲೆಯನ್ನು ಸಮರ್ಥಿಸಿಕೊಳ್ಳುವಷ್ಟು ಕ್ರೂರತನ ಇವರಲ್ಲೇಕೆ ಮನೆ ಮಾಡಿದೆ? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಸಂಘಿಗಳು ಅಪಾರವಾಗಿ ಆರಾಧಿಸುವ ಮನುಶಾಸ್ತ್ರದ ದುಷ್ಟ ಮಡಿವಂತಿಕೆಗಳತ್ತ ನಾವು ಕೊಂಚ ಗಮನಹರಿಸಬೇಕಿದೆ.

’ಬಾಲ್ಯದಲ್ಲಿ ಸ್ತ್ರೀಯನ್ನು ತಂದೆಯು ರಕ್ಷಿಸುತ್ತಾನೆ. ಯೌವನದಲ್ಲಿ ಗಂಡನು ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ. ಆದುದರಿಂದ ಸ್ತ್ರೀಯು ಸ್ವತಂತ್ರವಾಗಿ ಇರಲು ಅರ್ಹಳಲ್ಲ…’
‘ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವು ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳು…’

ಹೀಗೆ ಇಡೀ ಮನುಸ್ಮೃತಿ ಹೆಣ್ಣನ್ನು ಭೋಗ ಮತ್ತು ಗಂಡಿನ ದಾಸಿಯಂತೆಯೇ ನೋಡುತ್ತದೆ. ಇಂತಹ ಮನುಸ್ಮೃತಿ ಆರಾಧಕರೂ ಸಂಘ ಪರಿವಾರದ ಲೆಜೆಂಡೂ ಆಗಿರುವ ಸಾವರ್ಕರ್ ಒಂದು ಕಡೆ ಹೀಗೆ ಹೇಳಿದ್ದಾರೆ, “ಮನುಸ್ಮೃತಿಯು ವೇದಗಳ ನಂತರದ ಪರಮ ಪೂಜ್ಯ ಗ್ರಂಥ. ಹಿಂದೂ ರಾಷ್ಟ್ರದ ಆರಾಧ್ಯ ಗ್ರಂಥ”. ಇದೇ ವ್ಯಕ್ತಿ ಇನ್ನೊಂದು ಕಡೆ ಹಿಂದೂ-ಮುಸ್ಲಿಂ ದ್ವೇಷವನ್ನು ಉತ್ತೇಜಿಸುತ್ತಾ ‘ಮುಸ್ಲಿಂ ದಾಳಿಕೋರರು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡುವುದನ್ನು ರಾಜಕೀಯವಾಗಿ ಬಳಸಿಕೊಂಡು ಆಳಿದರು. ಆದರೆ ಹಿಂದೂಗಳು ಆ ಕೆಲಸ ಮಾಡದಿದ್ದಕ್ಕೇ ಸೋತು ಹೋದರು!’ ಎಂದಿದ್ದಾರೆ. ಆ ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಒಂದು ಆಯುಧವನ್ನಾಗಿ ಬಳಸಿಕೊಳ್ಳುವ ತಮ್ಮ ಮನಸ್ಥಿತಿಯನ್ನು ಅವರು ಬೆತ್ತಲಾಗಿಸಿದ್ದಾರೆ. ಇದನ್ನು ಸ್ಕ್ರಾಲ್ ನ್ಯೂಸ್ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಈಗ ಅರ್ಥವಾಯಿತಲ್ಲವಾ, ಹೆಣ್ಣನ್ನು ಸಂಘ ಪರಿವಾರದವರು ಕೇವಲ ಭೋಗವಸ್ತುವಾಗಿ ಮಾತ್ರವಲ್ಲ, ತನ್ನ ಎದುರಾಳಿಯನ್ನು ರಾಜಕೀಯವಾಗಿ, ನೈತಿಕವಾಗಿ ಮಣಿಸಲು ಅತ್ಯಾಚಾರದ ಟೂಲ್ ಆಗಿಯೂ ಬಳಸಿಕೊಳ್ಳಬೇಕೆಂಬತ್ತ ಒಲವು ಹೊಂದಿದ್ದಾರೆ ಎಂಬುದು. ಅದಕ್ಕೆ ಅವರ ಐಡಲ್ ಸಾವರ್ಕರ್‌ರೇ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಹೀಗಿರುವಾಗ ಅತ್ಯಾಚಾರಗಳನ್ನು, ಅತ್ಯಾಚಾರಿಗಳನ್ನು ಅವರು ಸಮರ್ಥಿಸಿಕೊಳ್ಳುತ್ತಿರೋದರಲ್ಲಿ ಅಚ್ಚರಿಯೇನೂ ಇಲ್ಲ!

‘ಬೇಟಿ ಬಚಾವೋ’ ಎನ್ನುವ ತನ್ನ ಸ್ಲೋಗನ್ನಿಗೂ, ಬಿಜೆಪಿಯ ವರ್ತನೆಗೂ ಎತ್ತಿಂದೆತ್ತ ನೋಡಿದರೂ ಸಂಬಂಧವಿಲ್ಲ. ಯಾಕೆಂದರೆ ಬಿಜೆಪಿ ಮುಖಂಡರುಗಳ ವಿರುದ್ಧವೇ ಸಾಲುಸಾಲು ಅತ್ಯಾಚಾರದ ಆರೋಪಗಳು ಕೇಳಿಬಂದಿವೆ. ಎಡಿಆರ್(ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಪ್ರಕಾರ ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯಗಳನ್ನು ಎಸಗಿರುವ ಶಾಸಕರು ಮತ್ತು ಸಂಸದರನ್ನು ಹೊಂದಿರುವ ರಾಜಕೀಯ ಪಕ್ಷ ಬಿಜೆಪಿ! ಕಳೆದ 5 ವರ್ಷಗಳ ಅಫಿಡವಿಟ್‍ಗಳನ್ನು ತಿರುವಿಹಾಕಿದಾಗ ಬರೋಬ್ಬರಿ 48 ಬಿಜೆಪಿ ಜನಪ್ರತಿನಿಧಿಗಳು ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯರ ಅಪಹರಣ, ಅತ್ಯಾಚಾರ, ಗ್ಯಾಂಗ್‍ರೇಪ್ ಮುಂತಾದ ಗಂಭೀರ ಪ್ರಕರಣ ಎದುರಿಸುತ್ತಿರೋದು ತಿಳಿದುಬರುತ್ತೆ.

ಕುಟುಂಬಸ್ಥರು ಮತ್ತು ಗ್ರಾಮಸ್ಥರು ಗೋಗರೆಯುತ್ತಿರುವುದು. ಚಿತ್ರಕೃಪೆ: ಎನ್‌ಡಿಟಿವಿ

ನಮ್ಮ ರಾಜ್ಯದಲ್ಲಿಯೇ ಬಿಜೆಪಿ ಸರ್ಕಾರವಿದ್ದಾಗ ಸಚಿವರು ಮತ್ತು ಶಾಸಕರೇ ಇಂಥ ಭಾನ್ಗಡಿಗಳಲ್ಲಿ ಭಾಗಿಯಾದ ಹಲವು ನಿದರ್ಶನಗಳುಂಟು. ನರ್ಸ್ ರೇಣುಕಾಚಾರ್ಯ, ಹರತಾಳು ಹಾಲಪ್ಪ, ರಘುಪತಿ ಭಟ್, ಜೀವರಾಜ್, ರಾಮದಾಸ್, ಅಸೆಂಬ್ಲಿ ಹಾಲ್ ಬ್ಲೂಬಾಯ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತೆ. ಅಷ್ಟೇ ಯಾಕೆ ಮೊನ್ನೆಮೊನ್ನೆ ರಾಜ್ಯವನ್ನು ತಲ್ಲಣಿಸುವಂತೆ ಮಾಡಿದ್ದ ಬಿಜಾಪುರದ ದಲಿತ ಹೆಣ್ಮಗಳು ದಾನಮ್ಮನ ರೇಪ್ ಕೇಸ್‍ನಲ್ಲೂ ಬಿಜೆಪಿ ಮುಖಂಡನ ಚೇಲಾಗಳ ಹೆಸರೇ ತೇಲಿಬಂದಿದ್ದವು.

‘ಎಲ್ಲಿ ಮಹಿಳೆ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂಬುದನ್ನು ತಮ್ಮ ಭಾಷಣಕ್ಕಷ್ಟೇ ಸೀಮಿತವಾಗಿಸಿಕೊಂಡಿರೋ ಸಂಘಿಗಳು ಆಸೀಫಾಳನ್ನು ಅದೇ ದೇವಸ್ಥಾನದಲ್ಲಿಟ್ಟು ಸತತ ಏಳು ದಿನ ಅತ್ಯಾಚಾರಗೈಯುತ್ತಾರೆಂದರೆ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಅವರದು ಅದಿನ್ನೆಂತ ಹೊಲಸು ಸಿದ್ಧಾಂತವಾಗಿರಬೇಡ. ಇಬ್ಬರು ಕಾಶ್ಮೀರಿ ಬಿಜೆಪಿ ಮಂತ್ರಿಗಳ ನೇತೃತ್ವದಲ್ಲಿ ಹಿಂದೂ ಏಕತಾ ಮಂಚ್, ಅತ್ಯಾಚಾರಿಗಳ ಪರವಾಗಿ ಬೀದಿಗಿಳಿದರೆ ಇತ್ತ ಉನ್ನಾವೋದಲ್ಲಿ ಸಂತ್ರಸ್ತೆಯ ತಂದೆಯನ್ನೇ ಕೊಂದು ಹಾಕಲಾಗುತ್ತೆ ಮತ್ತು ಯೋಗಿಯ ಬಿಜೆಪಿ ಸರ್ಕಾರ ತನ್ನ ಅತ್ಯಾಚಾರಿ ಆರೋಪಿತ ಶಾಸಕನ ಪರವಾಗಿಯೇ ದನಿ ಎತ್ತುತ್ತದೆ!

ನಿಧಾನಕ್ಕೆ ಜನರಿಗೆ ಬಿಜೆಪಿ ಹಿಂದೂತ್ವದ ಹೆಸರಲ್ಲಿ ತಮ್ಮನ್ನು ಮೋಸಗೊಳಿಸುತ್ತಿರುವುದು ಗೊತ್ತಾಗುತ್ತಿದೆ. ಹಾಗಾಗಿಯೇ ಸೋನಮ್ ಕಪೂರ್, ರಿತೇಶ್ ದೇಶ್‍ಮುಖ್, ರೀಚಾ ಚಡ್ಡ, ಕಮಲ್ ಹಾಸನ್, ರಘು ದಿಕ್ಷಿತ್ ಮೊದಲಾದ ಸಲೆಬ್ರಿಟಿಗಳೂ ಅಂಜಿಕೆ ಅಳುಕುಗಳನ್ನು ಮುರಿದು ಬಿಜೆಪಿಗರನ್ನು ಖಂಡಿಸಿದ್ದಾರೆ. ‘ನಕಲಿ ರಾಷ್ಟ್ರೀಯವಾದಿಗಳು ಮತ್ತು ನಕಲಿ ಹಿಂದೂಗಳಿಂದಾಗಿ ಅಸಹ್ಯವಾಗುತ್ತಿದೆ, ನಾಚಿಕೆಯಾಗುತ್ತಿದೆ. ಇದು ನನ್ನ ದೇಶದಲ್ಲಿ ನಡೆಯುತ್ತಿದೆ ಎನ್ನುವುದನ್ನು ನನಗೆ ನಂಬಲಾಗುತ್ತಿಲ್ಲ’ ಎಂಬ ಸೋನಮ್ ಕಪೂರ್ ಮಾತುಗಳು ದೇಶದ ಅಂತಃಸಾಕ್ಷಿಯನ್ನು ಪ್ರತಿನಿಧಿಸುವಂತಿವೆ.

ಹೌದು, ಸಂಘಪರಿವಾರದ ಮನಸ್ಥಿತಿಗಳಿಂದಾಗಿ ಇಂದು ವಿಶ್ವದ ಮುಂದೆ ನಾವು ಭಾರತೀಯರು ತಲೆತಗ್ಗಿಸುವಂತಾಗಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಭಯಾ ಪ್ರಕರಣದಲ್ಲಿ ಬೀದಿಗಿಳಿದಿದ್ದ ಬಿಜೆಪಿಯ ಅವತ್ತಿನ ಆಕ್ರೋಶವೆಲ್ಲ ಕೇವಲ ರಾಜಕೀಯ ಚದುರಂಗದಾಟಕ್ಕೆ ಸೀಮಿತವಾಗಿತ್ತು ಅನ್ನೋದು ಇದರಿಂದಲೇ ತಿಳಿದುಬರುತ್ತೆ. ಅಷ್ಟಕ್ಕೂ ಅವರು ನಂಬುವ ಸಿದ್ಧಾಂತಗಳೇ ಅತ್ಯಾಚಾರವನ್ನು ಒಂದು ಟೂಲ್ ಆಗಿ ಒಪ್ಪಿಕೊಂಡಿರುವಾಗ ಅಂತವರಿಂದ ಇನ್ನೇನನ್ನು ತಾನೆ ನಿರೀಕ್ಷಿಸಲು ಸಾಧ್ಯ!

– ನವೀನ್


ಇದನ್ನೂ ಓದಿ: ಹತ್ರಾಸ್: ಶವ ಸುಟ್ಟಿದ್ದನ್ನು ಸುಪ್ರೀಂ‌ನಲ್ಲಿ ಸಮರ್ಥಿಸಿಕೊಂಡ ಯುಪಿ ಸರ್ಕಾರ!

ನವೀನ್

LEAVE A REPLY

Please enter your comment!
Please enter your name here