Homeರಾಜಕೀಯಸಾಲಮನ್ನಾ : ರಾಜಕೀಯ ಜಾಣ್ಮೆ ತೋರಲು ಕುಮಾರಸ್ವಾಮಿಗೆ ಅವಕಾಶ

ಸಾಲಮನ್ನಾ : ರಾಜಕೀಯ ಜಾಣ್ಮೆ ತೋರಲು ಕುಮಾರಸ್ವಾಮಿಗೆ ಅವಕಾಶ

- Advertisement -
  • ನೀಲಗಾರ |
- Advertisement -

ಜೆಡಿಎಸ್‍ನ ಪ್ರಣಾಳಿಕೆ ರೂಪಿಸುವಾಗ ತನಗೆ ಸಂಪೂರ್ಣ ಬಹುಮತ ಬರುವುದಿಲ್ಲವೆಂಬುದು ಕುಮಾರಸ್ವಾಮಿಯವರಿಗೆ ಖಚಿತವಾಗಿ ಗೊತ್ತಿತ್ತು. ಆದರೆ, ಅತಂತ್ರ ವಿಧಾನಸಭೆಯಾದಾಗ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದೇ ಇತ್ತಾದ್ದರಿಂದ ಸಾಲಮನ್ನಾ ಮಾಡಬೇಕಾದ ಜವಾಬ್ದಾರಿ ತನ್ನ ಮೇಲೆ ಇರುತ್ತದೆ ಎಂಬುದು ಗೊತ್ತಿರದೇ, ರೈತರ ಸಾಲಮನ್ನಾ ಭರವಸೆ ಅವರು ನೀಡಿದ್ದರು ಎಂದುಕೊಳ್ಳಲಾಗದು. ಜೆಡಿಎಸ್ ಎಂದರೆ ದೇವೇಗೌಡರೂ ಇದ್ದಾರೆ ಮತ್ತು ಕುಮಾರಸ್ವಾಮಿ ಸಹಾ ಅಷ್ಟು ಅಪಕ್ವ ರಾಜಕಾರಣಿ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕೆಲವೊಮ್ಮೆ ಅಸಾಧ್ಯ ಎಂದು ತೋರುವ ಚುನಾವಣಾ ಭರವಸೆಗಳನ್ನೂ ರಾಜಕೀಯ ಪಕ್ಷಗಳು ಈಡೇರಿಸಿವೆ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅಂತಹ ಧೈರ್ಯ ಇನ್ನೂ ಹೆಚ್ಚು. ಉಳಿದ ಬಾಬ್ತುಗಳಿಗೆ ಕಡಿಮೆ ಹಣ ನೀಡಿ, ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ಮಾತ್ರ ಮುಂದಿಟ್ಟುಕೊಂಡು ಅಧಿಕಾರ ನಡೆಸಿಕೊಂಡು ಹೋಗಲು ಬೇಕಾದ ರಿಸ್ಕ್ ಮತ್ತು ಲೆಕ್ಕಾಚಾರ ಎರಡರ ಬಗ್ಗೆಯೂ ಅವರಿಗೆ ಅರಿವಿರುತ್ತದೆ. ಅಂತಿಮವಾಗಿ ಅಂತಹ ಆರ್ಥಿಕ ನಡೆಯಿಂದ ರಾಜ್ಯಕ್ಕೆ ಒಳ್ಳೆಯದಾಯಿತೋ ಅಥವಾ ಕೆಟ್ಟದಾಯಿತೋ ಎಂಬುದು ಬೇರೆ ಸಂಗತಿ. ಆದರೆ, ಹಾಗೂ ನಡೆಸಲು ಸಾಧ್ಯವಿದೆ ಎಂಬುದಕ್ಕೆ ದಕ್ಷಿಣ ಭಾರತದ ನಮ್ಮ ನೆರೆಯ ರಾಜ್ಯಗಳಲ್ಲಿಯೇ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಆದರೆ, ರಾಜ್ಯದ ಒಟ್ಟಾರೆ ಬಜೆಟ್‍ನ ಪ್ರಮಾಣವನ್ನೂ ಮೀರಿ ಹೋಗುವಷ್ಟು ಚುನಾವಣಾ ಭರವಸೆಗಳೇ ಇದ್ದರೆ? ಜೆಡಿಎಸ್‍ನ ಪ್ರಣಾಳಿಕೆ ಅಂತಹ ಹಲವು ಅಂಶಗಳನ್ನು ಹೊಂದಿದೆ. ಸಾಲಮನ್ನಾ ಬಿಡಿ, ಈ ಐದು ವರ್ಷಗಳಲ್ಲಿ ಒಮ್ಮೆ ಮಾತ್ರ ಮಾಡಬಹುದು. ಆದರೆ, 24 ವರ್ಷಗಳನ್ನು ಮೀರಿದ ಬಿಪಿಎಲ್ ಮಹಿಳೆಯರಿಗೆಲ್ಲರಿಗೂ ತಲಾ 2,000 ರೂ ಮಾಸಾಶನ ನೀಡುವ ವಾಗ್ದಾನ ಅವರ ಪ್ರಣಾಳಿಕೆಯಲ್ಲಿದೆ. ಪ್ರತೀ ವರ್ಷವೂ ಸುಮಾರು 30,000 ಕೋಟಿ ರೂ.ಗಳನ್ನು ಅದಕ್ಕೆಂದೇ ಎತ್ತಿಡಬೇಕಾಗುತ್ತದೆ. ಅದಂತೂ ಸಾಧ್ಯವೇ ಇರದ ಭರವಸೆ. ಮದ್ಯಪಾನ ನಿಷೇಧದ ಭರವಸೆ ನೀಡಿ ಮಹಿಳೆಯರ ಮತ ಪಡೆಯಬಹುದೆಂಬ ಧೈರ್ಯ ತೋರಲು ಸಾಧ್ಯವಾಗದ ಪಕ್ಷ ಮಾತ್ರ ಇಂತಹ ಭರವಸೆ ನೀಡುತ್ತದೆ.

ಚುನಾವಣೆಗೆ ಮುಂಚೆಯೇ ಸಾಲಮನ್ನಾಕ್ಕೆ ಎಲ್ಲಿಂದ ಹಣ ತರಬಹುದು ಎಂಬುದಕ್ಕೆ ತನ್ನದೇ ಯೋಜನೆಗಳಿವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜಿಎಸ್‍ಟಿಯ ಕಾರಣಕ್ಕೆ ರಾಜ್ಯವು ನೇರವಾಗಿ ಸಂಗ್ರಹಿಸಬಹುದಾದ ತೆರಿಗೆಯ ವ್ಯಾಪ್ತಿಯು ಮಿತಿಗೊಳಪಟ್ಟಿದೆ. ಹೀಗಿದ್ದ ಮೇಲೆ ಅವರ ಯೋಜನೆ ಏನಾಗಿರಬಹುದು? ಒಂದು ಮೂಲದ ಪ್ರಕಾರ, ಈಗಾಗಲೇ ಎ.ಟಿ.ರಾಮಸ್ವಾಮಿ ವರದಿ ಸೇರಿದಂತೆ ಕೆಲವು ಅಂದಾಜಿನ ಪ್ರಕಾರ ಬೆಂಗಳೂರು ಸುತ್ತಲು ಅಕ್ರಮವಾಗಿ ಒತ್ತುವರಿಯಾಗಿರುವ ಸಾವಿರಾರು ಎಕರೆ ಭೂಮಿಯ ಮೇಲೆ ಹಾಕಬಹುದಾದ ದಂಡ ಅಥವಾ ಮುಟ್ಟುಗೋಲು ಮಾಡಿಕೊಂಡು ಹರಾಜು ಹಾಕುವುದರಿಂದ ಬರುವ ಹಣದಲ್ಲಿ ಸಾಲಮನ್ನಾ ಮಾಡಬಹುದು. ಅದರ ಸದ್ಯದ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು ಸಿಕ್ಕಿದರೂ, ಇದು ಸಾಧ್ಯ ಎಂಬ ಲೆಕ್ಕಾಚಾರವು ಕುಮಾರಸ್ವಾಮಿಯವರ ತಲೆಯಲ್ಲಿದೆಯಂತೆ. ಇದನ್ನು ಸಂಪೂರ್ಣ ಅಸಾಧ್ಯ ಎನ್ನಲಾಗದು. ಇದರ ಜೊತೆಗೆ ಗಣಿಗಾರಿಕೆಯ ಮೇಲೆ ಹೇರಬಹುದಾದ ದಂಡ, ತೆರಿಗೆ, ರಾಯಲ್ಟಿ ಹೆಚ್ಚಳದ ಮೂಲಕವೂ ವರಮಾನ ಗಳಿಕೆ ಸಾಧ್ಯ ಎಂಬುದು ಬಹುಶಃ ಅವರ ತಲೆಯಲ್ಲಿರುವ ಇನ್ನೊಂದು ಸಾಧ್ಯತೆ.

ಕೆಲವು ಅಕ್ರಮಗಳನ್ನು ‘ಬಲಿ ಹಾಕುವ’ ಮೂಲಕ ಒಂದು ಕಡೆ ಹೀರೋ ಇಮೇಜ್ ಸಹಾ ಸಂಪಾದಿಸಬಹುದು, ಜನಪ್ರಿಯ ಕಾರ್ಯಕ್ರಮಗಳಿಗೆ ಹಣವನ್ನೂ ಹೊಂದಿಸಿಕೊಳ್ಳಬಹುದು. ಆದರೆ, ಪಕ್ಷದೊಳಗೆ ಯಾವ ವಿರೋಧವೂ ಇಲ್ಲದೇ ತನ್ನ ಮಾತೇ ಅಂತಿಮ ಎಂಬ ಪರಿಸ್ಥಿತಿ ಇದ್ದಾಗ ಮಾತ್ರ ಇಂಥವು ಸಾಧ್ಯ. ಇಲ್ಲವೇ ಸೈದ್ಧಾಂತಿಕವಾಗಿ ಆ ಪಕ್ಷದ ಅಜೆಂಡಾದಲ್ಲಿ ಆ ನೀತಿ ಇದ್ದು, ಅದರ ಸಮರ್ಥನೆಗೆ ಇಡೀ ಪಕ್ಷ ಸನ್ನದ್ಧವಾಗಿರಬೇಕು. ಎಡಪಕ್ಷಗಳು ಕೇರಳ ಮತ್ತು ಬಂಗಾಳದಲ್ಲಿ ಭೂಸುಧಾರಣೆಯನ್ನು ಜಾರಿಗೆ ತಂದದ್ದು ಹಾಗೆಯೇ. ನೋಟು ರದ್ದತಿ ಸಹಾ ಇಂಥದ್ದೇ ಹೀರೋ ಕೆಲಸ ಮಾಡಲು ಹೊರಟ ಮೋದಿಯ ದೊಡ್ಡ ಎಡವಟ್ಟಾಗಿತ್ತು. ಕುಮಾರಸ್ವಾಮಿಯವರಿಗೂ ಅಂತಹ ದೊಡ್ಡ ವಿರೋಧ ಅವರ ಪಕ್ಷದೊಳಗೆ ಬರಲು ಸಾಧ್ಯವಿಲ್ಲ; ಆದರೆ, ಅವರು ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರ. ವಿವಿಧ ಖಾತೆಗಳನ್ನು ಪಡೆಯಲಿರುವ ಕಾಂಗ್ರೆಸ್‍ನ ಮಂತ್ರಿಗಳು ತಮ್ಮ ತಮ್ಮ ಇಲಾಖೆಗಳಿಗೂ ಅನುದಾನ ಕೇಳುತ್ತಾರೆ. ಆಗ ಅವೆಲ್ಲವನ್ನೂ ಹತ್ತಿಕ್ಕಿ, ತನಗೆ ವಿಶೇಷ ಇಮೇಜ್ ತಂದುಕೊಡುವ ಜನಪ್ರಿಯ ಕಾರ್ಯಕ್ರಮಗಳಿಗೆ ಮಾತ್ರ ಹಣ ಹೊಂದಿಸುವುದು ಕುಮಾರಸ್ವಾಮಿಯವರಿಗೆ ಸುಲಭವೇ ಎಂಬುದು ಈಗಿನ ಪ್ರಶ್ನೆ.

ಇದನ್ನು ಗಮನಿಸಿಯೇ ಯಡಿಯೂರಪ್ಪನವರು ಸಾಲಮನ್ನಾಕ್ಕೆ ಒತ್ತಾಯಿಸಿ ಬೆನ್ನು ಬೀಳುತ್ತೇನೆ ಎಂಬ ಸೂಚನೆ ರವಾನಿಸಿದ್ದಾರೆ. ಸಾಲಮನ್ನಾ ಮಾಡಿದರೆ, ಸಮ್ಮಿಶ್ರ ಸರ್ಕಾರದಲ್ಲಿ ಬಿರುಕುಂಟಾಗುತ್ತದೆ. ಮಾಡದಿದ್ದರೆ, ಕುಮಾರಸ್ವಾಮಿಯವರನ್ನು ವಚನಭ್ರಷ್ಟರೆಂದು ಬಿಂಬಿಸುವುದು ಸುಲಭವಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ, ನಿನ್ನೆ ಕುಮಾರಸ್ವಾಮಿಯವರು 2 ಹಂತದಲ್ಲಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. 15 ದಿನಗಳಲ್ಲಿ ಮೊದಲ ಕಂತಿನ ನಿಯಮಗಳು ಹೊರಬೀಳಲಿವೆ. ಬಲಾಢ್ಯರಾದ ಕೆಲವು ವಿಭಾಗಗಳನ್ನು ಹೊರಗಿಟ್ಟು ಉಳಿದವರಿಗೆ ಮೊದಲ ಕಂತಿನಲ್ಲಿ ಬೆಳೆ ಸಾಲಮನ್ನಾ ಮಾಡುವ ಸಾಧ್ಯತೆ ಹೆಚ್ಚಿದೆ. ಹಳೆಯ ಸಾಲ ಮನ್ನಾ ಆಗಿ ಮಳೆಗಾಲದ ಬೆಳೆಗೆ ಹೊಸ ಸಾಲವು -ಸಾಲ ಪಡೆಯುವ ಸಾಧ್ಯತೆ ಇರುವ ರೈತರೆಲ್ಲರಿಗೆ- ಸಿಕ್ಕರೆ, ಅಲ್ಲಿಗೆ ಕುಮಾರಸ್ವಾಮಿಯವರು ಗೆದ್ದಂತೆ. ಸಿದ್ದರಾಮಯ್ಯನವರು 50,000 ರೂ.ವರೆಗಿನ ಸಹಕಾರೀ ಸಾಲಮನ್ನಾ ಮಾಡಿದ ತಕ್ಷಣ, ‘ಸಂಪೂರ್ಣ ಸಾಲಮನ್ನಾ’ದ ಒತ್ತಾಯ ಬಿದ್ದು ಹೋದಂತೆ, ವಿರೋಧ ಪಕ್ಷಕ್ಕೆ ಹೆಚ್ಚಿನ ಅಸ್ತ್ರ ಉಳಿಯುವುದಿಲ್ಲ. ಎರಡನೆಯ ಕಂತಿನ ಸಾಲ ಮನ್ನಾ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗುತ್ತದೆ. ಹೊಸ ಸರ್ಕಾರವು ‘ವಿಶೇಷ ಸಂಪನ್ಮೂಲ ಸಂಗ್ರಹ’ದ ಯೋಜನೆಗಳನ್ನು ರೂಪಿಸಿ ಅದರಿಂದ ದೊಡ್ಡ ಪ್ರಮಾಣದ ಸಂಪನ್ಮೂಲ ಸಂಗ್ರಹ ಆಗುವವರೆಗೆ ಇದು ಮುಂದಕ್ಕೆ ಹೋಗಬೇಕಾಗುತ್ತದೆ.

ವಾಸ್ತವದಲ್ಲಿ ಈ ಮಧ್ಯೆ ಆಗಬೇಕಿರುವ ಇನ್ನೊಂದು ‘ರಾಜಕೀಯ’ ರಾಜ್ಯಕ್ಕೆ ಒಳ್ಳೆಯದು ಮಾಡಬಲ್ಲದು. ಕುಮಾರಸ್ವಾಮಿಯವರಿಗೆ ಆಸಕ್ತಿ ಇದ್ದರೆ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರು ಕಳೆದ ಸರ್ಕಾರದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿದ ಖಾಸಗಿ ನಿರ್ಣಯವನ್ನು ತರಿಸಿ ಓದಿಕೊಳ್ಳಬೇಕು. ಅದರಲ್ಲಿ ತರ್ಕಬದ್ಧವಾಗಿ ಮುಂದಿಡಲಾದ ‘ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್’ ಇದೆ. ರಾಜಸ್ತಾನವನ್ನು ಬಿಟ್ಟರೆ ಅತೀ ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಕಳೆದ 17 ವರ್ಷಗಳಲ್ಲಿ 11 ವರ್ಷಗಳ ಕಾಲ ರಾಜ್ಯದ ಅರ್ಧಕ್ಕೂ ಹೆಚ್ಚು ತಾಲೂಕುಗಳು ಬರವನ್ನೆದುರಿಸಿವೆ. ನಮ್ಮ ಗ್ರಾಮೀಣ ಭಾಗ ತತ್ತರಿಸಿ ಹೋಗಿದೆ. ದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇಂತಹದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ, ಕರ್ನಾಟಕದಂತೆಯೇ ‘ಮಳೆ ನೆರಳಿನ ಪ್ರದೇಶ’ವಾದ ವಿದರ್ಭಕ್ಕೆ ಯುಪಿಎ ಸರ್ಕಾರವು ವಿಶೇಷ ಪ್ಯಾಕೇಜ್‍ಅನ್ನು ಘೋಷಿಸಿತ್ತು. ಬಿಹಾರಕ್ಕೆ ಕೇಂದ್ರವು ವಿಶೇಷ ಪ್ಯಾಕೇಜ್ ಕೊಟ್ಟಿದೆ. ತೆಲಂಗಾಣವನ್ನು ಕಳೆದುಕೊಂಡ ಆಂಧ್ರವು ವಿಶೇಷ ಪ್ಯಾಕೇಜ್ ಮತ್ತು ವಿಶೇಷ ಸ್ಥಾನಮಾನ ಕೊಡಲಿಲ್ಲವೆಂದು ಕೇಂದ್ರದ ವಿರುದ್ಧ ತಿರುಗಿಬಿದ್ದಿದೆ. ಮೊದಲಿಗೆ ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಶುರು ಮಾಡಿದ ಈ ‘ಬಂಡಾಯ’ವು ಈಗ ಚಂದ್ರಬಾಬು ನಾಯ್ಡು ತೆಕ್ಕೆಗೆ ಜಾರಿದೆ. ಎರಡು ವರ್ಷಗಳ ಕೆಳಗೆ ದೆಹಲಿಯಲ್ಲಿ ಈ ವಿಚಾರವನ್ನು ಮುಂದಿಟ್ಟುಕೊಂಡು ಜಗನ್ ಬೃಹತ್ ಪ್ರತಿಭಟನೆ ಆಯೋಜಿಸಿದ್ದರು. ಈಗ ಅದೇ ವಿಚಾರದ ಮೇಲೆ ನಾಯ್ಡು ಎನ್‍ಡಿಎಯಿಂದಲೇ ಹೊರಬಂದಿದ್ದಾರೆ.

ಇದೇ ರೀತಿಯ ವಿಶೇಷ ಪ್ಯಾಕೇಜ್‍ಅನ್ನು ಕರ್ನಾಟಕದ ಸರ್ಕಾರ ಮುಂದಿಡಬೇಕು. ಪುಟ್ಟಣ್ಣಯ್ಯನವರ ಖಾಸಗಿ ನಿರ್ಣಯದಲ್ಲಿ ಹೇಳಲಾಗಿರುವಂತೆ ಶೇ.35ಅನ್ನು ರಾಜ್ಯ ಸರ್ಕಾರವು ಹೊರಬೇಕು; ಸಾಲಮನ್ನಾ ಮೂಲಕ ಈಗಾಗಲೇ ತಾವು ಅದನ್ನು ಮಾಡಿದ್ದೇವೆ. ಶೇ.65ನ್ನು ಕೇಂದ್ರ ಕೊಡಬೇಕೆಂದು ವಿಧಾನಮಂಡಲದ ನಿರ್ಣಯ ಮಾಡಿ ಒತ್ತಾಯಿಸಬೇಕು. ಆಗ ನಿಜಕ್ಕೂ ಜನಪರವಾದ ಸಮಸ್ಯೆಯ ಮೇಲೆ ಕೇಂದ್ರವನ್ನು ಎದುರಿಸಬಹುದು. ಕುಮಾರಸ್ವಾಮಿಯವರು ಈ ಜಾಣ್ಮೆಯನ್ನು ತೋರುವರೇ ಕಾದು ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...