ಭೂ ಹಂಚಿಕೆ: ಸರ್ವೋದಯ ಸಮಾಜದ ಮೊದಲ ಹೆಜ್ಜೆ

0

‘ಸರ್ವೇಜನೋ ಸುಖಿನೋ ಭವಂತು’ ಎಂದು ಪ್ರತಿದಿನ ದೇವರ ಪೂಜೆ ಮಾಡುವಾಗ ಉಚ್ಚರಿಸಲಾಗುತ್ತದೆ. ಹೀಗೆ ಉಚ್ಚರಿಸಿದ ಮಾತ್ರಕ್ಕೆ ಸರ್ವರಿಗೂ ಸುಖ ಲಭಿಸುತ್ತದೆಯಾ? ಸರ್ವೋದಯ ಸಮಾಜ ಸೃಷ್ಠಿಯಾಗುತ್ತದೆಯಾ? ಇಂದಿನ ಸರ್ಕಾರಗಳ ಗುರಿ ಬಹುಜನ ಸುಖಾಯ ಬಹುಜನ ಹಿತಾಯ ಅಲ್ಲ. ಕೆಲವೇ ಬೆರಳೆಣಿಕೆಯ ಪ್ರತಿಷ್ಠಿತರ ಸುಖ-ಸುಪ್ಪತ್ತಿಗೆಯೇ ಗುರಿಯಾಗಿಬಿಟ್ಟಿದೆ. ಎಲ್ಲರ ಉದಯ ಸರ್ವೋದಯ, ಸರ್ವೋದಯ ಅಂತ್ಯೋದಯದಿಂದ ಆರಂಭವಾಗಬೇಕು. ಕೊನೇ ಮನುಷ್ಯನ ಅಭ್ಯುದಯದಿಂದ ಅದು ಆರಂಭವಾಗಬೇಕು. ಆತನ ಆದ್ಯತೆಯೇ ನಮ್ಮ ಆದ್ಯತೆಯಾಗಬೇಕು.
ಸರ್ವೋದಯ ಎಂದರೆ ಅಂಬಾನಿ, ಅದಾನಿಗಳಂಥ ವಿಶಿಷ್ಟ ಜನರ ಅಭ್ಯುದಯವಲ್ಲ. ಎಲ್ಲರ ಅಭ್ಯುದಯ. ನನ್ನ ಕುಟುಂಬದಿಂದ ಆರಂಭವಾದ ಈ ಉದಯ ವಿಶ್ವವನ್ನೇ ಆವರಿಸಬೇಕು. ಸರ್ವೋದಯ ಸಮಾಜ ಪ್ರೀತಿಯ ತಳಹದಿಯ ಮೇಲೆ ನಿರ್ಮಾಣವಾಗುತ್ತದೆ.
ಸರ್ವೋದಯ ಎಂದರೆ ಜನತೆಯ ಸಮಾಜವಾದ. ಬಲಾತ್ಕಾರದಿಂದ ಹೇರುವ ವ್ಯವಸ್ಥೆ ಇದಲ್ಲ. ಜನತೆಯ ಸ್ವಇಚ್ಛೆಯಿಂದ ರೂಪುಗೊಳ್ಳುವ ಸಮಾಜವಾದವೇ ಯಥಾರ್ಥವಾದುದು. ಅದೇ ವಾಸ್ತವಿಕ ಸಮಾಜವಾದ. ‘ವ್ಯಕ್ತಿ ಸಮಷ್ಠಿಗಾಗಿ, ಸಮಷ್ಠಿ ವ್ಯಕ್ತಿಗಾಗಿ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಹಳ್ಳಿ-ಪಟ್ಟಣಗಳಲ್ಲೆಲ್ಲ ಸಾಮೂಹಿಕ ಮನೋಭಾವ, ಪರಸ್ಪರ ಸಹಕಾರ ಮನೋಭಾವ ಬೆಳೆಯಬೇಕು.
ಸಮುದಾಯ ಭಾವನೆ ಸಮಾಜದಲ್ಲಿ ಈಗ ಕಾಣುತ್ತಿಲ್ಲ. ಒಬ್ಬರ ಹಿತ ಇನ್ನೊಬ್ಬರ ಹಿತಕ್ಕೆ ಅಡ್ಡಿಯಾಗಿದೆ. ಇಂತಹ ಸಮಾಜದಿಂದ ಸಾಮಾಜಿಕ ಕ್ರಾಂತಿ ತರಲು ಸಾಧ್ಯವಾಗುವುದಿಲ್ಲ. ಬಡವರನ್ನು ಕಂಡರೆ ಶ್ರೀಮಂತರಿಗೆ ತಿರಸ್ಕಾರ ಭಾವನೆ ಇದೆ. ಶ್ರೀಮಂತರನ್ನು ಕಂಡರೆ ದ್ವೇಷಭಾವ ಬಡವರಲ್ಲಿದೆ. ಪ್ರೀತಿ ಮತ್ತು ಕರುಣೆಯ ಭಾವದಿಂದ ಸಾಮಾಜಿಕ ಕ್ರಾಂತಿ ತರಲು ಸಾಧ್ಯ. ಆದ್ದರಿಂದ ತಿರಸ್ಕಾರ, ದ್ವೇಷ ಮತ್ತು ಹಿಂಸೆಯಿಂದ ತುಂಬಿರುವ ಸಮಾಜವನ್ನು ಪರಿವರ್ತನೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು.
ನಮ್ಮದು ಹಳ್ಳಿಗಳ ದೇಶ. ಆದ್ದರಿಂದ ಹಳ್ಳಿಗಳಲ್ಲಿ ಮೊದಲು ಸರ್ವೋದಯ ಕಟ್ಟುವ ಕೆಲಸ ಆರಂಭವಾಗಬೇಕು. ಹಳ್ಳಿಗಳ ನವ ನಿರ್ಮಾಣಕ್ಕೆ ಸಾಮುದಾಯಿಕ ಜನಜಾಗೃತಿ ಅತ್ಯಗತ್ಯ. ಜನಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ನಾವು ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸಬೇಕು. ಪ್ರೇಮ ಮತ್ತು ಕರುಣೆಯ ಮಾರ್ಗದಿಂದ ಸಾಮಾಜಿಕ ಕ್ರಾಂತಿಯನ್ನು ಸಾಧಿಸಬೇಕು.
ಗ್ರಾಮ ಸ್ವರಾಜ್ಯವೆಂದರೆ ಪರಿಪೂರ್ಣ ಪ್ರಜಾರಾಜ್ಯ. ಸ್ವಾವಲಂಬನೆ ಅದರ ಗುರಿ. ಜೀವನಾವಶ್ಯಕತೆಯ ಎಲ್ಲವೂ ಗ್ರಾಮದಲ್ಲೇ ಉತ್ಪತ್ತಿಯಾಗಬೇಕು. ಪಕ್ಷರಹಿತ ಪ್ರಜಾಪ್ರಭುತ್ವ ಹಳ್ಳಿಗಳಲ್ಲಿ ಜಾರಿಗೆ ಬರಬೇಕು. ಗ್ರಾಮದ ನೆ¯, ಜಲ, ಜಂಗಲ್, ಪ್ರಕೃತಿ ಸಂಪತ್ತು ಎಲ್ಲವೂ ಗ್ರಾಮದ ಇಡೀ ಜನರ ಸ್ವತ್ತಾಗಬೇಕು.
ಅಹಿಂಸೆಯಿಂದ ಕೂಡಿದ ಸರ್ವೋದಯದ ಶಾಂತ ಚಳುವಳಿಗೆ ಜನರನ್ನು ತಯಾರು ಮಾಡದಿದ್ದರೆ, ಹಳ್ಳಿಯ ಕೆಲವು ಹಿತಾಸಕ್ತಿಗಳು ಸಮಾಜವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಹಿಂಸಕ ಸಮಾಜವನ್ನು ಸೃಷ್ಟಿಸುವಲ್ಲಿ ಸಫಲವಾಗುತ್ತವೆ. ಈ ನಿಷ್ಠುರ, ನಿರ್ದಾಕ್ಷಿಣ್ಯ ಸತ್ಯವನ್ನು ಸಾಮಾಜಿಕ ಕ್ರಾಂತಿ ತರಬಯಸುವ ಎಲ್ಲರೂ ಮನಗಂಡರೆ ಮಾತ್ರ ಸರ್ವೋದಯ ಸಮಾಜವನ್ನು ನಿರ್ಮಿಸಬಹುದಾಗಿದೆ. ಆದ್ದರಿಂದ ಅಹಿಂಸೆಯ ತಳಹದಿಯ ಮೇಲೆ ವರ್ಗ ರಹಿತ, ಶಾಸನ ನಿರಪೇಕ್ಷ, ಶೋಷಣೆ ಮುಕ್ತ, ಜಾತ್ಯತೀತ ಸಮಾಜವನ್ನು ಸ್ಥಾಪಿಸುವುದು ನಮ್ಮ ಗುರಿಯಾಗಬೇಕು.
ದೀನ ದಲಿತರು, ದುರ್ಬಲರು, ಭೂಹೀನರು, ಶೋಷಿತರು ಇವರ ಮುಕ್ತಿಯೇ ಸರ್ವೋದಯದ ಮುಖ್ಯ ಗುರಿ. ಗ್ರಾಮಗಳಲ್ಲಿ ದುಡಿಯುವ ಎಲ್ಲರಿಗೂ ಅವರವರ ಅವಶ್ಯಕತೆಗೆ ಅನುಗುಣವಾಗಿ ಉಳುವ ಭೂಮಿ ಸಿಗಬೇಕು. ಭೂಮಿ ಮಾನವ ಸೃಷ್ಟಿಯಲ್ಲ, ನಿಸರ್ಗದ ಸೃಷ್ಟಿ. ಅದರಂತೆಯೇ ಗಾಳಿ, ಸೂರ್ಯನ ಬೆಳಕು, ಶಾಖ, ಜಲ, ಆಕಾಶ ಇವೆಲ್ಲವೂ ಕೂಡ ನಿಸರ್ಗ ಸೃಷ್ಟಿ. ಈ ಪಂಚಭೂತಗಳ ಮೇಲೆ ಕೆಲವೇ ಜನರ ಸ್ವಾಮ್ಯ ತಕ್ಕುದಲ್ಲ. ನಿಸರ್ಗ ಸೃಷ್ಟಿಸಿರುವ ಮಾನವ, ಪ್ರಾಣಿ, ಪಕ್ಷಿ, ಇರುವೆ ಎಲ್ಲರಿಗೂ ಸೇರಿದ್ದು ಈ ಪಂಚಭೂತಗಳು. ಆದರೆ ಇಂದು ಭೂಮಿ ಕೆಲವರಿಗೆ ಸೇರಿದ ಸ್ವತ್ತಾಗಿದೆ. ಅನೇಕರು ಇದರಿಂದ ವಂಚಿತರಾಗಿದ್ದಾರೆ. ಜಲವೂ ಅಷ್ಟೇ ಕೆಲವರ ಸ್ವತ್ತಾಗಿದೆ. ಜಲವೂ ಮಾರಾಟದ ವಸ್ತುವಾಗಿದೆ. ಶುದ್ಧಗಾಳಿ ವಿಷಮಯವಾಗುತ್ತಿದೆ. ಶುದ್ಧ ಗಾಳಿಯನ್ನು ಆಮ್ಲಜನಕವನ್ನೂ ಮಾರಾಟ ಮಾಡುವ ಆಸ್ಪತ್ರೆಗಳು ಕ್ಲಬ್ಬುಗಳು ಹುಟ್ಟಿಕೊಂಡಿವೆ. ಇದರಂತೆಯೇ ಸರ್ಕಾರದ ಸಹಕಾರದಿಂದ ಕಲ್ಲು, ಲೋಹ, ಇಂಧನ ಇವುಗಳ ಸ್ವಾಮ್ಯವನ್ನು ಸ್ವಾರ್ಥಿಗಳು ಪಟ್ಟಭದ್ರರು ತಮ್ಮ ಖಾಸಗಿ ಸ್ವತ್ತಾಗಿ ಮಾಡಿಕೊಂಡಿದ್ದಾರೆ. ಬೆಟ್ಟಗಳನ್ನು ಕರಗಿಸುತ್ತಿದ್ದಾರೆ. ಲೋಹಗಳ ಅದಿರಿಗಾಗಿ ಭೂಗರ್ಭವನ್ನು ಬಗೆದು ಹಾಕುತ್ತಿದ್ದಾರೆ.
ಈ ಕಲ್ಲುಗಳು, ಲೋಹಗಳು ಲಕ್ಷಾಂತರ ವರ್ಷಗಳ ಸೃಷ್ಟಿ ಪ್ರಕ್ರಿಯೆಯ ಫಲ. ಇಂದಿನ ತಲೆಮಾರಿನ ಸ್ವಾರ್ಥಿ ಧನವಂತರು, ಭೂಗಳ್ಳರು ಈ ಪ್ರಾಕೃತಿಕ ಸಂಪತ್ತನ್ನೆಲ್ಲಾ ತಮ್ಮ ಜೀವಿತ ಕಾಲದಲ್ಲಿಯೇ ಬರಿದು ಮಾಡಲು ಹೊರಟಿದ್ದಾರೆ. ಈ ಎಲ್ಲ ನೈಸರ್ಗಿಕ ಸಂಪತ್ತೂ ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು. ಇವೆಲ್ಲದರ ಸಮಾಜೀಕರಣವಾಗಬೇಕು. ಹಾಗೆಯೇ ಭೂಮಿ ಯಾರೊಬ್ಬರ ಸ್ವತ್ತಾಗಬಾರದು. ದುಡಿದು ತಿನ್ನುವವರೆಲ್ಲರಿಗೂ ವ್ಯವಸಾಯ ಭೂಮಿ ಸಿಗಬೇಕು. ಅಂದರೆ ಭೂಮಿಯ ಮಾಲೀಕತ್ವ, ಮಾರಾಟ, ಭೋಗ್ಯ, ಆಧಾರಕ್ಕೆ ಅವಕಾಶವಿರಬಾರದು. ಎರಡು ವರ್ಷ ವ್ಯವಸಾಯ ಮಾಡದೇ ಬೀಳು ಬಿಟ್ಟರೆ ಅದನ್ನು ಸರ್ಕಾರ ವಾಪಸ್ ತೆಗೆದುಕೊಂಡು ದುಡಿಮೆ ಮಾಡುವ ಇನ್ನೊಬ್ಬ ಭೂವಂಚಿತನಿಗೆ ಕೊಡಬೇಕು. ಇಂತಹ ನಿಯಮಗಳು ಜಾರಿಗೆ ಬರಬೇಕು. ಭೂಮಿ ಭೋಗದ ವಸ್ತುವಲ್ಲ. ಭೂಮಿಯ ಸೇವೆ ಮಾಡುವ ಎಲ್ಲರಿಗೂ ಅದು ಸಿಗಬೇಕು. ಭೂಮಿಗೆ ಮಾಲೀಕ ಎಂಬುದು ಅಪವಿತ್ರ ವಿಚಾರ. ಹತ್ತು ವರ್ಷಕ್ಕೊಮ್ಮೆ ವ್ಯವಸಾಯ ಭೂಮಿಯ ಮರುಹಂಚಿಕೆಯಾಗಬೇಕು. ಹತ್ತು ಜನ ಇದ್ದ ಕುಟುಂಬದಲ್ಲಿ ಹತ್ತು ವರ್ಷದ ಮೇಲೆ 4 ಜನ ಇರಬಹುದು, 4 ಜನ ಇದ್ದ ಕುಟುಂಬದಲ್ಲಿ 10 ವರ್ಷದ ಮೇಲೆ 10 ಮಂದಿ ಆಗಬಹುದು. ಅವರವರ ಅವಶ್ಯಕತೆಗನುಸಾರ ಹತ್ತು ವರ್ಷಕ್ಕೊಮ್ಮೆ ಭೂಮಿಯ ಮರುಹಂಚಿಕೆ ಆಗಬೇಕು.
ಈ ವ್ಯವಸ್ಥೆ ಜಾರಿಗೆ ತರಲು ನಾವು ಮುಂದಾದರೆ, ಗ್ರಾಮ ರಾಜ್ಯ ಸ್ಥಾಪನೆಗೆ ಮೊದಲ ಹೆಜ್ಜೆ ಇಟ್ಟಂತೆ ಆಗುತ್ತದೆ.

LEAVE A REPLY

Please enter your comment!
Please enter your name here