Homeರಾಜಕೀಯವರ್ತಮಾನದ ದಿಟ್ಟ ಕನಸುಗಾರ ಸಿದ್ದರಾಮಯ್ಯ

ವರ್ತಮಾನದ ದಿಟ್ಟ ಕನಸುಗಾರ ಸಿದ್ದರಾಮಯ್ಯ

- Advertisement -
- Advertisement -

ಅಲ್ಲಮ |

ಕಳೆದೆರಡು ದಿನಗಳ ಕರ್ನಾಟಕದ ರಾಜಕಾರಣ ಮೇ 17ರ ಮುಂಜಾನೆಯಿಂದ ಒಂದು ಸ್ಪಷ್ಟ ದಿಕ್ಕಿನೆಡೆಗೆ ಸಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಅದನ್ನು ಚಾಲ್ತಿಯಲ್ಲಿಡಲು ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ, ಮತದಾನ, ಮತದಾರರು, ಅವರ ಆಶೋತ್ತರಗಳೆಲ್ಲ ಬದಿಗೆ ಸರಿದಿವೆ. ಈಗೇನಿದ್ದರೂ ಪ್ರಜಾಪ್ರಭುತ್ವದ ಆತ್ಮನಾಶದ ರಾಜಕಾರಣ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನಿರ್ಗಮಿಸುತ್ತಿರುವ ಸಿದ್ದರಾಮಯ್ಯನವರು ಮತ್ತೆ ಗಾಂಧೀ ಪ್ರತಿಮೆಯ ಬಳಿ ಧರಣಿ ಕೂತಿದ್ದಾರೆ. ಸಿದ್ದರಾಮಯ್ಯನವರ ಒಂದು ಬದಿಯಲ್ಲಿ ಕುಮಾರಸ್ವಾಮಿ, ಮತ್ತೊಂದು ಬದಿಯಲ್ಲಿ ದೇವೇಗೌಡರು ಕೂತಿದ್ದಾರೆ. ಸಿದ್ದರಾಮಯ್ಯ ಮಾತ್ರ ಈ ಇಬ್ಬರು ರಾಜಕೀಯ ವಿರೋಧಿಗಳ ಜೊತೆ ನಿರುಮ್ಮಳವಾಗಿ ಮಾತಾಡುತ್ತಿದ್ದಾರೆ. ತಮ್ಮನ್ನು ಚುನಾವಣಾ ಭಾಷಣಗಳಲ್ಲಿ ಹೀನಾಯವಾಗಿ ಟೀಕಿಸಿದ್ದೂ ಅಲ್ಲದೆ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲುವಂತೆ ಮಾಡಿದ್ದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಿದ್ದರಾಮಯ್ಯ ಹೋರಾಡಲು ಅಣಿಯಾಗಿದ್ದಾರೆ. ಒಬ್ಬ ಮುತ್ಸದ್ದಿ ರಾಜಕಾರಣಿ ಮಾತ್ರ ಹೀಗೆ ಪ್ರಾಂಜಲವಾಗಿ ನಡೆದುಕೊಳ್ಳಬಲ್ಲ. ಸಿದ್ದರಾಮಯ್ಯನವರ ಇಂದಿನ ನಡವಳಿಕೆಯನ್ನು ವರ್ತಮಾನದಲ್ಲಿ ನಾವು ಯಾರಿಂದ ನಿರೀಕ್ಷಿಸಲು ಸಾಧ್ಯ?

ಹೌದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೇವಲ 78 ಸ್ಥಾನಗಳನ್ನು ಗಳಿಸಿ ನಿರೀಕ್ಷಿತ ಬಹುಮತ ಪಡೆಯಲಾಗಲಿಲ್ಲ. ಕಾಂಗ್ರೆಸ್ ಪಕ್ಷದ ಈ ಸೋಲನ್ನು ಸಿದ್ದರಾಮಯ್ಯನವರ ಸೋಲು ಎಂತಲೇ ಎಲ್ಲರೂ ಪರಿಗಣಿಸಿ ನೂರಾರು ಬಗೆಯ ಟೀಕೆಗಳನ್ನು ಮಾಡುತ್ತಿದ್ದಾರೆ. ನಾಯಕನಾದವನು ಸೋಲಿಗೆ ಹೊಣೆ ಹೊರಲೇಬೇಕು. ಗೆಲುವಿಗೆ ಸಾವಿರ ವಾರಸುದಾರು ಇದ್ದೇ ಇರುತ್ತಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷದ ಈ ಸೋಲು ಕೇವಲ ಸಿದ್ದರಾಮಯ್ಯನವರ ಸೋಲು ಮಾತ್ರವೆ? ಹಾಗದರೆ ಗೆದ್ದವರು ಯಾರು? ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯ ಆಟದಲ್ಲಿ ಸೋಲನ್ನು ಮಾತ್ರ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಜನತಂತ್ರದ ಈ ಆಚರಣೆಯನ್ನು ಭಾಗಶಃ ಅರ್ಥಮಾಡಿಕೊಂಡಂತೆ. ಗೆಲುವನ್ನೂ ಈ ಸಂದರ್ಭದಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಮೊದಲು, ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರ ಸೋಲನ್ನು ನೋಡೋಣ. ಕರ್ನಾಟಕದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದೇಕೆ? ದೇಶ ಈಗಿರುವ ಸ್ಥಿತಿಯಲ್ಲಿ ಕರ್ನಾಟಕದ ಜನ ಯಾವ ರಾಜಕೀಯ ಪರ್ಯಾವನ್ನು ಹಂಬಲಿಸಬೇಕಿತ್ತು? ಸಿದ್ದರಾಮಯ್ಯನವರು ಮಾಡಿದ ರಾಜಕೀಯ ಮತ್ತು ಆಡಳಿತಾತ್ಮಕ ತಪ್ಪುಗಳಾವವು? ಎಂಬ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳೋಣ.

ಮುಖ್ಯವಾಗಿ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಚುನಾವಣಾಪೂರ್ವ ಸಮೀಕ್ಷೆಗಳು ಇದನ್ನು ಸ್ಪಷ್ಟವಾಗಿ ಹೇಳಿವೆ. ಜೊತೆಗೆ ಸಿದ್ದರಾಮಯ್ಯನವರ ಅನೇಕ ಜನಪ್ರಿಯ ಯೋಜನೆಗಳ ಫಲಾನುಭವಿಗಳು ಸಂತುಷ್ಟ ಅಭಿಪ್ರಾಯಗಳನ್ನು ಹಲವು ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ಒಂದು ಜೀವಂತ ಉದಾಹರಣೆ ನೋಡುವ, ಕಾಕನಕೋಟೆ ಭಾಗದ ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಅದರಲ್ಲೂ ಜೇನುಕುರುಬರು ತಮ್ಮ ಮೂಲನೆಲೆಗಳಿಂದ ಸ್ಥಳಾಂತರಗೊಂಡು ಸಾಮಾಜಿಕವಾಗಿ ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಅನೇಕ ಸವಲತ್ತುಗಳಿದ್ದರೂ ಈ ಸಮುದಾಯ ಅವುಗಳನ್ನು ದೊರಕಿಸಿಕೊಳ್ಳಬೇಕಾದ ಶಕ್ತಿ ಇಲ್ಲದೆ ದಿಕ್ಕೆಟ್ಟು ಹೋಗಿತ್ತು. ಇವರಿಗಾಗಿ ತೆರೆಯಲಾಗಿರುವ ಆಶ್ರಮ ಶಾಲೆಗಳು ಬಿಕೋ ಎನ್ನುತ್ತಿದ್ದವು. ಜೇನುಕುರುಬರ ಮಕ್ಕಳು, ಕರ್ನಾಟಕದಿಂದ ಕೇರಳಕ್ಕೆ ಹೋಗುವ ಹೆದ್ದಾರಿಯ ಅಂಚಿಗೆ ಬಂದು ಹಾದು ಹೋಗುವ ಕಾರುಗಳನ್ನು ಆಸೆಗಣ್ಣಿನಿಂದ ನೋಡುತ್ತ ನಿಲ್ಲುತ್ತಿದ್ದರು. ಆ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ತಮಗೆ ಏನಾದರು ಕೊಡಬಹುದು ಎಂದು ನಿರೀಕ್ಷಿಸಿ ರಸ್ತೆ ಪಕ್ಕ ನಿಲ್ಲುತ್ತಿದ್ದರು. ಈ ದೃಶ್ಯ ನಿಜಕ್ಕೂ ಹೃದಯ ಕಲುಕುತ್ತಿತ್ತ್ತು. ಮಧ್ಯಾಹ್ನ ಇವರ ಹಾಡಿಗಳಿಗೆ ಹೋದರೆ ಬಿಕೋ ಎನ್ನುತ್ತಿದ್ದವು. ಆದರೆ, ಕಳೆದ ಎರಡು ವರ್ಷಗಳ ಹಿಂದೆ ಒಂದು ಡಾಕ್ಯುಮೆಂಟ್ರಿ ಮಾಡಲು ಜೇನುಕುರುಬರ ಹಾಡಿಗಳಿಗೆ ಹೋದಾಗ ಹಾಡಿಗಳ ಚಿತ್ರಣ ಬದಲಾಗಿತ್ತು. ಆಶ್ರಮ ಶಾಲೆಗಳು ತುಂಬಿ ತುಳುಕುತ್ತಿದ್ದವು. ಶುಭ್ರ ಬಟ್ಟೆಗಳನ್ನು ಹಾಕಿದ್ದ ಹುಡುಗ/ಹುಡುಗಿಯರು ಆರೋಗ್ಯವಂತರಾಗಿ ಕಾಣುತ್ತಿದ್ದರು. ಪಕ್ಕದ ಗೋಣಿಕೊಪ್ಪಲಿನ ಕಾಲೇಜುಗಳಲ್ಲಿ ಜೇನುಕುರುಬ, ಬೆಟ್ಟಕುರುಬ ಮತ್ತು ಎರವ ಸಮುದಾಯದ ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು. ಅಲ್ಲಿನ ಎಸ್‍ಟಿ ವಸತಿ ನಿಲಯದಲ್ಲಿ ಈ ಸಮುದಾಯದ ಮಕ್ಕಳು ಸ್ವಚ್ಚಂದವಾಗಿ ಓಡಾಡಿಕೊಂಡಿದ್ದರು. ಈ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ಅಲ್ಲಿನ ಆಶ್ರಮ ಶಾಲೆಯ ಶಿಕ್ಷಕರೊಬ್ಬರನ್ನು ಕೇಳಿದೆ. `ಸಾರ್ ಇವರಿಗೆ ಒಪ್ಪೊತ್ತಿನ ಊಟದ್ದೇ ಬಹುದೊಡ್ಡ ಸಮಸ್ಯೆ. ಮೂರು ಹೊತ್ತಿನ ಊಟಕ್ಕಾಗಿ ಮನೆಮಂದಿಯಲ್ಲ, ಹೆಂಗಸರು ಮಕ್ಕಳೆನ್ನದೆ ದುಡಿಯಲು ಮಲೆಯಾಳಿಗಳ ತೋಟಗಳಿಗೆ ಹೋಗುತ್ತಿದ್ದರು. ಆದರೆ ಅನ್ನಭಾಗ್ಯ ಯೋಜನೆ ಜಾರಿಯಾದ ಮೇಲೆ ತಂದೆ ತಾಯಿಗಳು ಕೂಲಿ ಕೆಲಸಕ್ಕೆ ಹೋಗಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ತಮಗೆ ಟಿಎಸ್‍ಪಿ ಯೋಜನೆಯಿಂದ ಬರಬೇಕಾದ ಸವಲತ್ತುಗಳನ್ನು ಪಡೆಯಲಾರಂಭಿಸಿದ್ದಾರೆ’ ಎಂದು ಅಲ್ಲಿ ಆದ ಬದಲಾವಣೆಗೆ ಕಾರಣಗಳನ್ನು ಆ ಶಿಕ್ಷಕ ವಿವರಿಸದರು. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯನ್ನು ಲೇವಡಿ ಮಾಡಿದ ಜನರ ಮುಖಕ್ಕೆ ರಾಚುವಂತಹ ಒಂದು ಜ್ವಲಂತ ಉದಾಹರಣೆ ನನ್ನ ಮುಂದೆಯೇ ಮೈದಾಳಿತ್ತು. ನಾವು ತೆಗೆಯುತ್ತಿದ್ದ ಸಾಕ್ಷ್ಯಚಿತ್ರ ಮುಗಿಯುವವರೆಗೂ ನಾನು ಆ ಹಾಡಿಗಳಲ್ಲಿ ಅನ್ನಭಾಗ್ಯ ಯೋಜನೆಯ ಕುರಿತು ಪದೇ ಪದೇ ಪ್ರಶ್ನಿಸಿ ಈ ಯೋಜನೆಯ ತಲುಪುವಿಕೆಯನ್ನು ಖಾತ್ರಿಪಡಿಸಿಕೊಂಡೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ ದೂರದೃಷ್ಟಿ ಮತ್ತು ಕಾಳಜಿಗಳು ಮನವರಿಗೆಯಾಗುತ್ತಲೇ ಇದ್ದವು. ಇದು ನಾಗರಹೊಳೆ ಮತ್ತು ಬಂಡಿಪುರದ ಉದಾಹರಣೆ ಮಾತ್ರವಲ್ಲ. ಅನ್ನಭಾಗ್ಯ ಕರ್ನಾಟಕದ ಎಲ್ಲ ಪ್ರದೇಶಗಳ ಅನೇಕ ಸಮುದಾಯಗಳ ಸ್ವಾವಲಂಬಿ ಬದುಕಿಗೆ ಕಾರಣವಾಗಿರುವುದನ್ನು ಸಮೀಕ್ಷೆಗಳು ಸಾಬೀತು ಮಾಡಿವೆ.

ಇದರ ಜೊತೆ ಶಾದಿಭಾಗ್ಯ, ರೈತರ ಸಾಲಮನ್ನಾ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಮುಂತಾದ ಯೋಜನೆಗಳು ಜನಪ್ರಿಯ ಕಾರ್ಯಕ್ರಮಗಳಂತೆ ಕಂಡರೂ ಅವು ನಿರ್ದಿಷ್ಟ ಸಂಚಲನವನ್ನು ತರುವಲ್ಲಿ ಯಶಸ್ವಿಯಾಗಿವೆ. ಜೊತೆಗೆ ಹಗರಣಮುಕ್ತ, ಶೋಷಿತರ ಪರವಾದ ಸರ್ಕಾರ ಎಂದು ವಿದೇಶಿ ಮಾಧ್ಯಮಗಳೂ ಕೊಂಡಾಡಿದವು. ಇದೆಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯನವರು ಕೋಮುವಾದವನ್ನು ಸಹಿಸುತ್ತಿರಲಿಲ್ಲ. ಹಾಗಂತ ಕರಾವಳಿ ಕಡೆಯ ಕೋಮು ಕ್ರಿಮಿಗಳನ್ನು ಮಟ್ಟ ಹಾಕುವಲ್ಲಿ ನಿರ್ದಿಷ್ಟ ಕ್ರಮಗಳನ್ನು ಅವರು ತೆಗೆದುಕೊಳ್ಳಲಿಲ್ಲ. ಆದರೆ ಬಾಬಾಬುಡನ್ ಗಿರಿ ವಿವಾದದ ಕುರಿತು ಅವರು ತಮ್ಮ ಸರ್ಕಾರದ ಸ್ಪಷ್ಟ ನಿರ್ಧಾರವನ್ನು ಸುಪ್ರೀಮ್ ಕೋರ್ಟಗೆ ತಲುಪಿಸಿದರು. ಮೌಢ್ಯ ನಿಷೇಧ ಕಾಯ್ದೆಯನ್ನು ತರಲು ಪ್ರಯತ್ನಿಸಿದರು. ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಲು ಕ್ರಮಕೈಗೊಂಡರು. ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಜಾರಿಗೆ ಸ್ಪಷ್ಟ ನಿಯಮಗಳನ್ನು ರೂಪಿಸಿದ್ದಲ್ಲದೆ, ಯಾವ ರಾಜ್ಯ ಇದುವರೆಗೂ ಮೀಸಲಾಗಿಡದಷ್ಟು ಹಣವನ್ನು ಪ್ರತಿ ವರ್ಷ ಬಜೆಟ್‍ಲ್ಲಿ ಮೀಸಲಿಟ್ಟರು. ಹೀಗಿದ್ದರೂ ಜನ ಏಕೆ ಸಿದ್ದರಾಮಯ್ಯನವರ ಸರ್ಕಾರವನ್ನು ತಿಸ್ಕರಿಸಿದರು? ಈ ಪ್ರಶ್ನೆಗೆ ತಕ್ಷಣಕ್ಕೆ ಒಂದೆರಡು ಉತ್ತರಗಳು ಹೊಳೆಯುತ್ತಿವೆ. ಕರ್ನಾಟಕದ ಬಹುಸಂಖ್ಯಾತರ ಶಕ್ತಿರಾಜಕಾರಣ ಈ ಅಹಿಂದ ನಾಯಕನನ್ನು ಯಾವತ್ತೂ ಸಹಿಸಲಿಲ್ಲ. ಕಳೆದ ಐದು ವರ್ಷಗಳಲ್ಲಿ ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ವಿರುದ್ಧ ವ್ಯಕ್ತವಾಗುತ್ತಿದ್ದ ಅಸಹನೆಯು ಜಾತಿ ಮೂಲದ್ದೇ ಆಗಿತ್ತು. ನನ್ನ ನಿಡುಗಾಲದ ಗೆಳೆಯರೊಬ್ಬರು `ನೋಡ್ರೀ ಈ ಸಿದ್ದರಾಮಯ್ಯನಿಗೆ ಎಷ್ಟು ಅಹಂಕಾರ, ದೇವೇಗೌಡ್ರನ್ನ ಏಕವಚನದಲ್ಲಿ ಸಂಬೋಧನೆ ಮಾಡ್ತಾನೆ, ಈ ಅಹಂಕಾರಕ್ಕೆ ಹಳೆಮೈಸೂರು ಜನ ಎಲೆಕ್ಷನ್‍ನಲ್ಲಿ ತಕ್ಕ ಪಾಠ ಕಲಿಸ್ತಾರೆ’ ಎನ್ನುತ್ತಿದ್ದರು. ಆದರೆ ಅಲ್ಲಿಯವರೆಗೂ ಸಿದ್ದರಾಮಯ್ಯ ದೇವೇಗೌಡರಿಗೆ ಏಕವಚನ ಬಳಸಿರಲಿಲ್ಲ. ಆದರೆ, ಅವರಿಗೆÀ `ಅಯ್ಯೋ ಹಿಂದುಳಿದ ಜಾತಿಗೆ ಸೇರಿದ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾದನಲ್ಲ’ ಎಂಬ ಅಸಹನೆಯೇ ಹೆಚ್ಚಾಗಿತ್ತು. ಹಳೆಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಜನತಾದಳದ ಅಭ್ಯರ್ಥಿಗಳನ್ನು ಕಂಡು ಕೇಳರಿಯದ ಬಹುಮತದೊಂದಿಗೆ ಅಲ್ಲಿನ ಜನ ಗೆಲ್ಲಿಸಿ ಕಳಿಸಿದ್ದಾರೆ. ಸೇಡು ತೀರಿಸಿಕೊಳ್ಳುವಂತೆ ಕಾಂಗ್ರೆಸ್ ವಿರುದ್ಧ ಅಥವಾ ಸಿದ್ದರಾಮಯ್ಯನವರ ವಿರುದ್ಧ ಮತ ಚಲಾಯಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಜಾತಿಮೂಲದ ಅಸಹನೆ ವ್ಯಕ್ತವಾದದ್ದು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ. `ನಮ್ಮ ಧರ್ಮವನ್ನು ಸಿದ್ದರಾಮಯ್ಯ ಒಡೆದರು’ ಎಂದು ಆ ಭಾಗದ ಜನರಲ್ಲಿ ಹುಟ್ಟುಹಾಕಿದ ಕಲ್ಪಿತ ಭಯ ಜಾತಿ ಧೃವೀಕರಣಕ್ಕೆ ದಾರಿ ಮಾಡಿಕೊಟ್ಟಿತು. ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಕ್ರೀಯರಾಗಿದ್ದ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಸಚಿವರು ಸೋತು ಹೋದರು. ಒಳಮೀಸಲಾತಿಯ ವಿಷಯದಲ್ಲಿ ಸಿದ್ದರಾಮಯ್ಯನವರನ್ನು ಎಡಗೈ ಸಮುದಾಯ ಮೊದಲ ಆರೋಪಿಯನ್ನಾಗಿಸಿತು.

ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರ ನಮಗೆ ದ್ರೋಹ ಮಾಡುತ್ತಿದೆ ಎಂದು ಮುಂಬೈ ಕರ್ನಾಟಕದ ಜನರಿಗೆ ಅನ್ನಿಸಲೇ ಇಲ್ಲ. ಜಿಎಸ್‍ಟಿ, ನೋಟು ಅಮಾನ್ಯೀಕರಣ, ದರ ಏರಿಕೆ, ದಲಿತ, ಅಲ್ಪಸಂಖ್ಯಾತ ಮತ್ತು ದುಡಿವ ವರ್ಗಗಳ ಮೇಲೆ ಉತ್ತರ ಭಾರತದಲ್ಲಿ ನಿತ್ಯ ನಡೆಯುತ್ತಿರುವ ಅತ್ಯಾಚಾರ, ಕೊಲೆ ದೌರ್ಜನ್ಯಗಳು ಜನರ ಮನಸಲ್ಲಿ ಸುಳಿದಾಡಲಿಲ್ಲ. ದೇಶ ಇಂದು ಎದುರಿಸುತ್ತಿರುವ ಸಾಮಾಜಿಕ ರಾಜಕೀಯಾರ್ಥಿಕ ಸಮಸ್ಯೆಗಳು ಮುಖ್ಯವಾಗಲಿಲ್ಲ. ಉತ್ತರ ಪ್ರದೇಶ, ಜಮ್ಮುಕಾಶ್ಮೀರ, ಮಧ್ಯಪ್ರದೇಶ, ಜಾರ್ಖಾಂಡ್, ಛತ್ತೀಸ್‍ಗಡ್ ಮುಂತಾದ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವಿವೇಚನೆಗೊಳಪಡಲಿಲ್ಲ. ದೇಶ ಎದುರಿಸುತ್ತಿರುವ ಭೀಕರ ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆಗಳು ಚುನಾವಣೆಯಲ್ಲಿ ಚರ್ಚೆಯಾಗಲಿಲ್ಲ. ನಿಧಾನಕ್ಕೆ ತಲೆ ಎತ್ತಿ ನಿಂತಿರುವ ಫ್ಯಾಸಿಸ್ಟ್ ರಾಜಕಾರಣವು ಜನತಂತ್ರಕ್ಕೆ ಮಾರಕ ಎಂದು ಭಾವಿಸಲಿಲ್ಲ. ಈ ಜ್ವಲಂತ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಎಂಬಂತೆ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಒಂದು ಪಕ್ಷದ ಪರ ತುತ್ತೂರಿ ಊದಿದವು. ಸಮಾಜದ ಆರೋಗ್ಯಕ್ಕೆ, ಜನತಂತ್ರದ ಉಳಿವಿಗಾಗಿ ಮಾಧ್ಯಮ ಇದೆ ಎಂಬುದನ್ನೇ ಮರೆತು ವೃತ್ತಿಗೆ ದ್ರೋಹಬಗೆದವು. ಜಾತಿಯ ಶ್ರೇಷ್ಟತೆ ಮತ್ತು ಧಾರ್ಮಿಕ ಚಹರೆಗಳೇ ಅತ್ಯಂತಿಕ ಎಂದು ಜನರನ್ನು ನಂಬಿಸಲಾಯಿತು. ನಮ್ಮ ಉದ್ದಾರಕ್ಕಾಗಿ ವ್ಯಕ್ತಿಯೊಬ್ಬ ಉದ್ಭವಿಸಿ ಬಂದಿದ್ದಾನೆ. ನೆಲದ ಮೇಲೆ ನಿಲ್ಲದೆ ಆಕಾಶದಲ್ಲಿಯೇ ಇದ್ದು ನಮ್ಮನ್ನು ಉದ್ಧರಿಸಿಬಿಡುತ್ತಾನೆ ಎಂದು ನಂಬಿಸಲಾಯಿತು. ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಮನುಷ್ಯ ತನ್ನ ರಾಜಕೀಯ ಹೊಣೆಗಾರಿಕೆ ಅರಿಯದೆ ತಾನೊಬ್ಬ ಪಕ್ಕಾ ತರಬೇತಿ ಪಡೆದ ಸೈನಿಕ ಎಂಬಂತೆ ಮಾತಾಡಿದ. ಕರ್ನಾಟಕದ ಚುನಾವಣೆಯು ಜಾತಿ ಶ್ರೇಷ್ಟತೆ ಮತ್ತು ಧರ್ಮಾಂಧತೆಯ ಅಲೆಗಳಲ್ಲಿ ಕೊಚ್ಚಿಹೋಯಿತು. ಜಾತಿ ಧರ್ಮಗಳ ಅಮಲನ್ನು ರಾತ್ರೋರಾತ್ರಿ ನಿವಾರಿಸಲು ಸಾಧ್ಯವಿಲ್ಲ.

ಈ ಸಂದರ್ಭದಲ್ಲಿ ಇನ್ನೊಂದು ಮಾತು ಹೇಳಬೇಕು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಡೆಯುವ ಚುನಾವಣೆಗಳಲ್ಲಿ ಯಾರದ್ದೋ ಗೆಲುವನ್ನು ಮತ್ತು ಸೋಲನ್ನು ಗಂಭಿರವಾಗಿ ತೆಗೆದುಕೊಳ್ಳುವ ಕಾಲ ಯಾವತ್ತೂ ಇರಲಿಲ್ಲ. ಈಗಲೂ ಇಲ್ಲ. ಇಂದಿನ ದಿನಮಾನಗಳಲ್ಲಿ Matured Democracy ಬಗ್ಗೆ ಅಥವಾ Democracyಯ Maturityಯ ಬಗ್ಗೆ ಮಾತಾಡುವುದೇ ವ್ಯರ್ಥ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ಎನ್ನುವುದು ಜನತೆಯ ಅಭಿಪ್ರಾಯಗಳಿಂದ ರೂಪುಗೊಳ್ಳುವ ರಾಜಕಾರಣ. ಆದರೆ ಇಂದಿನ ಪ್ರಭುತ್ವ ಜನರ ಅಭಿಪ್ರಾಯಗಳನ್ನು ತಾನೇ ರೂಪಿಸುತ್ತಿದೆ. ತಾನೇ ರೂಪಿಸಿದ ಅಭಿಪ್ರಾಯವನ್ನು ಜನರ ಭಾವನೆಗಳ ಭಾಗವಾಗಿಸಿ, ಇವು ನಿಮ್ಮವೇ ಅಭಿಪ್ರಾಯಾಗಳೆಂದು ಜನರನ್ನು ನಂಬಿಸಲಾಗುತ್ತದೆ. ಇದನ್ನೇ ನೋಮ್ ಚೋಮ್ಸ್ಕಿ Manufacturing consent ಎಂದು ಕರೆಯುತ್ತಾರೆ. ಹೀಗೆ ಜನರ ಸಮ್ಮತಿ ಮತ್ತು ನಿರಾಕರಣೆಯನ್ನು ರೂಪಿಸುವ ಪ್ರಭುತ್ವ ಜನತಂತ್ರಕ್ಕೆ ಸಮಾಧಿ ಕಟ್ಟುತ್ತಿದೆ. ಹೀಗೆ ಮತದಾನದ ಮೂಲಕ ಅಸ್ತಿತ್ವಕ್ಕೆ ಬರುವ ಪ್ರಭುತ್ವ ಜನರನ್ನು ಕಲ್ಪಿತ ಭಯಗಳಲ್ಲಿಯೇ ಇರಿಸಿಬಿಡುತ್ತದೆ. ಹೀಗೆ ಜನಾಭಿಪ್ರಾಯವನ್ನು ರೂಪಿಸುವ ಲೂಟಿಕೋರ ಜಾಗತಿಕ ಹಿತಾಸಕ್ತಿಗಳು ಜನತಂತ್ರವನ್ನು ಅಪಾಯದ ಸ್ಥಿತಿಗೆ ಕೊಂಡೊಯ್ದಿವೆ.

ಹೀಗಿದ್ದರೂ ಸಿದ್ದರಾಮಯ್ಯನವರ ಆಡಳಿತಕ್ಕೆ ಅನೇಕ ಮಿತಿಗಳೂ ಇದ್ದವು. ಮುಖ್ಯವಾಗಿ ಪರಿಶಿಷ್ಟರಿಗೆ ಪ್ರತಿವರ್ಷದ ಅಯವ್ಯಯದಲ್ಲಿ ಘೋಷಿಸುತ್ತಿದ್ದ ಅಪಾರ ಪ್ರಮಾಣದ ಹಣವನ್ನು ಬಳಸಿ ದಲಿತರ ಸಮಗ್ರ ಸಬಲೀಕರಣಕ್ಕೆ ಒಂದು ಅಭಿವೃದ್ಧಿ ನೀತಿಯನ್ನೇ ರೂಪಿಸಬಹುದಾಗಿತ್ತು. ಇದರ ಜೊತೆಗೆ ಸಂವಿಧಾನಬದ್ಧವಾಗಿ ಒಳಮೀಸಲಾತಿ ಕಲ್ಪಿಸಲು ನೇಮಿಸಿದ್ದ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಲಿಲ್ಲ. ಅಹಿಂದ ವರ್ಗಗಳ ಸಬಲೀಕರಣದ ಯೋಜನೆಗಳಲ್ಲೂ ನಿರ್ದಿಷ್ಟ ಧೋರಣೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಆಗಲಿಲ್ಲ.

ಸಿದ್ದರಾಮಯ್ಯನವರು ಕಾಳಜಿಯಿಂದ ರೂಪಿಸಿ ಜಾರಿಗೊಳಿಸಿದ್ದ ಯೋಜನೆಗಳ ಫಲಾನುಭವಿಗಳು ಜನಾಭಿಪ್ರಾಯ ರೂಪಿಸುವಷ್ಟು ಪ್ರಬಲರಲ್ಲ. ಕರ್ನಾಟಕವನ್ನೂ ಒಳಗೊಂಡಂತೆ ದೇಶದ ವಿವಿಧ ಮಾಧ್ಯಮಗಳು ಸಿದ್ದರಾಮಯ್ಯನವರ ವಿರುದ್ಧ ಜನಾಭಿಪ್ರಾಯ ರೂಪಿಸಲು ಯಶಸ್ವಿಯಾದವು. ಲಿಂಗಾಯತ ಮಠಗಳು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಲೂ ಇಲ್ಲ. ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕದಲ್ಲಿ ಹೀನಾಯವಾಗಿ ಸೋಲಲು ಈ ಭಾಗದ ಪ್ರಬಲ ಜಾತಿಯ ಧೃವೀಕರಣ ಮುಖ್ಯವಾದ ಕಾರಣವಾಗಿದೆ. ಪ್ರಬಲ ಜಾತಿಗಳಿಗೆ ಸೇರಿದ ಕಾಂಗ್ರೆಸ್‍ನಲ್ಲಿರುವ ರಾಜಕೀಯ ಮುಖಂಡರು ಸಿದ್ದರಾಮಯ್ಯನವರ ಆಡಳಿತದ ಪರ ನಿಲ್ಲಲಿಲ್ಲ. ಅದೆಷ್ಟೋ ಬಾರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಎದುರಾಳಿಗಳನ್ನು ಏಕಾಂಗಿಯಾಗಿ ಮುಖಾಮುಖಿಯಾಗುತ್ತಿದ್ದರು. ಸದನದ ಒಳಗೆ ಮತ್ತು ಹೊರಗೆ ತಮ್ಮ ಪ್ರತಿರಾಜಕಾರಣವನ್ನು ಸಿದ್ದರಾಮಯ್ಯನವರು ಏಕಾಂಗಿಯಾಗಿಯೇ ಸಮರ್ಥಿಸಿಕೊಳ್ಳುವ ಒಂಟಿತನವನ್ನು ಅನುಭವಿಸಿದರು. ಆದರೂ ಸಿದ್ದರಾಮಯ್ಯನವರನ್ನು ಕರ್ನಾಟಕದ ರಾಜಕಾರಣ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಚರಿತ್ರೆ ಪುನರಾವರ್ತನೆಯಾಗುವುದಿಲ್ಲ. ದೇವರಾಜ ಅರಸು ಅವರು ರೂಪಿಸಲು ಬಯಸಿದ್ದ ಪರ್ಯಾಯ ರಾಜಕಾರಣಕ್ಕೆ ಸಿದ್ದರಾಮಯ್ಯ ಹೊಸ ಆಯಾಮ ನೀಡಲು ಬಯಸಿದರು. ಅದರಲ್ಲಿ ಸಿದ್ದರಾಮಯ್ಯ ಭಾಗಶಃ ಯಶಸ್ವಿಯಾಗಿದ್ದಾರೆ. ಅಸಹನೀಯ ದಿನಗಳಲ್ಲಿ ಒಬ್ಬ ದಿಟ್ಟ ಕನಸುಗಾರನಂತೆ ಸಿದ್ದರಾಮಯ್ಯ ಕಾಣಿಸುತ್ತಾರೆ. ವಿಷ ಹಂಚುವ ಜನರಿಗೆ ಸ್ಮøತಿಗಳಿರಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯ ದುಡಿವ ಸಮುದಾಯಗಳ ಸ್ಮøತಿಗಳಲ್ಲಿ ಸದಾ ಇರುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...