Homeರಾಜಕೀಯರಾಜಧಾನಿ ರಾಜಕಾರಣದಲ್ಲಿ ಕೈ ಸೇಫು , ಕಮಲ ಪಾಸು

ರಾಜಧಾನಿ ರಾಜಕಾರಣದಲ್ಲಿ ಕೈ ಸೇಫು , ಕಮಲ ಪಾಸು

- Advertisement -
  • ಟೀಮ್ ಗೌರಿ |
- Advertisement -

ರಾಜಧಾನಿ ಬೆಂಗಳೂರು ತನ್ನ ವಿಧಾನಸಭಾ ಕ್ಷೇತ್ರಗಳನ್ನು 28ಕ್ಕೆ ಏರಿಸಿಕೊಂಡ ಮೇಲೆ ಎಲ್ಲಾ ಚುನಾವಣೆಗಳಲ್ಲೂ ನಿರ್ಣಾಯಕ ಪಾತ್ರ ನಿರ್ವಹಿಸಿಕೊಂಡು ಬಂದಿದೆ. 2008 ರಲ್ಲಿ ಜೆಡಿಎಸ್ 20-20 ಸರ್ಕಾರ ಬಿದ್ದು, ಚುನಾವಣೆ ನಡೆದಾಗ ಕೇಸರಿ ಅಲೆಯಲ್ಲಿ ತೇಲಿ ಹೋಗಿದ್ದ ಉದ್ಯಾನನಗರಿ ಬಿಜೆಪಿಗೆ 17 ಸ್ಥಾನಗಳನ್ನು ನೀಡಿತ್ತು. ವಚನಭ್ರಷ್ಟ ಎಂಬ ಪಟ್ಟ ಕಟ್ಟಿಕೊಂಡಿದ್ದ ಗೌಡರ ಜೆಡಿಎಸ್ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿತ್ತು. ಕಳೆದ 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 12 ಮತ್ತು ಜೆಡಿಎಸ್ 3 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದವು. ಒಂದು ಕಡೆ ನುಡಿದಂತೆ ನಡೆದಿದ್ದೇವೆ ಮತ್ತೊಮ್ಮೆ ಕಾಂಗ್ರೆಸ್ ಎಂದು ಹೊರಟಿರುವ ಸಿದ್ದರಾಮಯ್ಯ ಪಡೆ ಸ್ಪಷ್ಟ ಬಹುಮತ ಸಿಗಬೇಕಾದರೆ ಐಟಿ ಸಿಟಿಯ ಬಹುಸಂಸ್ಕೃ ತಿ ಮತ್ತು ಬಹುಭಾಷಾ ಜನರನ್ನು ಮನ ಗೆಲ್ಲುವುದು ಅತಿ ಅವಶ್ಯ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿಯನ್ನೇ ನೆಚ್ಚಿಕೊಂಡು ಹೋರಾಟ ಮಾಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಬೆಂಗಳೂರು ಕೋಟೆಯನ್ನು ಬೇಧಿಸುವುದು ಸುಲಭ ಸಾಧ್ಯವಲ್ಲ. ಯಾಕೆಂದರೆ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯಾಗಿ ಮಾಡಿ ಅಪಖ್ಯಾತಿ ಗಳಿಸಿದ ಸಾಧನೆ ಬಿಜೆಪಿಯದ್ದು. ಜಮೀರ್ ಮತ್ತು ಅಖಂಡ ಶ್ರೀನಿವಾಸರನ್ನು ಕಳೆದುಕೊಂಡ ಜಾತ್ಯಾತೀತ ಜನತಾ ದಳಕ್ಕೆ ಈಗ ಉಳಿದಿರುವುದು ಗೋಪಾಲಯ್ಯ ಮಾತ್ರ.

ಝಮೀರ್

ರಾಜ್ಯ ಪೂರ್ತಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದರೆ ಬೆಂಗಳೂರು ಮಹಾನಗರದಲ್ಲಿ ಸಂಪೂರ್ಣವಾಗಿ ಜಾತಿ ಲೆಕ್ಕಾಚಾರದಡಿಯಲ್ಲಿ ಚುನಾವಣೆ ನಡೆಯದಿದ್ದರೂ ಅದನ್ನು ಅಲ್ಲಗಳೆಯಲಾಗುವುದಿಲ್ಲ.

ವೈಟ್ ಟಾಪಿಂಗ್ ರಸ್ತೆಗಳು, ಇಂದಿರಾ ಕ್ಯಾಂಟೀನ್ ಜೊತೆಗೆ ಹಲವಾರು ಭಾಗ್ಯಗಳನ್ನು ಕರುಣಿಸಿರುವ ಸಿದ್ದರಾಮಯ್ಯ ಸರ್ಕಾರದ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲದಿರುವುದು ಬಿಗ್ ಪ್ಲಸ್‍ಪಾಯಿಂಟ್. ಮೂವರು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿಯ ಅಧಿಕಾರಾವಧಿಯಲ್ಲಿ ಬೃಹತ್ ಮಹಾನಗರ ಪಾಲಿಕೆ ಸಾಲದ ಸುಳಿಯಲ್ಲಿ ಸಿಲುಕಿ ಐತಿಹಾಸಿಕ ಕಟ್ಟಡಗಳನ್ನು ಒತ್ತೆ ಇಟ್ಟಿದ್ದು ಜನರ ಮನಸ್ಸಿನಿಂದ ಇನ್ನೂ ಮರೆಯಾಗಿಲ್ಲ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉದ್ಯಾನನಗರಿ ಗಾರ್ಬೇಜ್ ಸಿಟಿಯಾಗಿ ಜಗದ್ವಿಖ್ಯಾತವಾಗಿದ್ದನ್ನು ಜನರು ಇನ್ನೂ ಮಾತನಾಡಿಕೊಳ್ಳುತ್ತಿರುವುದು ಯಡ್ಡಿ ಬಳಗಕ್ಕೆ ಹಿನ್ನಡೆಯಾಗಿದೆ. ಜೊತೆಗೆ ಜೆಡಿಎಸ್‍ನ ಜಮೀರ್ ಅಹಮದ್ ಮತ್ತು ಅಖಂಡ ಶ್ರೀನಿವಾಸ್ ರವರು ಕಾಂಗ್ರೆಸ್ಸಿಗೆ ಪಕ್ಷಾಂತರವಾಗಿರುವ ಕಾರಣ ಕಾಂಗ್ರೆಸ್ಸಿಗೆ ಬಲ ಬಂದಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.

ಆರ್.ಅಶೋಕ್

ಈ ಎಲ್ಲಾ ಲೆಕ್ಕಾಚಾರಗಳನ್ನು ಬದಿಗಿಟ್ಟು ನೋಡಿದರೂ ಬೆಂಗಳೂರಿನ ಬಹಳಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ನಿರ್ಧರಿಸುವುದು ಜೆಡಿಎಸ್‍ನ ದೊಡ್ಡ ಗೌಡರು ಎಂದರೆ ತಪ್ಪಾಗಲಾರದು. ಜಾತಿ ಲೆಕ್ಕಾಚಾರದ ಚಾಣಾಕ್ಷ ದೇವೇಗೌಡ ಒಂದೆಡೆ ಬಿಜೆಪಿ ಅಶೋಕ್ ಗೆಲುವಿಗೆ ನೆರವಾದರೆ ಇನ್ನೊಂದೆಡೆ ತಮ್ಮನ್ನು ಬಿಟ್ಟುಹೋದ ಜಮೀರ್ ಅಹಮದ್ ರನ್ನು ಸೋಲಿಸುವ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ನಗರದ ಪ್ರಮುಖ ನಾಯಕರುಗಳಾದ ಬಿಜೆಪಿಯ ಪದ್ಮನಾಭನಗರದ ಕ್ಷೇತ್ರದ ಆರ್ ಅಶೋಕ್, ಬೆಂಗಳೂರು ದಕ್ಷಿಣ ಕ್ಷೇತ್ರದ ಎಂ.ಕೃಷ್ಣಪ್ಪ, ಯಲಹಂಕ ಕ್ಷೇತ್ರದ ಎಸ್.ಆರ್.ವಿಶ್ವನಾಥ್ ಮತ್ತು ಬೊಮ್ಮನಹಳ್ಳಿ ಕ್ಷೆತ್ರದ ಸತೀಶ್ ರೆಡ್ಡಿ, ಕಾಂಗ್ರೆಸ್ಸಿನ ಬ್ಯಾಟರಾಯನಪುರ ಕ್ಷೇತ್ರದ ಕೃಷ್ಣ ಬೈರೇಗೌಡ, ಗಾಂಧಿನಗರ ಕ್ಷೇತ್ರದ ದಿನೇಶ್ ಗುಂಡೂರಾವ್, ಬಿಟಿಎಂ ಬಡಾವಣೆ ಕ್ಷೇತ್ರದ ರಾಮಲಿಂಗಾರೆಡ್ಡಿ, ಶಾಂತಿನಗರ ಕ್ಷೇತ್ರದ ಹ್ಯಾರಿಸ್, ಸರ್ವಜ್ಞನಗರ ಕ್ಷೇತ್ರದ ಕೆ.ಜೆ ಜಾರ್ಜ್ ಮತ್ತು ಚಾಮರಾಜಪೇಟೆ ಕ್ಷೇತ್ರದ ಜಮೀರ್ ಅಹಮದ್ ಜೊತೆಗೆ ಜೆಡಿಎಸ್‍ನ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಗೋಪಾಲಯ್ಯ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಸ್ಪಷ್ಟ ಮುನ್ನಡೆಯಲ್ಲಿದ್ದಾರೆ.

ದಿನೇಶ್ ಗುಂಡೂರಾವ್

ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿಗಳಾದ ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್. ವಿ. ದೇವರಾಜ್, ವಿಜಯನಗರ ಕ್ಷೇತ್ರದಲ್ಲಿ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಿಯಾ ಕೃಷ್ಣ, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ, ಶಿವಾಜಿನಗರದ ಕ್ಷೇತ್ರದಲ್ಲಿ ರೋಷನ್ ಬೇಗ್, ಬಿಜೆಪಿ ಅಭ್ಯರ್ಥಿಯಾದ ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಮಣ್ಯ, ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವತ್ತ ದಾಪುಗಾಲು ಹಾಕಿದ್ದಾರೆ.

ಇದರ ಮಧ್ಯೆಯೂ ಕೆಲವು ಪ್ರಮುಖ ನಾಯಕರು ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದ ಬಿಜೆಪಿಯ ಹೆಬ್ಬಾಳದ ಜಗದೀಶ್ ಕುಮಾರ್, ಸಿ.ವಿ.ರಾಮನ್ ನಗರದ ರಘು ಮತ್ತು ಮಹದೇವಪುರದ ಅರವಿಂದ ಲಿಂಬಾವಳಿ, ಗೋವಿಂದರಾಜನಗರದ ವಿ.ಸೋಮಣ್ಣ, ಮಾಜಿ ಕಾನೂನು ಸಚಿವರಾದ ರಾಜಾಜಿನಗರದಲ್ಲಿ ಸುರೇಶ್ ಕುಮಾರ್, ಕಾಂಗ್ರೆಸ್ಸಿನ ಕೆ.ಆರ್.ಪುರಂ ಕ್ಷೇತ್ರದ ಬೈರತಿ ಬಸವರಾಜ್, ಯಶವಂತಪುರದಲ್ಲಿ ಸೋಮಶೇಖರ್ ತಮ್ಮ ಎದುರಾಳಿಗಳಿಂದ ಸೋಲುವ ಹೊಸ್ತಿಲಿನಲ್ಲಿದ್ದಾರೆ.

ಹಾಗಾಗಿ ಈ ಚುನಾವಣೆಯಲ್ಲಿ ಬೆಂಗಳೂರು, ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಿವೆ. ಆದಾಗ್ಯೂ ಬಿಜೆಪಿ ಮತ್ತು ಜೆಡಿಎಸ್ ಹಲವೆಡೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿ ಕಳೆದ ಬಾರಿಯ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ತಿಣುಕಾಡುತ್ತಿರುವುದು ಎದ್ದು ಕಾಣುತ್ತಿದೆಯಲ್ಲದೆ ಎರಡು ಮೂರು ಸೀಟುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿಯೂ ಇದೆ. ಪ್ರಧಾನಿ ಮೋದಿಯವರ ಭಾಷಣಗಳೂ ಸಹ ಬಿಜೆಪಿ ಕೈಹಿಡಿಯುವ ಸಾಧ್ಯತೆಗಳು ಕಾಣುತ್ತಿಲ್ಲ. ಜೆಡಿಎಸ್‍ಗೆ ಬಂಡಾಯ ಅಭ್ಯರ್ಥಿಗಳನ್ನು ಸೋಲಿಸುವುದೇ ದೊಡ್ಡ ವಿಚಾರವಾಗಿದೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವುದು ಖಚಿತವಾಗುತ್ತಿದೆ.

ಬೆಂಗಳೂರು ಗ್ರಾಮಾಂತರ

ಎಂ.ಟಿ.ಬಿ. ನಾಗರಾಜ್

ಹೊಸಕೋಟೆಯಲ್ಲಿ ಬಚ್ಚೇಗೌಡರು ಸುದೀರ್ಘ ಕಾಲದ ರಾಜಕೀಯ ಜೀವನದಿಂದ ವಿಶ್ರಾಂತಿ ತೆಗೆದುಕೊಂಡು ಮಗ ಶರತ್‍ಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿದ್ದಾರೆ. ಬಚ್ಚೇಗೌಡರನ್ನು ಎರಡು ಬಾರಿ ಮಣಿಸಿದ್ದ ಎಂಟಿಬಿ ನಾಗರಾಜ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದಾರೆ. ಉಳಿದ ಸ್ಪರ್ಧಿಗಳು ಲೆಕ್ಕಕ್ಕಿಲ್ಲ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆಂಬುದಕ್ಕೆ ಫಲಿತಾಂಶದ ದಿನದವರೆಗೂ ಕಾಯಬೇಕು.

ದೇವನಹಳ್ಳಿಯಲ್ಲಿ ಹಾಲಿ ಶಾಸಕ ಜೆಡಿಎಸ್‍ನ ಪಿಳ್ಳಮುನಿಶಾಮಪ್ಪ ಮತ್ತು ಕಾಂಗ್ರೆಸ್‍ನ ವೆಂಕಟಸ್ವಾಮಿಯ ಜೊತೆಗೆ ಬಿಜೆಪಿಯ ನಾಗೇಶ್ ಸಹಾ ಸ್ಪರ್ಧಿಸಿದ್ದಾರೆ. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್‍ನ ನಡುವಿನ ಸ್ಪರ್ಧೆಯ ನಡುವೆ ಈ ಸಾರಿ ಕಾಂಗ್ರೆಸ್‍ಗೆ ಹೆಚ್ಚಿನ ಸಾಧ್ಯತೆ ಇದೆ.

ದೊಡ್ಡಬಳ್ಳಾಪುರದಲ್ಲಿ ಹಾಲಿ ಶಾಸಕ ಕಾಂಗ್ರೆಸ್‍ನ ವೆಂಕಟರಮಣಪ್ಪ ಮತ್ತು ಜೆಡಿಎಸ್‍ನಿಂದ ಈ ಸಾರಿ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮುನೇಗೌಡರ ನಡುವೆ ಸ್ಪರ್ಧೆಯಿದೆ. ಬಿಜೆಪಿಯ ನರಸಿಂಹಸ್ವಾಮಿ ಮೂರನೇ ಸ್ಥಾನಕ್ಕೆ ಹೋಗುತ್ತಾರೆ.

ನೆಲಮಂಗಲದಲ್ಲಿ ಕಾಂಗ್ರೆಸ್‍ನ ನಾರಾಯಣಸ್ವಾಮಿ, ಬಿಜೆಪಿಯ ಎಂ.ವಿ.ನಾಗರಾಜು ಮತ್ತು ಜೆಡಿಎಸ್‍ನಿಂದ ಹಾಲಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸ್ಪರ್ಧಿಸಿದ್ದಾರೆ. ಮೂರನೆಯ ಸ್ಥಾನದಲ್ಲಿದ್ದ ಬಿಜೆಪಿಯ ಹವಾ ಈಗ ಸ್ವಲ್ಪ ಹೆಚ್ಚಾಗಿದ್ದರೂ, ಹೆಚ್ಚಿನ ಸ್ಪರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇದೆ. ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯೇ ಹೆಚ್ಚು. ಜಿಲ್ಲೆಯ ಒಟ್ಟು ನಾಲ್ಕು ಸ್ಥಾನಗಳಲ್ಲಿ 2 ಜೆಡಿಎಸ್, 1 ಕಾಂಗ್ರೆಸ್ ಮತ್ತು 1 ಬಿಜೆಪಿ ಆಗಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read