Homeರಾಜಕೀಯರಫೇಲ್ ಡೀಲ್ ವೃತ್ತಾಂತ

ರಫೇಲ್ ಡೀಲ್ ವೃತ್ತಾಂತ

- Advertisement -
- Advertisement -

ಬೊಫೋರ್ಸ್ ಹಗರಣದ ಬಗ್ಗೆ ಕೇಳದ ಭಾರತೀಯರೇ ಇಲ್ಲ ಎನ್ನಬಹುದು. 1987ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಈ ಹಗರಣ ಇಂದಿಗೂ ಕಾಂಗ್ರೆಸ್ ವಿರೋಧಿಗಳ ಕೈಯಲ್ಲಿ ಪ್ರಬಲ ಅಸ್ತ್ರವಾಗಿದೆ. ಹಾಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷ ಈ ಬೊಫೋರ್ಸ್ ಹಗರಣದ ವಿಷಯದಲ್ಲಿ ಅದೆಷ್ಟು ಸಾವಿರ ಬಾರಿ ಟೀಕಾಪ್ರಹಾರ ಮಾಡಿದ್ದಾರೋ ಲೆಕ್ಕವಿಲ್ಲ. ಆಡಳಿತ ಪಕ್ಷಗಳು ಹೀಗೆ ಸಾರ್ವಜನಿಕ ಹಣವನ್ನು ಲೂಟಿ ಹೊಡೆದಾಗ ವಿರೋಧ ಪಕ್ಷಗಳು ಹೀಗೆ ಟೀಕೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹವಾದ ಕ್ರಮ.
ಆದರೆ ವಿಪರ್ಯಾಸ ಹೇಗಿದೆ ನೋಡಿ! ಕಳೆದ 3 ದಶಕಗಳಿಂದ ಬೊಫೋರ್ಸ್ ಹಗರಣದ ವಿರುದ್ಧ ಪ್ರಚಾರ ಮಾಡುತ್ತಾ ಭಾರೀ ರಾಜಕೀಯ ಲಾಭ ಮಾಡಿಕೊಂಡ ಇದೇ ಬಿಜೆಪಿ ಹಾಗೂ ಅದರ ಅಧಿನಾಯಕ ಮೋದಿಯವರು ಬೊಫೋರ್ಸ್ ಹಗರಣದ ಸಾವಿರ ಪಟ್ಟು ದೊಡ್ಡ ಹಗರಣ ನಡೆಸಿದ್ದಾರೆಂಬ ಚರ್ಚೆ ಇತ್ತೀಚೆಗೆ ಕಾವು ಪಡೆದುಕೊಳ್ಳುತ್ತಿದೆ. ಅದೇ ರಫೇಲ್ ಹಗರಣ.
ರಫೇಲ್ ಡೀಲ್ ವೃತ್ತಾಂತ
ರಫೇಲ್ ಯುದ್ದವಿಮಾನ ಖರೀದಿ ವ್ಯವಹಾರದ ಬಗ್ಗೆ ಕಳೆದ ಮೂರು ವರ್ಷಗಳಿಂದೀಚೆಗೆ ಹಲವು ಬಾರಿ ಪತ್ರಿಕೆಗಳಲ್ಲಿ ವರದಿಗಳು ಬಂದಿವೆ, ನ್ಯೂಸ್ ಚಾನೆಲುಗಳಲ್ಲಿ ಚರ್ಚೆಗಳೂ ನಡೆದಿವೆ. ಮೊನ್ನೆ ನಡೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಮತ್ತಿತರ ವಿಪಕ್ಷ ನಾಯಕರು ರಫೇಲ್ ಯುದ್ದವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯ ಬಗ್ಗೆ ಪ್ರಶ್ನೆಯೆತ್ತಿದ್ದಾರೆ. ಜನಸಾಮಾನ್ಯರ ಪಾಲಿಗೆ ರಫೇಲ್ ಹಗರಣ ಎಂಬುದು ನಿಗೂಡವಾದ ಸಂಗತಿಯಾಗಿಯೇ ಉಳಿದುಬಿಟ್ಟಿದೆ. ಹಾಗಾದರೆ ಈ ರಫೇಲ್ ವ್ಯವಹಾರದ ಕತೆ ಏನು? ಇದರ ಬಗ್ಗೆ ಯಾಕಿಷ್ಟು ಚರ್ಚೆಗಳು ನಡೆಯುತ್ತಿವೆ ಎಂಬ ವಿವರಗಳನ್ನು ನೋಡೋಣ.
ಈಗಿನ ಯುದ್ದಗಳು ಹೆಚ್ಚು ಹೆಚ್ಚು ತಂತ್ರಜ್ಞಾನ ಆಧಾರಿತವಾಗುತ್ತಿವೆ. ನೆರೆಯ ದೇಶಗಳೊಂದಿಗೆ ಸೈನಿಕ ಪೈಪೋಟಿಯಲ್ಲಿರುವ ಯಾವುದೇ ದೇಶದ ಸೈನ್ಯಕ್ಕೆ ಆಧುನಿಕ ಯುದ್ದ ವಿಮಾನಗಳು ಅವಶ್ಯ. ಪ್ರಸ್ತುತದಲ್ಲಿ ಹೆಚ್ಚು ಸಾಮಥ್ರ್ಯ ಹೊಂದಿದ ಡಬಲ್ ಎಂಜಿನ್ ಹೊಂದಿರುವ ಯುದ್ದವಿಮಾನಗಳು ಸೇನೆಯ ವಾಯುಪಡೆಯ ಆಧುನೀಕರಣಕ್ಕೆ ಅತ್ಯವಶ್ಯಕವೆಂದು ತೀರ್ಮಾನಿಸಲಾಯ್ತು. ಆದ್ದರಿಂದ 2007ರಲ್ಲಿ ಭಾರತದ ವಾಯಪಡೆಯು ಅಂದಿನ ಯುಪಿಎ ಸರ್ಕಾರದ ಒಪ್ಪಿಗೆ ಪಡೆದು ಡಸಾಲ್ಟ್ ಕಂಪನಿಯ ರಫೇಲ್ ವಿಮಾನವೂ ಸೇರಿದಂತೆ ಆರು ವಿವಿಧ ಕಂಪನಿಗಳ ವಿಮಾನಗಳ ವಿಸ್ತೃತ ಪರೀಕ್ಷೆ ನಡೆಸಿದ ನಂತರ (ಈ ಪರೀಕ್ಷೆ ಎರಡು ವರ್ಷಗಳಷ್ಟು ಧೀರ್ಘಕಾಲ ನಡೆದಿದ್ದು ಪ್ರತಿ ವಿಮಾನದ ಕ್ಷಮತೆಯನ್ನು ಆಳವಾಗಿ ಅಭ್ಯಸಿಸಲಾಯಿತು) ಫ್ರಾನ್ಸ್‍ನ ಡಸಾಲ್ಟ್ ಕಂಪನಿಯ ರಫೇಲ್ ಮತ್ತು ಇಂಗ್ಲೆಂಡ್‍ನ ಯೂರೋಫೈಟರ್ ಟೈಫೂನ್ ಯುದ್ದವಿಮಾನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿತು. ರಫೇಲ್ ಮತ್ತು ಟೈಫೂನ್ – ಈ ಎರಡೂ ವಿಮಾನಗಳ ಕಾರ್ಯಕ್ಷಮತೆ ಬಹುತೇಕ ಒಂದೇ ಆಗಿದ್ದರೂ ರಫೇಲ್ ವಿಮಾನಗಳ ಬೆಲೆ ಟೈಫೂನಿಗಿಂತ ಕಡಿಮೆಯಿದ್ದುದರಿಂದ ಅಂತಿಮವಾಗಿ ರಫೇಲ್ ಯುದ್ದವಿಮಾನವನ್ನು ಆಯ್ಕೆ ಮಾಡಲಾಯಿತು. ಎರಡು ವರ್ಷಗಳ ಧೀರ್ಘ ಮಾತುಕತೆ, ಪರೀಕ್ಷೆಗಳ ನಂತರ 2014 ಮಾರ್ಚ್ ಹೊತ್ತಿಗೆ ಯುಪಿಎ ಸರ್ಕಾರ ಮತ್ತು ಡಸಾಲ್ಟ್ ಕಂಪನಿಯ ನಡುವೆ ರಫೇಲ್ ಖರೀದಿ ಒಪ್ಪಂದ ಅಂತಿಮ ಹಂತಕ್ಕೆ ಬಂದಿತು.
ಖರೀದಿ ಒಪ್ಪಂದದ ಮುಖ್ಯ ಅಂಶಗಳೇನು?
1. ಖರೀದಿ ಮಾತುಕತೆ ಆಗಿದ್ದು ಒಟ್ಟು 126 ರಫೇಲ್ ವಿಮಾನಗಳಿಗೆ.
2. ಒಟ್ಟು ಮೊತ್ತ 66,000 ಕೋಟಿ ರೂಪಾಯಿಗಳು, ಒಂದು ವಿಮಾನಕ್ಕೆ ಅಂದಾಜು 526 ಕೋಟಿ ರೂಪಾಯಿಗಳು.
3. ಈ 126 ವಿಮಾನಗಳಲ್ಲಿ 18 ವಿಮಾನಗಳನ್ನು ಡಸಾಲ್ಟ್ ಕಂಪನಿ ಪೂರ್ಣ ತಯಾರಿಸಿ (ರೆಡಿ ಟು ಫ್ಲೈ) ಕೊಡಬೇಕು.
4. ಉಳಿದ 108 ವಿಮಾನಗಳನ್ನು ಬೆಂಗಳೂರಿನ ಊಂಐ ಸಂಸ್ಥೆಯ ಸಹಯೋಗದೊಂದಿಗೆ ಊಂಐ ನಲ್ಲಿಯೇ ತಯಾರಿಸಿ ಕೊಡಬೇಕು.
5. ಊಂಐ ನಲ್ಲಿ ತಯಾರಿಸುವ ಪ್ರಕ್ರಿಯೆಯಲ್ಲಿ ವಿಮಾನ ತಯಾರಿಕಾ ತಂತ್ರಜ್ಞಾನವನ್ನು ಊಂಐ ಗೆ ಹಸ್ತಾಂತರಿಸಬೇಕು.
ಈ ಮೇಲಿನ ಒಪ್ಪಂದಗಳೊಂದಿಗೆ 2014ರ ಮಾರ್ಚ್ ವೇಳೆಗೆ ಯುಪಿಎ ಸರ್ಕಾರ ಮತ್ತು ಡಸಾಲ್ಟ್ ಕಂಪನಿ ನಡುವೆ ಮಾತುಕತೆ ಅಂತಿಮ ಹಂತಕ್ಕೆ ಬಂದಿತ್ತು. ಆದರೆ 2014 ಮೇನಲ್ಲಿ ಲೋಕಸಭಾ ಚುನಾವಣೆ ಬಂದಿದ್ದರಿಂದ ಆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾದರು. ಹೊಸ ಸರ್ಕಾರದ ಅಡಿಯಲ್ಲೂ ರಫೇಲ್ ಯುದ್ದವಿಮಾನ ಖರೀದಿ ಒಪ್ಪಂದದ ಪ್ರಕ್ರಿಯೆ ಒಂದು ವರ್ಷ ಕಾಲ ಚಾಲ್ತಿಯಲ್ಲಿತ್ತು.
ಆ ನಂತರ ನಡೆದಿದ್ದೇನು? ಎಲ್ಲವೂ ತಿರುವು ಮುರುವು! 2015ರ ಏಪ್ರಿಲ್ 10ರಂದು ಫ್ರಾನ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷರ ಜೊತೆಗಿನ ದ್ವಿಪಕ್ಷೀಯ ಸಭೆಯಲ್ಲಿ 36 ರಫೇಲ್ ವಿಮಾನಗಳನ್ನು ರೆಡಿ ಟು ಫ್ಲೈ ಕಂಡೀಷನ್ನಿನಲ್ಲಿ ಖರೀದಿಸುವ ಒಪ್ಪಂದವಾಗಿರುವುದಾಗಿ ದಿಡೀರ್ ಘೋಷಿಸಿಬಿಟ್ಟರು. ಹೀಗೆ ಇದೇ ಡಸಾಲ್ಟ್ ಕಂಪನಿಯ ಜೊತೆ ಮೊದಲು 126 ರಫೇಲ್ ವಿಮಾನ ಖರೀದಿಗೆ ಅಂತಿಮ ಹಂತದಲ್ಲಿದ್ದ ಒಪ್ಪಂದದ ಕತೆ ಹಠಾತ್ತನೆ ರದ್ದಾಗಿ ಹೋಯ್ತು.
ಪ್ರಧಾನಿ ಮೋದಿಯವರ ಈ ದಿಢೀರ್ ಮತ್ತು ಏಕಪಕ್ಷೀಯ ನಿರ್ಧಾರ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಲ್ಲದೆ ಹಲವು ಪ್ರಶ್ನೆಗಳನ್ನೂ, ಅನುಮಾನಗಳನ್ನೂ ಹುಟ್ಟುಹಾಕಿತು. ಮೊದಲನೆಯದಾಗಿ, ಇಂತಹ ಅತೀ ಮಹತ್ವದ ನಿರ್ಧಾರ ಕೈಗೊಳ್ಳುವ ವಿಷಯವನ್ನು ಆಗಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್‍ರವರಿಗೆ ಏಪ್ರಿಲ್ ಮೊದಲ ವಾರದಲ್ಲಷ್ಟೇ ತಿಳಿಸಲಾಗಿತ್ತೆಂದರೆ ಆಶ್ಚರ್ಯವೆನಿಸುತ್ತದೆ. ಅದೂ ರಕ್ಷಣಾ ಸಚಿವಾಲಯದೊಂದಿಗೆ ಚರ್ಚೆಯೆಂದು ಭಾವಿಸಬೇಡಿ, ಆ ಸಚಿವರಿಗೆ ಕೊಟ್ಟಿದ್ದ ಕೇವಲ ಮಾಹಿತಿಯಷ್ಟೆ.
ಎರಡನೆಯದಾಗಿ, ರಕ್ಷಣಾ ಸಾಮಗ್ರಿಗಳ ಖರೀದಿಗಿರುವ ಯಾವುದೇ ಡಿಫೆನ್ಸ್ ಪ್ರೊಕ್ಯೂರ್‍ಮೆಂಟ್ ಪ್ರೊಸೀಜರ್‍ಗಳನ್ನು ಪಾಲಿಸಿರಲಿಲ್ಲ. ಮೂರನೆಯದಾಗಿ, ಡಸಾಲ್ಟ್ ಜೊತೆಗೆ 126 ಯುದ್ದವಿಮಾನ ಖರೀದಿಯ ಒಪ್ಪಂದ ರದ್ದುಪಡಿಸಿದ್ದಕ್ಕೆ ಯಾವುದೇ ಕಾರಣಗಳನ್ನೂ ಕೊಡಲಿಲ್ಲ.
ಹೀಗೆ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಈ ಹೊಸ ಡೀಲಿಂಗ್‍ನ ಬಗ್ಗೆ ಸೋರಿಕೆಯಾದ ಕೆಲ ಅಂಶಗಳು ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿದವು.
ಪ್ರಧಾನಿ ಮೋದಿಯವರು ಫ್ರಾನ್ಸ್ ಜೊತೆ ಮಾಡಿಕೊಂಡ ಈ ಹೊಸ ಒಪ್ಪಂದದ ಅನುಮಾನಾಸ್ಪದ ಪ್ರಕ್ರಿಯೆಗಳನ್ನು ಗಮನಿಸೋಣ.
2015ರ ಮಾರ್ಚ್ 25ರಂದು ಡಸಾಲ್ಟ್ ಕಂಪನಿಯ ಸಿಇಒ ಎರಿಕ್ ಟ್ರ್ಯಾಪಿಯರ್, 126 ರಫೇಲ್ ವಿಮಾನ ಖರೀದಿ ಒಪ್ಪಂದದ ಪ್ರಕ್ರಿಯೆ ಶೇಕಡಾ 95ರಷ್ಟು ಮುಗಿದಿದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಅಲ್ಲಿಂದ ಕೇವಲ ಹದಿನೈದು ದಿನಗಳ ನಂತರ ಅಂದರೆ 2015ರ ಏಪ್ರಿಲ್ 10ರಂದು ತಮ್ಮ ಫ್ರಾನ್ಸ್ ಪ್ರವಾಸದಲ್ಲಿ ಮೋದಿಯವರು ಈ ಶೇ.95 ರಷ್ಟು ಪ್ರಕ್ರಿಯೆ ಮುಗಿದಿದ್ದ ಒಪ್ಪಂದವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿಬಿಡುತ್ತಾರೆ. ಅಂದರೆ, ಡಸಾಲ್ಟ್ ಕಂಪನಿಯ ಸಿಇಒಗೂ ಕೂಡ 126 ಯುದ್ದವಿಮಾನ ಖರೀದಿಯ ಒಪ್ಪಂದ ರದ್ದಾಗಲಿದೆ ಎನ್ನುವ ವಿಷಯ ಒಪ್ಪಂದ ರದ್ದಾಗುವ ಕೇವಲ ಹದಿನೈದು ದಿನಗಳ ಮೊದಲೂ ಗೊತ್ತಿರಲಿಲ್ಲ!!!
ಇದರ ಜೊತೆಗೆ, ಈ ದಿನಗಳ ಆಸುಪಾಸಿನಲ್ಲಿಯೇ, ಸಚಿವೆ ನಿರ್ಮಲಾ ಸೀತಾರಾಮನ್ “126 ರಫೇಲ್ ವಿಮಾನ ಖರೀದಿ ಒಪ್ಪಂದ ಪ್ರಕ್ರಿಯೆ ನಿಂತಲ್ಲೇ ನಿಂತಿದೆ” ಎಂದು ಹೇಳಿಕೆ ನೀಡುತ್ತಾರೆ. ಅಂದರೆ, ಪ್ರಧಾನಿ ಬಿಟ್ಟು ಆಯ್ದ ಕೆಲವರಿಗೆ ಒಪ್ಪಂದ ರದ್ದಾಗುವ ಸೂಚನೆ ಸಿಕ್ಕಿದಂತೆ ಕಾಣುತ್ತದೆ.
36 ರಫೇಲ್ ವಿಮಾನ ಖರೀದಿಯ ಹೊಸ ಒಪ್ಪಂದದ ಬಗ್ಗೆ ಸೋರಿಕೆಯಾದ ಕೆಲ ಅಂಶಗಳು ಇನ್ನಷ್ಟು ಆಶ್ಚರ್ಯಕರವಾಗಿವೆ.
1. ಲಭ್ಯ ಮಾಹಿತಿಯಂತೆ, ಈಗಿನ ಖರೀದಿಯ ಮೊತ್ತ 56,000 ಕೋಟಿ ರೂಪಾಯಿಗಳು.
2. ಅಂದರೆ, ಪ್ರತಿ ವಿಮಾನದ ಬೆಲೆ ಸುಮಾರು 1556 ಕೋಟಿ ರೂಪಾಯಿಗಳು.
3. ಭಾರತದ ಖಜಾನೆಯಿಂದ ಹರಿದುಹೋಗುವ ಈ ಒಟ್ಟು ಮೊತ್ತದಲ್ಲಿ ಡಸಾಲ್ಟ್ ಕಂಪನಿಯು 21,000 ಕೋಟಿ ರೂಪಾಯಿಗಳನ್ನು ಅನಿಲ್ ಅಂಬಾನಿಯ ಹೊಸ ಡಿಫೆನ್ಸ್ ಕಂಪನಿಯಲ್ಲಿ ತೊಡಗಿಸುತ್ತಿದೆ!!
ಅರೆ ಇದೇನಿದು? ಇದ್ದಕ್ಕಿದ್ದಂತೆ ಅನಿಲ್ ಅಂಬಾನಿ ಪ್ರತ್ಯಕ್ಷನಾಗಿಬಿಟ್ಟನಲ್ಲಾ ಎಂದು ಆಶ್ಚರ್ಯಪಡಬೇಡಿ. ಇಲ್ಲೇ ಇರೋದು ಮಸಲತ್ತು. ಈ ಮಸಲತ್ತಿನ ಅಂಶಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ಮೊದಲನೆಯದಾಗಿ, ಈ ವ್ಯವಹಾರದ ಒಟ್ಟು ಮೊತ್ತ ಮತ್ತು ಪ್ರತಿ ವಿಮಾನಕ್ಕೆ ತಗಲುವ ವೆಚ್ಚ ಯುಪಿಎ ಸರ್ಕಾರದ ಒಪ್ಪಂದಕ್ಕಿಂತ ಭಾರೀ ಹೆಚ್ಚಳವಿರುವುದು ಮೇಲುನೋಟಕ್ಕೇ ಕಾಣುತ್ತಿದೆ. ಆದರೆ ಮೋದಿ ಸರ್ಕಾರ ಒಟ್ಟು ಮೊತ್ತವನ್ನಾಗಲೀ ಅಥವಾ ಪ್ರತಿ ವಿಮಾನಕ್ಕೆ ತಗಲಿರುವ ವೆಚ್ಚ ಎಷ್ಟು ಎಂಬುದನ್ನಾಗಲಿ ಅಧಿಕೃತವಾಗಿ ಹೇಳುತ್ತಿಲ್ಲ. ಆ ವಿವರಗಳನ್ನು ಹೇಳಿದರೆ ಯುದ್ದವಿಮಾನದ ಸೂಕ್ಷ್ಮ ಯುದ್ದ ಸಾಮಥ್ರ್ಯಗಳನ್ನು ಬಹಿರಂಗಪಡಿಸಿದಂತಾಗುವುದೆಂದೂ ಮತ್ತು ಇದನ್ನು ಬಹಿರಂಗಪಡಿಸದಂತೆ 2008ರಲ್ಲಿಯೇ ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದವಾಗಿದೆಯೆಂದೂ ಸಬೂಬು ಹೇಳುತ್ತಿದೆ. ಆದರೆ ವಾಸ್ತವವೇನೆಂದರೆ, ರಹಸ್ಯ ಒಪ್ಪಂದವಿರುವುದು ವಿಮಾನದ ಸಾಮಥ್ರ್ಯದ ತಾಂತ್ರಿಕ ವಿವರಗಳ ಬಗ್ಗೆಯೇ ಹೊರತು, ಅದರ ಬೆಲೆಯ ಬಗ್ಗೆ ಅಲ್ಲವೇ ಅಲ್ಲ. ವಿಮಾನದ ಒಟ್ಟು ಬೆಲೆ ಹೇಳಿದಾಕ್ಷಣ ಅದರ ಸೂಕ್ಷ್ಮ ತಾಂತ್ರಿಕ ವಿವರಗಳೆಲ್ಲ ಗೊತ್ತಾಗಿಬಿಡುವುದಿಲ್ಲ. ಹಾಗೆ ನೋಡಿದರೆ, ಭಾರತಕ್ಕೆ ರಫೇಲ್ ವಿಮಾನ ಬಿಕರಿಯಾಗಿರುವ ಒಟ್ಟು ಮೊತ್ತವನ್ನು ಡಸಾಲ್ಟ್ ಕಂಪನಿ ತನ್ನ ವೆಬ್‍ಸೈಟಿನಲ್ಲೇ ಹಾಕಿಕೊಂಡಿದೆ.
ಇಲ್ಲಿ ಒಂದು ವಿಷಯವಂತೂ ಹಗಲಿನಂತೆ ನಿಚ್ಚಳವಾಗಿದೆ. ಸರ್ಕಾರ ಈ ವ್ಯವಹಾರದ ಹಣಕಾಸಿನ ಮೊತ್ತವನ್ನು ಹೇಳದೆ ಮುಚ್ಚಿಡಲು ಹೆಣಗುತ್ತಿದೆ; ಹಾಗೂ ಇದು ನಾನಾ ಅನುಮಾನಗಳಿಗೆ ದಾರಿ ಮಾಡುತ್ತಿದೆ.
ಎರಡನೆಯದಾಗಿ, ಯಾವುದೇ ರಕ್ಷಣಾ ಖರೀದಿ 5000 ಕೋಟಿಗಿಂತ ಹೆಚ್ಚಿದ್ದರೆ, ಅಂತಹ ಕಂಪನಿಯು ಒಟ್ಟು ವ್ಯವಹಾರದ ಶೇ 50ರಷ್ಟು ಹಣವನ್ನು ಭಾರತದಲ್ಲಿ ರಕ್ಷಣಾ ವಲಯದಲ್ಲಿ ಬಂಡವಾಳ ಹೂಡಬೇಕೆಂಬ ನಿಯಮವನ್ನು ಪಾಲಿಸಿಕೊಂಡು ಬರಲಾಗಿದೆ. ಅದರಂತೆಯೇ, ಹಿಂದಿನ ಸರ್ಕಾರ ಡಸಾಲ್ಟ್ ಕಂಪನಿ ಸರ್ಕಾರಿ ಸ್ವಾಮ್ಯದ ಊಂಐ ನಲ್ಲಿ ಬಂಡವಾಳ ಮತ್ತು ತಂತ್ರಜ್ಞಾನ ತೊಡಗಿಸಬೇಕೆಂಬ ಒಪ್ಪಂದ ಮಾಡಿಕೊಂಡಿದ್ದು.
ಆದರೆ, ಮೋದಿ ಸರ್ಕಾರದ ಹೊಸ ಒಪ್ಪಂದದ ಪ್ರಕಾರ ಡಸಾಲ್ಟ್ ಕಂಪನಿಯು 21,000 ಕೋಟಿಗಳಷ್ಟು ಹಣವನ್ನು ಅನಿಲ್ ಅಂಬಾನಿಯ “ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್” ನಲ್ಲಿ ತೊಡಗಿಸುವ ಒಪ್ಪಂದ ಮಾಡಿಕೊಂಡಿದೆ. ಸಾರ್ವಜನಿಕ ಕ್ಷೇತ್ರದ ಕಂಪನಿಯಿಂದ ಖಾಸಗಿ ಖದೀಮ ಕಂಪನಿಗೆ ದಿಡೀರ್ ಬದಲಾವಣೆ. ಅದಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಈ ಅನಿಲ್ ಅಂಬಾನಿಯ ಕಂಪನಿಗೂ ರಕ್ಷಣಾ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ; ಅನುಭವ ಎಂಬುದು ದೊಡ್ಡ ಮಾತಾಯಿತು. ಮತ್ತೂ ಆಶ್ಚರ್ಯದ ಸಂಗತಿಯೊಂದಿದೆ. ಅನಿಲ್ ಅಂಬಾನಿಯವರು “ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್” ಎನ್ನುವ ಹೆಸರಿನಲ್ಲಿ ಒಂದು ಕಂಪನಿ ರಿಜಿಸ್ಟರ್ ಮಾಡಿಸಿದ್ದು ತಮ್ಮ ಆಪ್ತಮಿತ್ರ ಮೋದಿಯವರು ರಫೇಲ್ ಡೀಲ್ ಘೋಷಿಸುವುದಕ್ಕೆ ಕೇವಲ ಹದಿಮೂರು ದಿನಗಳ ಮುಂಚೆಯಷ್ಟೇ, ಅಂದರೆ 2015ರ ಮಾರ್ಚ್ 28ರಂದು!! ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ ಅಲ್ಲವೆ?
ಹಳೆಯ ಒಪ್ಪಂದದ ಪ್ರಕಾರ ತಂತ್ರಜ್ಞಾನ ವರ್ಗಾವಣೆಯೂ ಸೇರಿತ್ತು. ಹಾಗಾಗಿದ್ದರೆ, ಭಾರತಕ್ಕೆ ರಫೇಲ್‍ನ ತಂತ್ರಜ್ಞಾನ ದೊರೆಯುವ ಸಾಧ್ಯತೆ ಇತ್ತು; ಸರ್ಕಾರಿ ಉದ್ಯಮ ಊಂಐ ನಲ್ಲಿ ಸಾವಿರಾರು ಯುವಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ದೊರೆಯುತ್ತಿದ್ದವು. ಆದರೆ, ಈಗ ಇದು ರಕ್ಷಣಾ ವಲಯದ ಅನುಭವವೇ ಇಲ್ಲದ ಒಂದು ಖಾಸಗಿ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೂಡಿರುವಂತೆ ಕಾಣುತ್ತಿದೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಈಗಿನ ಮೋದಿ ಸರ್ಕಾರದ ಹೊಸ ಒಪ್ಪಂದದ ಪ್ರಕಾರ ಸೇನೆಗೆ ಸೇರ್ಪಡೆಯಾಗುವುದು 126 ಯುದ್ಧವಿಮಾನಗಳ ಬದಲಿಗೆ ಕೇವಲ 36 ಮಾತ್ರ. ಮತ್ತೊಂದು ಕಡೆ 2017ರ ನವೆಂಬರ್‍ನಲ್ಲಿ 100ಕ್ಕಿಂತ ಹೆಚ್ಚು ಸಿಂಗಲ್ ಎಂಜಿನ್ ಯುದ್ದವಿಮಾನಗಳ ಖರೀದಿಗೆ ಮೋದಿ ಸರ್ಕಾರ ಟೆಂಡರ್ ಕರೆದಿದೆ. ಆದರೆ ಭಾರತದ ವಾಯುಸೇನೆಗೆ ಹೆಚ್ಚಿನ ಸಂಖ್ಯೆಯ ಯುದ್ದವಿಮಾನಗಳ ಅವಶ್ಯಕತೆ ಇರುವುದು ರಫೇಲ್‍ನಂತಹ ಡಬಲ್ ಇಂಜಿನ್ ಯುದ್ಧವಿಮಾನಗಳು! ದೇಶ ರಕ್ಷಣೆಯ ಬೊಗಳೆ ಬಿಡುತ್ತಲೇ ರಕ್ಷಣಾ ಬಜೆಟ್ ಮೊತ್ತವನ್ನು ತಮ್ಮ ಮಿತ್ರರ ಬಾಯಿಗೆ ಹಾಕಿ ರಕ್ಷಣಾ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದು ಎದ್ದು ಕಾಣುತ್ತಿದೆ.
ಸರ್ಕಾರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಜಾರಿಕೊಳ್ಳಲು ಪ್ರಯತ್ನಿಸುತ್ತಿರುವುದು ಹಾಗೂ ಪ್ರಶ್ನೆಯೆತ್ತಿದವರ ಮೇಲೆಯೇ ದಾಳಿ ಮಾಡುತ್ತಿರುವುದರ ಹಿಂದಿನ ಮರ್ಮ ಏನೆಂಬುದನ್ನು ಓದುಗರೇ ತೀರ್ಮಾನಿಸಲಿ. ಇಷ್ಟೆಲ್ಲಾ ಹೇಳಿ ನಾವು ಬೊಫೋರ್ಸ್ ಹಗರಣವನ್ನು ಮರೆತುಬಿಡುವುದು ಸರಿ ಕಾಣುವುದಿಲ್ಲ. ಬೋಫೋರ್ಸ್ ಡೀಲ್ ಅಂದಿನ ಕಾಲಕ್ಕೆ ಎಪ್ಪತ್ತು ಕೋಟಿಯ ಹಗರಣ; ಇಂದಿನ ರಫೇಲ್ ಡೀಲ್ ಬೊಫೋರ್ಸ್‍ಗಿಂದ ಎಷ್ಟು ಪಟ್ಟು ದೊಡ್ಡ ಹಗರಣವಾಗಿರಬಹುದು? ಅನಿಲ್ ಅಂಬಾನಿಯ ಕಂಪನಿಗೆ ಯಾವುದೇ ಟೆಂಡರ್ ಇಲ್ಲದೆ, ಯಾವುದೇ ಅನುಭವವಿಲ್ಲದೆ 21,000 ಕೋಟಿಯನ್ನು ಡಸಾಲ್ಟ್ ಕಂಪನಿ ಯಾಕೆ ಕೊಟ್ಟಿದೆ? ಈ ಎಲ್ಲ ಶಂಕೆಗಳನ್ನು ನಿವಾರಿಸುವ ಜವಾಬ್ದಾರಿ ಸರ್ಕಾರದ ಮೇಲೆ ಮುಖ್ಯವಾಗಿ ಪ್ರಧಾನಿ ಮೋದಿಯವರ ಮೇಲಿದೆ. ಪ್ರಧಾನಿ ಈ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಇಂಥಾ ಗುರುತರ ಆರೋಪದ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸುವ ಜವಾಬಬ್ದಾರಿ ನಾಲ್ಕನೇ ಕಂಬ ಎನಿಸಿಕೊಂಡ ಮಾದ್ಯಮಗಳದ್ದು. ಬೊಫೋರ್ಸ್ ಹಗರಣದ ಬಗ್ಗೆ ಮುವತ್ತು ವರ್ಷಗಳ ಕಾಲ ನಿರಂತರ ಚರ್ಚೆ ಮಾಡಿದ, ಮಾಡುತ್ತಿರುವ ಮಾದ್ಯಮಗಳು ಯಾಕೆ ಬಾಯಿ ಮುಚ್ಚಿಕೊಂಡಿವೆ? ಈ ಮೂರು ವರ್ಷಗಳಲ್ಲಿ, ಎಲ್ಲಾದರೂ ಯಾರಾದರೂ ಪತ್ರಕರ್ತ ಮೋದಿಯನ್ನು ಈ ಬಗ್ಗೆ ಪ್ರಶ್ನೆ ಕೇಳಿದ್ದನ್ನು ಕಂಡಿದ್ದೇವೆಯೆ? ಕೇಳಿದ್ದೇವೆಯೆ? ಖಂಡಿತಾ ಇಲ್ಲ.
ಹಾಗಿದ್ದರೆ ಈ ದೇಶದಲ್ಲಿ ಏನು ನಡೆಯುತ್ತಿದೆ?
ಅಂಬಾನಿಗಳ ಜೇಬಿಗೆ
ಈ ಡೀಲ್‍ನಲ್ಲಿ ಭಾರೀ ಹಗರಣ ನಡೆದಿದೆಯೆನ್ನುವ ಆರೋಪಕ್ಕೆ ಇಂಬುಕೊಡುವಂತೆ ಪ್ರಧಾನಿ ಮೋದಿಯವರ ಫ್ರಾನ್ಸ್ ಭೇಟಿಯ ನಿಯೋಗದಲ್ಲಿ ಅನಿಲ್ ಅಂಬಾನಿಯೂ ಇರುತ್ತಾರೆ. 36 ವಿಮಾನಗಳ ಒಪ್ಪಂದ ಸಹಿಯಾದ ಹತ್ತು ದಿನಗಳಲ್ಲಿ ಅನಿಲ್ ಅಂಬಾನಿ ಕಂಪನಿಗೂ ಮತ್ತು ಡಸಾಲ್ಟ್ ಕಂಪನಿಗೂ ಮಧ್ಯೆ ಪಾರ್ಟನರ್ ಶಿಪ್ ಏರ್ಪಡುತ್ತದೆ.
2016ರ ಅಕ್ಟೋಬರ್‍ನಲ್ಲಿ ಡಸಾಲ್ಟ್ ಕಂಪನಿ ಅನಿಲ್ ಅಂಬಾನಿ ಕಂಪನಿಯಲ್ಲಿ 21000 ಕೋಟಿ ರೂ ಬಂಡವಾಳ ಹೂಡುವ ಪ್ರಕ್ರಿಯೆಯನ್ನು ಔಪಚಾರಿಕಗೊಳಿಸುತ್ತದೆ. ಈ ಹೂಡಿಕೆ ಮಾಡುವಾಗ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿಯಿಂದಾಗಲೀ ಅಥವಾ ಕ್ಯಾಬಿನೆಟ್‍ನಿಂದಾಗಲೀ ಯಾವುದೇ ಅಪ್ರೂವಲ್ ಪಡೆದಿರುವುದಿಲ್ಲ.
ಪಬ್ಲಿಕ್ ಸೆಕ್ಟರ್ ಕಂಪನಿ ಹೆಚ್‍ಎಎಲ್‍ನಿಂದ (50 ವರ್ಷಗಳ ಅಗಾಧ ರಕ್ಷಣಾ ವಲಯದ ಅನುಭವವಿದ್ದಾಗ್ಯೂ) ಹೂಡಿಕೆಯನ್ನು ಕಿತ್ತು ಡಿಫೆನ್ಸ್‍ನಲ್ಲಿ ಯಾವುದೇ ಅನುಭವವಿಲ್ಲದ ಅನಿಲ್ ಅಂಬಾನಿಯ ಖಾಸಗಿ ಕಂಪನಿಗೆ ಕೊಟ್ಟಿದ್ದು ಯಾವ ದೇಶೋದ್ಧಾರಕ್ಕಾಗಿ? ಇದು ತಮ್ಮ ಆಪ್ತ ಬಂಡವಾಳಿಗರಿಗೆ ನಮ್ಮ ಬೊಕ್ಕಸದ ಸಾವಿರಾರು ಕೋಟಿಗಳನ್ನು ಹರಿಸುವ ಕ್ರೋನಿ ಕ್ಯಾಪಿಟಲಿಸಂ ಅಕ್ರಮವಲ್ಲವೆ?

– ಬಸವರಾಜ್ ಬಿ.ಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...