Homeಮುಖಪುಟಮೋದಿಗೆ ಮುಖಭಂಗವಾಗಿದ್ದರೂ, ದೇಶಕ್ಕಿರುವ ಅಪಾಯ ಕಡಿಮೆಯಾಗಿಲ್ಲ

ಮೋದಿಗೆ ಮುಖಭಂಗವಾಗಿದ್ದರೂ, ದೇಶಕ್ಕಿರುವ ಅಪಾಯ ಕಡಿಮೆಯಾಗಿಲ್ಲ

- Advertisement -
- Advertisement -

ಶ್ರೀನಿವಾಸ ಕಾರ್ಕಳ |

ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮತ್ತು 2019ರ ಲೋಕಸಭಾ ಚುನಾವಣೆಯ ಮಟ್ಟಿಗೆ ಸೆಮಿಫೈನಲ್ ಎಂದೇ ಭಾವಿಸಲಾಗಿದ್ದ ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‍ಗಢ ಮತ್ತು ಮಿಜೋರಾಂ ಈ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶ ಹೊರತುಪಡಿಸಿದಂತೆ ಇತರ ರಾಜ್ಯಗಳಲ್ಲಿ ಬಹುತೇಕ ನಿರೀಕ್ಷಿತ ಫಲಿತಾಂಶವೇ ಬಂದಿದೆ. ತೆಲಂಗಾಣದಲ್ಲಿ ಟಿಆರ್‍ಎಸ್, ಹಾಗೆಯೇ ಮಿಜೋರಾಂನಲ್ಲಿ ಮಿಝೋ ನ್ಯಾಷನಲ್ ಫ್ರಂಟ್ (ಎಮ್‍ಎನ್‍ಎಫ್) ಅಧಿಕಾರ ಹಿಡಿಯುವ ಬಗ್ಗೆ ಅನುಮಾನವಿರಲಿಲ್ಲ. ರಾಜಸ್ತಾನದಲ್ಲಿ ದೀರ್ಘಕಾಲದಿಂದ ಸರಕಾರಗಳು ಬದಲಾಗುವ ಪರಂಪರೆಯೊಂದು ಇತ್ತು. ಅಲ್ಲಿ ವಸುಂಧರಾ ರಾಜೇ ಸರಕಾರದ ವಿರುದ್ಧ ತೀವ್ರ ಸ್ವರೂಪದ ಆಡಳಿತ ವಿರೋಧಿ ಅಲೆ ಇದ್ದುದು, ಹಾಗೆಯೇ ಸಚಿನ್ ಪೈಲಟ್‍ರಂತಹ ಕಾಂಗ್ರೆಸ್ ನಾಯಕರು ಹಲವು ವರ್ಷಗಳಿಂದ ಅಲ್ಲಿ ಕಾಂಗ್ರೆಸ್ ನೆಲೆಯನ್ನು ಭದ್ರಪಡಿಸಲು ಹೆಣಗುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿ ಕಾಂಗ್ರೆಸ್ ಸುಲಭದಲ್ಲಿ ಅಧಿಕಾರ ಹಿಡಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್ ಜಯದ ಹಾದಿ ಅಷ್ಟು ಸುಲಭವಾಗಲಿಲ್ಲ್ಲ. ಇದಕ್ಕೆ ಕಾರಣ ಏನು ಎನ್ನುವುದನ್ನು ಮುಂದೆ ಹುಡುಕಬೇಕಷ್ಟೇ.
ಮೇಲೆ ಉಲ್ಲೇಖಿಸಿದಂತೆ ಈ ಚುನಾವಣೆಯನ್ನು 2019ರ ಮಹಾ ಚುನಾವಣೆಯ ಸೆಮಿಫೈನಲ್ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಸರಿಯಿರಬಹುದೇ? ಈ ಚುನಾವಣೆಯ ಫಲಿತಾಂಶ ಮೋದಿ ಸರಕಾರದ ವಿರುದ್ಧದ ಆಕ್ರೋಶ ಎನ್ನಬಹುದೇ? ಈ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ? ತುರ್ತಾಗಿ ಅಂತಹ ತೀರ್ಮಾನಗಳಿಗೆ ಬರುವುದು ಕಷ್ಟ. ಮಧ್ಯಪ್ರದೇಶದ ಚುನಾವಣೆ ಶಿವರಾಜ ಚೌಹಾಣ್ ಅವರ ಸರಕಾರದ ಸಾಧನೆಗಳ ಮೇಲೆ ನಡೆಯುತ್ತದೆಯೇ ಹೊರತು ಅದು ಮೋದಿ ಸರಕಾರದ ಸಾಧನೆಯ ಮೇಲಲ್ಲ. ಹಾಗೆಯೇ ಛತ್ತೀಸ್‍ಗಢ ಮತ್ತು ರಾಜಸ್ತಾನದ ಚುನಾವಣಾ ಫಲಿತಾಂಶ ಕೂಡಾ (ರಾಜಸ್ತಾನದಲ್ಲಿ ವಸುಂಧರಾ ರಾಜೇಯನ್ನು ದ್ವೇಷಿಸುವವರೂ ಮೋದಿಯನ್ನು ಪ್ರೀತಿಸುತ್ತಾರಂತೆ. ವಸುಂಧರಾ ಸೋಲುವುದು ಮೋದಿ ಬಳಗದ ಬಯಕೆ ಎಂದೂ ವಿಶ್ಲೇಷಿಸಲಾಗುತ್ತಿದೆ). ಲೋಕಸಭಾ ಚುನಾವಣೆಯ ಸಮಯದಲ್ಲಿ ಮುನ್ನೆಲೆಗೆ ಬರುವ ಇಶ್ಯೂಗಳೇ ಬೇರೆ. ಆಗಿನ ಕಾರ್ಯತಂತ್ರಗಳೇ ಬೇರೆ. ಹಾಗಾಗಿ ಈಗ ಬಿಜೆಪಿ ಕೆಲ ರಾಜ್ಯಗಳನ್ನು ಕಳೆದುಕೊಂಡಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ತೀರ್ಮಾನಕ್ಕೆ ಖಂಡಿತಾ ಬರುವಂತಿಲ್ಲ. ಹಾಗೆ ಬಿಜೆಪಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಅವರ ಬಳಿ ಕಾರ್ಯಕರ್ತರ ಪಡೆಯಿದೆ. ಆರ್‍ಎಸ್‍ಎಸ್ ಕಾರ್ಯಜಾಲವಿದೆ, ಹೇರಳ ಹಣವಿದೆ, ಸರಕಾರಿ ಯಂತ್ರಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ಮಾಧ್ಯಮಗಳಿವೆ. ಈ ಚುನಾವಣಾ ಫಲಿತಾಂಶದಿಂದ ಎಚ್ಚೆತ್ತುಕೊಂಡು ಅದು ಬಹುಪಟ್ಟು ಶಕ್ತಿಶಾಲಿಯಾಗಿ ಕೆಲಸ ಮಾಡುವುದು ಖಂಡಿತ.
ಬಿಜೆಪಿಯ ದೃಷ್ಟಿಯಿಂದ ನೋಡುವಾಗ ಅವರಿಗೆ ಒಂದೋ ಎರಡೋ ರಾಜ್ಯಗಳು ಕೈ ತಪ್ಪಿದ್ದು ನಿರಾಶೆಗೆ ಕಾರಣವಾಗಬಹುದು. ಆದರೆ 15 ವರ್ಷಗಳ ಬಳಿಕವೂ ಮಧ್ಯಪ್ರದೇಶದಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳು ಮತ್ತು ವಿಪರೀತ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ರಾಜಸ್ತಾನದಲ್ಲಿ ಅದು ಗಳಿಸಿದ ಸ್ಥಾನಗಳ ಸಂಖ್ಯೆ ಅದಕ್ಕೆ ಸಂತಸ ತರುವ ಸಂಗತಿಯೇ ಆಗಿದೆ. ತೆಲಂಗಾಣದಲ್ಲಿ ಮತ್ತು ಮಿಜೋರಾಂಗಳಲ್ಲಿ ಅದಕ್ಕೆ ದೊಡ್ಡ ನಿರೀಕ್ಷೆಯಿರಲಿಲ್ಲ. ಅದಕ್ಕೆ ಅಚ್ಚರಿಯಾಗುವ ಮತ್ತು ಒಂದಿಷ್ಟು ಬೇಸರ ತರಬಹುದಾದ ಫಲಿತಾಂಶ ಬಂದುದು ಛತ್ತೀಸ್‍ಗಢದಲ್ಲಿ ಮಾತ್ರ.
ಸದ್ಯದ ಬೆಳವಣಿಗೆಯಿಂದ ಕಾಂಗ್ರೆಸ್ ಕೂಡಾ ಖುಷಿಪಡುವಂತಿಲ್ಲ. ತೆಲಂಗಾಣದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ) ಜೊತೆಗಿನ ಮೈತ್ರಿಯ ಹೊರತಾಗಿಯೂ ಚುನಾವಣಾ ಸಾಧನೆ ಇನ್ನಷ್ಟು ಕಳಪೆಯಾಗಿದೆ. ಹಿಂದಿನ ಸ್ಥಾನಗಳನ್ನೂ ಅದು ಕಳೆದುಕೊಂಡಿದೆ. ಮಿಜೋರಾಂನಲ್ಲಿ ಸೋಲುವ ಮೂಲಕ ಪೂರ್ವಾಂಚಲದಲ್ಲಿ ಇದ್ದ ಒಂದು ನೆಲೆಯನ್ನೂ ಅದು ಕಳೆದುಕೊಂಡಿದೆ. ರಾಜಸ್ತಾನದಲ್ಲಿದ್ದ ಆಡಳಿತ ವಿರೋಧಿ ಅಲೆಯನ್ನು ಪೂರ್ತಿಯಾಗಿ ಬಳಸಿಕೊಂಡು ಹೆಮ್ಮೆ ಪಡುವಂತಹ ಸಾಧನೆ ಮಾಡುವುದು ಅದಕ್ಕೆ ಸಾಧ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ ಶಿವರಾಜ ಚೌಹಾಣರ 15 ವರ್ಷಗಳ ಆಡಳಿತದ ಬಳಿಕ ಅಲ್ಲಿ ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್‍ಗೆ ತೀರಾ ಸುಲಭವಾಗಬೇಕಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧ್ಯಾರಂತಹ ಯುವ ನಾಯಕ, ಕಮಲನಾಥರಂತಹ ಅನುಭವಿ ನಾಯಕನ ಹೊರತಾಗಿಯೂ ಅಲ್ಲಿ ನಿಚ್ಚಳ ಬಹುಮತ ಪಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಬಿಜೆಪಿಯನ್ನು ಭಾರೀ ಅಂತರದಿಂದ ಸೋಲಿಸದೆ ಕಾಂಗ್ರೆಸ್‍ಗೆ ಎಲ್ಲೂ ಸರಕಾರವನ್ನು ರಚಿಸುವುದು ಸಾಧ್ಯವಿಲ್ಲ ಮತ್ತು ರಚಿಸಿದರೂ ಅಂತಹ ಸರಕಾರವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಸಾಧ್ಯವಿಲ್ಲ (ಕರ್ನಾಟಕದಲ್ಲಿಯೇ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ನಡೆಸುತ್ತಿರುವ ಯತ್ನಗಳು ಎಲ್ಲರಿಗೂ ಗೊತ್ತಿರುವಂಥದ್ದೇ) ಎನ್ನುವುದು ಸದ್ಯದ ಕಟು ವಾಸ್ತವ.
ಪ್ರಜಾತಂತ್ರವನ್ನು ಸೋಲಿಸುವ ಕುತಂತ್ರಗಳಲ್ಲಿ ಬಿಜೆಪಿ ಸದಾ ಚಾಣಾಕ್ಷ. ರಾಜ್ಯಪಾಲರು ಹೇಗೂ ಅವರ ಪರ ನಿಲ್ಲುವವರೇ. ಈ ಎಲ್ಲ ದೃಷ್ಟಿಯಿಂದ ನೋಡುವಾಗ ಕಾಂಗ್ರೆಸ್‍ಗೆ ಹೆಚ್ಚು ಖುಷಿ ತರುವಂತಹ ಫಲಿತಾಂಶ ಬಂದುದು ಕೇವಲ 90 ಸ್ಥಾನಗಳಿರುವ ಸಣ್ಣ ರಾಜ್ಯ ಛತ್ತೀಸ್ ಗಢದಲ್ಲಿ ಮಾತ್ರ. ಅದು ಅಚ್ಚರಿ ತಂದಿರುವ ಫಲಿತಾಂಶವಾಗಿದೆ.
ಅದೆಲ್ಲ ಸರಿ, ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿದರೆ ಇತರ ಪಕ್ಷಗಳ ಕತೆಯೇನು? ಅವು ಮಾಡಿದ ಸಾಧನೆಯೇನು? ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ಬಗ್ಗೆ ಅವುಗಳಿಂದ ಏನನ್ನು ನಿರೀಕ್ಷಿಸಬಹುದು? ತೆಲಂಗಾಣದಲ್ಲಿ ಟಿಆರ್‍ಎಸ್ ಅದ್ಭುತ ಸಾಧನೆ ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ದ್ವೇಷಿಸುವ ಪಕ್ಷದಂತೆ ಬಿಂಬಿಸಿಕೊಂಡಿದ್ದರೂ ಅದು ಅನೇಕ ಬಾರಿ ಬಿಜೆಪಿ ವಿಷಯದಲ್ಲಿ ಮೃದುವಾಗಿ ನಡೆದುಕೊಂಡ ಉದಾಹರಣೆಯಿದೆ. ಈ ಬಾರಿ ಅಸಾದುದ್ದೀನ್ ಓವೈಸಿಯ ಎಮ್‍ಐಎಮ್ ಪಕ್ಷದ ಜತೆಗೆ ಟಿಆರ್‍ಎಸ್ ಕೈಜೋಡಿಸಿದೆಯಾದ್ದರಿಂದ ಅದು ಬಿಜೆಪಿಗೆ ಕಹಿ ಸಂಗತಿಯಾದೀತು, ಈ ಕಾರಣದಿಂದ ಬಿಜೆಪಿಯು ಟಿಆರ್‍ಎಸ್‍ನಿಂದ ಕೊಂಚ ದೂರ ನಿಂತಿತು ಎಂಬುದೊಂದೇ ಸಮಾಧಾನ. ಆದರೆ ಈ ಎರಡೂ ಪಕ್ಷಗಳ ಬಗ್ಗೆ ಬಿಜೆಪಿಗೆ ಒಳಗೊಳಗೇ ಪ್ರೀತಿ ಇದ್ದೇ ಇರುತ್ತದೆ. ಯಾಕೆಂದರೆ ಅವು ಬಿಜೆಪಿ ವಿರೋಧಿ ಮತಗಳನ್ನು ಒಡೆಯುವಂಥವು. ಮಿಜೋರಾಂನಲ್ಲಿ ಎಮ್‍ಎನ್‍ಎಫ್ ಬಗ್ಗೆ ಅಲ್ಲಿನ ಜನರಿಗೆ ಪ್ರೀತಿ ಹುಟ್ಟದ್ದರೆ ಅಚ್ಚರಿಯೇನೂ ಇಲ್ಲ. ಅಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ ಒಂದು ಸ್ಥಾನ. ಛತ್ತೀಸ್ ಗಢದಲ್ಲಿ ಅಜಿತ್ ಜೋಗಿ ಮತ್ತು ಮಾಯಾವತಿ ಕೈಜೋಡಿಸಿದ್ದು ಕಾಂಗ್ರೆಸ್ ಸಾಧನೆಗೆ ದೊಡ್ಡ ಹಾನಿ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದು ಆಗದಿದ್ದುದು ಅಚ್ಚರಿಯ ಸಂಗತಿ. ಇವೆಲ್ಲದರ ನಡುವೆ ರಾಷ್ಟ್ರೀಯ ಮಟ್ಟದಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ವಿಷಯದಲ್ಲಿ ಹೆಚ್ಚು ಆತಂಕವಾಗುತ್ತಿರುವುದು ಮಾಯಾವತಿಯವರ ನಡೆ. ಮಧ್ಯಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗದಂತೆ ನೋಡಿಕೊಳ್ಳುವಲ್ಲಿ ಮಾಯಾವತಿಯವರ ಬಿಎಸ್‍ಪಿಯ ಕೊಡುಗೆ ಖಂಡಿತಾ ದೊಡ್ಡದಿದೆ. ಅದು ಒಂದಷ್ಟು ಮತವಿಭಜನೆ ಮಾಡಿ ತಾನೂ ಗೆಲ್ಲದಂತೆ ಮತ್ತು ಕಾಂಗ್ರೆಸ್ಸೂ ಗೆಲ್ಲದಂತೆ ನೋಡಿಕೊಂಡಿದೆ. ರಾಜಸ್ತಾನದಲ್ಲಿಯೂ ಆ ಪಕ್ಷ ಇದೇ ಕೆಲಸ ಮಾಡಿದೆ. ಇದು ಆತಂಕ ತರುವ ಸಂಗತಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಆತಂಕವಿರುವುದು ಮತ್ತು ಬಿಜೆಪಿ ವಿರೋಧಿಗಳಿಗೆ ಹೆಚ್ಚು ಭರವಸೆ ಇರುವುದು ಉತ್ತರಪ್ರದೇಶದ ಬಗ್ಗೆ. ಅಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ಕೈಜೋಡಿಸಿ ಉಪಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುವಂತೆ ಮಾಡಿದ್ದವು. ಉತ್ತರಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳಿದ್ದು ಅಲ್ಲಿ ಗೆದ್ದ ಪಕ್ಷ ದೇಶದ ಅಧಿಕಾರ ಹಿಡಿಯುತ್ತದೆ ಎಂಬುದು ಪ್ರತೀತಿ. 2014ರಲ್ಲಿ ಅಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದುದು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅದಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ಕೈಜೋಡಿಸಿದರೆ ಬಿಜೆಪಿಯ ಗೆಲುವಿನ ಯಾತ್ರೆಗೆ ತಡೆಹಾಕಬಹುದು ಎಂದು ಅಂದಾಜಿಸಲಾಗಿತ್ತು. ಅದೀಗ ಅಸಂಭವವೇನೋ ಎಂಬಂತೆ ಕಾಣಿಸುತ್ತಿದೆ. ರಾಜಕೀಯ ಪಂಡಿತರೊಬ್ಬರು ಇತ್ತೀಚೆಗೆ, ‘ಮಾಯಾವತಿ ಅವರು ಅಮಿತ್ ಶಾ ಜತೆಗೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ’ ಎಂದು ಹೇಳಿ ಬೆಚ್ಚಿಬೀಳಿಸಿದ್ದರು. ಇನ್ನು ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಮೇಲುಗೈ ಸಾಧಿಸುತ್ತಿರುವ ಬಗ್ಗೆ ಬಿಡಿಬಿಡಿಯಾಗಿ ರಾಜಕೀಯ ಪಕ್ಷಗಳು ಮಾತನಾಡುತ್ತಿರುತ್ತವೆ. ಆದರೆ ಅವುಗಳ ಕಾಳಜಿ, ಆತಂಕ ನೈಜವಾದುದೇ? ಆ ಪ್ರತಿಯೊಂದು ಪಕ್ಷಗಳಿಗೂ ತಮ್ಮ ಅಸ್ಮಿತೆಯ ಮತ್ತು ಅಸ್ತಿತ್ವದ ಪ್ರಶ್ನೆ ಇದೆ. ಕೇರಳದಲ್ಲಿ ಕಮ್ಯುನಿಸ್ಟರ ಎದುರಾಳಿ ಕಾಂಗ್ರೆಸ್. ಪ.ಬಂಗಾಳದಲ್ಲಿ ಎಡಪಕ್ಷಗಳ ಎದುರಾಳಿ ತೃಣಮೂಲ ಕಾಂಗ್ರೆಸ್! ಈ ಎಲ್ಲ ಕಾರಣದಿಂದ ರಾಷ್ಟ್ರೀಯ ಮಟ್ಟದಲ್ಲಿ ಮಹಾಮೈತ್ರಿ ಖಂಡಿತವಾಗಿಯೂ ಅಗದ ಹೋಗದ ಕೆಲಸ. ಆದ್ದರಿಂದ ಇಲ್ಲಿ ಹೆಚ್ಚು ಪ್ರಾಕ್ಟಿಕಲ್ ನಡೆಯೆಂದರೆ ಪ್ರಾದೇಶಿಕ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್, ಆಂಧ್ರದಲ್ಲಿ ಕಾಂಗ್ರೆಸ್ ಟಿಡಿಪಿ, ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಎನ್‍ಸಿಪಿ ಹೀಗೆ.
ಕಾಂಗ್ರೆಸ್ ಮುಂದೆ ಈಗ ಇರುವ ದಾರಿಯೇನು? ದಕ್ಷಿಣಭಾರತದಲ್ಲಿ ಬಿಜೆಪಿಗೆ ಅಂಥ ನೆಲೆ ಸಿಗುವುದು ಅಸಾಧ್ಯ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ರಾಜಸ್ತಾನ ಮತ್ತು ಪಂಜಾಬ್ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಅದು ಈಗ ಕಣ್ಣು ಹಾಯಿಸಬೇಕಾದುದು ಹಿಂದಿ ಪ್ರದೇಶಗಳತ್ತ. ವಿಶೇಷವಾಗಿ ಉತ್ತರಪ್ರದೇಶ ಮತ್ತು ಬಿಹಾರದತ್ತ. ರಾಷ್ಟ್ರೀಯ ಮಟ್ಟದ ಇಶ್ಯೂಗಳನ್ನು ನಿಭಾಯಿಸಲು ರಾಷ್ಟ್ರೀಯ ಪಕ್ಷವಾದ ತಾನು ಅನಿವಾರ್ಯ, ಪ್ರಾದೇಶಿಕ ಪಕ್ಷಗಳಿಂದ ಅದು ಸಾಧ್ಯವಿಲ್ಲ ಎಂಬುದನ್ನು ಅದು ಬಿಂಬಿಸಬೇಕು ಮತ್ತು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಅದು ಮುಂದಿನ ನಾಲ್ಕು ತಿಂಗಳು ವ್ಯಾಪಕವಾಗಿ ಕೆಲಸ ಮಾಡಿದರೆ ಏನಾದರೂ ಬದಲಾವಣೆ ಮಾಡುವುದು ಸಾಧ್ಯವಾಗಬಹುದೇನೋ.
ಆದರೆ ಇಂತಹ ಕೆಲಸ ಮಾಡಲು ಕಾಂಗ್ರೆಸ್ ಸಜ್ಜಾಗಿದೆಯೇ? ಅದು ನಿಜವಾದ ಅರ್ಥದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತ ನ್ಯೂನತೆಗಳನ್ನು ಸರಿಪಡಿಸಿಕೊಂಡು ಬದಲಾವಣೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳಲು ತಯಾರಿದೆಯೇ “ನಮ್ಮನ್ನು ಬೆಳೆಯಲು ಹಿರಿಯರೇ ಬಿಡುವುದಿಲ್ಲ, ಕಾಲೆಳೆಯುವವರೇ ಹೆಚ್ಚು” ಎನ್ನುವುದು ಕಾಂಗ್ರೆಸ್‍ನ ಎಳೆಯರ ಅಳಲಂತೆ. ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರಿಗಿಂತ ಹೆಚ್ಚು ಲೀಡರುಗಳಿದ್ದಾರೆ ಎಂಬುದು ತುಂಬ ಹಳೆಯ ಜೋಕು. ಆ ಜೋಕು ಈಗಲೂ ವಾಸ್ತವವಾಗಿಯೇ ಉಳಿದಿದೆ.
ಕೊನೆಯದಾಗಿ ಒಂದು ಮಾತು. ರಾಜಕೀಯ ಆಗುಹೋಗುಗಳ ಬಗ್ಗೆ ಆಳ ಅಧ್ಯಯನ ನಡೆಸಿರುವ ಮತ್ತು ಆ ವಿದ್ಯಮಾನಗಳನ್ನು ತುಂಬ ಎಚ್ಚರದಿಂದ ಗಮನಿಸುತ್ತ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ಹಿರಿಯರೊಬ್ಬರು ಇತ್ತೀಚೆಗೆ ಸಿಕ್ಕರು. ಲೋಕಾಭಿರಾಮವಾಗಿ ಮಾತನಾಡುತ್ತಾ, “ಅದೆಲ್ಲ ಸರಿ ಮುಂದಿನ ಲೋಕಸಭಾ ಫಲಿತಾಂಶ ಏನಾದೀತು?” ಎಂದು ಕೇಳಿದೆ. “ಮುಂದಿನ ಬಾರಿ ಮೋದಿ ಗೆಲ್ಲಬೇಕು” ಎಂದರು. ನಾನು ಬೆಚ್ಚಿಬಿದ್ದೆ. ಯಾಕೆ ಎಂಬ ನನ್ನ ಪ್ರಶ್ನೆಗೆ “ಮೋದಿ ಸರಕಾರ ದೇಶದ ಅರ್ಥ ವ್ಯವಸ್ಥೆ ಮಾತ್ರವಲ್ಲ ದೇಶದ ಎಲ್ಲ ಸಂಸ್ಥೆಗಳನ್ನೂ ಎಷ್ಟರಮಟ್ಟಿಗೆ ಕುಲಗೆಡಿಸಿದೆ ಎಂದರೆ ಮುಂದೆ ಬರುವ ಸರಕಾರಕ್ಕೆ ಅದನ್ನು ಸರಿಪಡಿಸಲು ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮೋದಿ ಸರಕಾರ ಸೋತು ಮೈತ್ರಿಸರಕಾರ ಅಸ್ತಿತ್ವಕ್ಕೆ ಬಂದು, ಅದು ಸರಿಯಾಗಿ ಕೆಲಸ ಮಾಡಲಾಗದೆ ಬಿದ್ದುಹೋದರೆ ಆನಂತರ ಬರುವ ಬಿಜೆಪಿ ಸರಕಾರ ಹೆಚ್ಚು ಅಪಾಯಕಾರಿ ಮತ್ತು ಹಲವು ದಶಕಗಳ ಕಾಲ ಅದು ಅಧಿಕಾರದಲ್ಲಿರಲಿದೆ. ಅದಾಗಬಾರದು. ಮೋದಿ ಸರಕಾರವೇ ಮತ್ತೊಮ್ಮೆ ಬಂದು ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಜನರೇ ಆಕ್ರೋಶದಿಂದ ಅದನ್ನು ಮನೆಗೆ ಕಳಿಸುವಂತಾಬೇಕು” ಎಂದರು. ಅವರ ಮಾತಿನಲ್ಲಿ ಸತ್ಯಾಂಶವಿದೆ ಅನಿಸಿತು. ಹಾಗಾಗಿ ರಾಜಕೀಯದ ದೃಷ್ಟಿಯಿಂದ ಸದ್ಯ ಭಾರತಕ್ಕೆ ಒಳ್ಳೆಯ ಭವಿಷ್ಯವಿರುವಂತೆ ಕಾಣಿಸುತ್ತಿಲ್ಲ. ಈ ಎಲ್ಲ ಕಾರಣದಿಂದಲೇ ಈ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ದೇಶದ ರಾಜಕೀಯ ರಂಗದಲ್ಲಿ ಬಹಳ ದೊಡ್ಡ ಬದಲಾವಣೆ ತರುತ್ತದೆ ಎಂದು ಭಾವಿಸಬೇಕಾಗಿಲ್ಲ. ಫ್ಯಾಸಿಸ್ಟ್ ಶಕ್ತಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ಬಹಳ ದೀರ್ಘವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...