ಉತ್ತರದ ಮತದಾರ, ಸೀನುಸುಬ್ಬು ಕೆನ್ನೆ ಊದಿಸಿದ್ದಾನಲ್ಲಾ

0

ಎಪ್ಪತ್ತು ವರ್ಷದಲ್ಲಿ ಯಕ್ಕುಟ್ಟಿ ಹೋಗಿದ್ದ ಭಾರತವನ್ನು ಕೈಗತ್ತಿಕೊಂಡು ಉದ್ದಾರ ಮಾಡಲೆಂದು ಬಂದು ಮಾಡಬಾರದ್ದನ್ನೇ ಮಾಡಿದ ಪರಿಣಾಮವಾಗಿ ಉತ್ತರ ಭಾರತದ ಮತದಾರನಿಂದ ಮುಸುಡಿಗೆ ಇಕ್ಕಿಸಿಕೊಂಡಿರುವ ಸೀನು ಮತ್ತು ಸುಬ್ಬು ಎಂಬ ಶಾಮೋದಿ ಮೌನಕ್ಕೆ ಶರಣಾಗಿದ್ದಾರಂತಲ್ಲಾ. ಈ ಅಹಂಕಾರಿಗಳು ಇತಿಹಾಸವನ್ನು ಗಮನಿಸಿದಂತಿಲ್ಲ. ನಾಲ್ಕು ದಶಕಗಳಷ್ಟು ಪಾರ್ಲಿಮೆಂಟಿನಲ್ಲಿದ್ದು ಮಾತಿನ ಮೋಡಿಯಿಂದಲೇ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ವಾಜಪೇಯಿ ಕೂಡ ಪ್ರಧಾನಿಯಾಗಿದ್ದರು. ಪರವಾಗಿಲ್ಲ ಎನ್ನುವ ಆಡಳಿತ ನೀಡಿದ್ದರು. ಅಂತಹ ವ್ಯಕ್ತಿಯನ್ನೇ ಭಾರತ ಮತದಾರ ತಣ್ಣಗೆ ಮನೆಗೆ ಕಳಿಸಿ ಸೋನಿಯಾಗೆ ಆಶೀರ್ವಾದ ಮಾಡಿದ್ದು, ಈ ಸೀನು-ಸುಬ್ಬರ ಗಮನಕ್ಕೆ ಬರಬೇಕಿತ್ತು. ಆದರೇನು ಮತಾಂಧ ಮನಸ್ಸುಗಳು ವಿವೇಚನೆ ಕಳೆದುಕೊಂಡಿರುತ್ತವೆ. ಆದಕಾರಣ ಈ ಸೀನು ಸುಬ್ಬು ಜೋಡಿ ಚಡ್ಡಿ ಕಾರ್ಯಕರ್ತರಿಗೆ ನೀವು ಮಾಡುವುದನ್ನು ನೀವು ಮಾಡಿ, ಆ ನಮ್ಮ ದಂಧೆಯನ್ನು ನಾವು ಮಾಡುತ್ತೇವೆ ಎಂದ ಪರಿಣಾಮವಾಗಿ ಭಾರತದ ಬರಿಗೈ ಮತದಾರ ಎಂತಹ ಕೆ¯ಸಕ್ಕೂ ರೆಡಿಯಿದ್ದ ಸೀನುಸುಬ್ಬುಗೆ ಸರಿಯಾದ ತಪರಾಕಿ ಹಾಕಿದ್ದಾರಲ್ಲಾ… ಥೂತ್ತೇರಿ!
*****
ಹಾಗೆ ನೋಡಿದರೆ ಈ ಬಿಜೆಪಿಗಳು ಉತ್ತರ ಭಾರತದ ಮತದಾರನಿಗೆ ಕೈ ತುಂಬ ಕಾಸುಕೊಟ್ಟು, ತಲೆತುಂಬ ಮತಾಂಧ ಭಾಷಣ ತುಂಬಿ ಮತಪೆಟ್ಟಿಗೆವರೆಗೂ ಜೋಪಾನವಾಗಿ ಕರೆದುಕೊಂಡು ಹೋಗಿಬಿಟ್ಟು, ಮತದಾನ ಮಾಡಿ ಈಚೆ ಬರುವವರೆಗೂ ಕಾದಿದ್ದು ಕೈಮುಗಿದಿಲ್ಲ. ಅಂತ ಸೌಜನ್ಯವನ್ನ ಕಂಡಿರದ ಅವುಗಳ ಗುಣಗೊತ್ತಿದ್ದ ಮತದಾರ ಗೌಪ್ಯ ಮತದಾನದ ಧರ್ಮವನ್ನ ತನ್ನ ಆತ್ಮಸಾಕ್ಷಿಯಂತೆ ಚಲಾಯಿಸಲಾಗಿ ಮೋದಿ ಮುಸುಡಿ ಕೆಂಜಗನ ಕೈಲಿ ಕಡಿಸಿಕೊಂಡ ಮಂಗನ ಮೂತಿಯಂತೆ ನಂಜೇರುವಂತಾಯ್ತು. ಈ ನಡುವೆ ಮಾಯಾವತಿ ಎಂಬ ಮಾಯಗಾತಿ ತನ್ನವೇ ಅನರ್ಥಕಾರಿ ಕನಸುಗಳೊಂದಿಗೆ ವಿಹರಿಸಿದ ಫಲವಾಗಿ ಕಾಂಗೈನ ದೈತ್ಯ ಬಹುಮತವನ್ನು ತಡೆದಳಂತಲ್ಲಾ. ಇಂತಹ ರಾಜಕಾರಣವನ್ನ ಚೇಷ್ಠೆ ಎನ್ನದೆ ವಿಧಿಯಿಲ್ಲ. ನರಭಕ್ಷಕ ಹುಲಿಯೊಂದನ್ನ ಹೊಡೆದುರುಳಿಸುವಾಗ ಒಮ್ಮತದ ತೀರ್ಮಾನಕ್ಕೆ ಬದ್ಧರಾಗಬೇಕು. ಲೋಕಹಿತವನ್ನ ಮನಗಾಣಬೇಕು. ದಲಿತರ ಉದ್ಧಾರಬಿಟ್ಟು ಉದ್ಯಾನವನದಲ್ಲಿ ಆನೆ ವಿಗ್ರಹಗಳನ್ನ ಕಡೆದು ನಿಲ್ಲಿಸಿದ ಮಾಯಾವತಿಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಆಕೆಯನ್ನರಿತ ಕಾಂಗೈಗಳು ಹಲುಬುತ್ತಿವೆಯಲ್ಲಾ…. ಥೂತ್ತೇರಿ!
*****
ಮೋದಿ ಮುಖದ ಯಾತನೆ ನೋಡಿದ ನಮ್ಮ ಪಬ್ಲಿಕ್ ಟೀವಿಯ ಕಡ್ಡಿರಂಗ ಕಡಜದ ಕೈಲಿ ಮುಕಳಿ ಕಡಿಸಿಕೊಂಡವನಂತೆ ಹಾಕ್ಯಾಡುತ್ತ `ಈ ಫಲಿತಾಂಶದಿಂದ ಮೋದಿ ಗಾಯಗೊಂಡ ಹುಲಿಯಂತಾಗಿದ್ದಾರೆ. ಗಾಯಗೊಂಡ ಹುಲಿ ತನ್ನ ಗಾಯಗಳನ್ನು ತಾನೇ ನೆಕ್ಕಿಕೊಂಡು ವಾಸಿಯಾದ ನಂತರ ಮೇಲೆ ಬೀಳುವುದು ನಿಶ್ಚಿತ’ ಎಂದು ಊಳಿಟ್ಟನಂತಲ್ಲಾ. ಈ ಗಾಯಗೊಂಡ ಹುಲಿ ಕತೆಯನ್ನ ಕುವೆಂಪು ಶೂದ್ರರಿಗೆ ಸರಿಯಾಗಿ ವಿವರಿಸಿದ್ದರು. ಅದೇನೆಂದರೆ, ಈ ಪುರೋಹಿತಶಾಹಿ ಎಂಬ ಹುಲಿ ಕೊಲ್ಲಬೇಕಾದರೆ ಅದರ ಬುರುಡೆಗೆ ಗುರಿ ಇಟ್ಟು ಹೊಡೆಯಬೇಕು. ನೀವು ಗಾಯಗೊಳಿಸಿದಿರೋ ಅದು ಗಾಯ ವಾಸಿಮಾಡಿಕೊಂಡು ಬಂದು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದಿದ್ದರು. ಕವಿವಾಣಿ ಸತ್ಯವಾಗಿ ವಿಜೃಂಭಿಸುತ್ತಿರುವುದು ಯಾವತ್ತಿಗೂ ನಿಜವಾಗಿ ಕಾಣುತ್ತಿದೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್‍ರಾದಿಯಾಗಿ ಎಲ್ಲರನ್ನ ಬಲಿತೆಗೆದುಕೊಂಡ ಪುರೋಹಿತಶಾಹಿ ಹುಲಿಯನ್ನ ಪ್ರಜಾಪ್ರಭುತ್ವದ ಮತದಾರ ಮಾತ್ರ ಕಟ್ಟಿಹಾಕಬಲ್ಲ. ಆ ದಿಸೆಯಲ್ಲಿ ರಾಜಕೀಯ ನಾಯಕರುಗಳಿಗಿಂತ ಮತದಾರ ಪ್ರಭುವೇ ಪ್ರಬುದ್ಧನಾಗಿ ಮೆರೆದಿದ್ದಾನಲ್ಲಾ… ಥೂತ್ತೇರಿ!
*****
ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷಬೆರೆಸಿ ಹದಿನೈದು ಜನರನ್ನು ಬಲಿ ತೆಗೆದುಕೊಂಡ ಮನಸ್ಸುಗಳ ಬಗ್ಗೆ ಯೋಚಿಸಿದರೆ, ದೇವಸ್ಥಾನ ಕೇಂದ್ರಿತ ಮನಸ್ಸು ಅದೆಷ್ಟು ಕ್ರೂರವಾಗಿದೆ ಎಂದು ದಿಗಿಲಾಗುತ್ತದಲ್ಲಾ. ಇದೇನು ಅಚ್ಚರಿದಯಲ್ಲ. ದೇವಸ್ಥಾನಗಳು, ಗುಡಿ-ಗೋಪುರಗಳು ಈ ದೇಶದಲ್ಲಿ ಬಹಳ ಬಲಿ ಪಡೆದಿವೆ. ಮಂದಿರಕ್ಕಾಗಿಯೇ ನರಬಲಿಗಳು ಇನ್ನು ನಿಂತಿಲ್ಲ. ಇದ್ದಕ್ಕಿದ್ದಂತೆ ಮಂದಿರ ನಿರ್ಮಾತೃಗಳು `ಕೋಪಗೊಂಡು ಮಂದಿರವನ್ನು ನಿರ್ಮಿಸುತ್ತೇವೆ, ಕರೇಂಗೆ ಯಾ ಮರೇಂಗೆ’ ಎಂಬ ಘೋಷಣೆ ಮೊಳಗಿಸುತ್ತಿವೆ. ಇದನ್ನು ಕೇಳಿದ ಭಾರತದ ಶ್ರೀಸಾಮಾನ್ಯ `ಅರೆ ಕಟ್ಟಿಗಳ್ರಯ್ಯ ನಿಮ್ಮನ್ನ ಯಾರು ವಿರೋಧಿಸ್ತಾರೆ. ನಿಮ್ಮದೆ ಪಾರ್ಟಿಯ ಸರಕಾರ ಅದೆ. ಪ್ರಧಾನಿ ಇದಾನೆ, ಮಂದಿರದ ಜಾಗದಲ್ಲಿ ಇಟ್ಟಿಗೆ ಬಿದ್ದಿವೆ, ಅವನ್ನ ಕಾಯ್ತಾಯಿರೋ ಪೊಲೀಸ್‍ನ ಬಳಸಿ ಕಟ್ಟಿಗಬವುದು’ ಎಂದು ಹೇಳುತ್ತಿದ್ದರು ಕೂಡಾ ಬಿಜೆಪಿಗಳು ಬೊಬ್ಬಿರಿಯುತ್ತಿರುವುದನ್ನ ನೋಡಿದರೆ ಹುಚ್ಚರ ಕಿರುಚಾಟಕ್ಕೆ ಅರ್ಥ ಹುಡುಕಿದಂತಾಗುತ್ತಿದೆಯಲ್ಲಾ…. ಥೂತ್ತೇರಿ!!!

LEAVE A REPLY

Please enter your comment!
Please enter your name here