Homeಅಂಕಣಗಳುಮಹಿಳಾ ಮೀಸಲಾತಿಯ ಸುತ್ತ....

ಮಹಿಳಾ ಮೀಸಲಾತಿಯ ಸುತ್ತ….

- Advertisement -
- Advertisement -

| ಗೌರಿ ಲಂಕೇಶ್ |
ಜೂನ್ 24, 2009 (ಸಂಪಾದಕೀಯದಿಂದ)

ಸಂಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತಂತೆ ಮತ್ತೆ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಒಂದು ದಶಕಕ್ಕಿಂತಲೂ ಹಿಂದೆ ಪ್ರಾರಂಭವಾದ ಈ ಚರ್ಚೆ ಎಂದೂ ತಾರ್ಕಿಕ ಅಂತ್ಯ ಮುಟ್ಟದೆ ಹಿಂದೆ ಸರಿಯುತ್ತದೆ; ಮತ್ತೆ ಮುಂದೊಂದು ದಿನ ಭುಗಿಲೇಳುತ್ತದೆ.

ವಾಸ್ತವವಾಗಿ ನಮ್ಮ ದೇಶದ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಎಷ್ಟಿದೆ? ನಮ್ಮ ಮತದಾರರ ಪೈಕಿ ಶೇ.50 ಜನರು ಮಹಿಳೆಯರಾಗಿದ್ದರೂ ಕಳೆದ 62 ವರ್ಷಗಳಲ್ಲಿ ಮಹಿಳಾ ಸಂಸದರ ಪ್ರಮಾಣ ಶೇ.10ನ್ನೂ ಮೀರಿರಲಿಲ್ಲ. ಆದರೆ ಮೊನ್ನಿನ ಚುನಾವಣೆಯಲ್ಲಿ 15ನೇ ಲೋಕಸಭೆಗೆ ಮಹಿಳೆಯರು ‘ಅತಿಹೆಚ್ಚು’ ಸಂಖ್ಯೆಯಲ್ಲಿ ಗೆದ್ದುಬಂದದ್ದು ಮೊದಲನೆ ಬಾರಿಗೆ 524 ಸಂಸದರಲ್ಲಿ 59 ಮಹಿಳೆಯರಿದ್ದಾರೆ.

ಮಹಿಳೆಯರಿಗೆ 33% ಮೀಸಲಾತಿ ಇರಬೇಕೆಂದು ಕೋರುತ್ತಿರುವ ಇಂದಿನ ಸಂದರ್ಭದಲ್ಲಿ ಯಾವ ಮೀಸಲಾತಿಯೂ ಇಲ್ಲದೇ 10% ಗಿಂತ ಸ್ವಲ್ಪ ಹೆಚ್ಚು ಮಹಿಳೆಯರು ಆಯ್ಕೆಯಾಗಿ ಬಂದಿರುವುದು ಬೇರೆ ಸಂದರ್ಭದಲ್ಲಿ ಶ್ಲಾಘನೀಯ ಸಾಧನೆಯಾಗಿರುತ್ತಿತ್ತೇನೋ, ಆದರೆ ಆ 59 ಮಹಿಳೆಯರು ಯಾರೆಂದು ನೋಡಿದಾಗ ಬೇಸರವಾಗುತ್ತದೆ. ಅಂಜಲಿ ಪೂರಿ ಲೇಖನವೊಂದರಲ್ಲಿ ಬರೆದಿರುವಂತೆ ‘ಅವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಪ್ರಭಾವಿ ರಾಜಕಾರಣಿಗಳ ಪತ್ನಿ, ಪುತ್ರಿ, ವಿಧವೆ, ಸೊಸೆ ಅಥವಾ ಸಹೋದರಿಗಳೇ..

ಅದೇನೆ ಇದ್ದರೂ ಮಹಿಳೆಯರಿಗೆ ಮೀಸಲಾತಿ ಇರಬೇಕು ಏಕೆಂದರೆ ನಿಜವಾದ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಶೋಷಿತ ವರ್ಗಗಳಿಗೆ ಪ್ರಾತಿನಿಧ್ಯ ಇರಬೇಕು, ನಮ್ಮ ಸಂವಿಧಾನ ಸಭೆಯಲ್ಲಿ ದಲಿತರಿಗೆ ರಾಜಕೀಯ ಮೀಸಲಾತಿ ಘೋಷಿಸಿದ್ದೂ ಈ ಕಾರಣಕ್ಕಾಗಿಯೇ.

ಈಗಾಗಲೇ ಸುಮಾರು 90 ದೇಶಗಳ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಇವತ್ತು ಭಾರತಕ್ಕಿಂತ ಅಫಘಾನಿಸ್ತಾನ, ಪಾಕಿಸ್ತಾನ, ಇರಾಕ್ ತರಹದ ಇಸ್ಲಾಮಿಕ್ ದೇಶಗಳಲ್ಲೂ ಚೀನಾದಂತಹ ಕಮ್ಯುನಿಸ್ಟ್ ದೇಶದಲ್ಲೂ ಮಹಿಳೆಯರಿಗೆ ಮೀಸಲಾತಿ ಇದೆಯಲ್ಲದೆ, ಆ ದೇಶಗಳ ಸಂಸತ್ತಿನಲ್ಲಿ ಭಾರತಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ರ್ವಾಂಡದಂತಹ ಆಫ್ರಿಕನ್ ದೇಶದಲ್ಲಿ ಎಲ್ಲಾ ದೇಶಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರಿಗೆ 48.8% ಮೀಸಲಾತಿ ನೀಡಲಾಗಿದೆ. ಆದರೆ ಇಲ್ಲಿ 33% ಕೊಡುವುದರ ಬಗ್ಗೆಯೇ Hair spilling ನಡೆಯುತ್ತಿದ್ದು ಅದು ಜಾರಿಗೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ.

ಭಾರತದ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲದಿದ್ದರೂ ನಮ್ಮ ಸಂವಿಧಾನಕ್ಕೆ 1993ರಲ್ಲಿ 73 ಮತ್ತು 74ನೇ ತಿದ್ದುಪಡಿ ಮಾಡುವ ಮೂಲಕ ಪ್ರಜಾಪ್ರಭುತ್ವದ ಕೆಳಹಂತದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಆಗ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳದಂತಹ ರಾಜ್ಯಗಳ ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ

ಭಾಗವಹಿಸಲಾರಂಭಿಸಿದರು. ಮಹಿಳೆಯರ ಈ ರಾಜಕೀಯ ಪ್ರವೇಶಕ್ಕೆ ಹಲವಾರು ಅಡಚಣೆಗಳಿದ್ದರೂ ಅವರಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಹೆಚ್ಚಾಗಿ ಅವರ ಕೊಡುಗೆಯೂ ಅಧಿಕವಾಯಿತು. ಈ ಅನುಭವವನ್ನು ಆಧರಿಸಿಯೇ ಸಂಸತ್ತಿನಲ್ಲೂ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂಬ ಹೋರಾಟ 1996ರಲ್ಲಿ ಪ್ರಾರಂಭವಾಯಿತು.

ಮೊನ್ನೆ ಶರದ್ ಯಾದವ್, ಮುಲಾಯಂ ಸಿಂಗ್ ಮತ್ತು ಲಾಲೂ ಪ್ರಸಾದ್ ಯಾದವ್ ತರಹದ ಓಬಿಸಿ ನಾಯಕರು “ಮಹಿಳಾ ಮೀಸಲಾತಿಯಲ್ಲಿ ಒಳ ಮೀಸಲಾತಿ ಇರಬೇಕು’ ಎಂದಿದ್ದಾರಲ್ಲದೆ, ಶರದ್ ಯಾದವ್ ‘ಈ ತಿದ್ದುಪಡಿಯನ್ನು ತರದೆ ಹಾಗೆಯೇ ಜಾರಿಗೆ ತಂದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಸಿದ್ದಾರೆ. ಶರದ್ ಯಾದವ್ ಅವರಂತೂ ತಮ್ಮ ಹೇಳಿಕೆಯಿಂದಾಗಿ, ಅಪಾರ ಟೀಕೆಗೆ ಗುರಿಯಾಗಿದ್ದಾರೆ.

ಆದರೆ ಮಹಿಳಾ ಮೀಸಲಾತಿ ಎಷ್ಟು ಮುಖ್ಯವೋ ಅಷ್ಟೇ ಅವರು ಹೇಳುತ್ತಿರುವ ಒಳ ಮೀಸಲಾತಿ ಕೂಡ. ಇಲ್ಲವೆಂದರೆ ಮಹಿಳಾ ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡು ಮೇಲ್ಜಾತಿ ಮತ್ತು ಮೇಲ್ವರ್ಗಗಳೇ ಅಧಿಕ ಸಂಖ್ಯೆಯಲ್ಲಿ ಗೆದ್ದುಬರುವ ಅಪಾಯವಿದೆ.

ನ್ಯಾಯಬದ್ಧವಾಗಿ ಮಹಿಳೆಯರಿಗೆ 33% ಮೀಸಲಾತಿಯಲ್ಲ, 50% ಮೀಸಲಾತಿಯನ್ನು ಕೊಡಲೇಬೇಕು. ಆದರೆ ಸದ್ಯಕ್ಕೆ 33% ರಷ್ಟನ್ನಾದರೂ ಕೊಡಿ ಮಾರಾಯರೆ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...