Homeಮುಖಪುಟಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

ಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

- Advertisement -
- Advertisement -

| ಡಾ.ಲತಾ ಮೈಸೂರು |

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.

ಮೇಲ್ಜಾತಿಯಲ್ಲಿ ಜನಿಸಿರುವ ಎಸ್.ಎಲ್.ಭೈರಪ್ಪ ತಳಮೂಲದಿಂದ ಬಂದವರಾಗಿದಿದ್ದರೆ, ಅವರ ಬರವಣಿಗೆ, ಸೃಜನಶೀಲ ಕೃತಿ, ಭಾಷಣ, ಹೇಳಿಕೆಗಳಲ್ಲಿ ‘ವೈದಿಕತೆಯೇ ಸಂವಿಧಾನವಾಗಲಿ’ ಎಂಬ ಮೂಲಭೂತವಾದಿ ಧೋರಣೆಗಳು ನೆಲೆಗೊಳ್ಳುತ್ತಿದ್ದವೆ?

ಅವರು ಅವರ್ಣೀಯರಾಗಿದಿದ್ದರೆ!? ಇಷ್ಟೆ ವಿಸ್ತಾರ ಓದು, ತತ್ತ್ವಜ್ಞಾನದ ತಿಳಿವಳಿಕೆ, ದೈತ್ಯ ಸೃಜನಶೀಲ ಅಭಿವ್ಯಕ್ತಿ ಶಕ್ತಿ ಸಾಮಥ್ರ್ಯಗಳನ್ನು, ಜನಪ್ರಿಯಗೊಳ್ಳುವ ಕಲೆಯನ್ನು ಜೀವಪರತೆ, ಸತ್ಯ, ನ್ಯಾಯ, ಸಮಾನತೆ, ಅಹಿಂಸೆಗಳ ಅರಳಿಸುವಿಕೆಗೆ ಬಳಸುತ್ತಿದ್ದರೆನೋ?

ಇವೆಲ್ಲ ‘ರೆ’ಗಳು, ಜನ್ಮವನ್ನೆ ಮಾನದಂಡವಾಗಿಸಿರುವ ಭಾರತದ ನೆಲದಲ್ಲಿ ಯುಟೋಪಿಯಾ ಅಷ್ಟೆ. ತಮ್ಮ ಜನನವನ್ನೇ (ಜಾತಿಯನ್ನೇ) ಶ್ರೇಷ್ಠವಾಗಿಸಿಕೊಂಡು ಈ ನೆಲದ ಎಲ್ಲ ಅವಕಾಶ, ಸೌಲಭ್ಯ, ಅಧಿಕಾರ, ಸಂಪತ್ತುಗಳನ್ನು ಮೀಸಲಾಗಿಸಿಕೊಂಡು, ಉಳಿದವರೆಲ್ಲರೂ ತಮ್ಮ ತಮ್ಮ ಶ್ರೇಣಿಮಟ್ಟದಲ್ಲಿ ಇದೇ ಕ್ರೌರ್ಯ, ದೋಚುವಿಕೆಯನ್ನು ಧರ್ಮಶಾಸ್ತ್ರ ಗಳನ್ನಾಗಿಸಿಕೊಳ್ಳುವಂತೆ ಮಾಡಿರುವ ಡ್ಯಾಮೇಜ್ ಎಂದಿಗೂ ಸರಿಪಡಿಸಲಾಗದು. ಪ್ರತಿ ಜೀವದ ಅನನ್ಯತೆ – ಪ್ರತಿಭೆ, ಸಾಧಿಸಿಕೊಳ್ಳುವ ಶಕ್ತಿ-ಸಾಮಥ್ರ್ಯ- ಯೋಗ್ಯತೆಗಳು ಮಾಪನವಾಗದೆ, ತಮ್ಮ ಆಯ್ಕೆಯಲ್ಲದ ಪ್ರಾಕೃತಿಕ ಹುಟ್ಟು ಇಲ್ಲಿ ಮಾನದಂಡವಾಗಿ, ತಕ್ಕಡಿಯಾಗಿದೆ. ಈ ಮೂಲಕ ಬೇರ್ಬಿಟ್ಟಿರುವ ಅ-ನ್ಯಾಯದ, ಅ-ಸಮತೆಯ ವಾಸ್ತವಿಕ ಅಭ್ಯಾಸಗಳನ್ನು ಬದಲಿಸುವುದು ಸುಲಭವೆ?

ತಮ್ಮ ಜನ್ಮದ ಬ್ರಾಹ್ಮಣ್ಯವನ್ನೆ ಶ್ರೇಷ್ಠವಾಗಿಸಿಕೊಂಡ ಬ್ರಾಹ್ಮಣರು ಕಲಿಯುಗದಲ್ಲಿ ಎಂಥೆಂಥಾ ಅನಾಹುತ-ದುರಂತಗಳ ಸರಮಾಲೆಯನ್ನೆ ಸೃಷ್ಟಿಸಿ ಬಿಡುತ್ತಾರೆಂಬ (ದುರ್)ದರ್ಶನವನ್ನು ಪಂಪನ ಆದಿಪುರಾಣದ ಭರತ ದುಃಸ್ವಪ್ನ ರೂಪದಲ್ಲಿ ಕಾಣುತ್ತಾನೆ.

ಪಂಪನ ಆದಿಪುರಾಣದ 15ನೇ ಆಶ್ವಾಸದಲ್ಲಿ ‘ಭರತನು ಅನಭಿಷಿಕ್ತನಾಗಿ, ವೈಭವದಿಂದ ಭೂಮಂಡಲವನ್ನು ಪರಿಪಾಲಿಸುತ್ತಾ, ಧನವನ್ನು ತಕ್ಕವರಿಗೆ ದಾನ ಮಾಡಲು ಉಪಾಸಕರನ್ನು ಗುರುತಿಸುವ’ ಪ್ರಸಂಗದಲ್ಲಿ ಇದು ಬರುತ್ತದೆ. ಅಯೋಧ್ಯಾ ಸಿಂಹಾಸನದಲ್ಲಿ ಕುಳಿತು ಸಾಮ್ರಾಜ್ಯ ಸುಖ ಅನುಭವಿಸುತ್ತಿದ್ದ ಚಕ್ರವರ್ತಿ ಭರತನು ತಾನು ಜಿನಪೂಜೋತ್ಸವವೆಂಬ ಮಹಾಮಹವನ್ನು ಮಾಡಿ ಸಲ್ಲುವಂತಾಗಲು ಧನವನ್ನು ತಕ್ಕವರಿಗೆ ದಾನ ಮಾಡಬೇಕು. ಆದರೆ ತಪೋಧನರು ದಾನವನ್ನು ಒಲ್ಲರು, ಇನ್ನು ಆ ದಾನಕ್ಕೆ ಗೃಹಸ್ಥರಿದ್ದಾರೆ. ಆದರೆ ಅವರಲ್ಲಿ ಯಾರು ಯೋಗ್ಯರೆಂಬುದನ್ನು ಉಪಾಯಾಂತರದಿಂದ ಪರೀಕ್ಷಿಸಲು ಒಸಗೆಯೊಂದನ್ನು (ಮಂಗಳಕಾರ್ಯ) ಹಮ್ಮಿಕೊಂಡು, ಅರಮನೆಯ ಒಳ ಹೊರಗೂ ಹರಿತಾಂಕುರ-ಹೂ-ಹಣ್ಣು-ಮೊಳಕೆ ಧಾನ್ಯಗಳನ್ನು ಹರಡಿಸಿ ದಾನ ಸ್ವೀಕರಿಸಲು ಬರ ಹೇಳಿದನು. ಕೂಡಲೇ (ಅಹಿಂಸಾ) ವ್ರತವಿಲ್ಲದ ಅವಿವೇಕಿಗಳು ಅವುಗಳನ್ನೆಲ್ಲ ತುಳಿದುಕೊಂಡೇ ಅರಮನೆಯೊಳಕ್ಕೆ ಬಂದರು. ಆದರೆ ಆ ತುಳಿಯುವ ಹಿಂಸಾ ಪಾಪಕ್ಕೆ ಹೆದರಿ ಕೆಲವರು ಹೊರಗೇ ನಿಂತರು. ಇವರನ್ನು ಚಕ್ರವರ್ತಿ ಮತ್ತೆ ಕರೆಯಲು ಬೇರೆ ದಾರಿಯಿಂದ ಅರಮನೆಯೊಳಗೆ ಬಂದರು. ಆಗ ಭರತ ‘ನೀವಿಷ್ಟು ಜನ ಇವರು ಬಂದ ಮಾರ್ಗದಲ್ಲಿ ಬರದೆ ಬೇರೊಂದು ಮಾರ್ಗದಲ್ಲೇಕೆ ಬಂದಿರಿ’ ಎಂದು ಪ್ರಶ್ನಿಸಲು, ‘ಹಸಿರು-ಅಂಕುರ-ಕುಡಿ-ಕುಸುಮ-ಹಣ್ಣಿದ್ದಲ್ಲಿ ಜೀವರಾಶಿ ಅಪಾರವಾಗಿರುತ್ತದೆ. ಪುರಪರಮೇಶ್ವರನ ಸಭೆಯಲ್ಲಿ ‘ಗಣಾಧಿಪರು ಹೇಳಿದ ಅಹಿಂಸಾ ವ್ರತ ಹಿಡಿದಿರುವ ನಾವು ಅವನ್ನು ತುಳಿಯಲಾರೆವು’ ಎಂದರು. ಭರತ ಇವರ ದೃಢ ಅಹಿಂಸಾವ್ರತಕ್ಕೆ ಮೆಚ್ಚಿ ದಾನ-ಸನ್ಮಾನಕ್ಕೆ ಯೋಗ್ಯರೆಂದು ತವನಿಧಿ ತರಿಸಿ, ಅವರವರ ನೆಲೆಗಳಲ್ಲಿ ಬ್ರಹ್ಮಸೂತ್ರ ಎಂಬ ಅಭಿದಾನದ ‘ಯಜ್ಞೋಪವೀತ’ದಿಂದ ಅವರನ್ನು ಪವಿತ್ರಗಾತ್ರರನ್ನಾಗಿ ಮಾಡಿದನು.

ಇಲ್ಲಿ ಅಹಿಂಸಾ ನಡೆಯೇ ಯೋಗ್ಯರನ್ನಾರಿಸಲು ಮಾನದಂಡ. ಇಂಥ ಅಹಿಂಸಾ ನಡೆಯ ಜನರನ್ನು ಭರತ ಪ್ರತ್ಯೇಕವಾಗಿ ಗುರುತಿಸಿ, ಮೆಚ್ಚಿ ನಂತರ ಯಜ್ಞೋಪವೀತ ಹಾಕಿ, ಅವರನ್ನು ಪವಿತ್ರಗಾತ್ರರನ್ನಾಗಿಸಿದ. ಹೀಗಾಗಿ ಇಲ್ಲಿ ಬ್ರಾಹ್ಮಣ್ಯ ಎಂಬುದು ನಡೆಗಾಗಿ ಪಡೆದರೆ ಹೊರತು ಜನ್ಮಕ್ಕಾಗಿ ಅಲ್ಲ.

ಮುಂದೆ ಭರತ ತಾನೇ ಮಾಡಿದ ಉಪಾಸಕ ಬ್ರಾಹ್ಮಣರಿಗೆ ನೀವು ನಡೆಸಬೇಕಾದ ಕುಲಾಚಾರಗಳೆಂದು ಷಟ್‍ಕರ್ಮ… ವ್ರತ, ಸಂಸ್ಕಾರ, ಸತ್ಕ್ರಿಯಾ, ಪಂಚಾಣು ವ್ರತ, (ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ)ಗಳನ್ನು ಉಪದೇಶಿಸಿದ.

ಇಲ್ಲಿ ಷಟ್ಕರ್ಮ ಸಹಿತನಾದವನು ಮಾತ್ರ ಸತ್ತ್ಯದಿಂದ ದ್ವಿಜನಾಗುತ್ತಾನೆ. ಆದರೆ ಗೃಹಸ್ಥರ ಅಹಿಂಸಾನಡೆಗಾಗಿ, ಯಜ್ಞೋಪವೀತ ಹಾಕಿ ಬ್ರಾಹ್ಮಣರನ್ನಾಗಿ ಮಾಡಿ, ಷಟ್ಕರ್ಮ ವ್ರತಗಳನ್ನುಪದೇಶಿಸಿದ ಭರತನೆ ಮುಂದೆ ತನ್ನ ಹಿರಿಮೆಗಾಗಿ ಆನಂದದ ಭರದಲ್ಲಿ ಬ್ರಾಹ್ಮಣ್ಯ (ದ್ವಿಜತ್ವ)ವನ್ನು ಅವರ ವಂಶಕ್ಕೆ (ಜನ್ಮಕ್ಕೆ) ಅನ್ವಯ ಮಾಡಿ ಹೀಗೆ ಘೋಷಿಸಿ ಬಿಡುತ್ತಾನೆ – “ಪರಮಬ್ರಹ್ಮನ ತನುವಿಂದ ಹುಟ್ಟಿದವರು ದ್ವಿಜರು, ಇವರು ವರ್ಣೋತ್ತಮರು, ಲೋಕಪೂಜ್ಯರು, ರಾಜರಿಂದ ಮನ್ನಣೆ ಪಡೆಯಲು ಅರ್ಹರು, ಉನ್ನತ ಗುಣವಂತರು, ಶುದ್ಧ ಚಾರಿತ್ರರು, ಭೂಲೋಕದ ದೇವರುಗಳು ಈ ಬ್ರಾಹ್ಮಣರು” – ಹೀಗೆಂದು ಭೂಮಂಡಲೇಶ್ವರ ಭರತನು ಕೊಂಡಾಡಲು ಎತ್ತೆತ್ತಲೂ ಬ್ರಾಹ್ಮಣ ಸಂತತಿ ಒಡನೆಯೇ ವಿಖ್ಯಾತವಾಯಿತು.

ಭರತನ ಕೊಂಡಾಟದಿಂದ ಬ್ರಾಹ್ಮಣ ಸಂತತಿ ಅತಿಪ್ರಸಿದ್ಧವಾಗಿ ಕೆಲವು ಕಾಲ ನಡೆಯುತ್ತಿರುವಲ್ಲಿ ಭರತನಿಗೆ ಒಂದು ದಿನ ಬೆಳಗಿನ ಝಾವ ಅನಿಷ್ಟಫಲ ಸೂಚಕ ದುಃಸ್ವಪ್ನಗಳು ಬಿದ್ದವು. ಇವು ಯುಗದ ಕೊನೆಯಲ್ಲಿ ತನ್ನ ಪ್ರಜೆಗಳಿಗುಂಟಾಗುವ ವಿವಿಧ ಕೇಡುಗಳನ್ನು ಸೂಚಿಸುವಂತಿದೆ ಎಂಬ ಅನುಮಾನ ಭರತನಿಗೆ ಮೂಡಿತು. ಅನುಮಾನ ಪರಿಹಾರಕ್ಕಾಗಿ ತನ್ನ ಆರಾಧ್ಯನಾದ ವೃಷಭನಾಥನನ್ನು ಸ್ತುತಿಸಿ ಧ್ಯಾನಸ್ಥನಾಗಿ ಕೂತಿದ್ದಾಗ ಭರತನಿಗೆ ಅವಧಿಜ್ಞಾನ ಪ್ರಾಪ್ತವಾಯಿತು. (ಹಿಂದೆ ಭರತ ಬ್ರಾಹ್ಮಣ್ಯವನ್ನು ವಂಶಾನ್ವಯ ಮಾಡಿ ಘೋಷಿಸುವಾಗ ಅವನಿಗೆ ಅವಧಿಜ್ಞಾನ ಪ್ರಾಪ್ತವಾಗಿರಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು).

ಅವಧಿಜ್ಞಾನ ಪ್ರಾಪ್ತವಾದ ಭರತನು ತಾನು ಮಾಡಿದ ಮರುಳುತನಕ್ಕೆ ಪಶ್ಚಾತಾಪ ಪಟ್ಟು ತೀರ್ಥಂಕರನಲ್ಲಿ ಹೀಗೆ ಬಿನ್ನೈಸುತ್ತಾನೆ ‘ಆದಿಬ್ರಹ್ಮನೆನಿಸಿದ ನೀನೇ ಎಲ್ಲದಕ್ಕೂ ಮೊದಲು, ನೀನು ಇರುವಂತೆಯೇ ನನ್ನಲ್ಲುಂಟಾದ ಮರುಳತನದಿಂದ ವ್ರತ ಸಮೇತವಾದ ವಿಪ್ರಾನ್ವಯವೊಂದನ್ನು (ವಿಪ್ರತನವನ್ನು ವಂಶಪಾರಂಪರ್ಯ) ಮಾಡಿಬಿಟ್ಟೆ…. ಯಜ್ಞೋಪವೀತದ ಧಾರಣೆ ನನ್ನಿಂದ ಅವರಿಗಾಯಿತು….. ಇದರಿಂದ ಗುಣವೋ ದೋಷವೋ? ಮುಂದಾಗುವುದು ಯುಕ್ತವೊ ಅಯುಕ್ತವೋ? ಹಾನಿ / ವೃದ್ಧಿಯೆಂಬೆರಡರಲ್ಲಿ ಯಾವುದರಲ್ಲಿ ಹೋಗಿ ನಿಲ್ಲುವುದು…. ಅಲ್ಲದೆ ಇಂದು ಬೆಳಗಿನ ಝಾವ ಬಿದ್ದ ಅನಿಷ್ಟ ಸೂಚಕ ಕನಸುಗಳ ಫಲ ಏನೆಂದು ತಿಳಿಯ ಹೇಳಿರಿ. ತಾನೀಗ ಅವಧಿಜ್ಞಾನದಿಂದ ಅರಿತವನಾಗಿದ್ದರೂ….. ಈ ಸಭಾ ಜನರು ಅರಿಯಲೆಂದು ಹೇಳಿ’.

ಆಗ ತ್ರಿಲೋಕಗುರುಗಳು – ‘ನೀನು ಬ್ರಾಹ್ಮಣ ಜಾತಿಯನ್ನು (ಬ್ರಾಹ್ಮಣ್ಯವನ್ನು ಜನ್ಮಕ್ಕೆ ಅಂಟಿಸಿದ್ದು) ಒಳ್ಳೆಯದೆಂದು ಭಾವಿಸಿ ಮಾಡಿದೆ. ಆದರೆ ಧರ್ಮದ ಉದ್ದೇಶದಿಂದ ನೀನು ಮಾಡಿದ್ದರಿಂದ ಆದ ಈ ಬ್ರಾಹ್ಮಣ ಜಾತಿಯ ಆಚರಣೆಯು ನೀನೆಂದಂತೆ – ಈ ಕೃತಯುಗದೊಳಗೆ ಮಾತ್ರವೇ ಸಲ್ಲುವುದು. ಆಮೇಲೆ ಆಚರಣೆ ಬಿಟ್ಟು, ಸನ್ಮಾರ್ಗದ ಬಗ್ಗೆ ಮಚ್ಚರ ಬೆಳೆಸಿಕೊಂಡು, ಕಲಿಯುಗ ಹತ್ತಿರ ಹತ್ತಿರವಾದಂತೆಲ್ಲಾ ಈ ಬ್ರಾಹ್ಮಣರು ದ್ರವ್ಯಲೋಭಾತುರರಾಗಿ, ಉನ್ಮಾರ್ಗ ಉಪದೇಶ ಉದ್ಯತ ಬುದ್ಧಿಯವರಾಗಿ ಅತಿಕ್ರೂರಿಗಳೂ ಆಗುವರು (15. 26). ಮಧು-ಮದ್ಯ-ಮಾಂಸಲೋಲುಪರೂ, ಅಧಾರ್ಮಿಕರೂ, ಪರಸ್ತ್ರೀರತಿಪ್ರಿಯರೂ, ಅಧರ್ಮಿಷ್ಟರೂ, ಕೊಲೆಗಡುಕರೂ, ಪಾಪಿಗಳೂ, ಸುಳ್ಳುಬಡುಕ ಸಂಪತ್ತಿನವರೂ ಆಗುವರು ಕಲಿಯುಗದೊಳಗೆ ಬ್ರಾಹ್ಮಣರು (15-27). ಆದರೂ ಈಗ ಸದಾಚಾರವಂತರಾಗಿರುವುದರಿಂದ ಅವರನ್ನು ಈ ಆಚರಣೆಯಲ್ಲೇ ನಡೆಯಲು ಬಿಡಬೇಕು. ‘ಮಾಡಿ ಕೆಡಿಸಿದರೆ’ ನಿನಗೆ ಎಂದೆಂದಿಗೂ ಕೆಟ್ಟ ಹೆಸರು ನಿಂತು ಬಿಡುವುದು’ ಎಂದು ಹೇಳಿ, ಮುಂದೆ ವೃಷಭನಾಥರು ಭರತ ಕಂಡ ದುಃಸ್ವಪ್ನಗಳ ಸೂಚಿತ ಫಲಗಳನ್ನು ವಿವರ ವಿವರವಾಗಿ ಅರ್ಥೈಸುತ್ತಾರೆ – ‘ಈ ದ್ವಿಜನ್ಮರು ಷಟ್ಕರ್ಮರಹಿತರಾಗುವ ಕೇಡಿನ ಸ್ಥಿತ್ಯಂತರದ ಪರಿಣಾಮ ತರಂಗಿತ ತರಂಗಿತವಾಗಿ ಆ ಮಂಡಲದ ಎಲ್ಲ ಜನರು ಸತ್ಯ-ಶೌಚವಿರಹಿತರಾಗಿ ಸಚ್ಚಾರಿತ್ರ್ಯ ಬಿಟ್ಟು ಭೋಗ ಉಪಭೋಗಗಳಲ್ಲಿ ಲೋಲುಪರಾಗುವರು…… ಇದರಿಂದ ನೀನು ಅಸಹ್ಯ ಪಡಬೇಡ….. ನಿನಗೆ ಜೈನಧರ್ಮ ಶಾಂತಿಯನ್ನುಂಟು ಮಾಡಲಿ’ ಎಂದು ಸಂತೈಸಿ ಕಳುಹಿಸಿದರು. ಭರತ ತನ್ನ ಪಾಪ ಪರಿಹಾರಕ್ಕಾಗಿ ಜೈನಗೃಹಗಳನ್ನು ಕಟ್ಟಿಸಿದನೆಂಬಲ್ಲಿ 15ನೇ ಆಶ್ವಾಸ ಮುಕ್ತಾಯವಾಗುತ್ತದೆ.

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು. ‘ಜನ್ಮಶ್ರೇಷ್ಠತೆ’ಯ ವ್ಯಸನದವರು ಈ ಸಂವಿಧಾನವನ್ನು ಬದಲಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ.. ಬದಲಿಸುತ್ತೇವೆ.. ಎನ್ನುತ್ತಾ ಜೀವ ವಿರೋಧಿ ಜನ್ಮಾಧಾರಿತ ವೈದಿಕತೆಯೆ ಸಂವಿಧಾನವಾಗಲಿ ಎಂಬ ಫರ್ಮಾನುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹೊರಡಿಸುತ್ತಿದ್ದಾರೆ. ತಮ್ಮ ಜನ್ಮವನ್ನೆ ಯೋಗ್ಯತೆಯನ್ನಾಗಿಸಿಕೊಂಡವರು ಆದಿನಾಥನ ಕಲಿಯುಗದ ದರ್ಶನವನ್ನು ಸತ್ಯವಾಗಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...