Homeಮುಖಪುಟಸಿದ್ದವಾಗೇ ಹೋಯ್ತಾ ಬಿಜೆಪಿ ಸಚಿವ ಸಂಪುಟ? ಇರ್ತಾರಾ ಮೂರು ಡಿಸಿಎಂಗಳು?

ಸಿದ್ದವಾಗೇ ಹೋಯ್ತಾ ಬಿಜೆಪಿ ಸಚಿವ ಸಂಪುಟ? ಇರ್ತಾರಾ ಮೂರು ಡಿಸಿಎಂಗಳು?

- Advertisement -
- Advertisement -

| ಗೌರಿ ಡೆಸ್ಕ್ |

ಸುಪ್ರೀಂ ಕೋರ್ಟ್ ನಿರ್ದೇಶನದಿಂದಾಗಿ ಕರ್ನಾಟಕದ ರಾಜಕೀಯ ಹೈಡ್ರಾಮ ಹೆಚ್ಚೂಕಮ್ಮಿ ಸಮಿಫೈನಲ್ ಹಂತಕ್ಕೆ ಬಂದು ತಲುಪಿದಂತಾಗಿದೆ. ಇವತ್ತೇ ಸಂಜೆ ಆರು ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ೧೦ ಬಂಡಾಯ ಶಾಸಕರಿಗೆ ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯ, ಆದಷ್ಟು ಬೇಗ ಇದಕ್ಕೊಂದು ಮಂಗಳ ಹಾಡುವಂತೆ ಸ್ಪೀಕರ್‌ಗೆ ಸೂಚನೆ ನೀಡಿದೆ. ಅದು ಕೇವಲ ಸೂಚನೆಯಾಗಿರೋದ್ರಿಂದ, ಸ್ಪೀಕರ್ ಮೇಲೆ ಯಾವ ಒತ್ತಡವನ್ನೂ ನ್ಯಾಯಾಲಯ ಹಾಕಿಲ್ಲ. ಹಾಗಾಗಿ, ನನಗೆ ರಾಜೀನಾಮೆಗಳನ್ನು ಪರಾಮರ್ಶಿಸಲು ಒಂದಷ್ಟು ಸಮಯ ಬೇಕು ಅಂತ ರಮೇಶ್ ಕುಮಾರರು ಸುರ್ಪೀಂ ಕೋರ್ಟಿಗೆ ಅರ್ಜಿ ಹಾಕಿರುವ ಲೇಟೆಸ್ಟ್ ಸುದ್ದಿ ಹೊರ ಬರುತ್ತಿದೆ.

ಆದರೆ ಬಿಜೆಪಿ ಈ ಸಾರಿ ತನ್ನ ಆಪರೇಷನ್ ಬಗ್ಗೆ ಅದೆಷ್ಟು ಅದಮ್ಯ ವಿಶ್ವಾಸದಲ್ಲಿದೆಯೆಂದರೆ, ಸಚಿವ ಸಂಪುಟದ ಪಟ್ಟಿಯೇ ತಯಾರಾಗಿ ಯಾರ್‍ಯಾರಿಗೆ ಯಾವ್ಯಾವ ಖಾತೆ ಅನ್ನೋ ಹಂಚಿಕೆಯೂ ಮುಗಿದುಹೋಗಿದೆ ಅನ್ನೋ ಲೇಟೆಸ್ಟ್ ವರ್ತಮಾನ ಕಮಲ ಪಾಳಯದಲ್ಲಿ ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ಅಲ್ಲವೋ ಗೊತ್ತಿಲ್ಲ, ಆದರೆ ವಿಧಾನಸೌಧ, ಯಡಿಯೂರಪ್ಪನವರ ನಿವಾಸ ಧವಳಗಿರಿ, ಪ್ರೆಸ್ಸ್‌ಕ್ಲಬ್, ಮಲ್ಲೇಶ್ವರಂ ಬಿಜೆಪಿ ಕಚೇರಿಯ ಆವರಣದಲ್ಲಿ ಈ ಮಾತುಕತೆಗಳು ಜೋರಾಗಿ ಚರ್ಚೆಯಲ್ಲಿವೆ.

ಆ ಚರ್ಚೆಯ ಒಟ್ಟಾರೆ ಸಾರಾಂಶ ಇಷ್ಟು. ಹೊಸ ಸರ್ಕಾರದಲ್ಲಿ ಯಡ್ಯೂರಪ್ಪನವರು ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋದು ಫಿಕ್ಸು. ಬಿ.ಎಲ್.ಸಂತೋಷ್ ಸೇರಿದಂತೆ ಬಿಜೆಪಿಯ ಒಂದು ಬಣಕ್ಕೆ ಯಡ್ಯೂರಪ್ಪ ಸಿಎಂ ಆಗೋದು ಇಷ್ಟವಿಲ್ಲ. ಅವರು ಈಗ ಸರ್ಕಾರ ರಚನೆ ಮಾಡೋದರ ಬದಲು, ಮಧ್ಯಂತರ ಚುನಾವಣೆಗೆ ಹೋಗುವ ವಾದವನ್ನು ಮುಂದೆ ಮಾಡಿದ್ದುಂಟು. ಅದಕ್ಕಾಗೆ, ಈಗ ಕೈ-ತೆನೆಗೆ ಕೈಕೊಟ್ಟು ಕಮಲ ಮುಡಿಯುತ್ತಿರುವ ಒಂದಷ್ಟು ಶಾಸಕರ ಬಿಜೆಪಿ ಸೇರ್ಪಡೆಗೆ ಈ ಬಣದಿಂದ ವಿರೋಧ ವ್ಯಕ್ತವಾದದ್ದು. ಮಧ್ಯಂತರ ಚುನಾವಣೆ ನಡೆದರೆ ಏನಿಲ್ಲವೆಂದರು 140 ರಿಂದ 150 ಸೀಟು ನಿರಾಯಾಸವಾಗಿ ಬಿಜೆಪಿ ಗೆಲ್ಲುತ್ತೆ, ಆಗ ಯಡ್ಯೂರಪ್ಪನವರ ಹಂಗು ಇರೋದಿಲ್ಲ, ಅವರನ್ನು ಪಕ್ಕಕ್ಕೆ ಸರಿಸಿ ನಮ್ಮಲ್ಲೇ ಬೇರೆ ಯಾರಾದರು ಸಿಎಂ ಆಗಬೇಕು ಅನ್ನೋದು ಅವರ ಲೆಕ್ಕಾಚಾರವಾಗಿತ್ತು. ಆದರೆ ಸದ್ಯಕ್ಕೆ ಅವರ ವಾದ ಕೈಮೇಲಾಗಿಲ್ಲ. ಹಾಗಾಗಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ.

ಇನ್ನು ಬಿಜೆಪಿ ಹೊಸ ಸರ್ಕಾರದಲ್ಲಿ ಬಿಜೆಪಿಯ 20 ಶಾಸಕರಿಗೆ ಮತ್ತು ಹೊರಗಿನಿಂದ ಬಂದ 14 ಶಾಸಕರಿಗೆ ಮಂತ್ರಿ ಭಾಗ್ಯ ಕರುಣಿಸಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀರಾಮುಲು, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಇನ್ನೂ ಮೊದಲಾದವರಿದ್ದರೆ ವಲಸಿಗ ಶಾಸಕರಲ್ಲಿ ಇಬ್ಬರು ಪಕ್ಷೇತರರನ್ನೂ ಸೇರಿಸಿ ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಹೆಸರುಗಳು ಅಂತಿಮಗೊಂಡಿವೆಯಂತೆ!

ಇನ್ನೂ ಕುತೂಹಲಕರ ಸಂಗತಿ ಅಂದ್ರೆ, ಯಡ್ಯೂರಪ್ಪನವರ ಹೊಸ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ಫಿಕ್ಸ್ ಆಗಿದೆಯಂತೆ. ಈಶ್ವರಪ್ಪ,ಆರ್.ಅಶೋಕ್ ಜೊತೆಗೆ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿನ ಅಧ್ಯಕ್ಷಗಾದಿಯಿಂದ ನೇರವಾಗಿ ಎದ್ದುಬಂದು ಕಮಲದ ‘ಗೃಹಪ್ರವೇಶ’ಗೈದಿರುವ ಬಾಂಬೆಹಕ್ಕಿ ಎಚ್.ವಿಶ್ವನಾಥ್‌ರಿಗೂ ಡಿಸಿಎಂ ಭಾಗ್ಯ ಒಲಿದು ಬಂದಿದೆ ಎನ್ನಲಾಗಿದೆ! ಇದೇವೇಳೆ ಈಶ್ವರಪ್ಪ ಮತ್ತು ವಿಶ್ವನಾಥ್ ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿರೋದ್ರಿಂದ ಒಂದೇ ಜಾತಿಗೆ ಎರಡು ಹುದ್ದೆ ಕೊಡಬಾರದೆಂಬ ಚರ್ಚೆಯೂ ಕೇಳಿಬಂದಿದ್ದು, ಈಶ್ವರಪ್ಪನವರಿಗೆ ಪ್ರಭಾವಿ ಖಾತೆಯ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನವನ್ನೂ ಬಿಟ್ಟುಕೊಟ್ಟು ಆ ಮೂರನೇ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು ಆಯ್ಕೆ ಮಾಡಬೇಕೆನ್ನುವ ಪ್ರಸ್ತಾಪ ಚರ್ಚೆಯಾಗುತ್ತಿದೆಯಂತೆ!

ಇದನ್ನು ಕೂಸು ಹುಟ್ಟುವ ಮುನ್ನ ಕುಲಾವಿ ಎನ್ನಬೇಕೋ, ಮಾಮೂಲಿ ರಾಜಕೀಯ ವದಂತಿ ಎನ್ನಬೇಕೋ ತಿಳಿಯದಾಗಿದೆ. ಒಟ್ಟಾರೆ ಬೆಳವಣಿಗೆಗಳನ್ನು ನೋಡಿದರೆ, ಕರ್ನಾಟಕಕ್ಕೊಂದು ಸ್ಥಿರ ಜನಪರ ಸರ್ಕಾರ ದೊರೆಯುವ ಲಕ್ಷಣಗಳಂತೂ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಡಿಯೂರಪ್ಪನವರ ಪರಿ ಲಜ್ಜೆಗೆಟ್ಟ ರಾಜಕೀಯ ವ್ಯಕ್ತಿ ಇನ್ನೊಬ್ಬ ಇಲ್ಲ ಅನುಕೂಲಸಿಂಧು ರಾಜಕೀಯ ನಡೆಯಿಂದ ಮೈತ್ರಿ ಸರ್ಕಾರ ಹುಟ್ಟಿಕೊಂಡು ನಡೆದುಕೊಂಡು ಹೋಗುತ್ತಿದೆ ಆದರೆ ಮುಖ್ಯಮಂತ್ರಿಯಾಗುವ ಆಗಲೇಬೇಕೆಂದು ಹೆಬ್ಬಯಕೆಯಿಂದ ಈ ರೀತಿಯಾಗಿ ನಿಂತು ಸರ್ಕಾರವನ್ನು ಬೀಳಿಸುವ ಲಜ್ಜೆಗೇಡಿ ವರ್ತನೆ ಯಡಿಯೂರಪ್ಪನಿಗೆ ಮಾತ್ರ ಸಾಧ್ಯ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...