Homeಅಂತರಾಷ್ಟ್ರೀಯಬಾಲಾಕೋಟ್ ದಾಳಿ: ಸ್ವತಂತ್ರ ಮಾಧ್ಯಮಗಳ ಸ್ಯಾಟಲೈಟ್ ಫೋಟೊ ಹೇಳುತ್ತಿರುವ ಸತ್ಯವೇನು ಗೊತ್ತಾ...?

ಬಾಲಾಕೋಟ್ ದಾಳಿ: ಸ್ವತಂತ್ರ ಮಾಧ್ಯಮಗಳ ಸ್ಯಾಟಲೈಟ್ ಫೋಟೊ ಹೇಳುತ್ತಿರುವ ಸತ್ಯವೇನು ಗೊತ್ತಾ…?

- Advertisement -

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಇ-ಮೊಹ್ಮದ್ (ಜೆಇಎಂ) ಭಯೋತ್ಪಾದನಾ ಸಂಘಟನೆ ಮೇಲೆ ನಡೆಸಿದ ಏರ್‌ಸ್ಟ್ರೈಕ್ ದಾಳಿಗೆ ಸಂಬಂಧಿಸಿದ ಮಾಹಿತಿಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ದಾಳಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುವ ರಾಯಿಟರ್ಸ್ ಸುದ್ದಿ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸ್ಥಳೀಯ ಪ್ರತ್ಯಕ್ಷದರ್ಶಿಗಳ ಸಂದರ್ಶನದಲ್ಲಿ, ಅಬ್ದುರ್ ರಶೀದ್ ಎಂಬ ವ್ಯಾನ್ ಡ್ರೈವರ್ “ಬೆಳಗಿನ ಜಾವದಲ್ಲಿ ಇಲ್ಲಿ ಬಾಂಬ್‌ಗಳು ಸಿಡಿದದ್ದು ನಿಜ. ನೆಲ ಒಂದು ಕ್ಷಣ ಅದುರಿದಂತಾಯ್ತು. ಆದರೆ ಯಾರೊಬ್ಬರೂ ಸತ್ತಿಲ್ಲ. ಒಂದಷ್ಟು ಪೈನ್ ಮರಗಳು ಬುಡಸಮೇತ ನೆಲಕ್ಕುರುಳಿವೆ. ಜೊತೆಗೆ ಒಂದು ಕಾಗೆ ಸತ್ತು ಬಿದ್ದಿತ್ತು ಅಷ್ಟೆ. ಅದನ್ನು ಬಿಟ್ಟರೆ ಮನುಷ್ಯರ್‍ಯಾರೂ ಸತ್ತಿಲ್ಲ” ಎಂದು ಹೇಳಿದ್ದಾನೆಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

- Advertisement -

ಆರಂಭದಲ್ಲಿ ಭಾರತೀಯ ಮೀಡಿಯಾಗಳು ಏರ್‌ಸ್ಟ್ರೈಕ್‌ನಿಂದ 300ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದವು. ಆದರೆ ಪತ್ರಿಕಾಗೋಷ್ಠಿ ನಡೆಸಿದ ಸೇನಾ ಅಧಿಕಾರಿಗಳು “ಈಗಲೇ ದಾಳಿಯ ಫಲಿತಾಂಶ ಹೇಳುವುದು ಅವಧಿಪೂರ್ವ ಹೇಳಿಕೆಯಾಗುತ್ತದೆ. ಆದರೆ ನಾವು ಅಂದುಕೊಂಡದ್ದನ್ನು ಸಾಧಿಸಿದ್ದೇವೆ” ಎಂದಷ್ಟೇ ಹೇಳಿ ಸಾವಿನ ಸಂಖ್ಯೆಯನ್ನು ನಿಗೂಢವಾಗಿಸಿದರು. ಆಮೇಲೆ ‘ದಾಳಿ ಮಾಡುವುದಷ್ಟೇ ನಮ್ಮ ಕೆಲಸ, ಸಾವು-ನಷ್ಟವನ್ನು ಲೆಕ್ಕ ಹಾಕೋದು ಸರ್ಕಾರಕ್ಕೆ ಬಿಟ್ಟದ್ದು’ ಎಂಬ ಹೇಳಿಕೆಯೂ ಸೇನಾ ವಲಯದಿಂದ ಹೊರಬಂತು. ಆನಂತರ ಕೇಂದ್ರ ಐಟಿ ಖಾತೆಯ ರಾಜ್ಯಖಾತೆ ಸಚಿವ ಆಹ್ಲುವಾಲಿಯಾ “ಮೋದಿಯವರಾಗಲಿ, ಬಿಜೆಪಿ ವಕ್ತಾರರಾಗಲಿ ಎಲ್ಲಾದರು 300 ಉಗ್ರರು ಹತರಾಗಿದ್ದಾರೆ ಎಂದು ಹೇಳಿದ್ದಾರಾ? ಅಮಿತ್ ಶಾ ಹೇಳಿದ್ದಾರಾ? ಮೀಡಿಯಾಗಳು ಹಾಗೆ ಹೇಳ್ತಿವಿ ಅಷ್ಟೆ. ನಮಗೂ ಸತ್ಯ ತಿಳಿದುಕೊಳ್ಳುವ ಕಾತರ ಇದೆ. ಆದರೆ ಬಾಂಬ್ ಸರಿಯಾದ ಟಾರ್ಗೆಟ್‌ನಲ್ಲಿ ಬಿದ್ದಿದೆಯಾ ಇಲ್ಲವಾ ಗೊತ್ತಿಲ್ಲ? ಅಂತಾರಾಷ್ಟ್ರೀಯ ಮೀಡಿಯಾಗಳು ಟಾರ್ಗೆಟ್ ಮಿಸ್ ಆಗಿದೆ, ಒಂದೂ ಸಾವು ಆಗಿಲ್ಲ ಎಂದು ಹೇಳುತ್ತಿವೆ. ನಮಗೂ ಸ್ಪಷ್ಟವಾಗಿ ಗೊತ್ತಿಲ್ಲ” ಎನ್ನುವ ಮೂಲಕ ಗೊಂದಲವನ್ನು ಹೆಚ್ಚಿಸಿದರು. ಅದಾದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ “ಗುಜರಾತ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ವಾಯುದಾಳಿಯಿಂದ 250ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ” ಎಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಬಾಲಕೋಟ್ ದಾಳಿಯನ್ನು ಬಿಜೆಪಿಯ ಚುನಾವಣಾ ಪ್ರಚಾರದ ವಿಷಯವನ್ನಾಗಿ ಅಧಿಕೃತವಾಗಿ ಆ ಪಕ್ಷದ ಅಧ್ಯಕ್ಷರೇ ಒಪ್ಪಿಕೊಂಡಂತಾಗಿದೆ. ಇಂಥಾ ಒಟ್ಟಾರೆ ಗೊಂದಲದ ಹೇಳಿಕೆಗಳಿಂದಾಗಿ ನಿಜಕ್ಕೂ ಬಾಲಕೋಟ್‌ನ ದಾಳಿ ಯಶಸ್ವಿಯಾಗಿದೆಯೇ? ಉಗ್ರರು ಸತ್ತಿದ್ದಾರೆಯೇ? ಎಂಬ ಕುತೂಹಲ ಜನಸಾಮಾನ್ಯರಲ್ಲಿ ಹೆಚ್ಚಾಗುತ್ತಲೇ ಇದೆ.

ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ದಾಳಿ ನಡೆಸಿದ ದಿನದಿಂದಲೂ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಾದ ಬಿಬಿಸಿ ಮತ್ತು ರಾಯಿಟರ್ಸ್ ನಂತಹ ಸಂಸ್ಥೆಗಳು ತಮ್ಮ ವರದಿಗಾರರ ಮೂಲಕ ದಾಳಿ ನಡೆದ ವಸ್ತುಸ್ಥಿತಿಯನ್ನು ಕಟ್ಟಿಕೊಡುತ್ತಲೇ ಬಂದಿವೆ. ಸ್ಥಳೀಯ ನಾಗರಿಕ ಪ್ರತ್ಯಕ್ಷದರ್ಶಿಗಳನ್ನು ಸಂದರ್ಶನ ಮಾಡಿ ಬಾಲಾಕೋಟ್‌ನ ಹಿನ್ನೆಲೆಯನ್ನು ಬಿಚ್ಚಿಟ್ಟಿವೆ. ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಅಲ್ಲಿ ಯಾವುದೇ ಭಯೋತ್ಪಾದಕ ತರಬೇತಿ ಶಿಬಿರಗಳಿಲ್ಲ. ಆದರೆ ಜೈಶ್-ಇ-ಮೊಹ್ಮದ್ ಸಂಘಟನೆ ಅಲ್ಲೊಂದು ಮದರಸಾವನ್ನು ನಡೆಸುತ್ತಿದೆ. ಅಲ್ಲಿ ಮಕ್ಕಳು ಕಲಿಯುತ್ತಿದ್ದಾರಂತೆ. ಬಹುಶಃ ಆ ಮದರಸಾ ಉಗ್ರ ಚಟುವಟಿಕೆಯ ತಾಣವಾಗಿರುವ ಸಾಧ್ಯತೆಯ ಮಾಹಿತಿ ಕಲೆಹಾಕಿದ ವಾಯುಸೇನೆ ಅದನ್ನೇ ತನ್ನ ಟಾರ್ಗೆಟ್ ಆಗಿ ದಾಳಿ ನಡೆಸಿರುವ ಸಾಧ್ಯತೆಯೂ ಇದೆ.

ಆದರೆ ವಾಯುಸೇನೆಯ ದಾಳಿಯಿಂದ ಆ ಮದರಸಾ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ರಾಯಿಟರ್ಸ್  ಸುದ್ದಿಸಂಸ್ಥೆಯು ಏಪ್ರಿಲ್ 2018ಕ್ಕೂ ಮುಂಚೆ ತೆಗೆದಿದ್ದ ಹಾಗೂ ದಾಳಿ ನಡೆದ ನಂತರ ತೆಗೆದ ಮದರಸಾದ ಸ್ಯಾಟಲೈಟ್ ಫೋಟೊಗಳನ್ನು ಹೋಲಿಕೆ ಮಾಡಿ ಹೇಳುತ್ತಿದೆ. ಹಳೆಯ ಸ್ಯಾಟಲೈಟ್ ಚಿತ್ರದಲ್ಲಿ ಮದರಸಾ ಕಟ್ಟಡ ಯಾವ ಸ್ಥಿತಿಯಲ್ಲಿತ್ತೋ ದಾಳಿ ನಂತರದ ಸ್ಯಾಟಲೈಟ್ ಫೋಟೊದಲ್ಲೂ ಅದೇ ಸ್ಥಿತಿಯಲ್ಲಿದೆ ಎಂದು ಹೇಳಿದೆ. ಅಂದಹಾಗೆ ಈ ಸ್ಯಾಟಲೈಟ್ ಫೋಟೊಗಳನ್ನು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಅಂತರಿಕ್ಷ ನಿರ್ವಹಣಾ ಸಂಸ್ಥೆಯಾದ ‘ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್’ ಸೆರೆಹಿಡಿದಿದೆ. ಇವು ಹೈ ರೆಸಲ್ಯೂಷನ್ ಫೋಟೊಗಳಾಗಿದ್ದು, 72 ಸೆಂ.ಮೀ ಉದ್ದದ ರಚನೆಯನ್ನೂ ಸ್ಪಷ್ಟವಾಗಿ ತೋರಿಸಬಲ್ಲವಾಗಿವೆ.

ದಾಳಿಯ ನಂತರ ತೆಗೆಯಲಾದ ಮದರಸಾದ ಸ್ಯಾಟಲೈಟ್ ಫೋಟೊದಲ್ಲಿ ವಾಯುದಾಳಿ ನಡೆದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಲಕ್ಷಣಗಳಾದ ಕಟ್ಟದ ಮೇಲ್ಛಾವಣಿಯಲ್ಲಿ ಗೋಚರ ರಂಧ್ರಗಳಾಗಲಿ, ಛಿದ್ರಗೊಂಡ ಗೋಡೆಗಳಾಗಲಿ ಅಥವಾ ಸುತ್ತಮುತ್ತ ಮರಗಳು ಮುರಿದುಬಿದ್ದ ಕುರುಹುಗಳಾಗಲಿ ಇಲ್ಲ. ಮೊದಲಿದ್ದ ಸ್ಥಿತಿಯಲ್ಲೇ ಇವೆ ಎಂದು ಹೇಳಿದೆ. ಅಲ್ಲದೇ, ಈ ಫೋಟೊಗಳನ್ನು ಭಾರತೀಯ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳಿಗೆ ರವಾನಿಸಿ, ‘ದಾಳಿಯ ಲಕ್ಷಣಗಳು ಇಲ್ಲಿ ಕಾಣಿಸುತ್ತಿಲ್ಲ, ಇದಕ್ಕೆ ನಿಮ್ಮ ಉತ್ತರವೇನು?’ ಎಂದು ಕೆಲ ದಿನಗಳಿಂದ ಪ್ರಶ್ನೆ ಕೇಳಿದಾಗ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಈಗ ಅದು ತನ್ನ ವರದಿಯನ್ನು ಪ್ರಕಟಿಸಿದೆ.

ಮಿಡ್ಲ್‌ಬರಿ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯಲ್ಲಿ ಪೂರ್ವ-ಏಷ್ಯಾ ನಾನ್-ಪ್ರಾಲಿಫಿರೇಷನ್ ಪ್ರಾಜೆಕ್ಟ್‌ನ ನಿರ್ದೇಶಕರಾಗಿರುವ ಜೆಫ್ರಿ ಲೀವಿಸ್ ಅವರು ರಾಯಿಟರ್ಸ್ ಸಂಸ್ಥೆಗೆ ಪ್ಲ್ಯಾನೆಟ್ ಲ್ಯಾಬ್ಸ್ ನೀಡಿರುವ ಸ್ಯಾಟಲೈಟ್ ಚಿತ್ರಗಳನ್ನು ಅಧ್ಯಯನ ಮಾಡಿ “ಈ ಹೈ ರೆಸೊಲ್ಯೂಷನ್ ಚಿತ್ರಗಳಲ್ಲಿ ಬಾಂಬ್ ದಾಳಿಯಿಂದಾದ ಯಾವ ಹಾನಿಯೂ ಕಾಣುತ್ತಿಲ್ಲ” ಎಂದಿದ್ದಾರೆ. ಶಸ್ತ್ರಾಸ್ತ್ರ ತಾಣಗಳ ಸ್ಯಾಟಲೈಟ್ ಚಿತ್ರಗಳ ಅಧ್ಯಯನದಲ್ಲಿ ಹದಿನೈದು ವರ್ಷಗಳ ಅನುಭವ ಅವರಿಗಿದೆ.

ವಾಯುದಾಳಿಯಲ್ಲಿ ಯಾವ ಶಸ್ತ್ರಗಳನ್ನು (ಬಾಂಬ್) ಬಳಸಿದೆ ಎಂದು ಸರ್ಕಾರ ಅಧಿಕೃತವಾಗಿ ಎಲ್ಲೂ ಹೇಳಿಲ್ಲವಾದರೂ 1,000 ಕೆಜಿ ತೂಕದ ಬಾಂಬ್‌ಗಳನ್ನು ಹೊತ್ತ 12 ಮಿರೇಜ್ 2000 ಜೆಟ್‌ಗಳು ದಾಳಿಯನ್ನು ನಡೆಸಿದ್ದವು ಎಂದು ಮೂಲಗಳು ತನಗೆ ತಿಳಿಸಿದ್ದಾಗಿ ಹೇಳಿಕೊಂಡಿರುವ ರಾಯಿಟರ್ಸ್ ಸುದ್ದಿಸಂಸ್ಥೆ; ಮಂಗಳವಾರ, ಮತ್ತೊಬ್ಬ ರಕ್ಷಣಾ ಅಧಿಕಾರಿ 2,000 ಎಲ್‌ಬಿ ಇಸ್ರೇಲ್ ನಿರ್ಮಿತ SPICE 2000 ಗ್ಲೈಡ್ ಬಾಂಬ್‌ಗಳನ್ನು ದಾಳಿಯಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದೆ.

ಈ ಎರಡರಲ್ಲಿ ಯಾವುದೇ ಗಾತ್ರದ ಬಾಂಬ್ ಬಳಸಿದ್ದರೂ ಅವು ಸದೃಢ ಕಾಂಕ್ರೀಟ್ ಕಟ್ಟಡಗಳನ್ನು ಛಿದ್ರ ಮಾಡಬಲ್ಲಷ್ಟು ಸದೃಢವಾದವು ಎಂದು ಲೀವೀಸ್ ಹಾಗೂ ಅವರ ಜೊತೆಗೂಡಿ ಸ್ಯಾಟಲೈಟ್ ಚಿತ್ರಗಳನ್ನು ಅಧ್ಯಯನ ನಡೆಸಿದ ಜೇಮ್ಸ್ ಮಾರ್ಟಿನ್ ಸೆಂಟರ್‌ನ ಸೀನಿಯರ್ ರಿಸರ್ಚ್ ಅಸೋಸಿಯೇಟ್ ಆದ ಡೇವ್ ಸ್ಕ್ಮೆರ್ಲರ್, ಅಭಿಪ್ರಾಯ ಪಟ್ಟಿದ್ದಾರೆ.

“ಒಂದುವೇಳೆ, ವಾಯುದಾಳಿ ಯಶಸ್ವಿಯಾಗಿ ತನ್ನ ಟಾರ್ಗೆಟ್ ತಲುಪಿದ್ದರೆ, ನನಗೆ ಮಾಹಿತಿ ನೀಡಲಾಗಿರುವ ಶಸ್ತ್ರಗಳ ಬಳಕೆಯಿಂದ (ಬಾಂಬ್) ಖಂಡಿತವಾಗಿ ಕಟ್ಟಡಗಳಲ್ಲಿ ಹಾನಿಯ ಲಕ್ಷಣಗಳು ಗೋಚರಿಸಲೇಬೇಕು. ಆದರೆ ಅಂತಹ ಲಕ್ಷಣಗಳ್ಯಾವುವೂ ನನಗೆ ಫೋಟೊಗಳಲ್ಲಿ ಗೋಚರಿಸಿಲ್ಲ” ಎಂದು ಲೀವೀಸ್ ತಮ್ಮ ಅಭಿಪ್ರಾಯವನ್ನು ರಾಯಿಟರ್ಸ್  ಸುದ್ದಿಸಂಸ್ಥೆ ಜೊತೆಗೆ ಹಂಚಿಕೊಂಡಿದ್ದಾರೆ.

“ಭಾರತೀಯ ದಾಳಿಯಿಂದಾಗಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ಹಾನಿಯೂ ಆಗಿಲ್ಲ, ಯಾವೊಬ್ಬ ವ್ಯಕ್ತಿಯ ಜೀವವೂ ಹೋಗಿಲ್ಲ” ಎಂದು ಪಾಕಿಸ್ತಾನದ ಮಿಲಿಟರಿ ಪ್ರೆಸ್‌ ವಿಂಗ್ ಡೈರೆಕ್ಟರ್ ಜನರಲ್ ಆದ ಮೇಜರ್ ಜನರಲ್ ಆಸೀಫ್ ಗಫೂರ್ ತನಗೆ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿರುವ ರಾಯಿಟರ್ಸ್ ‘ಭಾರತೀಯ ವಿಮಾನಗಳ ಅತಿಕ್ರಮಣ ತಿಳಿಯುತ್ತಿದ್ದಂತೆಯೇ ನಮ್ಮ ವಾಯುಸೇನೆ ಪ್ರತಿದಾಳಿ ನಡೆಸಿದ್ದರಿಂದ ನಿರ್ಜನ ಗುಡ್ಡದ ಮೇಲೆ ಬಾಂಬ್‌ಗಳನ್ನು ಸುರಿಸಿ ಅವು ವಾಪಾಸಾಗಿವೆ. ಹಾಗಾಗಿ ಇದು ವಿಫಲ ಯತ್ನ’ಎಂದು ಪಾಕಿಸ್ತಾನ ಆರಂಭದಿಂದಲೂ ಹೇಳಿಕೊಂಡು ಬಂದಿರುವ ವಾದವನ್ನು ತನ್ನ ಈ ಸ್ಯಾಟಲೈಟ್ ಫೋಟೊ ವಿಶ್ಲೇಷಣೆ ಜೊತೆಗೆ ತುಲನೆ ಮಾಡಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ರಾಯಿಟರ್ಸ್ ಸಂಸ್ಥೆಯ ವರದಿಗಾರರು ಬಾಲಾಕೋಟ್ ತಾಲ್ಲೂಕು (ತೆಹಸಿಲ್) ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಜಿಯಾ ಉಲ್ ಹಕ್ ಹಾಗೂ ದಾಳಿ ನಡೆದ ಸ್ಥಳಕ್ಕೆ ಸನಿಹದಲ್ಲಿರುವ ಜಬಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮೊಹ್ಮದ್ ಸಾಧಿಕ್‌ರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದು, ಅವರಿಬ್ಬರೂ ಹೇಳುವ ಪ್ರಕಾರ ದಾಳಿ ನಡೆದ ನಂತರದಲ್ಲಿ ಯಾವುದೇ ಬಗೆಯ ಶಸ್ತ್ರಾಸ್ತ್ರ ದಾಳಿಯ ಗಾಯಾಳುಗಳು ದಾಖಲಾಗಿಲ್ಲ ಮತ್ತು ಸಾವನ್ನಪ್ಪಿಲ್ಲ!

ಒಟ್ಟಿನಲ್ಲಿ ಸರ್ಕಾರ ಅಧಿಕೃತವಾಗಿ ವಾಯುದಾಳಿಯ ಸಫಲತೆ ಅಥವಾ ವೈಫಲ್ಯದ ವಿವರ ನೀಡುವವರೆಗೆ, ಸಾವು-ಹಾನಿಯ ನಿಖರ ಮಾಹಿತಿಗಳನ್ನು ಹಂಚಿಕೊಳ್ಳುವವರೆಗೆ ಯಾವುದೂ ಸ್ಪಷ್ಟವಾಗುವುದಿಲ್ಲ. ಆದರೆ ಸರ್ಕಾರ ಈ ವಿಚಾರದಲ್ಲಿ ಮೌನ ಮುರಿದು ಮಾತನಾಡುತ್ತಿಲ್ಲ. ಬದಲಿಗೆ ಬಿಜೆಪಿಯ ನಾಯಕರುಗಳು (ಅಧ್ಯಕ್ಷ ಅಮಿತ್ ಶಾ ಸೇರಿದಂತೆ) ತಮ್ಮ ಪಕ್ಷದ ಚುನಾವಣಾ ಪ್ರಚಾರ ವೇದಿಕೆಗಳಿಂದ ದಿನಕ್ಕೊಂದು ಅಂಕಿಅಂಶಗಳನ್ನು ಹೇಳಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ನಿಜಕ್ಕೂ ಮೋದಿಯವರ ಸರ್ಕಾರಕ್ಕೆ ಸೇನಾ ಕಾರ್ಯಾಚರಣೆ ಹಾಗೂ ದೇಶದ ಭದ್ರತಾ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರಾಲೋಚನೆ ಇಲ್ಲವಾಗಿದ್ದೇ ಆದಲ್ಲಿ ಆದಷ್ಟು ಬೇಗ ದಾಳಿಯ ವಿವರವನ್ನು, ಅಂಕಿಅಂಶಗಳನ್ನು ಹೊರಗೆಡವಿ ಎಲ್ಲಾ ಗೊಂದಲಗಳಿಗೆ ಅಂತ್ಯವಾಡಬೇಕು. ಹಾಗೆ ಮಾಡದಿದ್ದರೆ, ಬಿಜೆಪಿ ಇದನ್ನು ವ್ಯವಸ್ಥಿತವಾಗಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಅವರೇ ಒಪ್ಪಿಕೊಂಡಂತಾಗುತ್ತೆ.

ರಾಯಿಟರ್ಸ್ ಸಂಸ್ಥೆ ಈ ಅಂಶವನ್ನು ಹೊರಹಾಕುತ್ತಿದ್ದಂತೆಯೇ ಭಾರತೀಯ ಟಿವಿ ಮಾಧ್ಯಮಗಳಲ್ಲಿ ಇನ್ನೊಂದು ಬಗೆಯ ಚರ್ಚೆ ಶುರುವಾಗಿದೆ. ಮದರಸ ಕಟ್ಟಡದ ಮೇಲ್ಛಾವಣಿಯಲ್ಲಿರುವ ರಂಧ್ರಗಳು ನಿರ್ದಿಷ್ಟವಾಗಿ ವಾಯುಸೇನೆಯ ದಾಳಿಯಿಂದಲೆ ಆದ ಕುರುಹುಗಳಾಗಿದ್ದು ದಾಳಿಯ ಶೇ.80ರಷ್ಟು ಬಾಂಬ್ ಗಳು ಗುರಿಮುಟ್ಟಿವೆ ಎಂದು ಹೇಳಲಾಗುತ್ತಿದೆ. ದಾಳಿಗೆ ಬಳಸಲಾದ ಬಾಂಬ್ ಗಳು ಗ್ಲೈಡಿಂಗ್ ಪೆನೆಟ್ರೇಟಿವ್ ಬಾಂಬ್ ಗಳಾದ್ದರಿಂದ ಅವು ಯಾವುದೇ ಘನ ಮೇಲ್ಮೇ ಸ್ಪರ್ಶವಾದ ತಕ್ಷಣ ಸ್ಫೋಟಿಸದೆ ಒಂದಷ್ಟು ಆಳಕ್ಕೆ ನುಗ್ಗಿ ನಂತರ ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿದವು ಎನ್ನುವುದು ಈ ಚರ್ಚೆಯ ಮೂಲ ಅಂಶ. ಹಾಗಾಗಿ ಬಾಂಬ್ ಗಳು ಕಟ್ಟಡವನ್ನು ಧ್ವಂಸಗೊಳಿಸದೆ ಒಳಹೊಕ್ಕು, ಸ್ಫೋಟಿಸಿ ಅಲ್ಲಿರುವ ಉಗ್ರರನ್ನು ಕೊಂದಿವೆ ಎನ್ನಲಾಗುತ್ತಿದೆ.

ಇಲ್ಲು ಸಹಾ ಒಂದು ಗೊಂದಲವಿದೆ. ಬಾಂಬುಗಳು ಪೆನೆಟ್ರೇಟಿವ್ ಅನ್ನೋದೇನೊ ನಿಜ. ಮೇಲ್ಛಾವಣಿಯಲ್ಲಿ ಸ್ಫೋಟಿಸದೆ ಆಳಕ್ಕಿಳಿದು ಸ್ಫೋಟಿಸಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದರೆ, ಹಾಗೆ ಸ್ಫೋಟಿಸಿದ ನಂತರವಾದರು ಕಟ್ಟಡ ಛಿಧ್ರಗೊಳ್ಳಬೇಕಲ್ಲವೇ? ಯಾಕೆಂದರೆ ಮುನ್ನೂರು ಜನರನ್ನು ಕೊಲ್ಲುವ ಸ್ಫೋಟವೆಂದರೆ ಅದು ಸಣ್ಣ ಪ್ರಮಾಣದ್ದೇನಲ್ಲ. ಮನೆಯೊಳಗಿನ ಸಿಲಿಂಡರ್ ಸಿಡಿದರೇನೆ ಮಧ್ಯಮ ಗಾತ್ರದ ಮನೆಗಳು ಉರುಳಿಬಿದ್ದು ಛಿದ್ರಗೊಳ್ಳುತ್ತವೆ. ಅಂತದ್ದರಲ್ಲಿ 1000 ಕೆಜಿ ಸಾಮರ್ಥ್ಯದ ಬಾಂಬ್ ಎಷ್ಟೇ ಆಳಕ್ಕಿಳಿದು ಸ್ಫೋಟಿಸಿದರು ಮೇಲ್ಮೇ ಅಸ್ತವ್ಯಸ್ತವಾಗಲೇಬೇಕಲ್ಲ. ಕಟ್ಟಡವನ್ನು ಸುರಕ್ಷಿತವಾಗಿಟ್ಟು ಕೇವಲ ಮನುಷ್ಯರನ್ನಷ್ಟೇ ಆಯ್ದು ಕೊಲ್ಲುವಂತಹ `ಪ್ರಜ್ಞಾವಂತ’ ಬಾಂಬುಗಳಿನ್ನೂ ಅನ್ವೇಷಣೆಯಾಗದ ಕಾರಣ ಈ ಅನುಮಾನಕ್ಕೂ ತೂಕವಿದೆ. ಮೇಲ್ಛಾವಣಿಯ ರಂಧ್ರಗಳು ದಾಳಿಯ ಸಾಫಲ್ಯತೆಯನ್ನು ಸಾರುತ್ತವೆಯೇ ಇಲ್ಲವೇ? ಎನ್ನುವ ಚರ್ಚೆ ಮತ್ತಷ್ಟು ಗಂಭೀರಗೊಂಡು, ಇನ್ನಷ್ಟು ಮಾಹಿತಿಗಳು ತಿಳಿದು ಬಂದ ನಂತರ `ಪತ್ರಿಕೆ’ ಮತ್ತಷ್ಟು ಅಪ್ಡೇಟ್ ಗಳನ್ನು ಓದುಗರ ಮುಂದಿರಿಸಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...