ದೇಶ ಕಂಡ ಮೊದಲ ಕೋಮುದಂಗೆ ಮತ್ತು ತಿಲಕರ ಗಣೇಶ ಉತ್ಸವ

0

 ಪರಿಮಳಾ ವಾರಿಯರ್ |
ಎಲ್ಲರಿಗೂ ತಿಳಿದಂತೆ ಭಾರತ ವೈವಿಧ್ಯಮಯ ಸಂಸ್ಕøತಿ ಸಂಪ್ರದಾಯಗಳ ನಾಡು. ಸಾವಿರಾರು ಪರಂಪರೆಗಳು ಒಟ್ಟಾಗಿ ಸೇರಿದರೆ ಅದು ಭಾವೈಕ್ಯತೆಯ ಭಾರತ. ಈ ಬಹುಸಂಸ್ಕøತಿಯ ದೇಶವನ್ನು ತಮ್ಮದೇ ಪ್ರತ್ಯೇಕ ಏಕ ಸಂಸ್ಕøತಿಯೊಳಗೆ ತಂದು ಕಟ್ಟಿಹಾಕಲು ಕಾಲದಿಂದಲೂ ಸನಾತನ ಸಂಪ್ರದಾಯವಾದಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಅವುಗಳಲ್ಲಿ ಬಹುಪಾಲು ಪ್ರಯತ್ನಗಳು ಹೀನಾಯವಾಗಿ ಸೋತಿದ್ದರೆ, ಬಹಳಷ್ಟು ಪ್ರಯತ್ನಗಳಲ್ಲಿ ಅವರು ಗೆದ್ದೂ ಇದ್ದಾರೆ. ಈ ಪ್ರಯತ್ನಗಳ ಸೋಲುಗೆಲುವುಗಳ ಒಟ್ಟು ಸಂಕಲನವೇ ಇವತ್ತಿನ ಗಾಯಗೊಂಡ ಭಾರತೀಯ ಸಮಾಜ. ಈ ಪ್ರಯತ್ನಗಳಲ್ಲಿ ಪ್ರಮುಖವಾದ ಸನಾತನವಾದಿಗಳ ಪ್ರಯತ್ನವೊಂದು ದೊಡ್ಡಮಟ್ಟದಲ್ಲಿ ಇವತ್ತಿಗೂ ದೇಶದೆಲ್ಲೆಡೆ ಆಚರಣೆಯಲ್ಲಿದೆ. ಅದು ಗಣೇಶೋತ್ಸವ. ಗಣೇಶನ ಹಬ್ಬ ಬಂತೆಂದರೆ ಎಲ್ಲೆಡೆಯಿಂದ ಇದು ‘ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರನ್ನು ಸಂಘಟಿಸಲು ಶುರುಮಾಡಿದ ದೈವೋತ್ಸವ’ ಎಂಬ ಮಾತು ಕೇಳಿ ಬರುತ್ತದೆ. ಮತ್ತಿದು ಗಣೇಶೋತ್ಸವಗಳ ಆಚರಣೆಗೆ ಜನರು ನಂಬಿರುವ ಅತ್ಯಂತ ಜನಪ್ರಿಯ ವಾದವೂ ಹೌದು. ಆದರೆ ಒಂಚೂರು ಒಳಗಿಳಿದು ನೋಡಿದರೆ ಈ ವಾದಕ್ಕೆ ತಲೆಬುಡ ಎರಡೂ ಇಲ್ಲದಿರುವುದು ಕಂಡುಬರುತ್ತದೆ.
ಅಸಲಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೂ ತಿಲಕರು ಪ್ರಾರಂಭಿಸಿದರೆಂದು ನಂಬಲಾಗಿರುವ ಸಾರ್ವಜನಿಕ ಗಣೇಶೋತ್ಸವ ಆಚರಣೆಗೂ ಒಂದಕ್ಕೊಂದು ಸಂಬಂಧವಿಲ್ಲ. ಬ್ರಿಟಿಶರ ವಿರುದ್ಧ ಹೋರಾಡಲು ಜನ ಸಂಘಟನೆ, ಸ್ವಾತಂತ್ರ್ಯದ ಅವಶ್ಯಕತೆ ಮತ್ತು ಕೆಚ್ಚೆದೆಯ ಹೋರಾಟಗಳು ಬೇಕಿದ್ದವೇ ಹೊರತು ಸಾರ್ವಜನಿಕ ದೇವರ ಉತ್ಸವಗಳಲ್ಲ. ದೇವರ ಉತ್ಸವ ಮಾಡಿದರೆ ಬ್ರಿಟಿಶರು ನಮಗೆ ಸೋತು ಶರಣಾಗಿ ದೇಶ ಬಿಟ್ಟು ಹೋಗುತ್ತಾರೆಂದು ನಂಬುವುದು ಅತ್ಯಂತ ಬಾಲಿಶ. ಹಾಗಾದರೆ ಈ ಸಾರ್ವಜನಿಕ ಗಣೇಶೋತ್ಸವಗಳು ಯಾವ ಕಾರಣಕ್ಕಾಗಿ ಪ್ರಾರಂಭವಾಯಿತು. ಅದನ್ನು ನಿಜಕ್ಕೂ ಪ್ರಾರಂಭಿಸಿದ್ದು ಯಾರು? ಅದನ್ನು ಹೈಜಾಕ್ ಮಾಡಿದವರಾರು, ನಂತರ ಧರ್ಮೋತ್ಥಾನದ ಹೆಸರಿನಲ್ಲಿ ನಡೆದ ಈ ಆಚರಣೆಗೆ ಸ್ವಾತಂತ್ರ್ಯ ಹೋರಾಟದ ಪಾಲಿಶ್ ಬಳಿದದ್ದೇಕೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ನಾವು ಈ ದೇಶ ಕಂಡ ಮೊಟ್ಟಮೊದಲ ಕೋಮುಗಲಭೆಯ ಬಗ್ಗೆ ತಿಳಿಯಬೇಕು. ಅದು 18ನೇ ಶತಮಾನದ 1893ರಲ್ಲಿ ಮುಂಬೈ ಮತ್ತು ಪುಣೆಯಲ್ಲಿ ನಡೆದ ಅತ್ಯಂತ ಬರ್ಬರ ಹಿಂದೂ-ಮುಸ್ಲಿಂ ಕೋಮುಗಲಭೆ. ಇದೊಂದು ಕೋಮುಗಲಭೆ ಅಲ್ಲಿಯವರೆಗೆ ಮನೆಯೊಳಗೆ ಖಾಸಗಿಯಾಗಿ ನಡೆದುಹೋಗುತ್ತಿದ್ದ ಗಣೇಶನ ಹಬ್ಬವನ್ನು ಬೀದಿಬೀದಿಯ ಪೆಂಡಾಲ್‍ಗಳಲ್ಲಿ ತಂದು ಸಾರ್ವಜನಿಕವಾಗಿ ಪ್ರತಿಷ್ಟಾಪಿಸಿತು.
18ನೇ ಶತಮಾನದಲ್ಲಿ ಮುಂಬೈನ 8 ಲಕ್ಷದ ಜನಸಂಖ್ಯೆಯಲ್ಲಿ 60 ಪ್ರತಿಶತದಷ್ಟು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದೂಗಳೇ. ಆ ನಂತರ ಸ್ಥಾನದಲ್ಲಿ 18 ಪ್ರತಿಶತ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಸೌಹಾರ್ದಯುತವಾಗಿ ಬದುಕಿ ಬಾಳುತ್ತಿದ್ದರು. ಹತ್ತಿಗಿರಣಿ ಮತ್ತು ಮಗ್ಗದ ಕಾರ್ಖಾನೆಗಳು ಹೆಚ್ಚಿದ್ದ ಮುಂಬೈನ ಚಕ್ಲಾ, ಉಮರ್‍ಖಂಡಿ, ನಾಗಪಾಡ, ಕಾರ ತಲಾವ್ ಬೈಕುಲಾ, ತಾಳವಾಡಿ, ಮಳಗಾಂವ್, ಪರೇಲ್ ವರ್ಲಿ ಈ ಭಾಗಗಳಲ್ಲಿ ಪ್ರದೇಶಗಳಲ್ಲಿ ಮುಸ್ಲಿಮರ ಕಾರ್ಮಿಕರ ಜನವಸತಿ ಹೆಚ್ಚಿತ್ತು. ಹತ್ತಿಗಿರಣಿ ಮಗ್ಗದ ಕಾರ್ಖಾನೆಗಳೇ ಈ ಜನರ ಬಹುಮುಖ್ಯ ಉದ್ಯೋಗವಾಗಿತ್ತು. ಇದೇ ಸಮಯದಲ್ಲಿ ಗುಜರಾತಿನ ‘ಪ್ರಭಾಸ್‍ಪಟ್ಟಣ’ವೆಂಬ ಹಿಂದೂಗಳ ಧಾರ್ಮಿಕ ಕ್ಷೇತ್ರವೊಂದರಲ್ಲಿ ಮುಸ್ಲಿಮರು ಗೋಹತ್ಯೆ ಮಾಡಿದ್ದಾರೆಂದು ಪುಕಾರು ಶುರುವಾಯಿತು. ಅಲ್ಲಿ ಶುರುವಾದ ಧಾರ್ಮಿಕ ವೈಮನಸ್ಸಿನ ಗಲಾಟೆಗಳು ಗುಜರಾತ್ ಪಕ್ಕದ ಮುಂಬೈಗೂ ವ್ಯಾಪಿಸಿತು. ಇದಕ್ಕೂ ಮೊದಲು 1887ರ ಮುಂಬೈನಲ್ಲಿ ‘ಗೋರಕ್ಷಕ ಸಬಾ’ಎಂಬ ಪಾರ್ಸಿ ಮತ್ತು ಚಿತ್ಪಾವನ್ ಬ್ರಾಹ್ಮಣದ ನೇತೃತ್ವದ ಧಾರ್ಮಿಕ ಸಂಘಟನೆಯೊಂದು ಹುಟ್ಟಿಕೊಂಡಿತ್ತು. ಇದನ್ನು ಸ್ಥಾಪಿಸಿದ್ದ ಮಿಲ್ ಮಾಲೀಕ ‘ಮಾಣಿಕ್‍ಜೀ’ ಎಂಬಾತ ಗುಜರಾತಿನ ಪ್ರಬಾಸ್ ಪಟ್ಟಣದ ಗೋಹತ್ಯಾ ಗಲಾಟೆಯನ್ನು ಮುಂಬೈಗೂ ಎಳೆತಂದು ಮುಸ್ಲಿಮರು ಗೋವುಗಳನ್ನು ಕೊಲ್ಲುತ್ತಿದ್ದಾರೆ, ಇದನ್ನು ತಡೆಯಲು ನಾವುಗಳು ಮುಸ್ಲಿಮರನ್ನು ಮಟ್ಟಹಾಕಬೇಕೆಂದು ಗುಜರಾತಿನ ಅಹ್ಮದಾಬಾದ್, ಮಹಾರಾಷ್ಟ್ರದ ಪುಣೆ, ಬಾಂಬೆಗಳಲ್ಲಿ ಪ್ರಚೋದನಾಕಾರಿ ಭಾಷಣಸಭೆಗಳನ್ನು ಆಯೋಜಿಸಿದ. ಇದಕ್ಕೆಂದು ಪಾಂಪ್ಲೆಟ್, ಭಿತ್ತಿಪತ್ರಗಳ ಮೂಲಕ ಜನರಿಗೆ ಮುಸ್ಲಿಮರ ಗೋಹತ್ಯೆಯ ಬಗ್ಗೆ ಚಿತ್ರಗಳ ಮೂಲಕ ರೊಚ್ಚಿಗೇಳಿಸುವ ಕೆಲಸ ಮಾಡುತ್ತಿದ್ದ. ಇದಕ್ಕೆ ದನಿಗೂಡಿಸಬೇಕಿದ್ದ ಭಾರತೀಯ ಕೆಳವರ್ಗದ ಹಿಂದೂ ಕಾರ್ಮಿಕರು ಮುಸ್ಲಿಮರೊಡನೆ ಸೌಹಾರ್ದಯುತವಾಗಿ ಬದುಕುತ್ತ ಅವರ ಮೊಹರಂ ಹಬ್ಬದ ಆಚರಣೆಗಳಲ್ಲಿ ತಾವೂ ಪಾಲ್ಗೊಳ್ಳುತ್ತ ಈ ವಿಷಬಿತ್ತುವ ಭಾಷಣಗಳಿಗೆ ತಲೆಕೆಡಿಸಿಕೊಳ್ಳದೆ ಆರಾಮಾಗಿಯೇ ಇದ್ದರು. ಮೊದಲಿಗೆ ಮುಸ್ಲಿಮರ ಮೊಹರ್ರಂ ಆಚರಣೆಗಳಲ್ಲಿ ಭಾಗಿಯಾಗುತ್ತಿರುವ ಹಿಂದೂ ಕಾರ್ಮಿಕರನ್ನು ಮುಸ್ಲಿಮರಿಂದ ಬೇರ್ಪಡಿಸುವುದು ಹೇಗೆಂಬ ಬಗ್ಗೆ ಗೋರಕ್ಷಕ ಸಭಾದ ನಾಯಕರು ಮತ್ತು ಅಂದಿನ ಸಂಪ್ರದಾಯವಾದಿ ಹಿಂದೂ ನಾಯಕರಿಗೆ ತಲೆನೋವಾಗಿತ್ತ್ತು. ಅದಕ್ಕೆಂದು ಮಜಬೂತಾದ ಮಸಲತ್ತೊಂದನ್ನು ಹೆಣೆದ ಅವರು ಭಾರತವನ್ನು ಹಿಂದು-ಮುಸ್ಲಿಂ ಎಂದು ವಿಭಜಿಸಿದ ಆ ಕರಾಳದಂಗೆಯೊಂದನ್ನು ಹುಟ್ಟುಹಾಕಿಯೇ ಬಿಟ್ಟರು. ಇದರ ಪ್ರತಿಫಲವಾಗಿ ದೇಶ ಕಂಡ ಮೊದಲ ಹಿಂದು-ಮುಸ್ಲಿಂ ಕೋಮುಗಲಭೆ ಮುಂಬೈನಲ್ಲಿ ನಡೆದೇ ಹೋಯಿತು.
ಅದು 11ನೇ ಆಗಸ್ಟ್ 1893ನೇ ಇಸವಿ. ಮುಂಬೈನ ಕ್ರಾಫರ್ಡ್ ಮಾರ್ಕೆಟ್‍ನಲ್ಲಿರುವ ಜುಮ್ಮಾ ಮಸೀದಿಯಿಂದ ಬಂದ ಮುಸ್ಲಿಮರು ‘ಹನುಮಾನ್ ಬಸ್ತಿ’ ಎಂಬ ಪ್ರದೇಶದ ದೇವಸ್ಥಾನದ ಧಾಳಿಯೆಸಗಿದ್ದಾರೆಂಬ ಪುಕಾರನ್ನು ಹಬ್ಬಿಸುವಲ್ಲಿ ಸಂಪ್ರದಾಯವಾದಿಗಳು ಮತ್ತು ಗೋರಕ್ಷಕ ಸಭಾದ ಧರ್ಮಪಿಪಾಸುಗಳು ಹರಿಯಬಿಟ್ಟರು. ಆ ನಂತರ ನಡೆದಿದ್ದು ಘನಘೋರ ಹಿಂದು-ಮುಸ್ಲಿಂ ಕೋಮುಗಲಭೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಸತತ ಎರಡುದಿನ ಮುಂಬೈ-ಪುಣೆಗಳಲ್ಲಿ ಹಿಂದು-ಮುಸ್ಲಿಮರ ನಡುವೆ ಹೊಡಿಕಡಿ ಬಡಿದಾಟ, ಕಂಡಕಂಡದ್ದನ್ನು ಸುಡುವ ದೊಂಬಿಗಳು ಒಂದರ ಹಿಂದೊಂದು ನಡೆದವು. ಮುಂಬೈ ಹೈಕೋರ್ಟ್ ಸೇರಿದಂತೆ ಸರ್ಕಾರಿ ಕಚೇರಿಗಳು ಸಹ ಬಾಗಿಲು ಮುಚ್ಚಿ ಜೀವವುಳಿಸಿಕೊಳ್ಳುವಷ್ಟರ ಮಟ್ಟಿಗೆ ಆ ಕೋಮುಗಲಭೆ ತೀವ್ರವಾಗಿ ನಡೆದುಹೋಯಿತು. ಇಬ್ಬದಿಯ ಕೋಮುಗಳಲ್ಲಿ ಒಟ್ಟು 75 ಮಂದಿ ಜೀವ ಕಳೆದುಕೊಂಡರೆ 350 ಮಂದಿ ಗಂಭೀರವಾಗಿ ಗಾಯಗೊಂಡರು. ಬಹಳಷ್ಟು ಕಡೆಗಳಲ್ಲಿ ನಡೆದ ಬ್ರಿಟಿಶ್ ಪೊಲೀಸ್ ಫೈರಿಂಗ್‍ಗಳಲ್ಲಿ ಸತ್ತವರೇ ಇವರಲ್ಲಿ ಹೆಚ್ಚಿದ್ದರು. ಗಲಭೆ ಸಂಬಂಧ ಬ್ರಿಟಿಶ್ ಸರ್ಕಾರ 1200 ಮಂದಿಯನ್ನು ಬಂಧಿಸಿ ಜೈಲಿಗಟ್ಟಿತು. ಸ್ವಲ್ಪದಿನಗಳ ನಂತರ ಮುಂಬೈ ಪರಿಸ್ಥಿತಿ ಶಾಂತಗೊಂಡು ಸಾಧಾರಣ ಸ್ಥಿತಿಗೆ ಮುಟ್ಟಿತು. ಅಷ್ಟರಲ್ಲಿ ಧರ್ಮಧರ್ಮಗಳ ನಡುವೆ ತಂದಿಟ್ಟು ತಮಾಷೆ ನೊಡಿ ಕೆಳವರ್ಗದ ಜನರು ಬಡಿದಾಡಿ ಸಾಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಗೋರಕ್ಷಕರ ಸಂಪ್ರದಾಯವಾದಿಗಳ ಪಟಾಲಂ ಈ ಸಲ ಇದೇ ಬೆಂಕಿಯನ್ನು ಪುಣೆಯಲ್ಲಿ ಹಚ್ಚಿತು. 16ನೇ ಆಗಸ್ಟ್ 1893ರಂದು ಪುಣೆಯಲ್ಲಿ ಮತ್ತೊಂದು ಕೋಮುಗಲಭೆ ಎಬ್ಬಿಸಲಾಯಿತು. ಸಂಪ್ರದಾಯವಾದಿ ಸನಾತನಿ ನಾಯಕ ತಾತ್ಯಾಸಾಹೇಬ್ ನಾಥುವಿಗೆ ಮುಸ್ಲಿಮರು ಹೊಡೆದರೆಂದು ಕಥೆ ಕಟ್ಟಿ ಪುಣೆಯ ಮಸೀದಿಗಳನ್ನು ಧ್ವಂಸಗೊಳಿಸಲಾಯಿತು. ಈ ಕೋಮುಗಲಭೆಯಲ್ಲಿ ಇಡೀ ಪುಣೆಯೇ ಹೊತ್ತಿ ಉರಿಯಿತು. ಎರಡೂ ಧರ್ಮಗಳ ಸಾವಿರಾರು ಕೆಳವರ್ಗದ ಯುವಕರು ಜೈಲುಪಾಲಾದರು. ಸಂಪ್ರದಾಯವಾದಿ ಖೂಳರಿಗೆ ತಮ್ಮ ಕೈಗೆ ಗಲಭೆಯೆಬ್ಬಿಸುವ ಹೊಸ ಅಸ್ತ್ರ ಸಿಕ್ಕ ಖುಷಿ ದಕ್ಕಿತ್ತು.
ಇದಾದ ನಂತರ ಮುಂಬೈ-ಪುಣೆಗಳಲ್ಲಿ ಈ ಹಿಂದೆ ವಿವರಿಸಿದಂತೆ ಮೊಹರಂ ಆಚರಣೆಗಳಲ್ಲಿ ಹಿಂದೂಗಳು ಭಾಗವಹಿಸುವುದನ್ನು ಧಾರ್ಮಿಕ ಸಭೆಗಳಲ್ಲಿ ನಿಷೇಧಿಸಲಾಯಿತು. ಅಲ್ಲಿಯವರೆಗೂ ಮುಸ್ಲಿಮರೊಡನೆ ಜೊತೆಯಾಗಿ ಬದುಕುತ್ತಿದ್ದ ಸಮಾಜಕ್ಕೆ ಸನಾತನವಾದಿಗಳು ದೊಡ್ಡಮಟ್ಟದ ದ್ವೇಷದ ವಿಷವನ್ನೇ ತುಂಬಿಬಿಟ್ಟಿದ್ದರು. ಮೊಹರಂ ಆಚರಣೆಯಲ್ಲಿ ಹಿಂದೂಗಳು ಭಾಗವಹಿಸದಂತೆ ತಡೆಯಲು ಹೊಸತೊಂದು ಹಿಂದೂ ಆಚರಣೆಯನ್ನೇ ಪ್ರಾರಂಭಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೂ ದೇವರಮೂರ್ತಿಯೊಂದನ್ನು ಕಂಡಕಂಡಲ್ಲಿ-ಬೀದಿಗಳಲ್ಲಿ ಕೂರಿಸಿ ನಂತರ ಅದನ್ನು ನೀರಿನಲ್ಲಿ ವಿಸರ್ಜಿಸುವ ಆಚರಣೆಯೇ ಇದ್ದಿರಲಿಲ್ಲ. ಮೊಟ್ಟ ಮೊದಲಿಗೆ ಗಣೇಶನ ಮೂತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪಿಸಿ ವಾರಗಳವರೆಗೆ ಅದನ್ನು ಪೂಜಿಸಿ ನಂತರ ವಿಸರ್ಜಿಸುವ ಕೆಲಸ ಮಾಡಿದ್ದು ರಾಷ್ಟ್ರೀಯವಾದಿಗಳ ಮುಖವಾಡದಲ್ಲಿ ಮೇಲ್ಜಾತಿಯೊಂದರ ಆಚರಣೆಗಳನ್ನು ಸಮಾಜದ ಮೇಲೆ ಹೇರಲು ಹವಣಿಸುತ್ತಿದ್ದ ಭಾವುರಂಗಂ, ಗಣಪತರಾವ್ ಗೇಟವಾಡೇಕರ್, ನಾನಾಸಾಹೇಬ್ ಕಸಗಿವಾಲೆ ಎಂಬ ಮೂವರು ತ್ರಿಮೂರ್ತಿಗಳು. ತದನಂತರ ಈ ಆಚರಣೆಯ ಮೂಲಕ ಹಿಂದೂಗಳನ್ನು ಮೊಹರಂ ಆಚರಣೆಯಲ್ಲಿ ಬಾಗವಹಿಸುವುದನ್ನು ತಡೆಯಲು ಬಳಸಬಹುದೆಂಬ ಪ್ಲಾನ್ ಯಶಸ್ವಯಾಗುತ್ತಿರುವುದನ್ನು ಕಂಡು ಇದನ್ನು ಎಲ್ಲೆಡೆಯಲ್ಲಿ ಪಸರಿಸಲಾಯಿತು. ಈ ಬಗ್ಗೆ ಬಾಲಗಂಗಾಧರ ತಿಲಕ್ ತಮ್ಮ ಕೇಸರಿ ಪತ್ರಿಕೆಯಲ್ಲಿ ಶ್ಲಾಘಿಸಿ ಲೇಖನ ಬರೆದಿದ್ದನ್ನು ಬಿಟ್ಟರೆ ಗಣೇಶೋತ್ಸವದ ಆಚರಣೆಯ ಪ್ರಾರಂಭಕ್ಕೂ ತಿಲಕರಿಗೂ ಏನಕೇನ ಸಂಬಂಧವೇ ಇರಲಿಲ್ಲ. ಈ ಬಗ್ಗೆ ತಿಲಕರ ಆತ್ಮಚರಿತ್ರೆಯಲ್ಲೇ ಉಲ್ಲೇಖವಿರುವುದನ್ನು ನಾವು ನೋಡಬಹುದು.
ಈ ಆಚರಣೆ ಜನಪ್ರಿಯಗೊಂಡು ಜನಮಾನಸದಲ್ಲಿ ಜಾಗ ಪಡೆಯುತ್ತಿರುವುದನ್ನು ಕಂಡುಕೊಂಡ ಕೂಡಲೇ ಈ ಸಾರ್ವಜನಿಕ ಗಣೇಶೋತ್ಸವಕ್ಕೂ ತಿಲಕರಿಗೂ ತಳುಕು ಹಾಕಿ ತಿಲಕರೇ ಇದನ್ನು ಶುರು ಮಾಡಿದ್ದರೆಂದು ಪ್ರಚಾರ ಮಾಡಿದ ಪರಿಣಾಮವಾಗಿ ತಿಲಕರಿಗೂ ಗಣೇಶೋತ್ಸವಕ್ಕೂ ನಂಟು ಬೆಳೆದುಬಂತು. ಮೊದಲಿಗೆ ಮೇಲ್ಜಾತಿ ಹಿಂದೂಗಳೇ ಗಣೇಶೋತ್ಸವವನ್ನು ಪ್ರತಿಭಟಿಸಿದ್ದರು. ಅಲ್ಲಿಯವರೆಗೂ ಗುಡಿಯೊಳಗಿದ್ದ ದೇವರೊಬ್ಬನನ್ನು ಹಾದಿಬೀದಿಯಲ್ಲಿ ಕೂರಿಸಿ, ಕೆಳಜಾತಿಯವರೂ ಮುಟ್ಟಿ ಪೂಜಿಸುವುದನ್ನು ಮೇಲ್ಜಾತಿಯ ನಾಯಕರು ಒಪ್ಪದೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಈ ಉತ್ಸವಗಳಲ್ಲಿ ಶಿವಾಜಿ ಮತ್ತು ತಿಲಕರ ಫೋಟೋಗಳನ್ನೂ ಗಣೇಶನೊಡನೆ ಪೂಜಿಸುವ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು. ಇದಕ್ಕೂ ಪ್ರತಿರೋಧ ವ್ಯಕ್ತವಾಯಿತು. ಸತ್ಯಶೋಧಕ ಮಂಡಳಿ ಸ್ಥಾಪಿಸಿ ಅದರ ಮೂಲಕ ನೀಚ ಸಂಪ್ರದಾಯವಾದಿಗಳ ಬಣ್ಣ ಬಯಲು ಮಾಡುತ್ತಿದ್ದ ಜ್ಯೋತಿಬಾ ಫುಲೆಯವರಂತಹವರು ಜನರನ್ನು ವಿಭಜಿಸುವ ಪಿತೂರಿಯ ಈ ಉತ್ಸವಗಳಿಗೆ ನಿಷೇಧ ಹೇರಬೇಕೆಂದು ಬ್ರಿಟಿಶ್ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಆದರೆ ವಿಪರೀತ ಜನಪ್ರಿಯಗೊಂಡ ಮೊಹರಂಗೆ ಬದಲಿಯಾಗಿ ಬಂದ ಗಣೇಶೋತ್ಸವದ ಆಚರಣೆ ಈ ವಿರೋಧವನ್ನು ದಾಟಿಕೊಂಡು ಮುಂದೆ ಹೋಯಿತು. ಅಲ್ಲಿಂದ ಇಲ್ಲಿಯವರೆಗೂ ನಡೆದುಕೊಂಡು ಬರುತ್ತಿರುವ ಗಣೇಶೋತ್ಸವ, ಅದನ್ನು ಆಯೋಜಿಸುವ ಮಂಡಳಿಗಳು ಆವತ್ತಿನಿಂದ ಈವತ್ತಿಗೆ ದೊಡ್ಡಮಟ್ಟದಲ್ಲೇ ಬೆಳೆದುಬಂದಿವೆ. ಹೀಗೆ ಜೊತೆಯಾಗಿ ಬದುಕುವ ಎರಡು ಧರ್ಮದ ಜನರನ್ನು ಬೇರ್ಪಡಿಸಲು ಮತ್ತು ಕೋಮುಗಲಭೆಗಳನ್ನು ಹುಟ್ಟು ಹಾಕಿ ಆ ಮೂಲಕ ಮುಸ್ಲಿಮರನ್ನು ಸದೆಬಡಿಯಲು ಬೇಕಾದ ಕಾಲಾಳುಗಳ ಪಡೆಯೊಂದನ್ನು ಕಟ್ಟಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಅದ್ಯಾವ ಲೆಕ್ಕದಲ್ಲಿ ಬ್ರಿಟಿಶರ ವಿರುದ್ಧ ಜನರನ್ನು ಹೋರಾಟಕ್ಕೆ ಸಂಘಟಿಸಲು ಮಾಡಿದ ಪ್ರಯತ್ನವಾಗಿ ಬಣ್ಣ ಬದಲಾಯಿಸಿತೆಂದು ಇವತ್ತಿನ ಪುಳಿಯೊಗರೆ ತಜ್ಞರೇ ಹೇಳಬೇಕು.

LEAVE A REPLY

Please enter your comment!
Please enter your name here