Homeಅಂಕಣಗಳುಯುಗಧರ್ಮ | ಯೋಗೇಂದ್ರ ಯಾದವ್ಡಿಸೆಂಬರ್ 11ರ ಫಲಿತಾಂಶವು 2019ರ ಮೇಲೆ ಏನು ಪರಿಣಾಮ ಬೀರಲಿದೆ?

ಡಿಸೆಂಬರ್ 11ರ ಫಲಿತಾಂಶವು 2019ರ ಮೇಲೆ ಏನು ಪರಿಣಾಮ ಬೀರಲಿದೆ?

- Advertisement -
- Advertisement -

ಪ್ರೊ. ಯೋಗೇಂದ್ರ ಯಾದವ್ |

ಒಂದೆಡೆ ಶಾಲೆಗಳಲ್ಲಿ ಪ್ರೀ-ಬೋರ್ಡ್ ಪರೀಕ್ಷೆಗಳ ತಯಾರಿ ನಡೆದಿದ್ದರೆ, ಇನ್ನೊಂದೆಡೆ ಮೋದಿ ಸರಕಾರವೂ ಐದು ರಾಜ್ಯಗಳಲ್ಲಿಯ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಪ್ರಿಬರ‍್ಡ್ ಪರೀಕ್ಷೆಗೆ ಅಣಿಯಾಗಿದೆ. ಡಿಸೆಂಬರ್ 11ರಂದು ಈ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ, ನಮಗೆ 2019ರ ಚುನಾವಣೆಯ ಫಲಿತಾಂಶದ ಒಂದು ಝಲಕ್ ಕಾಣಿಸುವುದಂತೂ ಖಂಡಿತ. ಇಲ್ಲಿಯವರೆಗೆ ನಮಗೆ ಕಾಣಿಸಿರುವಷ್ಟು ಮುನ್ನೋಟದಿಂದ ಬಿಜೆಪಿ ವಿಚಲಿತವಾಗಿರುವುದು ಸ್ವಾಭಾವಿಕವೆನಿಸುತ್ತಿದೆ.

ಈ ಚುನಾವಣೆಗಳನ್ನು ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದು ಕೆಲವರು ಕರೆಯಲಾರಂಭಿಸಿದ್ದಾರೆ; ಅದೇಕೋ ತಿಳಿಯದು. ಪ್ರತೀ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಸರಕಾರದ ಮೇಲೆ ರೆಫರೆಂಡಮ್ ಎಂದು ಘೋಷಿಸಲಾಗುತ್ತಿದೆ. ನಾನು ವೈಯಕ್ತಿಕವಾಗಿ ಪ್ರೀ-ಬರ‍್ಡ್ ಎಂದು ಕರೆಯಲು ಇಷ್ಟಪಡುತ್ತೇನೆ. ಅಂತಿಮ ಪರೀಕ್ಷೆಗೆ ಮುಂಚಿನ ಈ ಚಿಕ್ಕ ಪರೀಕ್ಷೆಯಲ್ಲಿ ಮಾಡಿದ ತಯಾರಿಯ ವಿಶ್ಲೇಷಣೆ ಮಾಡಲಾಗುವ, ದೌರ್ಬಲ್ಯಗಳನ್ನು ಪತ್ತೆ ಹಚ್ಚುವ, ಕೊನೆಯಲ್ಲಿ ಎಷ್ಟು ಅಂಕಗಳನ್ನು ಪಡೆಯಬಹುದು ಎನ್ನುವ ಅಂದಾಜು ಹಾಕಲಾಗುವ ಪ್ರಿ ಬೋರ್ಡ್ ಪರೀಕ್ಷೆಗಳು. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳೂ ಇಂತಹ ಪರೀಕ್ಷೆಯೇ ಆಗಿವೆ. ಇವುಗಳ ಸೋಲು ಗೆಲುವುಗಳಿಂದ 2019ರ ಚುನಾವಣೆಯಲ್ಲಿ ನೇರಾನೇರ ಪರಿಣಾಮವಾಗಲಿದೆ. ಆದರೆ ಈ ಚುನಾವಣೆಯ ಒಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಲೋಕಸಭೆಯ ಚುನಾವಣೆಯ ಒಂದು ಜಾಡು ಸಿಗಬಹುದಾಗಿದೆ.

ಒಂದುವೇಳೆ ಈ ಚುನಾವಣೆಗಳನ್ನು ಲೋಕಸಭೆ ಚುನಾವಣೆಗಳ ದೃಷ್ಟಿಯಲ್ಲಿ ನೋಡಬೇಕಾದರೆ ಮೊದಲು ಮಿಝೋರಾಂ ಮತ್ತು ತೆಲಂಗಾಣ ರಾಜ್ಯಗಳನ್ನು ಮರೆತುಬಿಡಬೇಕಿದೆ. ಮಿಝೋರಾಂ ಎಷ್ಟು ವಿಶಿಷ್ಟ ರಾಜ್ಯವೆಂದರೆ ಮಿಕ್ಕ ದೇಶ ಬಿಡಿ, ಅದರಿಂದ ಈಶಾನ್ಯ ಭಾರತದ ರಾಜಕೀಯದ ಅಂದಾಜನ್ನೂ ಹಾಕಲಾಗುವುದಿಲ್ಲ. ತೆಲಂಗಾಣದಲ್ಲಿ ಸ್ವತಂತ್ರ ರಾಜ್ಯ ಆದ ನಂತರದ ಮೊದಲ ಚುನಾವಣೆಯಿದು. ನಿಸ್ಸಂದೇಹವಾಗಿಯೂ ಇದೊಂದು ಐತಿಹಾಸಿಕ ಚುನಾವಣೆ. ಆದರೆ ತೆಲಂಗಾಣದ ವಿಶಿಷ್ಟ ಪರಿಸ್ಥಿತಿಯೊಂದಿಗೆ ತಳುಕುಹಾಕಿಕೊಂಡ ಚುನಾವಣೆ ಇದಾಗಿದೆ. ಇದರ ಒಲವಿನಿಂದ ಪಕ್ಕದ ಆಂಧ್ರಪ್ರದೇಶದ ರಾಜಕೀಯದ ಒಳನೋಟವೂ ಕಾಣಸಿಗುವುದಿಲ್ಲ. ರಾಜ್ಯದ 17 ಸೀಟುಗಳು ಯಾರ ತೆಕ್ಕೆಗೆ ಬೀಳಬಹುದು ಎನ್ನುವ ಅಂದಾಜನ್ನು ಮಾತ್ರ ನಾವು ಹಾಕಬಹುದು. ಆದರೆ ಇಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಗೆಲ್ಲಲು ಅಥವಾ ಸೋಲಲು ಹೆಚ್ಚೇನಿಲ್ಲ. ಟಿಡಿಪಿ ಮತ್ತು ತೆಲಂಗಾಣ ಜನ ಸಮಿತಿಯೊಂದಿಗೆ ತನ್ನ ಮೈತ್ರಿಯನ್ನು ಕಾಂಗ್ರೆಸ್ ಚುನಾವಣೆಯ ಯುದ್ಧದಲ್ಲಿ ನಿಭಾಯಿಸಬಲ್ಲದೇ ಅಥವಾ ಇಲ್ಲವೇ ಎನ್ನುವುದನ್ನು ಮಾತ್ರ ನೋಡಬಹುದು,

ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿ ಈ ಸಲ ಎಲ್ಲಕ್ಕಿಂತ ಮಹತ್ವಪೂರ್ಣ ಚುನಾವಣೆಗಳು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ನಡೆಯಲಿವೆ. ಈ ಮೂರು ರಾಜ್ಯಗಳಲ್ಲಿ ಒಟ್ಟು 65 ಸೀಟುಗಳಿವೆ. ಕಳೆದ ಬಾರಿ ಬಿಜೆಪಿ ಈ 65 ರಲ್ಲಿ 62 ಸೀಟುಗಳಲ್ಲಿ ಜಯಶಾಲಿಯಾಗಿತ್ತು. ಈ ರಾಜ್ಯಗಳಲ್ಲಿ ತನ್ನ ಗರಿಷ್ಠ ಸೀಟುಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಈ ಮೂರು ರಾಜ್ಯಗಳ ಫಲಿತಾಂಶದಿಂದ 2014ರಲ್ಲಿ ಹಿಂದಿ ಬೆಲ್ಟಿನಲ್ಲಿ ಬೀಸಿದ್ದ ಮೋದಿ ಅಲೆ ಇನ್ನೂ ಹಾಗೇ ಇದೆಯೋ ಅಥವಾ ಇಲ್ಲವೋ ಎನ್ನುವ ಸೂಚನೆಯೂ ಸಿಗಲಿದೆ.

ಸದ್ಯಕ್ಕಂತೂ ಅಲೆಯು ಹಿಂದೆ ಇದ್ದ ಪ್ರಮಾಣದಲ್ಲಿ ಇದ್ದ ಹಾಗೆ ಕಾಣುತ್ತಿಲ್ಲ. ಇಲ್ಲಿಯವರೆಗೆ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿವೆ. ಚುನಾವಣೆಯ ಫಲಿತಾಂಶಗಳ ಕುರಿತ ಭವಿಷ್ಯವಾಣಿಯನ್ನು ಅನೇಕರು ನುಡಿದಿದ್ದಾರೆ. ಆದರೆ ಕಳೆದ ಕೆಲಸಮಯದಲ್ಲಿ ಈ ಭವಿಷ್ಯವಾಣಿಗಳ ಗುಣಮಟ್ಟ ಎಷ್ಟು ಕುಸಿದಿದೆಯೆಂದರೆ ಇವುಗಳ ಆಧಾರದ ಮೇಲೆ ಏನು ಹೇಳಲೂ ಭಯವಾಗುತ್ತಿದೆ. ಆದರೆ ನೀವು ಚುನಾವಣಾಪೂರ್ವ ಭವಿಷ್ಯವಾಣಿಗಳನ್ನು ಬಿಟ್ಟು ನೋಡಿದಾಗ ಈ ಎಲ್ಲಾ ಸರ್ವೆಗಳಿಂದ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ, ಜನತೆಯ ಮನದಲ್ಲಿ ಏನಿದೆ ಎನ್ನುವುದನ್ನು ಖಂಡಿತವಾಗಿಯೂ ಪತ್ತೆಹಚ್ಚಬಹುದು.

ರಾಜಸ್ಥಾನದಲ್ಲಿ ಪ್ರತಿಯೊಂದು ಸರ್ವೇ, ಪ್ರತಿಯೊಬ್ಬ ರಾಜಕೀಯ ವಿಶ್ಲೇಷಕ ಹಾಗೂ ಪ್ರತಿಯೊಬ್ಬ ರಸ್ತೆಬದಿ ವ್ಯಾಪಾರಿ ಹೇಳುತ್ತಿರುವುದು ಒಂದೇ. ಬಿಜೆಪಿ ಸೋಲುತ್ತೆ ಹಾಗೂ ಅತ್ಯಂತ ಕೆಟ್ಟ ರೀತಿಯಲ್ಲಿ ಸೋಲುತ್ತೆ. 2013ರ ಚುನಾವಣೆಗೆ ಮುಂಚೆ ಅಶೋಕ್ ಗೆಹ್ಲಾಟ್ ಅವರ ಸರಕಾರ ಎಷ್ಟು ಅಪ್ರಿಯವಾಗಿತ್ತೋ, ವಸುಂಧರಾ ರಾಜೆ ಸರಕಾರವೂ ಅಷ್ಟೇ ಅಪ್ರಿಯವಾಗಿದೆ. ಕೇವಲ 33% ಜನರು ಬಿಜೆಪಿ ಸರಕಾರಕ್ಕೆ ಇನ್ನೊಂದು ಅವಕಾಶ ನೀಡಬೇಕು ಎಂದು ಆಶಿಸಿದರೆ, 44% ಜನರು ಈ ಪಕ್ಷ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುತ್ತಿದ್ದಾರೆ. ರಾಜಸ್ಥಾನದಲ್ಲಿ ಇರುವ ಪ್ರಶ್ನೆ ಒಂದೇ, ಬಿಜೆಪಿಯ ಸೋಲಿನ ಅಂತರ ಎಷ್ಟು ಎನ್ನುವುದು. ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತನಂತರ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ತನ್ನ ಕೆಲವು ಸೀಟುಗಳನ್ನು ಉಳಿಸಿಕೊಳ್ಳಲಾಗುವುದೇ? 1999ರಲ್ಲಿ ಆದ ಲೋಕಸಭೆ ಚುನಾವಣೆಯನ್ನು ಬಿಟ್ಟರೆ, ಮಿಕ್ಕೆಲ್ಲಾ ಚುನಾವಣೆಗಳಲ್ಲೂ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದವರೇ ಲೋಕಸಭೆ ಚುನಾವಣೆಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾತ್ರ ಬೇರೆ ಬೇರೆ ಸರ್ವೇಗಳು ಬೇರೆ ಬೇರೆ ರೀತಿಯಲ್ಲಿ ಭವಿಷ್ಯವಾಣಿ ನುಡಿದಿವೆ. ಆದರೆ ಎರಡು ವಿಷಯಗಳಲ್ಲಿ ಎಲ್ಲಾ ಸರ್ವೇಗಳು ಸಹಮತವನ್ನು ಹೊಂದಿವೆ: ಸ್ಪರ್ಧೆ ತೀವ್ರವಾಗಿದೆ ಹಾಗೂ ಮುಂಚೆಗಿಂತ ಹೋಲಿಕೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರಕಾರದ ಜನಪ್ರಿಯತೆ ಬಹಳಷ್ಟು ಕುಸಿದಿದೆ. 2103ರ ಚುನಾವಣಾಪೂರ್ವದಲ್ಲಿ ಸಿಎಸ್‌ಡಿಎಸ್ ಸರ್ವೇ ಮಾಡಿದಾಗ 53% ಜನರು ಬಿಜೆಪಿ ಮತ್ತೇ ಸರಕಾರ ಸ್ಥಾಪಿಸಲಿ ಎಂದು ಬಯಸಿದ್ದರು ಹಾಗೂ ಕೇವಲ 20% ಜನರು ಬಿಜೆಪಿ ಸರಕಾರ ಹೋಗಬೇಕು ಎಂದು ಬಯಸಿದ್ದರು. ಆದರೆ ಈ ಸಲ ಅಕ್ಟೋಬರ್ ತಿಂಗಳಲ್ಲಿ 45% ಜನರು ಬಿಜೆಪಿ ಸರಕಾರ ಮರಳಿಬರಲೆಂದು ಆಶಿಸಿದರೆ 43% ಜನರು ಬಿಜೆಪಿ ಸರಕಾರವನ್ನು ತೆಗೆದುಹಾಕುವ ಮೂಡಿನಲ್ಲಿದ್ದಾರೆ. ಸಿಎಸ್‌ಡಿಎಸ್ ಸರ್ವೇಯಲ್ಲಿ ಬಿಜೆಪಿ ಮುಂದಿದ್ದರೂ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‌ಗಿಂತ ಹಿಂದಿದೆ. ನಗರಪ್ರದೇಶಗಳಲ್ಲಿ ದೊಡ್ಡ ಗೆಲುವನ್ನು ಮತ್ತೆ ಸಾಧಿಸಿದರೂ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಬಿದ್ದರೆ ಬಹುಮತದ ಸಂಖ್ಯೆಯನ್ನು ದಾಟಲಾಗುವುದಿಲ್ಲ. ಏನೇ ಆದರೂ 2014ರಲ್ಲಿ 29ರಲ್ಲಿ 27 ಸೀಟುಗಳನ್ನು ಗೆದ್ದ ತನ್ನ ದಾಖಲೆಯನ್ನಂತೂ ಮತ್ತೊಮ್ಮೆ ಸಾಧಿಸಲಾಗದು.

ಛತ್ತೀಸಗಢದಲ್ಲಿ ಕೆಲವು ಸರ್ವೇಗಳು ಬಿಜೆಪಿಯ ದೊಡ್ಡ ಗೆಲುವಿನ ಬಗ್ಗೆ ಮಾತನಾಡಿದರೆ ಇನ್ನೂ ಕೆಲವು ಸಣ್ಣ ಸೋಲಿನ ಬಗ್ಗೆ ಹೇಳುತ್ತಿವೆ. ಕಳೆದ ಎರಡು ವಿಧಾನಸಭೆಯ ಚುನಾವಣೆಗಳಲ್ಲಿ ಬಿಜೆಪಿ ಸೋಲಿನಿಂದ ಕೂದಲೆಳೆಯಲ್ಲಿ ಪಾರಾಗಿತ್ತು. ಈ ಸಲ ಎರಡೂ ರೀತಿಯ ಸರ್ವೇಗಳು ಒಪ್ಪಿಕೊಳ್ಳುವುದೇನೆಂದರೆ, ಕಳೆದ ಬಾರಿಯ ಹೋಲಿಕೆಯಲ್ಲಿ ಈ ಬಾರಿ ರಮಣ್‌ಸಿಂಗ್ ಸರಕಾರದ ಜನಪ್ರಿಯತೆ ಕಡಿಮೆಯಾಗಿದೆ. ಎಲ್ಲರೂ ಒಪ್ಪಿಕೊಳ್ಳುತ್ತಿರುವ ಇನ್ನೊಂದು ಮಾತೆಂದರೆ, ಒಂದು ವೇಳೆ ಬಿಜೆಪಿ ಗೆದ್ದಲ್ಲಿ ಅದರ ಶ್ರೇಯ ಅಜಿತ್ ಜೋಗಿ ಹಾಗೂ ಬಸಪ ಮಧ್ಯದ ಮೈತ್ರಿಯಿಂದ ಕಾಂಗ್ರೆಸ್‌ಗೆ ಆಗಲಿರುವ ನಷ್ಟಕ್ಕೇ ಸಲ್ಲುತ್ತದೆ. ಒಂದು ವೇಳೆ ಹೀಗಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ 10 ಸೀಟುಗಳನ್ನು ಹೇಗೆ ಉಳಿಸಿಕೊಳ್ಳಬಲ್ಲದು?

ಈ ಚುನಾವಣೆಗಳನ್ನು ಪ್ರೀ-ಬೋರ್ಡ್ ಎಂದು ಕರೆಯುವುದರಲ್ಲಿ ಒಂದು ತೊಂದರೆಯಿದೆ. ಪ್ರೀ-ಬೋರ್ಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ನಿಜವಾದ ಪರೀಕ್ಷೆಯಲ್ಲಿ ಸೇರಿಸುವುದಿಲ್ಲ. ಆದರೆ ಐದು ರಾಜ್ಯಗಳ ಚುನಾವಣೆಗಳು ಲೋಕಸಭೆ ಚುನಾವಣೆಯ ಮೇಲೆ ನೇರವಾದ ಪರಿಣಾಮ ಬೀರಲಿವೆ. ಒಂದು ವೇಳೆ ಬಿಜೆಪಿ ಮೂರೂ ರಾಜ್ಯಗಳಲ್ಲಿ ಜಯಶಾಲಿಯಾದಲ್ಲಿ ಖಂಡಿತವಾಗಿಯೂ ಲೋಕಸಭೆ ಚುನಾವಣೆಯನ್ನೆದುರಿಸಲು ಬಿಜೆಪಿಯ ಆತ್ಮವಿಶ್ವಾಸ ಹಾಗೂ ದೇಶಾದ್ಯಂತ ಗಾಳಿ ಬೀಸಲು ಬೇಕಾದ ಕ್ಷಮತೆಯಲ್ಲಿ ವೃದ್ಧಿಯಾಗುವುದು. ಆದರೆ ಒಂದುವೇಳೆ ಬಿಜೆಪಿ ರಾಜಸ್ಥಾನದೊಂದಿಗೆ ಇತರೆ ರಾಜ್ಯಗಳಲ್ಲಿ ಸೋಲನ್ನಪ್ಪಿದರೆ ಅಥವಾ ಕಷ್ಟಪಟ್ಟು ಗೆದ್ದರೂ, ಅದರಿಂದ ದೇಶಾದ್ಯಂತ ರಾಜಕೀಯ ವಾತಾವರಣ ಬದಲಾಯಿಸುವುದು. ಪ್ರತಿಪಕ್ಷಗಳ ಕಾರ್ಯಕರ್ತರ ಉತ್ಸಾಹ ಹೆಚ್ಚುವುದು. ದೊಡ್ಡ ಉದ್ಯೋಗಪತಿಗಳು ಈಗ ಬಿಜೆಪಿ ಬಿಟ್ಟು ಬೇರಾವುದೇ ಪಕ್ಷಕ್ಕೆ ಹಣ ನೀಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಆದರೆ ಬಿಜೆಪಿ ಸೋತಲ್ಲಿ ಅವರು ನಿರ್ಭಯವಾಗಿ ತಮ್ಮ ಹಣದ ಚೀಲ ಬಿಚ್ಚುವುದರಲ್ಲಿ ಸಂದೇಹವಿಲ್ಲ. ಎಲ್ಲಕ್ಕಿಂತ ಮುಖ್ಯ ವಿಷಯವೇನೆಂದರೆ ಮಾಧ್ಯಮಗಳ ಒಲವೂ ಬದಲಾಗಲಿದೆ. ಇಂದು ಬಿಜೆಪಿಯ ಸನ್ನೆಗನುಗುಣವಾಗಿ ಕುಣಿಯುತ್ತಿರುವ ಮಾಧ್ಯಮಗಳು ತನ್ನ ಕುಣಿತದ ಹೆಜ್ಜೆಗಳನ್ನು ಬದಲಿಸುವುದು ಅನಿವಾರ್ಯವಾಗಲಿದೆ. ಮೋದಿ ಸರಕಾರದ ಸತ್ಯ ಸಾಮಾನ್ಯ ಜನರಿಗೆ ತಲುಪಲು ಶುರುವಾಗುವುದು. ಹೀಗೆ ಆದಲ್ಲಿ 2019ರ ಚುನಾವಣೆಯ ಸಮೀಕರಣದಲ್ಲಿ ತೀವ್ರವಾದ/ಚಮತ್ಕಾರಕವಾದ ಬದಲಾವಣೆಗಳು ಬರಬಹುದು.

ಅನುವಾದ: ಡಾ.ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...