Homeನಾನು ಗೌರಿಗೌರಿ ಪುಟ

ಗೌರಿ ಪುಟ

- Advertisement -
- Advertisement -

ಸೆಪ್ಟಂಬರ್ ೫ರ ಆ ಘೋರ ದಿನದ ಸಂಜೆ ಗೌರಿ ಮೇಡಂ, ಮನೆಗೆ ಹೊರಡುವ ಮುನ್ನ ರೊಟೀನ್ ಪ್ರಕಾರ ನಾಳೆಯ ಪತ್ರಿಕೆಯ ಕಂಟೆಂಟ್‌ಗಳನ್ನು ಎಡಿಟ್ ಮಾಡಿ ಒಂದು ಪೆನ್‌ಡ್ರೈವ್‌ಗೆ ಹಾಕಿ ನಮ್ಮ ಕೈಗಿತ್ತು, `ನಾಳೆ ಬೆಳಿಗ್ಗೆ ತುಸು ಬೇಗನೇ ಬರುತ್ತೇನೆ, ಇವುಗಳನ್ನು ಪ್ರಿಂಟ್ ತೆಗೆದು ಪ್ರೂಫ್ ನೋಡಿಸಿಡಿ’ ಎಂದು ಹೊರಟಿದ್ದರು. ಅವೇ, ಸಂಪಾದಕಿಯಾಗಿ ಗೌರಿ ಮೇಡಂ ಎಡಿಟ್ ಮಾಡಿಹೋದ ಕಟ್ಟಕಡೆಯ ಲೇಖನಗಳು. ಅವು ಪತ್ರಿಕೆಯಲ್ಲಿ ಪ್ರಕಟಗೊಳ್ಳಲೇ ಇಲ್ಲ! ಅದರಲ್ಲಿ ನಮ್ಮ ರೆಗ್ಯುಲರ್ ಅಂಕಣವಾದ ಬೂಸಿ ಬಸ್ಯಾ, ಒಂದಷ್ಟು ಪತ್ರಗಳು ಮತ್ತು ಒಂದು ಕವನ ಇತ್ತು. ಅವುಗಳ ಪ್ರಸ್ತುತತೆಯನ್ನು ಬದಿಗಿರಿಸಿ, ಗೌರಿ ಮೇಡಂರ ಸ್ಮರಣೆಯಲ್ಲಿ ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

– ಗೌರಿ ಟೀಮ್

****************

ಸುರೇಶ್ ಭಟ್ ಭಾಕ್ರಬೈಲರ ಬೂಸಿ ಬಸ್ಯಾ ಅಂಕಣ
ನೋಟು ರದ್ದತಿಯೂ ಪ್ಲೇಟು ಬದಲಾವಣೆಗಳೂ

೨೦೧೪ರ ಚುನಾವಣಾ ಪ್ರಚಾರ ಕಾಲದಲ್ಲಿ ನೂರಾರು ಭರವಸೆಗಳೊಂದಿಗೆ ಅಂಗೈಯಲ್ಲಿ ಸ್ವರ್ಗವನ್ನೆ ತೋರುತ್ತಾ ತನ್ನ ಜಿಹ್ವಾಚಳಕದಿಂದ ಮತದಾರರಿಗೆ ಮಂಕುಬೂದಿ ಎರಚಿದ ನಟ ಸಾರ್ವಭೌಮ ನರೇಂದ್ರ ಮೋದಿಯ ಆಡಳಿತ ವೈಫಲ್ಯಗಳ ಸರಣಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಮೂರು ವರ್ಷಗಳ ನಂತರ ಆಡಳಿತದ ಎಲ್ಲಾ ರಂಗಗಳಲ್ಲೂ ಸೋತಿರುವ ಮೋದಿ ಸರ್ಕಾರದ ಬಳಿ ಹೇಳಿಕೊಳ್ಳುವಂತಹ ಒಂದೇ ಒಂದು ಸಾಧನೆಯೂ ಇಲ್ಲ. ಲೋಕಪಾಲರ ಹುದ್ದೆಯೆ ಇನ್ನೂ ಖಾಲಿ ಬಿದ್ದಿರುವಾಗ ಮೋದಿಯ ತಥಾಕಥಿತ `ಭ್ರಷ್ಟಾಚಾರ ವಿರೋಧಿ ಹೋರಾಟ’ದ ಪ್ರಾಮಾಣಿಕತೆ ಎಷ್ಟೆಂದು ಯಾರೇ ಆದರೂ ಊಹಿಸಬಹುದು. ಕಪ್ಪುಹಣ, ಖೋಟಾ ನೋಟು, ಭಯೋತ್ಪಾದನೆ ನಿಗ್ರಹ ಎಂಬ ತ್ರಿವಳಿ ಗುರಿಗಳ ನೋಟು ರದ್ದತಿ ಕುರಿತಂತೆ, ಕಪ್ಪುಹಣಕ್ಕೆ ಸಂಬಂಧಿಸಿದಂತೆ ಮೋದಿಯಾದಿಯಾಗಿ ಸಂಘ ಪರಿವಾರದ ದೊಡ್ಡದೊಡ್ಡ ನಾಯಕರ ಹೇಳಿಕೆಗಳು, ಪ್ರತಿಪಾದನೆಗಳು ಮತ್ತು ಪ್ಲೇಟು ಬದಲಾವಣೆಗಳತ್ತ ದೃಷ್ಟಿ ಹರಿಸಲು ಇದು ಸೂಕ್ತ ಕಾಲ ಅನಿಸುತ್ತದೆ.

ಕಪ್ಪುಹಣದ ಬಗ್ಗೆ ಅಂದು-ಇಂದು

ಫೆಬ್ರವರಿ ೧, ೨೦೧೧ರಂದು ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಹೀಗಿದೆ: `ನಾನಿಂದು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ವಿಚಾರಿಸಿದ್ದೇನೆ, `ಅಕ್ರಮ ಹಣ ಸಕ್ರಮಗೊಳಿಸುವಿಕೆ ವಿರುದ್ಧದ ಕಾಯ್ದೆ’ಯನ್ನು ನಾವ್ಯಾಕೆ ಕಪ್ಪುಹಣ ಕುರಿತ ತನಿಖೆಗೆ ಬಳಸುವುದಿಲ್ಲ?’ ೨೦೧೪ರ ಚುನಾವಣೆಗಳ ಸಂದರ್ಭದಲ್ಲಿ ಆತ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಾನು ವಿದೇಶಗಳಲ್ಲಿರುವ ಕಪ್ಪುಹಣವನ್ನು ಮರಳಿ ತಂದಾಗ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ರೂ. ೧೫ರಿಂದ ೨೦ ಲಕ್ಷ ಸಿಗಲಿದೆ ಎಂದು ಘೋಷಿಸಿದ್ದ.

ಆದರೆ ಮೋದಿ ಸರ್ಕಾರ ಅಕ್ಟೋಬರ್ ೧೭, ೨೦೧೪ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿತ್‌ನಲ್ಲಿ “`ದುಪ್ಪಟ್ಟು ತೆರಿಗೆ ಹೇರದಿರುವಿಕೆ ಒಪ್ಪಂದ’ ತನ್ನನ್ನು ಯಾವುದೇ ವಿವರಣೆ ನೀಡದಂತೆ ಕಟ್ಟಿಹಾಕಿದೆ… ಸರ್ಕಾರ ಕಾಳಧನಿಕರ ಹೆಸರುಗಳನ್ನು ಬಯಲುಗೊಳಿಸಿದರೆ ಅದು ಗೌಪ್ಯತೆ ಕಾಪಾಡುವ ನಿಯಮಗಳನ್ನು ಉಲ್ಲಂಘಿಸಿದಂತಾಗಲಿದೆ. ಇದರ ಪರಿಣಾಮವಾಗಿ ಭಾರತದ ಸ್ಥಾನಮಾನ ಕೆಳಗಿಳಿಯಲಿದೆ” ಎಂದು ತಿಳಿಸಲಾಗಿದೆ! ಇದು ಚುನಾವಣಾ ಕಾಲದ ಎಲ್ಲಾ ಹೇಳಿಕೆಗಳಿಗೆ ತದ್ವಿರುದ್ಧವಾಗಿದೆ! ಮೋದಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಿಂದ ಒಂದು ನಯಾಪೈಸೆ ಕಪ್ಪುಹಣವನ್ನೂ ವಾಪಸ್ಸು ತಂದಿಲ್ಲ!! ಈಚಿನ ಒಂದು ಮನ್ ಕಿ ಬಾತ್‌ನಲ್ಲಿ ವಿದೇಶಗಳಲ್ಲಿರುವ ಕಪ್ಪುಹಣದ ಪ್ರಮಾಣ ಎಷ್ಟೆಂದು ತನಗೆ ತಿಳಿದಿಲ್ಲ ಎಂದು ಖುದ್ದು ಮೋದಿಯೇ ಒಪ್ಪಿಕೊಂಡಿದ್ದಾನೆ!!

ನೋಟು ರದ್ದತಿಯಲ್ಲೂ ಯೂ ಟರ್ನ್

ನವೆಂಬರ್ ೮, ೨೦೧೭ರ ಮಧ್ಯರಾತ್ರಿ ನೋಟು ರದ್ದತಿ ನಿರ್ಧಾರವನ್ನು ರಾಷ್ಟ್ರಕ್ಕೆ ಸಾರಿದ ಸಂದರ್ಭದಲ್ಲಿ ಮೋದಿ ಹೇಳಿದುದೇನು? “… ಪ್ರಾಮಾಣಿಕ ಜನ ತಾತ್ಕಾಲಿಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು… ಭ್ರಷ್ಟಾಚಾರ, ಕಪ್ಪುಹಣ, ಖೋಟಾ ನೋಟುಗಳು ಮತ್ತು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ, ನಮ್ಮ ದೇಶವನ್ನು ಶುದ್ಧೀಕರಿಸುವ ಈ ಚಳವಳಿಯಲ್ಲಿ ಎದುರಾಗುವ ಕಷ್ಟಗಳನ್ನು ನಮ್ಮ ಜನ ಕೆಲವು ದಿನಗಳ ಕಾಲ ಸಹಿಸಿಕೊಳ್ಳಲಾರರೆ?” ಎಂದು ಭಾವನಾತ್ಮಕ ಭಾಷಣ ಕುಟ್ಟಿದ್ದ. ಆದರೆ ಯಾವಾಗ ಜನರು ಬ್ಯಾಂಕುಗಳ ಮುಂದೆ ದಿನಗಟ್ಟಲೆ ಸರದಿಯ ಸಾಲಿನಲ್ಲಿ ನಿಲ್ಲುತ್ತಿರುವ ವರದಿಗಳು ಬರತೊಡಗಿದವೊ ಆಗ ನವೆಂಬರ್ ೧೩ರಂದು “ಈ ಸಂಕಷ್ಟಗಳು ಕೇವಲ ೫೦ ದಿನಗಳ ಮಟ್ಟಿಗೆ. ಒಮ್ಮೆ ಎಲ್ಲವೂ ಸ್ವಚ್ಛವಾದರೆ ಒಂದು ಸೊಳ್ಳೆ ಕೂಡಾ ಇರಲಾರದು… ನನಗೆ ಬರೀ ೫೦ ದಿನಗಳ ಕಾಲಾವಕಾಶ ಕೊಡಿ, ವಿಫಲನಾದರೆ ನನ್ನನ್ನು ಜೀವಂತ ಸುಟ್ಟುಬಿಡಿ” ಎಂಬ ನಾಟಕೀಯ ಹೇಳಿಕೆ ನೀಡಿದ.

ಭಾರತೀಯ ರಿಸರ್ವ್ ಬ್ಯಾಂಕು ತೀರಾ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿರುವ ವರದಿಯ ಬಳಿಕ ಮೋದಿ ಮತ್ತಾತನ ಭಕ್ತರ ಲೆಕ್ಕಾಚಾರ, ಊಹಾಪೋಹಗಳೆಲ್ಲವೂ ತಲೆಕೆಳಗಾಗಿವೆ. ಸುಮಾರು ಶೇಕಡಾ ೯೯ರಷ್ಟು ಹಳೆ ನೋಟುಗಳು ವ್ಯವಸ್ಥೆಗೆ ಮರಳಿರುವುದಾಗಿ ಹೇಳುತ್ತಿರುವ ಆರ್‌ಬಿಐ ಎಷ್ಟು ಕಪ್ಪುಹಣ ನಿರ್ಮೂಲನೆ ಆಗಿದೆ ಎಂಬ ಮಾಹಿತಿ ತನ್ನಲ್ಲಿಲ್ಲ ಎನ್ನುತ್ತ್ತಿದೆ! ರಿಸರ್ವ್ ಬ್ಯಾಂಕಿನ ಋಣಾತ್ಮಕ ವರದಿಯಿಂದ ಕಂಗಾಲಾದ ಮೋದಿ ಸರ್ಕಾರ ನೋಟು ರದ್ದತಿ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದೆ. ಖಾಸಗಿ ಸಾರ್ವಜನಿಕ ಸಂಪರ್ಕ ಏಜೆನ್ಸಿಗಳಿಗೆ ದುಡ್ಡು ಕೊಟ್ಟು ಟ್ವಿಟರ್ ಹ್ಯಾಂಡಲ್‌ಗಳನ್ನು ಖರೀದಿಸಿ ಮಂತ್ರಿಗಳ ಹೆಸರಿನಲ್ಲಿ ಒಂದೇ ರೀತಿಯಾದ ಯಶೋಗಾಥೆಯನ್ನು ಕಳುಹಿಸಲಾಗುತ್ತಿದೆ! ಇಂತಹ ಏಜೆನ್ಸಿಗಳನ್ನು ಬಳಸುವ ಮೋದಿ ಸರ್ಕಾರದ ಸಚಿವ ಖಾತೆಗಳು ಅವುಗಳಿಗೆ ವರ್ಷವೊಂದರ ಸುಮಾರು ರೂ. ೨ ಕೋಟಿಯಷ್ಟು ಪಾವತಿಸುತ್ತಿರುವುದಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ!

ನೋಟು ರದ್ದತಿ ಪ್ರಾರಂಭವಾಗಿ ೫೦ ದಿನಗಳ ನಂತರ ಅದು ವಿಫಲವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಮೋದಿ ಸರ್ಕಾರ ತನ್ನ ಗುರಿಗಳನ್ನು ಬದಲಾಯಿಸತೊಡಗಿದೆ. ಆರ್‌ಬಿಐ ವರದಿಯ ನಂತರ ಅರುಣ್ ಜೇಟ್ಲಿ ಹಾಡುತ್ತಿರುವ ಹೊಸ ರಾಗದ ವೈಖರಿ ಹೇಗಿದೆ ನೋಡಿ: “ನೋಟು ರದ್ದತಿಯ ನೈಜ ಗುರಿ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಹಣದ ಪಾತ್ರವನ್ನು ಕಡಿಮೆ ಮಾಡಿ, ತೆರಿಗೆದಾರರ ಸಂಖ್ಯೆ ಹೆಚ್ಚಿಸಿ, ನಗದುರಹಿತ ವ್ಯವಹಾರಕ್ಕೆ ಒತ್ತು ನೀಡುವುದಾಗಿತ್ತು!”

ಬೂಸಿ ಬಸ್ಯಾ ಮತ್ತಾತನ ಚೇಲಾ ಚಮಚಾಗಳ ಚಮತ್ಕಾರಿಕ ಮಾತುಗಳನ್ನು ನಂಬಿ ಮುಂಬರುವ `ಅಚ್ಚೇ ದಿನ್’ಗಳ ನಿರೀಕ್ಷೆಯಲ್ಲಿ ಪ್ರಸಕ್ತ ಸಂಕಟಗಳನ್ನು ಮರೆತ ಜನರಿಗೆ ಅಂತಿಮವಾಗಿ ಸಿಕ್ಕಿರುವುದೇನು? ‘ಅಚ್ಚೇ ಟೋಪಿ’! ಅದೂ ಅಂತಿಂಥಾ ಟೋಪಿ ಅಲ್ಲ, ಅನೌಪಚಾರಿಕ ಅರ್ಥವ್ಯವಸ್ಥೆಯ ನಾಶ, ಮಧ್ಯಮ ಮತ್ತು ಲಘು ಉದ್ಯೋಗಗಳ ನಿರ್ನಾಮ, ಬೀದಿಗೆ ಬಿದ್ದ ಸುಮಾರು ೧೫ ಲಕ್ಷ ಕಾರ್ಮಿಕರು, ಇಳಿಮುಖವಾದ ಉತ್ಪಾದನೆ, ಹೂಡಿಕೆಯಲ್ಲಿ ತೀವ್ರ ಇಳಿಕೆ, ಜಿಡಿಪಿ ದರ ಕುಸಿತ, ನಿರುದ್ಯೋಗಿಗಳ ಸಂಖ್ಯೆಯಲ್ಲಿ ಅಪಾರ ಹೆಚ್ಚಳ, ಜಿಎಸ್‌ಟಿ ಫಲವಾಗಿ ಆಗಿರುವ ದರ ಏರಿಕೆಗಳ `ಮಖ್‌ಮಲ್ ಟೋಪಿ’!!

(ಆಧಾರ: ಜಯೇಶ್ ಶಾರ ಕೃತಿ ಬ್ಲಫ್ ಮಾಸ್ಟರ್; ವಿವೇಕ್ ಕೌಲ್ ಡೈರಿ; ದ ವಯರ್.ಕಾಮ್‌ನಲ್ಲಿ ಜೇಮ್ಸ್ ವಿಲ್ಸನ್ ಲೇಖನ)

*****************

ಒಂದು ಪತ್ರ
ಚುನಾವಣಾ ಪೂರ್ವ ಸಮೀಕ್ಷೆ: ಇದು ನಿರೀಕ್ಷೆ ಮಾತ್ರ?

ಖಾಸಗಿ ಸಂಸ್ಥೆ `ಸಿ ಫೋರ್’ ಚುನಾವಣಾ ಪೂರ್ವ ಟ್ರೆಂಡ್ ಸಮೀಕ್ಷೆ ನಡೆಸಿದ್ದು, ಈಗ ಕರ್ನಾಟಕದಲ್ಲಿ ಚುನಾವಣೆ ನಡೆದರೆ, ಕಾಂಗ್ರೆಸ್ ಪಕ್ಷಕ್ಕೆ ೧೨೦-೧೩೨, ಭಾಜಪಕ್ಕೆ ೬೦-೭೨, ಜಾತ್ಯತೀತ ಜನತಾ ದಳಕ್ಕೆ ೨೪-೩೦ ಮತ್ತು ಇತರರಿಗೆ ಸುಮಾರು ೦೧-೦೬ ರ ವರೆಗೆ ಸೀಟುಗಳು ದೊರೆಯಬಹುದೆಂದು ಅಂದಾಜು ಮಾಡಿದೆ. ಹಾಗೆಯೇ ೪೭% ಜನತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಬಯಸಿದರೆ, ೨೭% ಯಡಿಯೂರಪ್ಪ ಮತ್ತು ೧೭% ಕುಮಾರಸ್ವಾಮಿಯ ಬಗೆಗೆ ಒಲವು ತೋರಿಸಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳು ಯಾರು ಎನ್ನುವ ದೃಷ್ಟಿಯಲ್ಲೂ ಸಿದ್ದು ೪೬% ಮತ ಪಡೆದಿದ್ದರೆ, ಯಡಿಯೂರಪ್ಪ ೨೭% ಮತ್ತು ಕುಮಾರಸ್ವಾಮಿ ೧೮% ಪಡೆದಿದ್ದಾರೆ.

ಸ್ವಾಭಾವಿಕವಾಗಿ ಕಾಂಗ್ರೆಸ್ ಪಕ್ಷದ ಗರಿಗೆದರಿದೆ ಮತ್ತು ಬೀಗುತ್ತಿದೆ. ಮೇಲುನೋಟಕ್ಕೆ ಭಾಜಪ ಸಮೀಕ್ಷಾ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ಡಾಕ್ಟರ್ಡ್ ವರದಿ ಎಂದು ಹೇಳಿದ್ದರೂ, ಕಾಂಗ್ರೆಸ್ ಪಕ್ಷ ಮುಕ್ತ ಕರ್ನಾಟಕ ಮಾಡುವ ಕನಸು ಕಾಣುತ್ತಿದ್ದ, ಮಿಷನ್ ೧೫೦ ನಿರೀಕ್ಷೆಯಲ್ಲಿದ್ದ ಅದರ ಜಂಘಾಬಲ ಉಡುಗಿದಂತೆ ಕಾಣುತ್ತಿದೆ. ಕಳೆದ ಲೋಕಸಭಾ ಚುನಾವಣೆ ನಂತರ ನಡೆದ ೨-೩ ಇಂತಹ ಸಮೀಕ್ಷೆಯಲ್ಲಿ ಭಾಜಪ ಎದುರಾಳಿಗಳಿಗಿಂತ ಮುಂದೆ ಇದ್ದು “ಮುಂದಿನ ಬಾರಿ” ತನ್ನದೇ ಅಧಿಕಾರ ಎಂಬ ಉತ್ಸಾಹದಲ್ಲಿತ್ತು. ಕೆಲವು ಮಾಧ್ಯಮಗಳು ಭಾಜಪದಲ್ಲಿ ಮುಂದಿನ ಸಚಿವ ಸಂಪುಟ ಕೂಡಾ ರೆಡಿಯಾಗಿದೆ ಎಂದು ಟೀಕಿಸಿದ್ದವು.

ಮುಂದಿನ ದಿನಗಳಲ್ಲಿ ಪರಿಸ್ಥಿತಿಯ ಬದಲಾವಣೆಯೊಂದಿಗೆ ಅದೇ ಅಭಿಪ್ರಾಯ ಮುಂದುವರೆಯಬಹುದು, ಸ್ವಲ್ಪ ಬದಲಾಗಬಹುದು ಅಥವಾ `ಯೂ’ ಟರ್ನ್ ಹೊಡೆದರೂ ಹೊಡೆಯಬಹುದು. ಅಂತೆಯೇ ಸಮೀಕ್ಷೆಯನ್ನು `ದೈವ ಸತ್ಯ’ ಎಂದು ಹೇಳಲಾಗದು. ಆದರೆ, ಎಂಬತ್ತರ ದಶಕದಲ್ಲಿ ಅಗಿನ ಇಂಗ್ಲಿಷ್ ಪಾಕ್ಷಿಕ ಇಂಡಿಯಾ ಟುಡೆ ನಡೆಸಿದ ಮೊದಲ ಚುನಾವಣಾ ಪೂರ್ವ ಸಮೀಕ್ಷೆಯಿಂದ ಈವರೆಗೆ ಪ್ರಕಟವಾದ ಸಾವಿರಾರು ಇಂತಹ ಸಮೀಕ್ಷೆಗಳನ್ನು ಸೂಕ್ಷ್ಮಮವಾಗಿ ಪರಿಶೀಲಿಸಿದರೆ, ಸಮೀಕ್ಷೆಗಳು ನೀಡುವ ಪರಿಣಾಮಗಳು ೧೦೦% ಪರಿಪೂರ್ಣವಾಗಿರದಿದ್ದರೂ ವಾಸ್ತವದ ಹತ್ತಿರದಲ್ಲಿ ಇರುವುದನ್ನು ಗಮನಿಸಬಹುದು. ಇದೇ ಅಂತಿಮ ಪರಿಣಾಮ ಎಂದು ಹೇಳದಿದ್ದರೂ, ಇದನ್ನು ದಿಕ್ಸೂಚಿ ಎನ್ನಬಹುದು. ಗಾಳಿ ಬೀಸಬಹುದಾದ ದಿಕ್ಕು ಎಂದೂ ಹೇಳಬಹುದು. ಈ ದಿಕ್ಸೂಚಿಯನ್ನು ಅತಿ ಆತ್ಮವಿಶ್ವಾಸದಲ್ಲಿರುವ ಭಾಜಪಕ್ಕೆ ಎಚ್ಚರಿಕೆ ಗಂಟೆ ಎನ್ನಬಹುದು. ಹಾಗೆಯೇ ಕಾಂಗ್ರೆಸ್ ಪಕ್ಷ ಕೂಡಾ ಈ ಸಮೀಕ್ಷೆಯನ್ನು ನೋಡಿ ಸಂಭ್ರಮ ಪಡುವಂತಿಲ್ಲ. ಇದು ಕೇವಲ ಅಂದಾಜು ಮಾತ್ರ. ಗಣಿತ ಶಾಸ್ತ್ರದ Probability Theory ಇದ್ದಂತೆ.

– ರಮಾನಂದ ಶರ್ಮಾ, ಬೆಂಗಳೂರು

*****************

ಪಬ್ಲಿಕ್ ರಂಗಣ್ಣ
ಒಂದು `ಕಂಡ’ ಕಾವ್ಯ

ನಂ
ಪಬ್ಲಿಕ್ ರಂಗಣ್ಣ
ಹ್ಯೇಳಿದ್ರಲ್ಲಿ
ತ್ಯೆಪ್ಪೇನೈತಿ?
ನೆಪ್ತಿ ಇರುಲಿ
ಈ ದ್ಯೇಸದ
ಶತಮಾನುದ ಸತ್ಯುವ
ಮೊದ್ಲು ನುಡುದುದ್ದೆ
ನಂ ರಂಗಣ್ಣ!

ಅತ್ತ ಮೋದಿ ಮಹಾತ್ಮ
ನೋಟು ಬ್ಯಾನು
ಮಾಡುತ್ತಿದ್ದಂಗೆ
ಇತ್ತ ರೊಚ್ಚಿಗೆದ್ದ
ನಂ ರಂಗಣ್ಣ
ಪಬ್ಲಿಕ್ ಮಠದ
ಪೀಠವನೇರಿ,
ಮಾತು ಬಾರದ
ಮುದ್ದು ಸಾದ್ವಿಯ
ಮಗ್ಗುಲಿಗೆ ಎಳಕೊಂಡು
ಮಾಡಿದ್ದೇ ಮಾಡಿದ್ದು….
ಮಾಡಿದ್ದೇ ಮಾಡಿದ್ದು….
….. ಇಶ್ಲೇಷಣೆಯ ಕ್ಲಾಸು!

ಕೈಯಲ್ಲಿ ಪುಡುಗಾಸು
ಹಿಡುದ ಭಾರತ
ಬ್ಯಾಂಕು, ಪೋಸ್ಟಾಪೀಸುಗಳ
ಮುಂದೆ ನಿಂತು
ಟೇಮು ವೇಸ್ಟು
ಮಾಡುವಾಗ,
ಕೋಳ್ಟಿನ ಅಮೀನಣ್ಣ
ಕೂಗಿಕ್ವಂಡಂಗೆ
ನಂ ರಂಗಣ್ಣ
ಮತ್ತೆಮತ್ತೆ
ಅರಚಿಕ್ವಂಡದ್ದು ನೆನಪಿದ್ಯಾ?

`ಎಲ್ಡು ಸಾವುರದ ನೋಟು
ಚಿಪ್ಪು…..!
ಎಲ್ಡು ಸಾವುರದ ನೋಟು
ಚಿಪ್ಪು…..!!
ಎಲ್ಡು ಸಾವುರದ ನೋಟು
ಚಿಪ್ಪು……..!!!

ಅವತ್ತು ನಂ
ರಂಗಣ್ಣುನ್ನ ನೋಡಿ
ಸುಖಾಸುಮ್ಕೆ
ನಗಬಾರದ ಜಾಗದಿಂದೆಲ್ಲ
ಕಿಸಿಕಿಸಿ ಕಿಸಾಡಿದ
ಪುಣ್ಯಾತ್ಮುರೇ,
ಇವತ್ತು
ಮೋದಿ ಮಹಾತ್ಮುನೇ
ಆ ಮಾತುನ್ನ ನಿಜ ಮಾಡ್ಯಿಲ್ವಾ?
`ಎಲ್ಡು ಸಾವುರದ ನೋಟು
ಜನರ ಕೈಗೆ
ತೆಂಗಿನಕಾಯಿ ಚಿಪ್ಪು!!!!!!’

ಇದ್ಕೇನಂತೀರಾ?
ನಂ ರಂಗಣ್ಣ
ಹ್ಯೇಳಿದ್ರಲ್ಲಿ
ತ್ಯೆಪ್ಪೇನೈತಿ…….

ಹೇಳಿದ ಸತ್ಯುವ
ಅರ್ತ
ಮಾಡ್ಕಣಕ್ಕಾಗುದ
ನಿಜಗೇಡಿಗಳೆ,
ಇನ್ಮೇಕಾದ್ರು
ಸತ್ಯವಂಸುದ
ನಂ ರಂಗಣ್ಣುನ್ನ
ಆಡ್ಕಳಕ್ಕೂ ಮೊದ್ಲು
ಮೈ ಮ್ಯಾಲೆ
ಒಸಿ ಖಬರ್ ಇರುಲಿ
ಹುಸಾರು…..!!!

– ತರ್ಲೆ ನನ್ಮಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...