Homeಸಾಮಾಜಿಕಕಿಸಾನ್ ಮುಕ್ತಿ ಮಾರ್ಚ್ 'ದೆಹಲಿ ಚಲೋ'

ಕಿಸಾನ್ ಮುಕ್ತಿ ಮಾರ್ಚ್ ‘ದೆಹಲಿ ಚಲೋ’

- Advertisement -
- Advertisement -

ಕಾದಂಬಿನಿ |

ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರಮೋದಿ ನೇತೃತ್ವದ ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆಯೇರಲು ರೈತರಿಗೆ ಅನೇಕ ಭರವಸೆಗಳನ್ನು ನೀಡಿತ್ತು. ಆದರೆ ಅಧಿಕಾರ ಹಿಡಿದ ಕೆಲ ಸಮಯದಲ್ಲಿ, ಕೊಟ್ಟ ಮಾತಿನಂತೆ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ವಾಮಿನಾಥನ್ ಆಯೋಗದ ವರದಿ ಜಾರಿಮಾಡಬೇಕು, ರೈತರಲ್ಲಿ ಸುರಕ್ಷಾಭಾವ ಮೂಡುವಂತೆ ತಮ್ಮ ಉತ್ಪಾದನಾ ವೆಚ್ಚದ ಕನಿಷ್ಟ 50% ಹೆಚ್ಚು ದರ ನಿಗದಿಪಡಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು ರೈತರು ಕೃಷಿಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಈ ಭರವಸೆಗಳನ್ನೆಲ್ಲ ‘ಚುನಾವಣಾ ಪ್ರಚಾರದ ಜುಮ್ಲಾ’ ಎನ್ನಲಾಯಿತು. ಅಂಕಿಅಂಶಗಳ ಪ್ರಕಾರ ಮೋದಿ ಸರಕಾರದ ಮೊದಲ ಮೂರು ವರ್ಷಗಳಲ್ಲಿಯೇ 36 ಸಾವಿರ ರೈತರ ಆತ್ಮಹತ್ಯೆಗಳಾಗಿವೆ, ಬಿಜೆಪಿ ಸರಕಾರವಿರುವ ಮಹಾರಾಷ್ಟ್ರದಲ್ಲಿಯೇ 12 ಸಾವಿರ ರೈತರ ಆತ್ಮಹತ್ಯೆಗಳಾಗಿವೆ. ಕೆಲ ರಾಜ್ಯಗಳಲ್ಲಿ ಆದ ಆತ್ಮಹತ್ಯೆಗಳು ಅಂಕಿಅಂಶದಲ್ಲಿ ಸೇರಿಯೇ ಇಲ್ಲ. 70% ಆತ್ಮಹತ್ಯೆಗಳು ಬಿಜೆಪಿ ಹಾಗೂ ಎಂಡಿಎ ಸರಕಾರವಿರುವಲ್ಲಿಯೇ ಆಗಿರುವುದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಕೊಟ್ಟ ಆಶ್ವಾಸನೆಗಳನ್ನೇ ಅಣಕಿಸುವಂತಿವೆ.

ಇದು ಸಾಲದೆಂಬಂತೆ ತೀರ ಇತ್ತೀಚೆಗೆ ಫಸಲ್ ಬಿಮಾ ಯೋಜನೆಯ ಹಗರಣ ಹಾಗೂ ಕೃಷಿ ಮಂತ್ರಾಲಯವೇ ನೋಟು ಅಮಾನ್ಯೀಕರಣವು ಕೃಷಿ ಕ್ಷೇತ್ರದ ಸೊಂಟ ಮುರಿದಿದೆ ಎನ್ನುವುದನ್ನು ಒಪ್ಪಿಕೊಂಡಿದೆ ಎನ್ನುವ ಸುದ್ದಿಗಳು ಜೋರಾಗಿ ಸದ್ದುಮಾಡಿದವು. ಒಟ್ಟಾರೆಯಾಗಿ ಕೊಟ್ಟ ಮಾತು ತಪ್ಪಿದ ಮೋದಿ ಸರಕಾರದ ನಡೆಯ ವಿರುದ್ಧ ಸಂಘರ್ಷಗಳು ನಡೆಯುತ್ತಲೇ ಇವೆ.

ಕಳೆದ ವರ್ಷ ರೈತರ 200 ಕಿಲೋಮೀಟರುಗಳ ಸುದೀರ್ಘ ನಾಸಿಕ್- ಮುಂಬಯಿ ಲಾಂಗ್ ಮಾರ್ಚ್ ನಡೆಯಿತು. ರಾಜಸ್ಥಾನ್, ಹಿಮಾಚಲ್ ಪ್ರದೇಶ, ಹರಿಯಾಣಾ ಹೀಗೆ ದೇಶದ ಅನೇಕ ರಾಜ್ಯಗಳಲ್ಲಿ ಕೇಂದ್ರ ಸರಕಾರದ ರೈತವಿರೋಧಿ ನೀತಿಯ ವಿರುದ್ಧ ರ್ಯಾಲಿಗಳು ನಡೆದವು. ಮಧ್ಯ ಪ್ರದೇಶದಲ್ಲಿ ಸರಕಾರವು ಆರು ರೈತರನ್ನು ಗುಂಡಿಟ್ಟು ಹತ್ಯೆ ಮಾಡಿದ ‘ಮಂಡ್ಸೋರ್ ಕಾಂಡ’ದ ನಂತರ ಸುಮಾರು 200 ಕ್ಕಿಂತ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಅಖಿಲಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು. ಇದೇ ಸಮಿತಿಯು ಕಳೆದ ವರ್ಷದ ನಾಸಿಕ್- ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ಇದೇ ನವೆಂಬರ್ 29-30 ರಂದು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿ ಮಾರ್ಚ್’ ಆಯೋಜಿಸಿದೆ.

ಸ್ವಾಮಿನಾಥನ್ ವರದಿಯ ಜಾರಿ ಹಾಗೂ ರೈತರ ಸಾಲ ಹಾಗೂ ಬೆಳೆಗಳ ಬೆಲೆ ನಿಗದಿಗಾಗಿ 21 ದಿನಗಳ ವಿಶೇಷ ಜಂಟಿ ಸಂಸತ್ ಅದಿವೇಶನದ ಆಗ್ರಹವನ್ನು ಮುಂದಿಟ್ಟುಕೊಂಡು ಆಯೋಜಿಸಿರುವ ಈ ಕಿಸಾನ್ ಮುಕ್ತಿಮಾರ್ಚ್ ಗೆ ವಿವಿಧ ರಾಜ್ಯಗಳಿಂದ ಅಂದಾಜು ಎರಡು ಲಕ್ಷ ರೈತರು ಹಾಗೂ ರೈತರಿಗಾಗಿ ಫೋಟೋಗ್ರಾಫರುಗಳು, ರೈತರಿಗಾಗಿ ವಕೀಲರು, ರೈತರಿಗಾಗಿ ವಿದ್ಯಾರ್ಥಿಗಳು, ರೈತರಿಗಾಗಿ ಟೆಕ್ಕಿಗಳು ಎಂಬ ಸರಣಿಯಲ್ಲಿ ರೈತರೊಂದಿಗೆ ಬೆಸೆದ ಗುಂಪುಗಳು, ಜನಸಾಮಾನ್ಯರು ಹೀಗೆ ಸುಮಾರು ‘ದೆಹಲಿ ಚಲೋ, ರಾಜಭವನ್ ಚಲೋ’ ಘೋಷಣೆಗಳೊಂದಿಗೆ ದೆಹಲಿಯ ನಾಲ್ಕು ದಿಕ್ಕುಗಳಿಂದ ರಾಮಲೀಲಾ ಮೈದಾನಕ್ಕೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ. ಈಗಾಗಲೇ ಈ ‘ಕಿಸಾನ್ ಮುಕ್ತಿ ಮಾರ್ಚ್’ ಯಶಸ್ವಿಯಾಗಿ ಆರಂಭಗೊಂಡಿದೆ. ಆದರೆ ರೈತರ ಸಂಕಟಗಳಿಗೆ ಮುಕ್ತಿ ಕೊಡುವ ವಿಚಾರಕ್ಕೆ ನರೇಂದ್ರ ಮೋದಿ ಸರಕಾರ ಹೇಗೆ ಸ್ಪಂದಿಸುತ್ತದೆ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

0
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, 'ಭಾರತವು ಪೊಲೀಸ್ ರಾಜ್' ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ...