ಕಥೆ: ಮಾಯೆ

- Advertisement -
- Advertisement -

ಆರ್.ಕುಮಾರ್ , ಶಿವಮೊಗ್ಗ |

ಗುಬ್ಬಿ…ಗುಬ್ಬಚ್ಚಿಯೇ! ಅದು ಪುಟ್ಟ ಗುಬ್ಬಚ್ಚಿಯೇ, ಹಳದಿಕೊಕ್ಕು ಕೆಂಪನೆಯ ಕಂಗಳು ಉದ್ದನೆಯ ಬಾಲ, ಆ ಗುಬ್ಬಚ್ಚಿಯನ್ನು ನೋಡಲು ಆಶ್ಚರ್ಯವಾಗುತ್ತಿತ್ತು. ಮೇಷ್ಟ್ರಿಗೆ, ಇದೇನು ಉದ್ದನೆಯ ಬಾಲ…! ಹಳದಿ ಕೊಕ್ಕು…ಕೆಂಪನೆಯ ಕಂಗಳು… ಆ ಕಣ್ಣುಗಳು ಅವರ ಕೈಯಲ್ಲಿದ್ದ ಸರಕಾರಿ ಕಡತದ ಗಂಟನ್ನು ದಿಟ್ಟಸಿ ನೋಡುತ್ತಿದ್ದವು. ಕಡತದ ಗಂಟು ಕೈಯಿಂದ ಜಾರಿ ಬೀಳದಂತೆ ಬಿಗಿಯಾಗಿ ಹಿಡಿದಿಟ್ಟಿದ್ದರು. ಅದು ಚುನಾವಣ ಅಧಿಕಾರಿಯಾಗಿ ನೇಮಿಸಿ ನೀತಿಸಂಹಿತೆಯ ಸಾರುವ ಸಂವಿಧಾನಾತ್ಮಕ ಕರಡು ಪ್ರತಿಗಳ ಗಂಟಾಗಿದ್ದವು.

ಮರುಕ್ಷಣವೇ ಬೆಚ್ಚಿಬಿದ್ದರು. ಹಾಗೆ ಬೆಚ್ಚಿಬೀಳಲು ಕಾರಣ_

“ಕಾ…ಕಾ…” ಎಂದು ಕರೆದಿತ್ತು ಆ ಪುಟ್ಟ ಗುಬ್ಬಚ್ಚಿ, ಅರೇ… ಈ ಗುಬ್ಬಚ್ಚಿ ಕಾಗೆಯಂತೆ ಕೂಗುತ್ತಿದೆಯಲ್ಲ…! ಎಂದು ಭಯದಿಂದ ಗುಬ್ಬಚ್ಚಿಯನ್ನು ದಿಟ್ಟಿಸಿ ನೋಡಿದರು ಆಶ್ಚರ್ಯ.

“ನನಗೆ ಆ ಕಡತಗಳು ಬೇಕು” ಮಾತನಾಡಿಸಿತು ಅದೇ ಗುಬ್ಬಚ್ಚಿ ! ಧ್ವನಿಯಲ್ಲಿ ಅಧಿಕಾರವಿತ್ತು. ಎದ್ದು ಓಡಿಹೋಗಲು ಪ್ರಯತ್ನಿಸಿದರು ಮೇಷ್ಟ್ರು, ಅಡ್ಡಲಾಗಿ ಬಂದು ನಿಂತಿತು ಗುಬ್ಬಚ್ಚಿ.

ಮೇಷ್ಟ್ರು ಭಯದಿಂದ ಕಂಗಾಲಾಗಿ ನೋಡು… ನೋಡುತ್ತಿರುವಂತೆಯೇ ಆ ಪುಟ್ಟ ಗುಬ್ಬಚ್ಚಿ ಗೂಳಿಯ ಗಾತ್ರಕ್ಕೆ ಬೆಳೆದು ಭೂತಾಕಾರದ ದರ್ಶನ ನೀಡಿತು, ಅಷ್ಟಲ್ಲದೆ ತನ್ನ ರೆಕ್ಕೆಗಳನ್ನು ಅರಳಿಸಿ ಮೇಷ್ಟ್ರನ್ನು ಆವರಿಸಿತು.

“ಇದೇನು ಗುಬ್ಬಿಯೋ ಗೂಳಿಯೋ…?” ಮೇಷ್ಟ್ರು ಬಾಯಿ ತಾನಾಗಿಯೇ ಗುನುಗುತಿತ್ತು, ಆ ರಾಕ್ಷಸಾಕಾರದ ಕಣ್ಣುಗಳು ಅವರ ಕೈಯಲ್ಲಿದ್ದ ಗಂಟಿನಲ್ಲಿ ಹುದುಗಿ ಹೋಗಿತ್ತು.

ಎದ್ದು ಓಡಿಹೋಗಲು ಪುನಃ ಪ್ರಯತ್ನಿಸಿದರು ಮೇಷ್ಟ್ರು, “ಕಾ…ಕಾ…” ಎಂದು ಈ ಬಾರಿ ಕೂಗಿದ್ದು ಕಿವಿಯ ತಮಟೆ ಒಡೆದು ಹೋಗುವಂತಿತ್ತು. ಹಿಂದಿರುಗಿ ನೋಡದೆ ಕಣ್ಣು ಮುಚ್ಚಿ ಒಂದೇ ಸಮನೆ ಓಡಿದರು.

ಓಡಿದರು…ಓಡಿದರು ಓಡಿಕೊಂಡೆ ಇದ್ದರು… ಅಲ್ಲೊಂದು ನೀಲಿ ಬಣ್ಣದ ಕುದುರೆಯೊಂದು ಅಡ್ಡಗಟ್ಟಿ ನಿಂತಿತು. ಇದೇನು ಕುದುರೆನೆನಾ! ನೀಲಿ ಬಣ್ಣದಲ್ಲೂ ಕುದುರೆ ಇರುತ್ತದೆಯೇ? ಕುದುರೆ ತನ್ನ ಬಾಲವನ್ನು ಸುತ್ತಲು ತಿರುಗಿಸುತ್ತಿತ್ತು, ಬಾಲದ ತುತ್ತತುದಿಯು ಮೇಷ್ಟ್ರ ಮುಖವನ್ನು ಸವರಿತು, ಇದೇನು ಬಾಲದ ಕೂದಲು ಬಂಗಾರದಂತೆ ಹೊಳೆಯುತ್ತಿದೆ!

“ಏನು ಮೇಷ್ಟ್ರಿಗೆ ಬಂಗಾರದ ಬಾಲದೆಳೆಯೊಂದು ಬೇಕೆ?”

ಕುದುರೆ ಕೇಳಿತು, ಕುದುರೆ ಮಾತನಾಡುತ್ತದೆಯೇ! ಇದು ಯಾವ ದೇಶದ ಕುದುರೆ?. ಕುದುರೆ ಮೇಷ್ಟ್ರ ಮನಸ್ಸನ್ನು ಓದಿದಂತೆ ಪುನಃ ಮಾತನಾಡಿತು!

“ನಾನು ಬಂಗಾರದ ಹುಲ್ಲನ್ನು ತಿನ್ನುವ ಕುದುರೆ, ಅದರಲ್ಲೂ ರಾಜಕೀಯದ ಕುದುರೆ, ಸುಳ್ಳನ್ನು ಮಾತನಾಡುವ ನನ್ನ ನಾಲಿಗೆಯೇ ನನಗೆ ಮೂಲಧನ” ಎಂದು ತನ್ನ ಚಿನ್ನದ ಹಲ್ಲುಗಳನ್ನು ತೋರುತ್ತಾ ಅಡ್ಡಗಟ್ಟಿ ನಿಂತಿತು ಆ ನೀಲಿ ಕುದುರೆ.

“ನಿನಗೇನು ಬೇಕು?” ಮೇಷ್ಟ್ರ ಮನದಲ್ಲಿ ಭಯವಿದ್ದರೂ ಪ್ರಶ್ನೆಯನ್ನು ಹೊರ ಚೆಲ್ಲಿದರು.

“ನಿನ್ನ ಕೈಲಿರುವ ಟಿಪ್ಪುವಿನ ಚರಿತ್ರೆಯನ್ನು ಕೊಟ್ಟುಬಿಡು ಅದನ್ನು ತಿರುಚಿ ಬರೆಯಬೇಕಿದೆ” “ಇಲ್ಲ ಕೊಡಲಾಗದು” “ಸುಮ್ಮನೆ ಕಾಲಹರಣ ಮಾಡಬೇಡ ಬೇಕಾದರೆ ನನ್ನ ಬಂಗಾರದ ಒಂದು ಹಲ್ಲನ್ನು ಕೊಡುತ್ತೇನೆ” “ಇಲ್ಲ ಕೊಡಲಾಗದು ನಿನ್ನ ಬಂಗಾರದ ಬಾಲವು ಬೇಡ ಹಲ್ಲು ಬೇಡ ನನಗೆ ದಾರಿಬಿಡು” “ಅಯ್ಯೋ ದದ್ದು ಜೀವಿ ಹತ್ಯೆಗೊಳಗಾಗ ಬೇಡ, ಬುದ್ದಿಜೀವಿಯಾದೊಡೆ ನಾವು ಹೆಣ್ಣನ್ನು ಬಿಟ್ಟವರಲ್ಲ!” ಕುದುರೆಗೆ ಕೊಂಬು ಮೊಳೆಯುತ್ತಿತ್ತು, ಪುನಃ ಮೇಷ್ಟ್ರು ಓಡಲಾರಂಭಿಸಿದರು, ಓಡಿ ಓಡಿ ಆಯಾಸಗೊಂಡರು ಕಾರಣ ಮೇಷ್ಟ್ರಿಗೂ ವಯಸ್ಸಾಗಿತ್ತು. ಹಿಂದಿರುಗಿ ನೋಡಿದರು, ದೂರದಲ್ಲಿ ದೈತ್ಯಾಕಾರದ ಕೊಕ್ಕರೆಯೊಂದು ಓಡೋಡಿ ಬರುತ್ತಿದೆ. “ನಿಲ್ಲಿ ಮೇಷ್ಟ್ರೆ… ನಿಲ್ಲಿ, ನಿಮ್ಮ ಕೈಲಿರುವುದನ್ನು ನನಗೆ ಕೊಡಿ ನಿಮಗೆ ಬಂಗಾರದ ಮೀನನ್ನು ಕೊಡುತ್ತೇನೆ” ಮೇಷ್ಟ್ರು ತನ್ನ ಕೈಯನ್ನು ನೋಡಿಕೊಂಡರು ನೀತಿಸಂಹಿತೆಯ ಸಂವಿಧಾನಾತ್ಮಕ ಕರಡು ಪ್ರತಿಗಳು ಇಲ್ಲ, ಟಿಪ್ಪುವಿನ ಚರಿತ್ರೆಯು ಇರಲಿಲ್ಲಾ ಅದು ಮತಚೀಟಿಯಾಗಿತ್ತು. ಮತಚೀಟಿ ಕಂಡೊಡನೆ ಮಹಾರಾಜರ ನೆನಪಾಯಿತು,

“ಮಹಾರಾಜರ ಆಜ್ಞೆ, ಬೆಳಗಾದರೆ ಚುನಾವಣೆ ನಾನು ಊರ ಸಭೆಯಲ್ಲಿ ಒಬ್ಬ ಒಳ್ಳೆಯ ಮನುಷ್ಯನನ್ನು ಆಯ್ಕೆ ಮಾಡ ಬೇಕು ಮತ ಮುಖ್ಯವಾದದ್ದು ಯಾವ ಚಿಹ್ನೆಯೆಂದು ನಾನೆ ನಿರ್ಧರಿಸಬೇಕು… ನನಗೆ ಪಾರಿವಾಳವೇ ಒಪ್ಪಿಗೆಯಾಗಿರುವುದು.”

“ಹೇ ಮುಠ್ಹಾಳ ತಪ್ಪು ಮಾಡಿ ಹತ್ಯೆಯಾಗ ಬೇಡ! ಕೊಡುವುದನ್ನು ನನಗೆ ಕೊಟ್ಟುಬಿಡು.” ಕೊಕ್ಕರೆಯ ದನಿಯಲ್ಲಿ ಬೆದರಿಕೆಯಿತ್ತು. ಮೇಷ್ಟ್ರು ದಂಗಾಗಿ ಅತ್ತಿತ್ತ ನೊಡುತ್ತಿರುವಂತೆಯೇ ದಿಕ್ಕು ದಿಕ್ಕುಗಳಿಂದ ಓಡೋಡಿ ಬಂದವು ನಾಯಿ… ಮೊಲ… ಕತ್ತೆ… ಕೋತಿ… ಅವೆಲ್ಲವು ಚುನಾವಣೆಯ ಚಿಹ್ನೆಗಳು… ಕೂಗಿದವು ಅರಚಿದವು “ಮತದೋಲೆ ಬೇಕು…ಮತದೋಲೆ ಬೇಕು…” ಇವುಗಳೆಲ್ಲದರ ಕಿರುಚಾಟದ ನಡುವೆ ಕೊಕ್ಕರೆಯು ಚಿನ್ನದ ಮೀನೊಂದನ್ನು ತಂದು ಮೇಷ್ಟ್ರ ಮಂಚದ ಮೇಲೆ ಎಸೆಯಿತು, ಚಿನ್ನದ ಮೀನು ಜೀವದೋರಾಟದಲ್ಲಿ ವಿಲಿವಿಲಿ ಒದ್ದಾಡುತ್ತಿತ್ತು. ದಡಕ್ಕನೇ ಎಚ್ಚರಗೊಂಡರು ಮೇಷ್ಟ್ರು.

“ಇದೆಂತಹ ಕನಸು ವಿಚಿತ್ರವಾಗಿದೆಯಲ್ಲ? ನೂರಾರು ವರ್ಷಗಳ ಹಿಂದಕ್ಕೆ ಹೋದಂತಾಯಿತು ಮತ್ತೆ ದಶಕಗಳಿಂದೆ ಬಂದಂತಾಯಿತು, ಚುನಾವಣೆಯಲ್ಲಿ ಸ್ಪರ್ಧಿಸುವವರು ನಮ್ಮನ್ನು ಬೆದರಿಸುವುದುಂಟು ಆದರೆ ಚಿಹ್ನೆಗಳೆ ಕನಸಿನಲ್ಲಿ ಬೆದರಿಸುತ್ತಿವೆಯಲ್ಲ! ಬೆಳಗಾದರೆ ಚುನಾವಣೆ ಅದಕ್ಕಾಗಿ ಬಂದ ಕನಸಿರಬೇಕು…”

ಬೆವರಿನಿಂದ ತೊಯ್ದು ಹೋಗಿದ್ದ ಮೇಷ್ಟ್ರು ಕಿಟಕಿಯನ್ನು ತೆರೆದರು ಗಾಳಿಯು ಓಡೋಡಿ ಬಂದು ಮುಖಕ್ಕೆ ಅಪ್ಪಳಿಸಿತು. ರಾತ್ರಿ, ತಡರಾತ್ರಿಯಾಗಿತ್ತು. ದಿನಬೆಳಗಾದ್ರೆ ಚುನಾವಣೆಗೆ ಬೇಕಾದ ಓಟುಗಳನ್ನು ಕಂತಿನ ಮೂಲಕ ಒಂದು ತಿಂಗಳಿಂದ ಮಾರಾಟ ಮಾಡಿಕೊಳ್ಳುತ್ತಿದ್ದ ಕುಡುಕರ ಆರ್ಭಟವು ಕೊಂಚ ತಗ್ಗಿತ್ತು, ಆದರೂ ಎರಡು ಮೂರು ನಾಯಿಗಳು ಏನನ್ನೋ ಕಂಡು ಭಯಗೊಂಡು ಓಡೋಡಿ ಬಂದವು ಅವುಗಳನ್ನು ಬೆನ್ನಟ್ಟಿದ ಆನೆಮರಿಯಂತಹ ಕರಿಯ ಕಾರೊಂದು ಬಂದು ಸುಲ್ತಾನನ ಮನೆಯ ಮುಂದೆ ನಿಂತಿತು ಶಬ್ದವಿಲ್ಲದೆ. ಕಾರಿನಿಂದ ಕೆಳಗಿಳಿಯುತ್ತಿರುವುದು ನೆರಳ ರೂಪದಲ್ಲಿ ಕಂಡಿತು, ನಂತರ ಆ ರೂಪಗಳು ಸುಲ್ತಾನನ ಮನೆಯತ್ತ ಧಾವಿಸಿದಂತೆ ಕಂಡಿತು.

ದಶಮಾನಗಳಾಚೆ ಕೇಳಿಸಿಕೊಳ್ಳುತ್ತಿದ್ದ ಹೆಸರು ಟಿಪ್ಪುಸುಲ್ತಾನ ಈ ಎರಡುಸಾವಿರದ ಹದಿನೆಂಟರಲ್ಲು ಜನಮಾನಸದಲ್ಲಿ ಉಳಿದು ರಾಜಕೀಯದ ಅಸ್ತ್ರವಾಗಿ ಬಳಲುತ್ತಿದೆ.

ಸ್ವತಂತ್ರಕ್ಕೂ ಮುಂಚೆ ಹುಟ್ಟಿದ ಬೇವಿನಮರದ ಮನೆಯೆಂದೆ ಪ್ರಸಿದ್ದ, ಆ ಮನೆಯ ಒಡೆಯ ಬುಡೆನಸಾಹೇಬ ಸಿರಿವಂತನಾದರು, ಹೈದರಾಲಿಯನ್ನು ಮನದಲ್ಲಿಟ್ಟುಕೊಂಡು ಆತನ ವೀರ ಪುತ್ರನ ಹೆಸರನ್ನು ತನ್ನ ಮಗನಿಗೂ ಟಿಪ್ಪುಸುಲ್ತಾನ ಎಂದು ಹೆಸರಿಟ್ಟು ಅದೇ ವರ್ಷವೆ ತೀರಿಹೋದನು. ಕಾಲವು ಸುಲ್ತಾನನನ್ನು ಬಡವನನ್ನಾಗಿಸಿತು.

“ತಟ…ತಟ…” ಸುಲ್ತಾನನ ಮನೆಯ ಬಾಗಿಲು ತಟ್ಟಿದ ಸದ್ದಾಯಿತು, ಸ್ವಲ್ಪ ಹೊತ್ತಿನ ಮೌನದ ನಂತರ ಅರೆಬಾಗಿಲು ತೆರೆಯಲ್ಪಟ್ಟಿತು, ಏನೋ ಮಾತಿನ ಸದ್ದು ಕೇಳಿಸಿತು. ಪುನಃ ಕೆಲವೇ ಸಮಯದಲ್ಲಿ ಇಬ್ಬನಿ ಆವರಿಸಿತು ಮತ್ತೆ ಮೂರು ನೆರಳು ಮನೆಯೊಳಗೆ ವೇಗದಿಂದ ನುಗ್ಗಿದವು, ಅದೇ ರಭಸದಲ್ಲಿ ಬಾಗಿಲು ಮುಚ್ಚಿಕೊಂಡಿತು.

ಟಿಪ್ಪುವಿನ ಮನೆ ಅರಮನೆಯಾಗುವುದೋ? ಅಥವಾ ಸೆರೆ ಹಂಚುವ ತಂತ್ರಹೂಡುವ ಮನೆಯಾದೀತೋ.? ತುಟಿಗಳು ಮಿಸುಕಾಡಿದವು. ಕಿರು ನಗೆಯೊಂದಿಗೆ ನರೆದ ದಾಡಿಯನೊಂದು ಬಾರಿ ಸವರಿಕೊಂಡು ಬಾನಿನತ್ತ ನೋಡಿದರು. ಮೇಘಗಳ ಹಿಡಿತದಲ್ಲಿ ಬಾನು ಸಿಲುಕಿದೆ, ಕತ್ತಲೆಯ ಹಿಡಿತಕ್ಕೆ ಚಂದ್ರನ ಸೆರೆಯಾಗಿದೆ. ಚಂದಿರನನ್ನು ಕಾಣದ ಬಾನು ಅತ್ತು ಬಿಡಬೇಕೆನಿಸುವುದರಲ್ಲಿ ಮೇಘಗಳ ಹಿಡಿತದಿಂದ ತಪ್ಪಿಸಿಕೊಂಡ ಒಂದೆರಡು ನಕ್ಷತ್ರಗಳು ಕೆಲ ಕಾಲ ತನ್ನ ಕಣ್ಣುಗಳನ್ನು ರೆಪ್ಪೆಯಲ್ಲಿ ಅಡಗಿಸಿಕೊಂಡಿದ್ದವು ಈ ಗೊಂದಲದಲ್ಲಿ ಒಂದೈದು ನಿಮಿಷ ಕಳೆಯಿತು.

ಸುಲ್ತಾನನ ಮನೆ ಬಾಗಿಲು ತೆರೆಯಿತು, ರೂಪ ಒಂದು ಹೊರ ಬಂದು ವೇಗವಾಗಿ ಕಾರನ್ನು ಸಮೀಪಿಸಿ ಪಿಸುಗುಟ್ಟಿತು “ಐದು ಎಲೆ ಗರಿ ಐದು” ಇದ್ಯಾವ ಸಂಕೇತ ಭಾಷೆಯೋ?

ಕಾರಿನೊಳಗಿಂದ ಯಾರೋ ಏನೊ ಕೊಟ್ಟರು ಅದನ್ನು ಪಡೆದು ಬಂದ ವೇಗದಲ್ಲಿಯೇ ಮನೆಯೊಳು ನುಗ್ಗಿತು ಕೆಲ ನಿಮಿಷಗಳಲ್ಲಿ ಎಲ್ಲಾ ರೂಪಗಳು ಆ ಮನೆಯಿಂದ ಹೊರ ಬಂದವು, ಮರು ಕ್ಷಣವೇ ಕಾರು ಚಲಿಸಿತು. ಚಲಿಸಿದ ಕಾರು ಇನ್ನೂರಡಿ ಅಂತರದಲ್ಲಿರುವ ಕುಲಶೇಖರನ ಮನೆಯ ಮುಂದೆ ನಿಂತಿತು, ನಂತರದ ಕೆಲ ನಿಮಿಷಗಳಲ್ಲಿ ಕಣ್ಣಪ್ಪನ ಮನೆಯ ಮುಂದೆಯೂ ನಿಂತಿತು. “ಏನಿರಬಹುದು?” ಆಲೋಚಿಸುತ್ತಿರುವಂತೆಯೇ ಕಾರು ಪುನಃ ಚಲಿಸಿತು ಮೇಷ್ಟರಿಗು ನಿದ್ದೆ ಹತ್ತಿತು. ಸ್ವಲ್ಪ ಹೊತ್ತಿನಲ್ಲೆ ಕಂಡ ಕನಸ ಮರೆತು ನಿದ್ದೆಗೆ ಶರಣಾದರು.

ಮುಂಜಾನೆಎದ್ದು ನೋಡುವಾಗ ಬೆಳಕರಿದು ತುಂಬ ಹೊತ್ತಾಗಿತ್ತು. ಕಿಟಕಿ ತೆರೆದು ಟಿಪ್ಪು ಸುಲ್ತಾನನ ಮನೆಯತ್ತ ಇಣುಕಿದರು ಮನೆಯ ಬಾಗಿಲಿಗೆ ಬೀಗ ಜಡಿದಿತ್ತು.

“ಮುಂಜಾನೆ ಎದ್ದು ಹೊಲದ ಕೆಲಸಕ್ಕೆಂದು ಸಂಸಾರ ಸಮೇತ ಹೋದರೋ ಹೇಗೆ?”

ಅತುರಾತುರದಿಂದ ಎದ್ದು ಹಲ್ಲನುಜ್ಜಿ ಸ್ನಾನ ಮಾಡಿ ಉಪಹಾರವನ್ನು ಮಾಡದೆ ಬಾಗಿಲ ಬಳಿ ಬಂದು ನಿಂತರು ಮೇಷ್ಟ್ರು. ಹಾದಿಯಲ್ಲಿ ಬಿಳಿಯ ಜುಬ್ಬ ಪೈಜಾಮ ತೊಟ್ಟು ಟಿಪ್ಪು ಸುಲ್ತಾನ್ ಬರುತ್ತಿದ್ದನು, ಹಿಂದೆ ಆತನ ಹೆಂಡತಿ ಹಾಗು ಮತ ಹಾಕುವ ವಯಸ್ಸಿನ ಮೂರು ಹೆಣ್ಣು ಮಕ್ಕಳು ಬರುತ್ತಿದ್ದರು.

” ಹೇ…ಸುಲ್ತಾನ್” ಮೇಷ್ಟ್ರ ಕೂಗಿಗೆ ಹಿಂದಿರುಗಿ ನೋಡಿದ ಟಿಪ್ಪು, “ಬಾ ಇಲ್ಲಿ” ಆತನು ಮಾತ್ರವೆ ನಡೆದು ಬಂದು ಮೇಷ್ಟ್ರ ಎದುರು ನಿಂತ. “ಓಟು ಮಾಡಿದೆಯೋ?” ತೋರು ಬೆರಳನ್ನು ತೋರಿದನು ಬೆರಳನ್ನು ಹೊಲಸು ಮಾಡಿದ ಶಾಹಿಯು ನಕ್ಕಿತು. “ಓಟು ನಮ್ಮ ಸಾಹಿತಿ ದೇವಣ್ಣನಿಗೆ ತಾನೆ ಹಾಕಿದೆ?” “ಇಲ್ಲ ದಡಿಯುರಪ್ಪಗೆ” “ಏನು ದಡಿಯೂರಪ್ಪಗ?” “ಹೌದು ದಡಿಯೂರಪ್ಪಗೆ” “ಅಲ್ಲಯ್ಯ ಹೆಂಡತಿನಾ ಕೊಂದು ನಾಡನ್ನೆ ಕೊಳ್ಳೆ ಹೊಡೆದು ಜೈಲಿಗೂ ಹೋಗಿ ಬಂದವನಿಗೆ ಓಟಾಕಿದ್ದೀಯ!”

ಮೇಷ್ಟ್ರ ಪ್ರಶ್ನೆಯಲ್ಲಿ ಕೋಪವು ಇತ್ತು.

“ನಿಮ್ಮ ಕೋಪ ನನಗೆ ಅರ್ಥವಾಗುತ್ತೆ ಸಾರ್, ನನ್ನ ನ್ಯಾಯವು ನಿಮಗೆ ಅರ್ಥವಾಗಬಹುದು…ನಿನ್ನೆ ರಾತ್ರಿ ದಡಿಯೂರಪ್ಪನ ಕಡೆಯವರು ಮನೆ ಹುಡುಕಿಕೊಂಡು ಬಂದಿದ್ರು ನನ್ನ ಮನೆಲಿ ಐದು ಓಟು ಅದಕ್ಕೆ ಐದು ಹಣದ ಚೀಟಿ ಮತ್ತು ಧರ್ಮಸ್ಥಳದ ಪ್ರಸಾದ ಕೊಟ್ಟು ಹೋದ್ರು…” “ಏನದು ಹಣದಚೀಟಿ?” “ಅದೇಸಾರ್ ಹೊಸ ಕೆಂಪನೆ ನೋಟು ಅದರಲ್ಲಿ ಗಾಂಧಿ ನಗುತಾ… ಇದ್ರು.” “ಓಟನ್ನು ಹಣಕ್ಕೆ ಮಾರ್ಕೊಂಡ್ಯ?” “ಹಾಗು ತಿಳಿಯಬಹುದು…” “ಓಟು ಮಾತ್ರವೇ ಜನತೆಯ ಆಯುಧ ಅದನ್ನ ಮಾರಿಕೊಂಡು ನಿರಾಯುಧವಾಗಿ ನಿಲ್ಲಬಹುದೆ?” “ಸಾರ್ ಆಯುಧವನ್ನು ಬಿಡಿ, ಮಾನವನ್ನು ಮಾರ್ಕೊಂಡು ಬೆತ್ತಲಾಗಿ ನಿಲ್ಲಲಾದೀತೆ?, ನನಗೆ ಸಾಲ ಕೊಟ್ಟವರ ಕಣ್ಣಿಗೇನಾದ್ರು ಬಿದ್ರೆ ಬಟ್ಟೆ ಬಿಚ್ಚಿ ಬೆತ್ತಲಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆ, ಆ ಹೈದರಾಲಿಯ ಮಗ ಟಿಪ್ಪುವಿನಂತೆ ಮಕ್ಕಳನ್ನು ಒತ್ತೆ ಇಡಲು ನನಗೆ ಗಂಡು ಮಕ್ಕಳಿಲ್ಲ. ಮೂರು ಹೆಣ್ಣುಮಕ್ಕಳೇ ಇದೆಲ್ಲ ಮೇಷ್ಟರಿಗೆ ತಿಳಿದ ವಿಷಯವಲ್ಲವೇ…” ಎಂದು ಮನೆಯತ್ತ ಹೆಜ್ಜೆಹಾಕಿದ ಟಿಪ್ಪುಸುಲ್ತಾನ.

ಮೇಷ್ಟ್ರು ಏನೊಂದು ಮಾತನಾಡದೆ ಮೌನವಹಿಸಿದರು. ಹೃದಯ ಮಾತನಾಡುತ್ತಿತ್ತು, ಕಿವಿಗೂ ಕೇಳಿಸದಂತೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...