Homeಚಳವಳಿಸಾವೋ... ಕೊಲೆಯೋ...!

ಸಾವೋ… ಕೊಲೆಯೋ…!

- Advertisement -
- Advertisement -

“ಧನೋ ರಕ್ಷತಿ ರಕ್ಷಿತಃ”- ಇದು ಉಡುಪಿ ಅಷ್ಠ ಮಠಗಳ ಅಘೋಷಿತ ಘೋಷವಾಕ್ಯ. ಈ “ಧರ್ಮಸೂಕ್ಷ್ಮ”ವನ್ನು ಸದ್ರಿ ಮಾಧ್ವ ಮಠದ ಎಂಟೂ ಯತಿವರೇಣ್ಯರು ಪರಂಪರಾಗತವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಕೃಷ್ಣ ಮಠದ ಧರ್ಮ ಸದಾ ದುಡ್ಡಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಪರಸ್ಪರ ಜಗಳ-ಜಿದ್ದಿನ ಅಷ್ಠ ಮಠಪತಿಗಳು ಧರ್ಮದ ಮುಖವಾಡ ಹಾಕಿಕೊಂಡು ಲೌಕಿಕ ಸುಖಭೋಗದ ಧನಾಧಾರಿತ ದಗಲುಬಾಜಿ ದಂಧೆ ಮಾಡುತ್ತಿರುವುದು ಬಹಿರಂಗ ರಹಸ್ಯ! ಕೃಷ್ಣನ ಸನ್ನಿಧಿಯಲ್ಲಿ ಈಗ ಶಿರೂರು ಸ್ವಾಮಿ ಸತ್ತು ಮಲಗಿರುವುದು ಅಷ್ಠಮಠದÀ ಮತ್ತೊಂದು ಅನಿಷ್ಠ ಆಯಾಮ ತೆರೆದಿಟ್ಟಿದೆ!
ಶಿರೂರುಸ್ವಾಮಿ, ಯಾನೆ, ರೆಬೆಲ್ ಲಕ್ಷೀವರ ತೀರ್ಥಸ್ವಾಮಿ ಉಳಿದ ಏಳು ಸಹೋದ್ಯೋಗಿ ಸಂತರನ್ನು ಒಂದಿಲ್ಲೊಂದು ಕಾರಣಕ್ಕೆ ಎದುರು ಹಾಕಿಕೊಂಡು ಬಂಡಾಯ ಕಾವಿಜೀವಿ ಎಂಬ ಅಡ್ಡ ಅಭಿದಾನ ಪಡೆದಿದ್ದರು. ಹುಕ್ಕಿ ಹೊಕ್ಕಿತೆಂದರೆ ಎಂಥ ಸಂಸಾರಿಯೂ ನಾಚುವಂಥ “ವರಸೆ’ ಪ್ರದರ್ಶಿಸುತ್ತಿದ್ದ ಈ ಸನ್ಯಾಸಿ ಜನರೊಂದಿಗೆ ಯಾವ ಮಡಿಮೈಲಿಗೆ ಇಲ್ಲದೆ ಬೆರೆಯುತ್ತಿದ್ದರು. ಅಷ್ಠಮಠÀದ ಉಳಿದ ಸ್ವಾಮಿಗಳಿಗೆ ಹೋಲಿಸಿದರೆ ಈತ ಸೀದಾಸಾದಾ, ನೇರ-ನಿಷ್ಠೂರ ಹಾಗಿದ್ದರು. ಜಾತಿ-ಬೇಧ, ಪಂಕ್ತಿ ಬೇಧಗಳ ಬಗ್ಗೆ ಅವರಿಗೆ ಅಷ್ಟಾಗಿ ಒಲವಿರಲಿಲ್ಲ. ಸೂಕ್ಷ್ಮ ಸಂವೇದನೆಯ ಲಕ್ಷ್ಮೀವÀರರು ಜೀನ್ಸ್ ಹಾಕಿ ಕತ್ತಲಲ್ಲಿ ಪಡ್ಡೆಗಳ ಜೊತೆ ಕ್ರಿಕೆಟ್ ಆಡುತ್ತಾರೆಂದು ಸುದ್ದಿಯಾಗಿತ್ತು. ಗಿಟಾರು ನುಡಿಸುವ ಖಯಾಲಿಯ ಲಕ್ಷ್ಮೀವÀರ ಡ್ರಮ್ ಕೂಡ ಬಾರಿಸಿ ಕರ್ಮಠರ ಕೆಂಗಣ್ಣಿಗೀಡಾಗಿದ್ದರು. ಸಮುದ್ರಕ್ಕೆ ಧÀುಮುಕಿ ತುಂಬ ದೂರದವರೆಗೆ ಈಜುತ್ತಿದ್ದ ಈ ಸ್ವಾಮಿ, ಆಗಾಗ್ಗೆ ಪೇಜಾವರಾದಿಯಾಗಿ ಉಳಿದೆಲ್ಲಾ ಸ್ವಾಮಿಗಳ ಜನ್ಮ ಜಾಲಾಡುತ್ತಿದ್ದರು.
ಕಾವಿಯ ಕಟ್ಟು-ಕಟ್ಟಳೆ ಬದಿಗಿಟ್ಟು ಶೂದ್ರಾದಿಗಳ ಜತೆ ಒಡನಾಡುತ್ತಿದ್ದ ಲಕ್ಷ್ಮೀವÀರ ರಸಿಕತೆ, ರಂಗೀಲಾ ಚಟಗಳಿಂದ ವಿವಾದಕ್ಕೂ ಸಿಲುಕಿದ್ದರು. ಗಾಂಜಾ ಸೇದುತ್ತಾರೆ, ಸಿಗರೇಟು ಬೇಕೇಬೇಕು, ಹಲವು ಸಖಿಯ ಸಂಘ ಸಹಾವಾಸ, ಹೆಂಡ………ಎಂಬೆಲ್ಲಾ ಗಾಸಿಪ್ಪುಗಳು ಲಕ್ಷ್ಮೀವÀರರನ್ನು ಬಿಟ್ಟೂಬಿಡದಂತೆ ಅಮರಿಕೊಳ್ಳುತ್ತಲೇ ಇದ್ದವು. ಈ ಕಾರಣಕ್ಕೇ ಪೇಜಾವರ ಸ್ವಾಮಿ ಲೀಡರಿಕೆಯ ಉಳಿದ ಸ್ವಾಮಿಗಳ ತಂಡ ಇವರನ್ನು ಒಂಥರಾ ಅಸ್ಪøಷ್ಯನಂತೆ ನಡೆಸಿಕೊಳ್ಳುತ್ತಿದೆ ಎಂಬ ಪುಕಾರುಗಳನ್ನು ಸೃಷ್ಠಿಸಲಾಗಿತ್ತು. ವಾಸ್ತವವೆಂದರೆ ಇವರು ಸಪ್ತಸ್ವಾಮಿಗಳ ಗಂಡಾಗುಂಡಿ ನಿಭಿಡೆಯಾಗಿ ಎತ್ತಿಯಾಡುತ್ತಿದ್ದುದ್ದೇ ಇವರಿಗೆ ಮುಳುವಾಗಿತ್ತು. ಪೇಜಾವರರ ಹೆಡ್‍ಮಾಸ್ತರಿಕೆಗೆ ಅವರು ಎಂದೂ ಕೇರ್ ಮಾಡುತ್ತಿರಲಿಲ್ಲ. ಈಚೆಗಂತೂ ಪೇಜಾವರರ ಶಿಷ್ಯ-ಶಾಸಕ ರಘುಪತಿ ಭಟ್ಟನ ವಿರುದ್ಧವೇ ಲಕ್ಷ್ಮೀವÀರ ತಿರುಗಿ ಬಿದ್ದಿದ್ದರು. ಆತನ ಎದುರು ಪಕ್ಷೇತರನಾಗಿ ಚುನಾವಣಾ ಕಣಕ್ಕಿಳಿಯುವುದಾಗಿಯೂ ಗುಟುರು ಹಾಕಿದ್ದರು. ಕಾಂಗ್ರೆಸ್‍ನ ಪ್ರಮೋದ್ ಮಧ್ವರಾಜ್‍ನನ್ನು ತಾರೀಪು ಮಾಡುತ್ತಿದ್ದರು.
ಯಾವಾಗ ಶಿರೂರು ಸ್ವಾಮಿ ಬಿಜೆಪಿಗೆ ಸೆಡ್ಡು ಹೊಡೆಯಲು ಅಣಿಯಾದರೊ ಆಗ ಪೇಜಾವರಸ್ವಾಮಿ, ಮತ್ತವರ ಗಂಡಾಗುಂಡಿ ಹಿಂಬಾಲಕ ರಘುಪತಿಭಟ್ಟನಿಗೆ ಸಂಕಟ ಶುರುವಾಗಿ ಹೋಯಿತು. ಮಠದ ವ್ಯವಹಾರ ಮತ್ತು ಸಪ್ತ ಯತಿಗಳ ಢೋಂಗಿ ಧರ್ಮ ಪಾಲನೆ ಬಗ್ಗೆ ಎದುರಾಡಿ “ಉದ್ಧಟ” ಎನಿಸಿದ್ದ ಲಕ್ಷ್ಮೀವÀರರ ಹಣಿಯಲು ಸಿಕ್ಕ ಅವಕಾಶಗಳನ್ನು ಸಪ್ತಯತಿಗಳ ಸಮೂಹ ಕೈಚೆಲ್ಲಿದ್ದೇ ಇಲ್ಲ. ಅಂಥದೊಂದು ಮುಹೂರ್ತ, ಅವರು ಅಸಂಬ್ಲಿ ಇಲೆಕ್ಷನ್‍ಗೆ ನಿಲ್ಲುವ ಮಾತಾಡಿ ನಾಮಿನೇಷನ್‍ಗೆ ರೆಡಿಯಾದ ಗಳಿಗೆಯಲ್ಲಿ ಪೇಜಾವರರ ತಂಡಕ್ಕೆ ಸಿಕ್ಕಿಬಿಟ್ಟಿತ್ತು. ಮಠದೊಳಗೆ ತನಗೊಂದು ಖೆಡ್ಡಾ ತೋಡಲಾಗುತ್ತಿರುವ ಸಂಗತಿ ತಿಳಿದಿದ್ದೇ ತಡ, ಅವರೂ ಬಿರುಸಿನ ಕಾರ್ಯಚರಣೆಗೆ ಇಳಿದು ಬಿಟ್ಟರು. ಲಕ್ಷ್ಮೀವÀರ ಖಾಸಗಿ ಮಾತುಕತೆಯಲ್ಲಿ ಅಷ್ಠಮಠದ ‘ಸಾಂಸಾರಿಕ ಸತ್ಯ” ಹೊರಗೆಡೆÀವಿದ ಆಡಿಯೋ ಒಂದು ಎಲ್ಲಿಂದಲೋ ಹೊರಬಂದು ಮಾಧ್ಯಮಗಳಿಗೆ ಆಹಾರ ಆಗಿಹೋಯ್ತು!
ಆ ಆಡಿಯೋದಲ್ಲಿ, ಅಷ್ಠಮಠದ ಪೀಠಾಧಿಪತಿಗಳ್ಯಾರೂ ಸಾಚಾಗಳಲ್ಲ; ಎಲ್ಲರಿಗೂ ಹೆಂಡತಿ ಮಕ್ಕಳಿದ್ದಾರೆ; ಲೌಕಿಕ ವ್ಯವಹಾರಗಳಿವೆ ಎಂಬ ಬಾಂಬ್ ಎಸೆದಿದ್ದರು ಲಕ್ಷ್ಮೀವರಸ್ವಾಮಿ. ತನಗೆ ಅನ್ಯಾಯವಾದರೆ ಪೇಜಾವರ ಸ್ವಾಮಿಗಳನ್ನು ತಾನೇ ಕೊಲೆ ಮಾಡಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಈ ಸಿಟ್ಟು-ಸೇಡು ಕೃಷ್ಣಮಠÀದ ಕಾವಿ ವಲಯದಲ್ಲಿ ಹೊಗೆಯಾಡುತ್ತಲೇ ಇತ್ತು. ತಮ್ಮ ಬಂಡವಾಳ ಬಯಲಾಗಿಸಿ ಭಕ್ತಕೋಟೆಯ ಎದುರು ಬೆತ್ತಲಾಗಿಸಿದ ಲಕ್ಷ್ಮೀವರರಿಗೆ ಬುದ್ಧಿ ಕಲಿಸುವ ಷಡ್ಯಂತ್ರವೊಂದು ಆಗಲೇ ಸಂತರ ತಂಡ ಹೆಣೆದಿತ್ತಾ ಎಂಬ ಅನುಮಾನವನ್ನು ಈ ಸಂಶಯಾಸ್ಪದ ಸಾವಿನ ಸನ್ನಿವೇಶವನ್ನು ಕಂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಕ್ರಮೇಣ ಲಕ್ಷ್ಮೀವರ ಮತ್ತು ಎದುರಾಳಿ ಸಪ್ತಯತಿಗಳ ನಡುವಿನ ವೈಮಸ್ಯ ಜೋರಾಗಿ ಪರಸ್ಪರ ಕತ್ತಿಮಸೆತ ಶುರುವಾಯಿತು. ಅಸೆಂಬ್ಲಿ ಎಲೆಕ್ಷನ್‍ಗೆ ಸ್ಪರ್ಧಿಸುವ ಗಡಿಬಿಡಿಗೆ ಬಿದ್ದಿದ್ದ ಲಕ್ಷ್ಮೀವರರಿಗೆ ಆ ಓಡಾಟದಲ್ಲಿ ಆರೋಗ್ಯ ಹದಗೆಟ್ಟಿತ್ತು. ಆ ವೇಳೆಯಲ್ಲಿ ಆಸ್ಪತ್ರೆ, ಹಾಸಿಗೆ ಎಂದು ಹೈರಾಣಾಗಿ ಹೋದರು. ಪಟ್ಟದೇವರಾದ ವಿಠಲ, ಮತ್ತಿತರ ದೇವಗಣಕ್ಕೆ ಪೂಜೆಯನ್ನೂ ಮಾಡಲಾಗದಷ್ಟು ವೀಕಾಗಿ ಕೂತುಬಿಟ್ಟರು ಲಕ್ಷ್ಮೀವರ. ಆಗ ಮಠದ ಸಂಪ್ರದಾಯದಂತೆ ಪಟ್ಟದೇವರ ಪೆಟ್ಟಿಗೆ ಪರ್ಯಾಯ ಪೂಜೆಯ ಸ್ವಾಮಿಯಾದ ಪಲಿಮಾರು ಮಠಾಧೀಶರ ಸುಪರ್ದಿಗೆ ಒಪ್ಪಿಸಬೇಕಾಯಿತು. ಆರೋಗ್ಯ ಸುಧಾರಿಸಿ ಪಟ್ಟದೇವರನ್ನು ವಾಪಾಸ್ ಕೇಳುವ ನಡುವಿನ ಸಮಯದಲ್ಲೇ “ಅಷ್ಠಯತಿಗಳ ಅಕ್ರಮ ಸಂತಾನ”ದ ಆಡಿಯೋ ಸುದ್ದಿ ಬೀದಿಗೆ ಬಿದ್ದದ್ದು.
ಇದರಿಂದ ಲಕ್ಷ್ಮೀವರರ ಮೇಲೆ ಕೆಂಡಾಮಂಡಲರಾಗಿದ್ದ ಸಂತರೆಲ್ಲ ಸೇರಿಕೊಂಡು ಪಟ್ಟದೇವರ ಪೆಟ್ಟಿಗೆಯನ್ನು ಲಕ್ಷ್ಮೀವರರಿಗೆ ಕೊಡಲು ಸಾಧ್ಯವಿಲ್ಲ ಎಂಬ ವರಾತ ತೆಗೆದು ಕೂತರು. “ಏನು ಮಾರಾಯಾ, ಅಷ್ಟ ಮಠಾಧೀಶರಿಗೆ ಮಕ್ಕಳಿದ್ದಾರೆ ಅಂತ ಹೇಳಿದ್ದಿಯಲ್ಲಾ…….. ನಮ್ಗೆ ಮಕ್ಕಳಿಲ್ಲ…….. ಆದ್ರೆ ನಿನ್ನ ಮಾತಿನ ಪ್ರಕಾರ ನಿಂಗೇ ಮಕ್ಕಳಿದ್ದಾರೆಂದಾಯ್ತಲ್ಲವಾ……… ನಿಂಗೆ ಪಟ್ಟ ದೇವರ ಅರ್ಹತೆಯಿಲ್ಲ; ನೀನು ಸನ್ಯಾಸ ಧರ್ಮ ಪಾಲಿಸುತ್ತಿಲ್ಲ ಎಂದಾಯ್ತು…….. ನಿಂಗೆ ಪಟ್ಟದೇವರ ಕೊಡಲಾಗುವುದಿಲ್ಲ ………!’ ಎಂದಬ್ಬರಿಸಿದರು. ಸಂತರ ಲೀಡರ್ ಪೇಜಾವರಸ್ವಾಮಿ ಕೂಡಾ ಹೊಂದಾಣಿಕೆ ಪ್ರಯತ್ನವನ್ನು ಪ್ರಾಮಾಣಿಕವಾಗಿ ನಡೆಸಲಿಲ್ಲ. ಲಕ್ಷ್ಮೀವÀರನ ಲಗಾಡಿ ತೆಗೆಸಲು ಇದೇ ಸುಸಮಯ ಎಂದು ಉಳಿದ ಐದು ಸನ್ಯಾಸಿಗಳು ಒಳಗೊಳಗೆ ಕುಮ್ಮಕ್ಕು ಕೊಡತೊಡಗಿದರು. ಸಮುದ್ರೋಲ್ಲಂಘನ ಆರೋಪದಿಂದ ಕೆರಳಿದ್ದ ಪುತ್ತಿಗೆ ಮಠಾಧೀಶ ಮಾತ್ರ ಲಕ್ಷ್ಮೀವರ ಪರವಾಗಿದ್ದರು.
ಈ ಪ್ರಕರಣ ಪೇಜಾವರರು ಇತ್ಯರ್ಥ ಮಾಡೋದಿಲ್ಲ, ತನಗೆ ಪಟ್ಟದೇವರನ್ನು ಪೂಜೆ ಮಾಡುವ ಅದೃಷ್ಟ ಮತ್ತೆ ಬರೋದಿಲ್ಲ ಎಂಬುದು ಖಾತ್ರಿಯಾಗುತ್ತಲೇ ಲಕ್ಷ್ಮೀವರ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾದರು. ತನ್ನ ಪರಮಾಪ್ತ ಪುತ್ತಿಗೆ ಮಠಾಧೀಶ ಸುಗುಣೇಂದ್ರ ಸ್ವಾಮಿ ಒಬ್ಬರನ್ನು ಬಿಟ್ಟು ಉಳಿದ ಆರು ಮಂದಿಯಿಂದ ತನಗ್ಯಾವುದೇ ಕಾನೂನಿನ ತೊಡಕಾಗಬಾರದೆಂದು ನ್ಯಾಯಾಲಯಕ್ಕೆ ಕೇವಿಯೆಟ್ ಸಲ್ಲಿಸಿದ್ದರು. ಪಟ್ಟದೇವರು ವಾಪಾಸ್ ಕೊಡಬೇಕಾದ್ದು ಪರ್ಯಾಯ ಮಠಾಧೀಶರಾದ ವಿದ್ಯಾಧೀಶರಾದ್ದರಿಂದ ಅವರ ಮೇಲೆ ಕ್ರಿಮಿನಲ್ ಕೇಸು ಹಾಕಲು ಪ್ರಸಿದ್ಧ ಕ್ರಿಮಿನಲ್ ಲಾಯರ್ ರವಿಕಿರಣ ಮುರ್ಡೇಶ್ವರರನ್ನು ಸಂಧಿಸಿದ್ದರು. ವಕೀಲ ರವಿಕಿರಣ್ ಹೇಳುವ ಪ್ರಕಾರ ಪುತ್ತಿಗೆ ಸ್ವಾಮಿ ಒಬ್ಬರನ್ನು ಬಿಟ್ಟು ಉಳಿದ ಆರೂ ಮಂದಿಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ಹೇಳಿದ್ದರಂತೆ. ಆ ಕೇಸನ್ನು ಇದೇ ತಿಂಗಳ 19ರಂದು ನ್ಯಾಯಾಲಯಕ್ಕೆ ಸಲ್ಲಿಸಲು ತೀರ್ಮಾನವನ್ನೂ ಮಾಡಿದ್ದರು. ಇದು ಗೊತ್ತಾಗಿ ಅಷ್ಟಮಠದ ಆರು ಸ್ವಾಮಿಗಳಿಗೆ ನಿದ್ದೆ ಬೀಳದಂತಾಗಿತ್ತು ಎಂದು ಮಠದ ಭಕ್ತರೇ ಮಾತಾಡಿಕೊಳ್ಳುತ್ತಿದ್ದಾರೆ.
ಲಕ್ಷ್ಮೀವರ ಸ್ವಾಮಿಯ ಸತತ `ನೈತಿಕ ದಾಳಿ’ಯಿಂದ ಷಡ್‍ಸನ್ಯಾಸಿಗಳು ತತ್ತರಿಸಿ ಹೋಗಿದ್ದರು. ಏನೇ ಮಾಡಿದರೂ ಆತನನ್ನು ನಿಯಂತ್ರಿಸಲು ಪೇಜಾವರ ಟೀಮಿನಿಂದ ಸಾಧ್ಯವಾಗಿರಲೇ ಇರಲಿಲ್ಲ. ಹಾಗಾಗಿ ಲಕ್ಷ್ಮೀವರರನ್ನು ಕೊಂದೇ ತೀರಲು ಎದುರಾಳಿಗಳು ನಿರ್ಧರಿಸಿದರಾ? ಎಂಬ ಅನುಮಾನ ಮೂಡಲು ಮೇಲಿನ ಕಾರಣಗಳು ಇಂಬು ನೀಡುತ್ತಿವೆ. ಮಠದ ಭಕ್ತರ ಮನಸ್ಸಲ್ಲಿ ಸದ್ಯ ಸುಳಿದಾಡುತ್ತಿರೋದು ಇದೇ ಅನುಮಾನ. ನ್ಯಾಯಾಲಯಕ್ಕೆ ಕೇಸು ದಾಖಲಿಸಲು ಮೂರು ದಿನ ಬಾಕಿ ಇರುವಾಗಲೇ ಆರೋಗ್ಯವಂತ ಲಕ್ಷ್ಮೀವರ ಸ್ವಾಮಿ ರಕ್ತವಾಂತಿ ಮಾಡಿಕೊಂಡು ಆಸ್ಪತ್ರೆಗೆ ಸೇರುವಂತಾದದ್ದನ್ನು ಕಂಡ ಮೇಲೆ ಇಂಥಾ ಅನುಮಾನ ಮೂಡುವುದು ಸಹಜ ಅಲ್ಲವೆ?
ಇಲ್ಲಿ ಮತ್ತೊಂದು ಆಯಾಮವೂ ಇದೆ. ಲಕ್ಷ್ಮಿವರರ ಆಪ್ತರಾದ ಬಾರ್ಕೂರು ಮಠದ ಸಂತೋಷ್ ಗುರೂಜಿ ಬಳಿ ತಾನು ಎದುರಿಸುತ್ತಿದ್ದ ಗಂಡಾಂತರದ ಬಗ್ಗೆ ಹೇಳಿಕೊಂಡಿದ್ದರು. “ನನಗೆ ವಿಷ ಹಾಕಿಯೋ ಅಥವ ಮಲಗಿದ್ದಾಗಲೋ ಕೊಲೆ ಮಾಡಬಹುದು, ಎಲ್ಲಿ ಓಡಾಡಲಿಕ್ಕೂ ಭಯವಾಗ್ತಾ ಉಂಟು” ಅಂತ ತಮಗಿದ್ದ ಜೀವಬೆದರಿಕೆಯ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಲಕ್ಷ್ಮೀವರರ ಲಾಯರ್ ರವಿಕುಮಾರ್ ಕೂಡಾ ತಮ್ಮ ಬಳಿ ಹೀಗೆ ಹೇಳಿಕೊಂಡಿದ್ದರು ಎಂದಿದ್ದಾರೆ.
ಅಂದು ಜುಲೈ 16. ಲಕ್ಷ್ಮೀವರ ಸ್ವಾಮಿ ಉಳಿದುಕೊಳ್ಳುತ್ತಿದ್ದ ಮೂಲಮಠ ಹಿರಿಯಡ್ಕ ಬಳಿಯ ಶಿರೂರು ಮಠದಲ್ಲಿ ವನಭೋಜನ ಕಾರ್ಯಕ್ರಮವಿತ್ತು. ಎಲೆಕ್ಷನ್ ಹೊತ್ತಲ್ಲಿ ಆರೋಗ್ಯ ಹದಗೆಟ್ಟಾಗಿಂದ ಲಕ್ಷ್ಮೀವರ ಸ್ವಾಮಿ ಹಣ್ಣಿನ ರಸ, ಒಂಚೂರು ಗಂಜಿ ಬಿಟ್ಟರೆ ಬೇರೇನೂ ಸೇವಿಸುತ್ತಿರಲಿಲ್ಲ. ಆದರೆ ವನಭೋಜನದ ಹೊತ್ತಲ್ಲಿ ತನ್ನೊಂದಿಗೆ ಕುಳಿತಿದ್ದ ಪುಟ್ಟ ಮಕ್ಕಳ ಜೊತೆ ನಾಲ್ಕು ಅವಲಕ್ಕಿ ಪ್ರಸಾದ ತಿಂದಿದ್ದರು. ಜೊತೆಗೆ ಗಂಜಿ-ಜ್ಯೂಸ್ ಕುಡಿದಿದ್ದರು.
ಈ ಆಹಾರ ಸೇವಿಸಿದ ನಂತರವೇ ಲಕ್ಷ್ಮೀವರ ಅಸ್ವಸ್ಥರಾಗಿ ಹೋದದ್ದು. ಒಂದೇಸಮನೆ ರಕ್ತವಾಂತಿ ಮಾಡಿಕೊಂಡರು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯ್ತು. ಅಲ್ಲಿಯ ವೈದ್ಯರು ಏನು ಹೇಳಿದರೋ? ಆದರೆ ಊರೆಲ್ಲ ಲಕ್ಷ್ಮೀವರ ಸ್ವಾಮಿಗೆ ಫುಡ್ ಪಾಯಿಜನ್ ಆಗಿದೆ ಎಂಬ ಸುದ್ದಿ ಹರಡಿತು. ಆದರೆ ಇದು ಅಪ್ಪಟ ಸುಳ್ಳು ಎನ್ನುವುದು ಈಗ ಖಾತ್ರಿಯಾಗಿದೆ. ಹಾಗೆ ಫುಡ್ ಪಾಯಿಜನ್ ಆಗುವುದಿದ್ದರೆ ಅವರೊಂದಿಗೆ ಅವಲಕ್ಕಿ ಪ್ರಸಾದ ಸೇವಿಸಿದ ಹುಡುಗರಿಗೇಕೆ ತೊಂದರೆಯಾಗಲಿಲ್ಲ? ಫುಡ್ ಪಾಯಿಜನ್ ಅಪಾಯಕಾರಿಯಾದರೂ ಇಷ್ಟು ದಿಢೀರನೇ ಸಾವು ತಂದಿಡುವಂತದ್ದಲ್ಲ. ವಾಂತಿಬೇಧಿಯಿಂದ ಸುಸ್ತಾದ ರೋಗಿಗೆ ಎರಡು ಸಲೈನ್ ಕೊಟ್ಟು, ಪವರ್‍ಫುಲ್ ಆಂಟಿಬಯೋಟಿಕ್ ನೀಡಿದರೆ ರೋಗಿ ಚೇತರಿಸಿಕೊಳ್ಳುತ್ತಾನೆ. ಈ ಅನುಮಾನವನ್ನು ಪುಷ್ಠೀಕರಿಸುವಂತೆ ಲಕ್ಷ್ಮೀವರ ಸ್ವಾಮಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ಅವಿನಾಶ್ ಶೆಟ್ಟಿ ಪ್ರಕಾರ ಸ್ವಾಮಿಜಿಯ ಹೊಟ್ಟೆಯಲ್ಲಿ, ವಾಂತಿ ಮಾಡಿದ ರಕ್ತದಲ್ಲಿ ವಿಷದ ಅಂಶ ಇದ್ದದ್ದು ಲ್ಯಾಬ್ ಟೆಸ್ಟ್‍ಗಳಲ್ಲಿ ಪತ್ತೆಯಾಗಿದೆ. ಅಲ್ಲಿಗೆ ಶಿರೂರು ಮಠದ ಲಕ್ಷ್ಮೀವರ ಸ್ವಾಮಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಲಾಗಿದೆ ಎಂಬ ಭಕ್ತರ ಅನುಮಾನ ಮತ್ತಷ್ಟೂ ಗಟ್ಟಿಯಾಗುತ್ತದೆ. ಮಾಧ್ಯಮಗಳೊಂದಿಗೆ ಮಾತಾಡಿದ ವಿಧಿವಿಜ್ಞಾನ ತಜ್ಞ ದಿನೇಶ್ ರಾವ್ ಕೂಡ ಇದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಮಾರ್ಟಂ ವರದಿ ಇನ್ನೂ ಬಾಕಿಯಿದೆ.
ಅದು ನಿಜವೇ ಆಗಿದ್ದರೆ, ಚಿರ ಬಂಡಾಯಗಾರ ಲಕ್ಷ್ಮೀವರ ತೀರ್ಥಸ್ವಾಮಿಗೆ ವಿಷವಿಕ್ಕಿದ್ದು ಯಾರಿರಬಹುದು? ಇಂಥದ್ದೊಂದು ಜಿಜ್ಞಾಸೆ ಈಗ ಕೃಷ್ಣಮಠದ ಪಡಸಾಲೆಯಲ್ಲಿ ಬಿರುಸುಗೊಂಡಿದೆ. ಲಕ್ಷ್ಮೀವರರ ಪೂರ್ವಾಶ್ರಮದ ಸಹೋದರನೂ, ಶಿರೂರು ಮಠದ ದಿವಾನ(ಪಾರುಪತ್ಯಗಾರ) ಲಾತವ್ಯ ಆಚಾರ್ಯ ಕೂಡ ಪೊಲೀಸರಿಗೆ ತನ್ನಣ್ಣನನ್ನು ಕೊಲೆ ಮಾಡಲಾಗಿದೆ ಎಂದೇ ದೂರು ಕೊಟ್ಟಿದ್ದಾರೆ. ಹಾಗಿದ್ದರೆ ಎದುರಾಳಿ ಸಂತ ಸಹೋದ್ಯೋಗಿಗಳು ಸಂಚು ಮಾಡಿದರಾ? ಲಕ್ಷ್ಮೀವರರೊಂದಿಗೆ ವ್ಯವಹಾರ ನಡೆಸುತ್ತಿದ್ದ ಖತರ್‍ನಾಕ್ ರಿಯಲ್ ಎಸ್ಟೇಟ್ ಉದ್ಯಮಿಗಳು, ಮನಿ ಲೆಂಡರ್‍ಗಳು ಅಥವಾ ಹಣವಂತ ಉದ್ಯಮಿಗಳೇನಾದರು ವಿಷ ಹಾಕಿದರಾ? ಲಕ್ಷ್ಮೀವರರ ಅದೃಶ್ಯ ಸಖಿಯರು ಜೀವ ತೆಗೆದರಾ? ಈ ಆ್ಯಂಗಲ್‍ಗಳ ಮೇಲೆ ಪೊಲೀಸರು ತನಿಖೆ ಶುರು ಹಚ್ಚಿಕೊಂಡಿದ್ದಾರೆ. ಜನರಂತೂ ಈ ಸಾಧ್ಯತೆಗಳ ಮೇಲೆಯೇ ಎಲ್ಲೆಡೆ ಚರ್ಚೆ ನಡೆಸಿದ್ದಾರೆ.
ಆದರೆ ಎತ್ತಿಂದೆತ್ತ ತಾಳೆಹಾಕಿ ಲೆಕ್ಕ ಮಾಡಿದರೂ ಕೃಷ್ಣ ಮಠದೊಳಗಣ ಜಿದ್ದಿನ ಕಿತ್ತಾಟದತ್ತಲೇ ಶಂಕೆಗಳು ಮೂಡುತ್ತವೆ. ಶಿರೂರು ಮಠಕ್ಕೆ ಪಟ್ಟಶಿಷ್ಯರನ್ನು ನೇಮಿಸಿಕೊಳ್ಳುವಂತೆ ಲಕ್ಷ್ಮೀವರರ ಮೇಲೆ ಒತ್ತಡ ಕೂಡ ಹಾಕಲಾಗಿತ್ತು. ಈ ಒತ್ತಡವನ್ನು ಒಪ್ಪಿಕೊಂಡರೆ ನಾನು ಪೀಠಕ್ಕೆ ಅರ್ಹನಲ್ಲವೆಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಶಿಷ್ಯರನ್ನು ನೇಮಿಸಿಕೊಳ್ಳುವ ಕಾರ್ಯವನ್ನು ಮುಂದೂಡಿದ್ದರು. ವೈರುಧ್ಯ ತೀವ್ರವಾದಾಗ ಶಿರೂರು ಸ್ವಾಮಿಯೂ ಆಗಾಗ ಸೆಟೆದು ನಿಂತು ಮಠದ ಆರ್ಥಿಕ ಲಫಡಾ, ಅಷ್ಟ ಮಠಾಧೀಶರುಗಳು ವೈಯಕ್ತಿಕ ಬದುಕುಗಳನ್ನು ಕೆಣಕುವಂತ ಹೇಳಿಕೆ ನೀಡುತ್ತಲೇ ಇದ್ದರು. ಅದೇ ಅವರನ್ನು ವಿಠಲನ ಪಾದ ಸೇರಿಸಿತಾ? ಒಟ್ಟಿನಲ್ಲಿ, ಶಿರೂರು ಸ್ವಾಮಿಯ ಸಾವಿನಿಂದ ಯಾರಿಗೆಲ್ಲ ತುರ್ತು ಲಾಭವಿತ್ತೋ, ಅವರಿಂದ ಯಾರಿಗೆಲ್ಲ ಸಂಕಟ ಎದುರಾಗಲಿತ್ತೋ ಅವರನ್ನು ಈ ಸಾವು ಮತ್ತಷ್ಟು ಸಂಕಷ್ಟದಲ್ಲಿ ನಿಲ್ಲಿಸೋದು ಮಾತ್ರ ಸತ್ಯ!

“ಪರ್ಯಾಯ ಅಂದ್ರೆ ಎಂತಾ ಗೊತ್ತಾ? ಹಣ ಮಾಡುವ ಸ್ಕೀಮ್ ಕೃಷ್ಣ ಮಠದಲ್ಲಿ”

ವ್ಯಕ್ತಿ: ಮಠದಲ್ಲಿ ಆಗ ಕೊಲೆ ನಡೆದಿದ್ದು ಹೌದಾ?
ಸ್ವಾಮೀಜಿ: ಕೊಲೆ ಮಾಡಿದ್ದಾರೆ, ಈ ಸ್ವಾಮಿಗಳನ್ನು ಇದು ಮಾಡುವಾಗ ನಾಲ್ಕು ಮರ್ಡರ್ ಮಾಡಿ ಕೂತ್ಕೊಂಡಿದ್ದಾರೆ ಸೀಟ್‍ನಲ್ಲಿ.. ಹಿಂದಿನ ಸ್ವಾಮಿ ಗೊತ್ತಲ್ಲ. ವಿಶ್ವಮಾನ್ಯರು ಅಂತೇಳಿ.. ಭಾರೀ ಒಳ್ಳೆ ಸ್ವಾಮಿ ಅವ್ರು.. ಭಾಷಣ ಕೇಳಿದಾಗ್ಲೆಲ್ಲಾ ಎದ್ದು ಹೋಗ್ತಾ ಇರಲಿಲ್ಲ ಜನ.. ಮಹಾತ್ಮಗಾಂಧಿಗೂ ಆ ಸ್ವಾಮಿಗೂ ಭಾಳಾ ಸಂಬಂಧ ಇತ್ತು. 1943-44-45 ಆ ಟೈಮ್‍ನಲ್ಲಿ.. ಧಾರವಾಡದಲ್ಲಿ ಮರ್ಡರ್ ಮಾಡಿದ್ರು ಅವ್ರನ್ನ..ಇಡ್ಲಿಗೆ ಪಾಯಿಸನ್ ಹಾಕಿ.. ಎಲ್ಲಾ ಗೊತ್ತು.. ಊರಿಗೆಲ್ಲಾ ಗೊತ್ತು.
ವ್ಯಕ್ತಿ : ಅಷ್ಟಮಠದ ಕೆಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರಲ್ಲಾ ಏನು ಕಥೆ..?
ಸ್ವಾಮೀಜಿ: (ನಗುತ್ತಾ) ಹೌದು, ಎಲ್ಲರಿಗೂ ಇದೆ. ನನಗೂ ಇದೆ. ಅದೇನು ದೊಡ್ಡ ವಿಷ್ಯ ಅಲ್ಲ.. ಆ ಟೈಮ್‍ಗೆ ಆದದ್ದು ದೊಡ್ಡ ವಿಷ್ಯ ಅಲ್ಲ..
ವ್ಯಕ್ತಿ : ಅದು ಪೂರ್ವಾಶ್ರಮದಲ್ಲಾದ ಮಕ್ಕಳಾ ಹೇಗೆ?
ಸ್ವಾಮೀಜಿ: ನೋಡೀ.. ಒಂದು ವಿಷ್ಯ ಹೇಳ್ತೀನಿ, ಎಂಟನೇ ವಯಸ್ಸಿಗೆ ನಮಗೆ ಸನ್ಯಾಸ ಕೊಟ್ರೆ .. ಆವಾಗ ಲೋಕಜ್ಞಾನ ಯಾವ್ದೂ ಇರೋದಿಲ್ಲ ಅಲ್ವಾ.. ಪ್ರಾಯ ಬಂದಹಾಗೆ ಮನುಷ್ಯನಿಗೆ ಆಸೆಗಳು ಹುಟ್ಟಿಕೊಳ್ಳೋಕೆ ಶುರುವಾಗುತ್ತೆ.. ಆ ಟೈಮ್‍ಗೆ ಒಂದು ಘಟನೆ ಆಗಿತ್ತು.. ಅದನ್ನೇ ಹಿಡ್ಕೊಂಡು ಹೇಳ್ಬಾರ್ದು.. ಮತ್ತೆ ಬೇಡ ಅನ್ಸುತ್ತೆ ಮನುಷ್ಯನಿಗೆ.. ಒಂದು ಟೈಮ್ದು ಹಿಡ್ಕೊಂಡು ಯಾವಾಗ್ಲೂ ಹೇಳ್ತಾ ಇದ್ರೆ ಮನುಷ್ಯ.. ಆ ಗುಣ ಮನುಷ್ಯಂದು..
ವ್ಯಕ್ತಿ : ಆ ವಿಷಯದಲ್ಲಿ ನಿಮ್ಮನ್ನ ಮಾತ್ರ ಟಾರ್ಗೆಟ್ ಮಾಡ್ತಾರೆ..
ಸ್ವಾಮೀಜಿ : ಹೂ.. ಅವರಿಗೆಲ್ಲಾ ಉಂಟು ರೀ.. ಬೇಕಾದ್ದು.. ಬೇಕಾದಲ್ಲೆಲ್ಲಾ ಮಾಡ್ತಾರೆ.. ಬ್ಯಾಡದೇ ಇದ್ದ ಜಾತಿಗೆಲ್ಲಾ ಸಂಸದ್ ಎಲ್ಲ ಇಟ್ಕೊಂಡಿದ್ದಾರೆ ಗೊತ್ತುಂಟಾ.. ಎಲ್ರೂ ಕೂಡ, ನಾನು ಮಾತ್ರ ಹೆಸರೇಳೋದಿಲ್ಲ.. ಯಾರ ಮರ್ಯಾದೆ ಹೋಗೋದು? ಉಡುಪಿಯ ಮರ್ಯಾದೆ ಹೋಗುತ್ತೆ.. ಸಂಬಂದ ಇಲ್ಲದವರೂ ಸಂಬಂಧ ಮಾಡಿಕೊಂಡು ಬಂದು ಮಠದಲ್ಲಿ ಕೂತಿದ್ದಾರೆ…
ಸ್ವಾಮಿಯವ್ರಿಗೆ ಮಕ್ಕಳಿಲ್ಲದಿದ್ರೂ ಸ್ವಾಮಿಯವ್ರ ತಮ್ಮನಿಗೆ ಮಕ್ಕಳಿದ್ದಾರಲ್ಲಾ ಅದಕ್ಕೆಂತಾ ಮಾಡೋದು.. ಸ್ವಾಮಿಯವರಿಗೆ ಬಂದ ಹಣವೆಲ್ಲಾ ಸ್ವಾಮಿಯರ ತಮ್ಮನ ಮಕ್ಕಳಿಗೆ, ತಮ್ಮನ ಅಳಿಯನಿಗೆ ಕೋಟಿಗಟ್ಟಲೆ ಹೋಗುವಾಗ.. ಒಂದು ವರ್ಷದಲ್ಲಿ 18 ಕೋಟಿ ಸಂಪಾದನೆ ಮಾಡಿದ್ದೇನೆ ಅಂದ್ರೆ ಹೇಗದು..? ಐಟಿಯವ್ರು ಯಾರತ್ರ ಜೀವ ಇಲ್ವಾ..? ಇಂಕಮ್ ಟ್ಯಾಕ್ಸ್‍ನವ್ರಿಗೆ ಯಾರ್ಗೂ ಜೀವ ಇಲ್ವಾ..? ಕೃಷ್ಣ ಮಠದಲ್ಲಿ ಬಂದು ಹಿಡಿದ್ರಲ್ಲಾ ಇವರನ್ನ. ಮಧ್ಯಾಹ್ನ ಒಂದು ಗಂಟೆಗೆ ಹಿಡಿದು ಸಂಜೆ ಏಳು ಗಂಟೆ ತನಕ.. ಸ್ವಾಮಿಯವರ ಪಿ.ಎ ವಿಷ್ಣು ಅಂತ ಇದ್ದಾನೆ ಗೊತ್ತಾ..? 18 ಕೋಟಿ ಎಲ್ಲಿಂದ ಬಂತು ಅವನಿಗೆ? ಯಾರಪ್ಪ ಕೊಟ್ಟ ಅವನಿಗೆ ಹಣ? ಸ್ವಾಮಿಯರಿಗೆ ಬಂದ ಹಣವನ್ನಲ್ಲವಾ ಒಳಗಾಕಿದ್ದು..? ಐಟಿಯವರು ಹಿಡೀಲಿಲ್ಲವಾ.. ಡಾಕ್ಯುಮೆಂಟ್ ಹಿಡಕೊಂಡು ಬಂದಿದ್ದು ಅವ್ರು.. ಯಾರನ್ನು ಕೇಳ್ಲಿಲ್ಲ.. ಎಷ್ಟು ಕಡೆಯಲ್ಲಿ ಪೆಟ್ರೋಲ್ ಬಂಕ್ ಹಾಕಿಲ್ವಾ.. ಯಾರ ಹಣ? ಮತ್ತೆ ತೆರಕೊಂಡಿದ್ದು ಕೃಷ್ಣರಿಗಾ..? ಫ್ಯಾಮಿಲಿ ಉದ್ಧಾರ ಮಾಡಲಿಕ್ಕಾ..? ಅದು ಹೇಳಿ.. ಪರ್ಯಾಯ ಅಂದ್ರೆ ಎಂಥ ಗೊತ್ತುಂಟಾ ಇವ್ರಿಗೆ ..? ಹಣ ಮಾಡುವ ಸ್ಕೀಮ್ ಕೃಷ್ಣ ಮಠದಲ್ಲಿ..
ವ್ಯಕ್ತಿ: ಊರಿಗೆಂತಾ ಕೊಡೋಲ್ವಾ?
ಶಿರೂರು ಸ್ವಾಮಿ : (ಕೋಪದಿಂದ) ಊರಿಗೆಂತ ಕೊಟ್ಟಿದ್ದಾರೆ ಅಂತ ಗೊತ್ತಿಲ್ವಾ ನಿಮ್ಗೆ? ಕೃಷ್ಣ ಮಠದ ಅಭಿವೃದ್ಧಿ ಅಂತ ಹೇಳೋದು.. 10 ಕೋಟಿಯ ಪ್ರಾಜೆಕ್ಟ್ ತೋರಿಸೋದು. 4 ಕೋಟಿ ಖರ್ಚು ಮಾಡೋದು, 6 ಕೋಟಿ ಒಳಗೆ ಹಾಕೋದು. ಇಷ್ಟೆ ಅಲ್ವಾ ಇವ್ರ ಪ್ರಾಜೆಕ್ಟು.. ಇನ್ನೆಂಥಾ ಪ್ರಾಜೆಕ್ಟ್ ಇವ್ರದು.. ನೋಡುವಾ ನಾವು ಒಂದು ರೂಪಾಯಿ ಹಿಡ್ಕೊಂಡು ಹೋಗ್ಲಿ ಕೃಷ್ಣ ಮಠದಿಂದ.. ನಮ್ಮ ಪೂರಾ ಅಕೌಂಟ್ ಚೆಕ್ ಮಾಡಿ ನೋಡಿ.. ಒಂದು ರೂಪಾಯಿ ಹಿಡ್ಕೊಂಡು ಹೋಗಿದ್ದೀನಾ ನಾನು? ಎಲ್ಲ ಕೃಷ್ಣನಿಗೆ ಹಾಕಿ ಹೋಗಿದ್ದೀನಿ..
ಹೀಗೇ ನಿರರ್ಗಳವಾಗಿ ಚರ್ಚೆ ಮುಂದುವರಿಯುತ್ತೆ.. ಆದರೆ ವಿವಾದ ತಾರಕಕ್ಕೇರಿದ್ದ ಒಂದು ಸಂದರ್ಭದಲ್ಲಿ ಈ ವಿಡಿಯೋ ತನ್ನದಲ್ಲ ಎಂದು ಶಿರೂರು ಶ್ರೀಗಳು ಹೇಳಿಕೆ ಕೊಟ್ಟಿದ್ದರು. ಇದನ್ನು ನಂಬೋದು ಬಿಡೋದು ಓದುಗರ ವಿವೇಚನೆಗೆ ಬಿಟ್ಟದ್ದು.

– ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...