Homeಚಳವಳಿಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

ಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ನೂರರ ವಯಸ್ಸಿನ ಗಡಿ ದಾಟಿದರೂ ತುಂಬು ಉತ್ಸಾಹ, ಕಳಕಳಿಯಿಂದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಕರ್ತರಾಗಿ, ಸಕ್ರಿಯ ಹೋರಾಟಗಾರರಾಗಿ ಪಾಲ್ಗೊಂಡಿದ್ದ ಅವರು ಈಗಲೂ ಬಡಜನರ ಪರವಾಗಿ ಭೂಮಿ ಮತ್ತು ವಸತಿ ಹಕ್ಕು ಹೋರಾಟದ ಮುಂಚೂಣಿ ವಹಿಸಿದ್ದಾರೆ. ಗೌರಿ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷರೂ ಹೌದು. ಬೆಂಗಳೂರಿನ ಬಡಾವಣೆಯೊಂದರ ಉದ್ಯಾನವನದ ಸಮಸ್ಯೆಯಿಂದ ಹಿಡಿದು, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಭಾರತಕ್ಕಾಗುತ್ತಿರುವ ತಾರತಮ್ಯದವರೆಗೆ ಯಾವುದೂ ಅವರ ‘ಅನ್ಯಾಯದ ವಿರುದ್ಧದ ಹೋರಾಟ’ದ ಪರಿಧಿಯಿಂದ ಹೊರತಲ್ಲ.

1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, 14 ತಿಂಗಳ ಸ್ಥಾನ ಬದ್ಧತೆಯಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದೆ. 1944ರ ಏಪ್ರಿಲ್‍ನಲ್ಲಿ ನನ್ನ ಬಿಡುಗಡೆ ಆಯಿತು. ನಾನು ಬಿಡುವಾಗಿದ್ದೆ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ನನ್ನ ಅಣ್ಣನವರು, ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ವಿಷಮಶೀತ ಜ್ವರ ಬಂದಿರುವುದಾಗಿ ತಿಳಿಸಿ ನನ್ನನ್ನು ಕೂಡಲೇ ಹೊರಟುಬರಲು ಕೋರಿದ್ದರು. ನಾನು ಕೂಡ ಮೈಸೂರಿಗೆ ಹೊರಟೆ. ಆ ಮಕ್ಕಳಲ್ಲಿ ಒಬ್ಬಳಿಗೆ ಖಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದರೂ ಕೊನೆಯುಸಿರೆಳೆದಳು. ಮನೆಯಲ್ಲಿ ಶೋಕ ಆವರಿಸಿತು. ಈ ಪರಿಸ್ಥಿತಿಯಲ್ಲಿ ನಮ್ಮಣ್ಣನನ್ನು ಬಿಟ್ಟು ಬೆಂಗಳೂರಿಗೆ ಹಿಂದಿರುಗುವುದು ಸರಿಯಲ್ಲವೆಂದು ಭಾವಿಸಿ ಮೈಸೂರಿನಲ್ಲೇ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆ ಮತ್ತು ಪುಸ್ತಕ ಮಳಿಗೆಯನ್ನು ತೆರೆದೆ.

ಒಂದು ವರ್ಷ ಪೂರೈಸುವುದರಲ್ಲಿ ನನ್ನ ಬೆಂಗಳೂರಿನ ಸ್ನೇಹಿತರೂ, ರಾಜಕೀಯ ಕಾರ್ಯಕರ್ತರೂ, ಪೌರವಾಣಿ ವಾರಪತ್ರಿಕೆಯ ಸಂಪಾದಕರೂ ಆಗಿದ್ದ ರುಮಾಲೆ ಭದ್ರಣ್ಣನವರು ಸಾವನ್ನಪ್ಪಿದ ಸುದ್ದಿ ತಲುಪಿತು. ನಾನು ಬೆಂಗಳೂರಿಗೆ ಹೋಗಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡೆ.

ಸಮಾಧಿ ಕಾರ್ಯಕ್ರಮ ಮುಗಿದ ರಾತ್ರಿ ಗೆಳೆಯರೆಲ್ಲ ಸಭೆ ಸೇರಿದೆವು. ಪತ್ರಿಕೆಯ ಜವಾಬ್ದಾರಿಯನ್ನು ಹೊರಲು ಯಾರು ಸಿದ್ಧರಿದ್ದಾರೆಂಬ ಪ್ರಶ್ನೆ ನಮ್ಮ ಮುಂದೆ ಬಂದಿತು. ನನ್ನ ಸ್ನೇಹಿತರನೇಕರಿಗೆ ಹೊರೆ ಹೊರುವ ಸಾಮಥ್ರ್ಯವಿತ್ತು. ಆದರೆ, ಅವರ್ಯಾರೂ ಸಂಪಾದಕರಾಗಲು ಮುಂದೆ ಬರಲಿಲ್ಲ. ನಾನು ವಹಿಸಿಕೊಳ್ಳುವುದಾಗಿ ಹೇಳಿದೆ. ಎಲ್ಲರೂ ಸಮ್ಮತಿ ಸೂಚಿಸಿದರು.

ಮೈಸೂರಿನ ಪುಸ್ತಕದಂಗಡಿ ಖಾಲಿ ಮಾಡಿ ಬೆಂಗಳೂರಿಗೆ ಬಂದುಬಿಟ್ಟೆ. ಪತ್ರಿಕಾ ಕಚೇರಿಯಲ್ಲೇ ಉಳಿಯುವುದು ಊಟಕ್ಕೆ ನನ್ನ ಸ್ನೇಹಿತರಾದ ಎಂ.ಎಸ್. ಸೀತಾರಾಮಯ್ಯನವರ ಮನೆಗೆ ಹೋಗುವುದು ಎಂದು ತೀರ್ಮಾನವಾಯಿತು.

1947ರ ಮೈಸೂರು ಚಲೋ ಸತ್ಯಾಗ್ರಹ ಆರಂಭವಾಗುವ ಸೂಚನೆ ಇದ್ದದ್ದರಿಂದ ನಾನು ಪೌರವಾಣಿ ವಾರಪತ್ರಿಕೆಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿ ಅದರ ಸಂಪಾದಕನಾದೆ. ಪತ್ರಿಕೆಯಲ್ಲಿ ಪ್ರತಿದಿನ ತೀಕ್ಷ್ಣವಾದ ಅಗ್ರ ಲೇಖನ ಹಾಗೂ ಪ್ರಧಾನ ಲೇಖನವೊಂದು ಇರುತ್ತಿತ್ತು. ಪತ್ರಿಕೆಯ ಬೆಲೆ ಮೂರು ಕಾಸು (2 ನಯಾಪೈಸೆಗೆ), 4 ಪುಟಗಳ ಪತ್ರಿಕೆ.

ಪತ್ರಿಕೆಯಲ್ಲಿ  PTI, Reuters  ಸುದ್ದಿಗಳಿರುತ್ತಿದ್ದವು. ಚಳವಳಿಯ ದಿನಗಳು ಹತ್ತಿರ ಬರುತ್ತಿದ್ದಂತೆ ಮುಖ್ಯ ಲೇಖನವನ್ನು ಬರೆದುಕೊಡಲು ತಿರುಮಲೆ ತಾತಾಶರ್ಮರನ್ನು ಪ್ರಾರ್ಥಿಸಿದೆ. ಅವರು ಹತ್ತು ಲೇಖನಗಳನ್ನು ಬರೆದರು. ನೇರವಾಗಿ ಮಹಾರಾಜರನ್ನು, ಮಹಾರಾಜರ ಸರ್ಕಾರವನ್ನು ಟೀಕಿಸುವ ಲೇಖನಗಳು ಅವಾಗಿದ್ದವು.

8ನೇ ಲೇಖನ ಪ್ರಕಟವಾದ ಕೂಡಲೇ ಸರ್ಕಾರದ ಚೀಫ್ ಸೆಕ್ರೆಟರಿಯವರಿಂದ ನನಗೊಂದು ನೋಟಿಸ್ ಬಂದಿತು. ’ಇನ್ನು ಮುಂದೆ ಯಾವುದೇ ಅಗ್ರಲೇಖನ ಅಥವಾ ಲೇಖನವನ್ನು ಪ್ರಕಟಿಸುವ ಮೊದಲು ಅದನ್ನು ಚೀಫ್ ಸೆಕ್ರೆಟರಿಯವರಿಗೆ ಕಳಿಸಿ. ಅವರ ಅನುಮತಿ ದೊರೆತ ಲೇಖನಗಳನ್ನು ಮಾತ್ರ ಪತ್ರಿಕೆಯಲ್ಲಿ ಪ್ರಕಟಿಸಬೇಕು’ ಎಂದು ಆ ನೋಟಿಸ್‍ನಲ್ಲಿ ಬರೆಯಲಾಗಿತ್ತು.

ಸರ್ಕಾರದ ಅವಗಾಹನೆಗೆ ಕಳಿಸದೆಯೇ ಉಳಿದ ಎರಡು ಲೇಖನಗಳನ್ನೂ, ಸಂಪಾದಕೀಯಗಳನ್ನು ಪ್ರಕಟಿಸಿ, ’ಸರ್ಕಾರದ ಇಂತಹ ಕಠೋರ ಆಜ್ಞೆಗಳಿಗೆ ಪೌರವಾಣಿ ತಲೆ ಬಾಗುವುದಿಲ್ಲ. ಸರ್ಕಾರದ ಅನುಮತಿಗೆ ಕಳಿಸದೆಯೇ ಈ ಎರಡೂ ದಿನ ಸಂಪಾದಕೀಯ ಮತ್ತು ಲೇಖನಗಳನ್ನು ಪ್ರಕಟಿಸಲಾಗಿದೆ. ಸರ್ಕಾರದ ಈ ಬಗೆಯ ನೋಟಿಸಿಗೆ ಬೇಸತ್ತು ನಾಳೆಯಿಂದ ಪತ್ರಿಕೆಯನ್ನು ಹೊರತರದೇ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ’ ಎಂಬ ಒಂದು ಬಾಕ್ಸ್ ಸುದ್ದಿಯನ್ನು ಪೌರವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಲಾಯಿತು.

ಸರ್ಕಾರ ಪೌರವಾಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಚೇರಿಗೆ ಬೀಗಮುದ್ರೆ ಹಾಕಿಸಿತು. ಇನ್ನು ಸಂಪಾದಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸುವುದೇ ಬಾಕಿ ಉಳಿದಿರುವುದು ಎಂಬುದನ್ನು ಅರಿತಿದ್ದ ನಾನು ಬೇರೆ ಪ್ರಾಂತಕ್ಕೆ ಹೋಗಿ ಪತ್ರಿಕೆ ಹೊರತಂದು ಮುಂಬರುವ ಮೈಸೂರು ಚಲೋ ಸತ್ಯಾಗ್ರಹಕ್ಕೆ ಬೆಂಬಲವಾಗಿ ನಿಲ್ಲುವುದೇ ಸೈ ಎಂದು ನಿರ್ಧರಿಸಿ ಮಿತ್ರ ಕೆ.ಆರ್. ಶ್ರೀಧರಮೂರ್ತಿಯವರನ್ನು ಕರೆದುಕೊಂಡು ಆಂಧ್ರದ ಹಿಂದೂಪುರಕ್ಕೆ ಹೋಗಿ ಅಲ್ಲಿಂದ ಪೌರವಾಣಿ ಪತ್ರಿಕೆ ಹೊರತರಲು ನಿಶ್ಚಯಿಸಿದೆ.

ಹಿಂದೂಪುರದಲ್ಲಿ ಸಿರಾ ಕಡೆಯವರಾದ ಲಿಂಗಣ್ಣ ಎಂಬುವ ಗಣ್ಯರಿದ್ದರು. ಅವರ ಸಹಾಯ ಪಡೆದು ಹಿಂದೂಪುರದ ಸುದರ್ಶನಾ ಮುದ್ರಣಾಲಯದಲ್ಲಿ ಪೌರವಾಣಿ ಅಚ್ಚು ಹಾಕಿಸುವುದೆಂದು ನಿರ್ಧರಿಸಲಾಯಿತು. ಅನಂತಪುರಕ್ಕೆ ಹೋಗಿ ಅಲ್ಲಿಯ ಕಲೆಕ್ಟರ್ ಸಮ್ಮುಖದಲ್ಲಿ ಪೌರವಾಣಿ ಪತ್ರಿಕೆಯ ಸಂಪಾದಕರಾಗಿ ನೋಂದಾಯಿಸಿಕೊಂಡೆ. ಬೆಂಗಳೂರಿನಿಂದ ಮೈಸೂರು ಸಂಸ್ಥಾನದ ಇತರ ಕಡೆಗಳಿಂದ ಸುದ್ದಿ ತರಿಸಿಕೊಂಡು `ಮೈಸೂರು ಚಲೋ’ ಸತ್ಯಾಗ್ರಹಕ್ಕೆ ಪೂರಕವಾಗಿ ಪೌರವಾಣಿಯನ್ನು ನಡೆಸಲಾಯಿತು. ಪ್ರತಿದಿನವೂ ಒಬ್ಬ ಸತ್ಯಾಗ್ರಹಿಯ ಮೂಲಕ ಪತ್ರಿಕೆ ಬಂಡಲನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಆತನು ಪೊಲೀಸರ ಬಂಧನಕ್ಕೆ ತಯಾರಾಗಿಯೇ ಹೋಗಬೇಕಾಗಿತ್ತು.

ನನ್ನ ನೆರವಿಗೆ ಬೆಂಗಳೂರಿನಿಂದ ರುಮಾಲೆ ಚೆನ್ನಬಸವಯ್ಯನವರು, ತಿರುಮಲೆ ತೀರಂಗಾಚಾರ್ಯರು, ಮೈಸೂರಿನ ಎಚ್.ವಿ. ಸುಬ್ಬರಾಮಯ್ಯ, ಮಂಗಳೂರಿನ ಹಿಂದಿ ಪ್ರಚಾರಕ ಕೆ.ಎಲ್. ಶರ್ಮಾ, ಸೂರ್ಯನಾರಾಯಣ, ಕೃಷ್ಣಮೂರ್ತಿ ಮುಂತಾದವರಿದ್ದರು. 38 ದಿನ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿ, ಆ ನಂತರ ಬೆಂಗಳೂರಿಗೆ ಹಿಂತಿರುಗಿದೆ.

ಇದನ್ನೆಲ್ಲ ಇಲ್ಲಿ ಹೇಳಲು ಒಂದು ಕಾರಣವಿದೆ. ಕಾಲದ ಓಘದಲ್ಲಿ ಆಗಾಗ್ಗೆ ಇಂಥಾ ಕೆಟ್ಟ ಘಟ್ಟಗಳು ಎದುರಾಗುತ್ತಲೇ ಇರುತ್ತವೆ. ಇಂಥಾ ಘಟ್ಟಗಳು ಹೊಸದೂ ಅಲ್ಲ, ಅನಂತವಾದವೂ ಅಲ್ಲ. ಅವುಗಳಿಗೆ ದಿಟ್ಟವಾಗಿ ಉತ್ತರಿಸುವ ಪಣ ತೊಟ್ಟು ನಿಲ್ಲುವ ಗಟ್ಟಿ ಧೈರ್ಯ ಮಾಡುವುದೇ ನಿಜವಾದ ದೇಶಪ್ರೇಮಿಯ ಕಾಯಕ. ಗಾಂಧೀಜಿ ಮಾಡಿದ್ದೂ ಇದನ್ನೇ. ಈಗಲೂ ಅಂತಹುದೇ ಕಾಲ ಮರುಕಳಿಸಿದೆ. ಅಂದರೆ, ನಾವೀಗ ನಮ್ಮ ದೇಶಪ್ರೇಮವನ್ನು ಪಣಕ್ಕೊಡ್ಡುವ ಸಮಯ ಎದುರಾಗಿದೆ. ದೇಶಪ್ರೇಮಿಗಳ ದನಿ ಎಂದಿಗೂ ಉಡುಗುವಂತದ್ದಲ್ಲ, ಅದು ಗುಡುಗುವಂತದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...