Homeನ್ಯಾಯ ಪಥಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

ಇಂದಿನ ಸಮಾಜದ ತಲ್ಲಣಗಳು: ಎಚ್.ಎಸ್ ದೊರೆಸ್ವಾಮಿರವರ ಲೇಖನ

- Advertisement -
- Advertisement -

| ಎಚ್.ಎಸ್ ದೊರೆಸ್ವಾಮಿ |

ಇಂದಿನ ಸಮಾಜ ಸಮಾಜವೇ ಅಲ್ಲ. ಒಂದು Human Jungle. ಪ್ರತಿಯೊಬ್ಬನೂ ತನಗಾಗಿ ಬದುಕುವವನು. ಯಾರಿಗೂ ಸಾಮಾಜಿಕ ಪ್ರಜ್ಞೆ ಇಲ್ಲ. ಸಮಾಜದಲ್ಲಿ ಬಡವ-ಬಲ್ಲಿದ, ಈ ಜಾತಿ-ಆ ಜಾತಿ, ಶೋಷಕರು-ಶೋಷಿತರು, ವಿದ್ಯಾವಂತ, ಕೋಟ್ಯಾಧಿಪತಿ, ಭಿಕ್ಷುಕ ಹೀಗೆ ಭೇದಾಸುರನ ಹಾವಳಿ ಇದೆ.

ಸಮಾಜದ ಜನ ಜೇಡಿಮಣ್ಣಿನಂತಿರಬೇಕು. ಜೇಡಿಮಣ್ಣಿನಲ್ಲಿ ಕಣಕಣಕ್ಕೆ ಘರಿಷ್ಠ ತಾಗಿ ಅಂಟಿಕೊಂಡಿರುತ್ತದೆ. ಆದರೆ ನಮ್ಮ ಸಮಾಜ ಮರಳು ದಿಬ್ಬದಂತಿದೆ. ನೋಡುವುದಕ್ಕೆ ಮರಳ ಕಣಗಳು ಒಂದಕ್ಕೊಂದು ಅಂಟಿಕೊಂಡಂತೆ ಕಂಡುಬಂದರೂ ಒಂದು ಬಿರುಗಾಳಿ ಬೀಸಿದಾಗ ಪ್ರತಿ ಕಣವೂ ಒಂದೊಂದು ದಿಕ್ಕಿಗೆ ಚದುರಿಹೋಗುತ್ತದೆ. ಜೇಡಿಮಣ್ಣಿನಲ್ಲಿ ಕಣಕಣವೂ ಗಟ್ಟಿಯಾಗಿ ಅಂಟಿಕೊಂಡಿರುವಂತೆ ನಮ್ಮ ಸಮಾಜ ಇರಬೇಕು. ನೆಹರೂ ಅವರ ಕಾಲದಲ್ಲಿ ಚೀನಾ, ಭಾರತ ಯುದ್ಧ ನಡೆಯಿತು. ಭಾರತ ಪೂರ್ವ ರಾಜ್ಯಗಳ ಟೀ ತೋಟದ ಮಾಲೀಕರು ಹಣ, ಒಡವೆ, ತೆಗೆದುಕೊಂಡು ಪ್ರಾಣ ರಕ್ಷಣೆಗೋಸ್ಕರ ತಮ್ಮ ಮನೆಮಂದಿಯನ್ನು ಕಟ್ಟಿಕೊಂಡು ಪಟ್ಟಣಗಳಿಗೆ ಓಡಿಹೋದರು. ಅವರಿಗೆ ತಮಗಾಗಿ ದುಡಿಯುತ್ತಿದ್ದ ಜನರನ್ನು ರಕ್ಷಿಸಬೇಕೆಂದು ಅನ್ನಿಸಲೇ ಇಲ್ಲ.

ಇದು ಪಟ್ಟಭದ್ರ ಹಿತಾಸಕ್ತಿಗಳ ಸಾಮಾಜಿಕ ನಡವಳಿಕೆ. ನನಗಾಗಿ ಸಮಾಜ, ಸಮಾಜಕ್ಕಾಗಿ ನಾನು ಎಂಬ ಭಾವನೆ ಜನರಲ್ಲಿ ಬೆಳೆಯಬೇಕು ಎಂದು ಸರ್ವೋದಯ ಬಯಸುತ್ತದೆ. ಸ್ವಾರ್ಥಕ್ಕಾಗಿ ಸಮಷ್ಠಿಯನ್ನು ಬಲಿಕೊಡುವ ಸಮಾಜ ಇದು. ಸಮಾಜವನ್ನು ಅಹಿಂಸೆ, ಸತ್ಯ, ಸಮಾನತೆ, ದಯೆ, ಇವುಗಳ ಆಧಾರದ ಮೇಲೆ ಕಟ್ಟಬೇಕು. ಹಸಿವು, ನೋವು, ರೋಗರುಜಿನ ಮತ್ತು ಬಡತನ ನಿರ್ಮೂಲನೆಯ ಮೂಲಕ ಎಲ್ಲರಲ್ಲೂ ಸಂತೋಷ, ಸಮಾಧಾನಗಳನ್ನು ಬೆಳೆಸಿ ಈ ದುಷ್ಟ ಸಮಾಜವನ್ನು ಅಹಿಂಸಾತ್ಮಕ ಮಾರ್ಗಗಳಿಂದ ಬದಲಾವಣೆಗೊಳಿಸಿ ಎಂದು ಗಾಂಧೀಜಿ ಹೇಳುತ್ತಾರೆ.

ಗಾಂಧೀಜಿಗೆ ಗುರಿಯಷ್ಟೇ, ಗುರಿ ತಲುಪುವ ಮಾರ್ಗವೂ ಮುಖ್ಯವಾಗಿತ್ತು. ಗುರಿಯನ್ನು ಅಪಮಾರ್ಗದಲ್ಲಿ ತಲುಪುವುದು ಕೂಡದು. ಅಹಿಂಸಕ ಸಮಾಜವನ್ನು ಹಿಂಸೆಯ ಮೂಲಕ ಕಟ್ಟಲು ಸಾಧ್ಯವಾಗುವುದಿಲ್ಲ ಎಂಬುದು ಗಾಂಧೀಜಿಯವರ ದೃಢ ನಿಲುವು.

ಮನುಷ್ಯನಿಂದ ಮನುಷ್ಯನ ಅಭ್ಯುದಯವೇ ಗಾಂಧೀಜಿಯವರ ಪರಮ ಧ್ಯೇಯ. ಎಲ್ಲಾ ಅಭಿವೃದ್ಧಿಯ ಕಾರ್ಯಕ್ರಮವೂ ಮಾನವನ ಉತ್ಕರ್ಷಕ್ಕೆ ಸಹ ಅನುಕೂಲಕರವಾಗಿರಬೇಕು. ಅಭಿವೃದ್ಧಿಯ ಮುಖ್ಯ ಗುರಿ ಸಮಾಜದಿಂದ ತಿರಸ್ಕøತನಾದ ಬಡವನ ಬಡತನ ನೀಗುವುದು. ವಿಚಾರಹೀನ ಅಭಿವೃದ್ಧಿಯ ಕಾರಣದಿಂದ ಮನುಷ್ಯನ ಭೌತಿಕ, ಮಾನಸಿಕ ಮತ್ತು ನೈತಿಕ ಜೀವನದ ಅವನತಿ ಆಗಿದೆ. ತಂತ್ರಜ್ಞಾನದ ಬೆಳವಣಿಗೆಯನ್ನು 3 ಕಾರಣಗಳಿಗಾಗಿ ವಿರೋಧಿಸುತ್ತಾರೆ. ಜಟಿಲ ಮತ್ತು ಬೃಹತ್ ಯಂತ್ರೋದ್ಯಮ, ಕೇಂದ್ರೀಕೃತ ವ್ಯವಸ್ಥೆಗೆ ತೆರೆದುಕೊಳ್ಳುತ್ತದೆ. ಹಾಗೆಯೇ ಅದು ಸಣ್ಣ ಪ್ರಮಾಣದ ಉದ್ಯಮಗಳನ್ನು ನುಂಗಿ ಹಾಕುತ್ತದೆ. ಮನುಷ್ಯನ ಕಷ್ಟಕರ ದುಡಿಮೆಯನ್ನು ಹಗುರಗೊಳಿಸಲು ಯಂತ್ರದ ಅಗತ್ಯವಿದೆ. ಆದರೆ ಈ ಬೃಹತ್ ಯಂತ್ರಗಳು ಕಾರ್ಮಿಕನನ್ನು ನಿರುದ್ಯೋಗಿ ಮಾಡಿ ಬೀದಿಗೆಸೆಯುತ್ತದೆ ಅಥವಾ ಅವನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ.

ಭ್ರಷ್ಟಮುಕ್ತ ಆಡಳಿತ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಒಂದು ಸಾಧನ. ಮಾನವೀಯತೆ ಕಳೆದುಕೊಂಡವರು ಮಾನವ ಹಕ್ಕುಗಳ ಕಡು ವೈರಿಗಳು. ಮಾನವ ಹಕ್ಕುಗಳ ಪಾಲನೆಗಿಂತಲೂ ಮಾನವ ಹಕ್ಕುಗಳ ಉಲ್ಲಂಘನೆಯೂ ಈಗ ಸಮಾಜದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ನಕ್ಸಲ್‍ಬಾರಿಗಳನ್ನು ಹುಟ್ಟಿಹಾಕಿದ್ದು ದುಷ್ಟ ಆಡಳಿತ ಮತ್ತು ದೇಶದ ಕಡು ಬಡತನ.
ಪೊಲೀಸ್ ಠಾಣೆಗಳು, ನ್ಯಾಯಾಲಯಗಳು ಹೆಚ್ಚುತ್ತಿರುವುದು ಅಭಿವೃದ್ಧಿಯ ಲಕ್ಷಣಗಳಲ್ಲ. ಹೆಚ್ಚಿನ ಕಾನೂನುಗಳನ್ನು ಜನರ ಮೇಲೆ ಹೇರುವುದು ಪ್ರಗತಿಯ ಲಕ್ಷಣವಲ್ಲ. ಈ ಕಾನೂನುಗಳನ್ನು ಸರ್ಕಾರ ನಡೆಸುವವರನ್ನು ಟೀಕೆ ಮಾಡಿದವರ ಮೇಲೆ, ದುರಾಡಳಿತ ನಡೆಸುವುದನ್ನು ತಡೆಗಟ್ಟಲು ಹೋರಾಟ ಮಾಡುವವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಬಯಸುವುದು ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ ಮಾತ್ರ.

ಕಾನೂನು ಎಷ್ಟಿರಬೇಕು ಎಂದರೆ ಶರೀರದಲ್ಲಿ ಮಲವಿದ್ದಷ್ಟು ಮಾತ್ರ ಇರಬೇಕು. ಶರೀರವೆಲ್ಲವೂ ಮಲದಿಂದ ತುಂಬಿಕೊಂಡರೆ ಅದು ರೋಗರುಜಿನಗಳಿಗೆ, ಸಾವಿಗೆ ಕಾರಣವಾಗುತ್ತದೆ. ಕಾನೂನುಗಳನ್ನು ಬೆಳೆಸಿದಷ್ಟೂ ದೇಶದ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ ಎನ್ನುತ್ತಾರೆ ಪೂಜ್ಯ ವಿನೋಬಾ ಭಾವೆಯವರು.

ಈಗ ನಡೆಯುತ್ತಿರುವ ರಾಜಕೀಯ ಸಮರ ಸಮಾಜವನ್ನು ಒಡೆಯುತ್ತದೆ. ವಿಷಬೀಜ ಬಿತ್ತುತ್ತದೆ. ಸಿವಿಲ್ ವಾರ್‍ಗೆ ದಾರಿ ಮಾಡುತ್ತದೆ. ಧರ್ಮವನ್ನು, ಜಾತಿಗಳನ್ನೂ ರಾಜಕೀಯಕ್ಕೆ ಬೆರೆಸುವ ಕೆಲಸ ಎಲ್ಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತಿದೆ.

ಮೌಲ್ಯಗಳ ಅಧಃಪತನವೇ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಿಂದ ಕೂಡಿದ ಹೊಸ ಸಮಾಜವನ್ನು ಸೃಷ್ಠಿಸುವುದು ನಮ್ಮ ಗುರಿಯಾಗಬೇಕು.

ನಮ್ಮದು ಶ್ರೇಣೀಕೃತ ಸಮಾಜ. ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳೆಲ್ಲout of date ಆಗಿದೆ. ಈ ಮೌಲ್ಯಗಳೆಲ್ಲ ಆಮೂಲಾಗ್ರವಾಗಿ ಬದಲಾವಣೆಯಾಗಬೇಕಿದೆ. ಇದನ್ನು ವೈಜ್ಞಾನಿಕ ಕ್ರಾಂತಿಯ ಮೂಲಕ ಪರಿವರ್ತನೆ ಮಾಡಬೇಕು.

Rule of Law ಪ್ರಕಾರ ರಾಜ್ಯಾಡಳಿತ ನಡೆಸಬೇಕು. ಆಡಳಿತಗಾರರ ದುರಹಂಕಾರದ ವಿರುದ್ಧ ಜನ ಸಿಡಿದೇಳಬೇಕು. ಹಿಂಸಾಚಾರದ ವಿರುದ್ಧವಾಗಿ ಜನ ಸಂಘಟನೆ ಆಗಬೇಕು. ಪ್ರತಿಯೊಬ್ಬ ಪ್ರಜೆಯೂ ಪರಾವಲಂಬಿಯಾಗದೇ ತನ್ನ ದುಡಿಮೆಯಿಂದ ಗೌರವಯುತ ಜೀವನ ನಡೆಸುವ ಸನ್ನಿವೇಶ ಸೃಷ್ಟಿಯಾಗಬೇಕು. ಸರ್ಕಾರ ಕೊಡುವ ಭಿಕ್ಷೆಗಾಗಿ ಕಾಯುವ ದುಸ್ಥಿತಿ ತೊಲಗಬೇಕು.

ಸುಳ್ಳು ಹೇಳಿಕೆಗಳನ್ನು ನೀಡುವ ಪೊಳ್ಳು ಘೋಷಣೆಗಳನ್ನು ಕೂಗುವ ಗೋಮುಖ ವ್ಯಾಘ್ರಗಳನ್ನು ಪರಿಣಾಮಕಾರಿಯಾಗಿ ಬಯಲಿಗೆಳೆಯಬೇಕು. ರಾಜಕೀಯ ಮತ್ತು ಉತ್ಪ್ರೇಕ್ಷೆ ಎರಡೂ ಹೆಣೆದುಕೊಂಡಿವೆ. ಅದನ್ನು ಬಯಲು ಮಾಡಬೇಕು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗಳು ಅಸಹ್ಯ ರೀತಿಯಲ್ಲಿ ನಡೆಯುತ್ತಿವೆ. ಈ ಹೊಣೆಗೇಡಿ ಸದಸ್ಯರ ಹುಚ್ಚಾಟಗಳನ್ನು ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟು, ಎಲ್ಲ ಶಾಸಕರ ಮತ್ತು ಪಾರ್ಲಿಮೆಂಟ್ ಸದಸ್ಯರ ಮನೆಯ ಮುಂದೆ ಧರಣಿ ಮಾಡುವುದಾಗಬೇಕು. ಕುಟಿಲ ರಾಜಕೀಯ ಈಗ ವಿಜೃಂಭಿಸುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ಜನರು ಜಾಗೃತರಾಗುವುದು ಮಾತ್ರ ನಮ್ಮ ಇಂದಿನ ಸಾಮಾಜಿಕ ತಲ್ಲಣಗಳಿಗೆ ಪರಿಹಾರ ಒದಗಿಸಿಕೊಡಬಲ್ಲದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...