Homeಮುಖಪುಟಅಂಬರೀಶ್ ಗೆಲ್ಲಿಸಲು ದೇವೇಗೌಡರ ಕುಟುಂಬ ಸಜ್ಜು?

ಅಂಬರೀಶ್ ಗೆಲ್ಲಿಸಲು ದೇವೇಗೌಡರ ಕುಟುಂಬ ಸಜ್ಜು?

- Advertisement -
- Advertisement -

ಜೆಡಿಎಸ್ ಭದ್ರಕೋಟೆಯೆಂದೇ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿನ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಕೈಯ್ಯಾರೆ ಕಳೆದುಕೊಳ್ಳಲು`ಒಕ್ಕಲಿಗರ ಅದ್ವಿತೀಯ ನಾಯಕರಾದ’ ದೇವೇಗೌಡ ಹಾಗೂ ಕುಮಾರಸ್ವಾಮಿಯವರು ನಿರ್ಧರಿಸಿದ್ದಾರೆಯೇ? 2018ರ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿ ವಾರ ಕಳೆದರೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಅಪ್ಪ-ಮಗನ ಜೋಡಿ ಅಂತಿಮಗೊಳಿಸಿಲ್ಲ. ಅಂಬರೀಶ್ ಕಾಂಗ್ರೆಸ್‍ನಲ್ಲಿದ್ದರೂ ಮಂಡ್ಯ ಜಿಲ್ಲೆಯ ರಾಜಕಾರಣದ ವಿಷಯದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಗೆ ಒಳಗೊಳಗೆ ಸಾಥ್ ನೀಡುತ್ತಾ ಬಂದಿರುವ ಆಸಾಮಿ. ಡಬ್ಬಲ್ ಬಿ ಫಾರಂ ಖ್ಯಾತಿಯ ದೇವೇಗೌಡ, ಒಳಒಪ್ಪಂದದ ಪರಿಣಿತ ತಜ್ಞ ಕುಮಾರಸ್ವಾಮಿಯವರ ಡಬ್ಬಲ್ ಗೇಮ್‍ನಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಂಬರೀಶ್ ಎರಡು ಬಾರಿ ಶಾಸಕರಾಗಿದ್ದ ಎಂ.ಶ್ರೀನಿವಾಸ್‍ರವರನ್ನು 43 ಸಾವಿರ ಮತಗಳ ಭಾರೀ ಅಂತರದಿಂದ ಮಕಾಡೆ ಮಲಗಿಸಿಬಿಟ್ಟರು.

ಕಳೆದ ಸಾರಿ ಅಂಬರೀಷ್ ಪರವಾಗಿದ್ದ ಹಲವು ಸಂಗತಿಗಳು ಗೆಲುವನ್ನು ಖಚಿತಗೊಳಿಸಿದ್ದವು. ತಾನು ಇನ್ನು ಮುಂದೆ ಎಲ್ಲರಿಗೂ ಕೈಗೆ ಸಿಗುವ ಜನಪ್ರತಿನಿಧಿಯಾಗಿರುತ್ತೇನೆಂಬ ಭರವಸೆಯನ್ನು ಅಂಬರೀಷ್ ಕೊಟ್ಟಿದ್ದು, ಅದಕ್ಕೆ ಮುಂಚೆ ಲೋಕಸಭೆ ಹಾಗೂ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರಗಳಲ್ಲಿ ಸೋತಿದ್ದು, ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಹಿಡಿದ ಬಾಡಿಗೆ ಮನೆಯಲ್ಲಿ ಅಡುಗೆ ಮಾಡಲು ಶುರು ಹಚ್ಚಿಕೊಂಡಿದ್ದು, ಎರಡು ಬಾರಿ ಶಾಸಕರಾಗಿದ್ದರಿಂದ ಶ್ರೀನಿವಾಸ್ ಅವರಿಗೆ ಸಹಜವಾಗಿಯೇ ಹುಟ್ಟಿಕೊಂಡಿದ್ದ ಸ್ವಪಕ್ಷೀಯ ಅತೃಪ್ತರ ಅಸಮಾಧಾನ ಇವೆಲ್ಲವೂ ಟಫ್ ಫೈಟ್ ಮಧ್ಯೆಯೇ ಅಂಬರೀಷ್ ಗೆಲ್ಲಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದವು. ಆದರೆ, ಜೆಡಿಎಸ್‍ನ ಭದ್ರಕೋಟೆಯಾಗಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಇಷ್ಟೊಂದು ಹೀನಾಯವಾಗಿ ಸೋಲಲು ಅಪ್ಪ-ಮಗ ಸೋಮಾರಿ ಅಂಬರೀಶ್‍ನೊಂದಿಗೆ ಡೀಲ್ ಕುದುರಿಸಿದ್ದೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಅದಕ್ಕಾಗಿ ಅಶೋಕ್ ಜಯರಾಂರನ್ನು ಹದ್ದುಬಸ್ತಿನಲ್ಲಿಟ್ಟು ಇತರ ನಾಯಕರಿಗೂ ಹುಕುಂ ಹೊರಡಿಸಿ ಶ್ರೀನಿವಾಸ್‍ರ ಪರವಾಗಿ ಕೆಲಸ ಮಾಡಲು ಸೂಚಿಸದ ಕಾರಣದಿಂದ ಅಂಬರೀಷ್ ಭಾರೀ ಗೆಲುವನ್ನು ಕಾಣುವಂತಾಯಿತು.

ಆದರೆ, ಚುನಾವಣೆಯ ಮರುದಿನದಿಂದಲೇ ಅಂಬರೀಷ್ ಕ್ಷೇತ್ರದ ಜನರನ್ನು ನಿರಾಸೆಗೊಳಿಸಿದ್ದರು. ಆ ನಂತರ ಮಂಡ್ಯದ ಬಾಡಿಗೆ ಮನೆಯಲ್ಲಿ ಒಂದು ದಿನವೂ ಅಂಬರೀಷೂ ಉಳಿಯಲಿಲ್ಲ; ಸುಮಲತಾರೂ ಉಳಿಯಲಿಲ್ಲ. ಸಾಮಾನ್ಯ ಜನರು, ಕಾರ್ಯಕರ್ತರು ಹೋಗಲಿ, ಕಾಂಗ್ರೆಸ್ ನಾಯಕರ ಕೈಗೇ ಸಿಗುತ್ತಿರಲಿಲ್ಲ. ಜಿ.ಪಂ ಹಾಗೂ ತಾ.ಪಂ ಚುನಾವಣೆಗಳಲ್ಲಿ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜೆಡಿಎಸ್ ಭರ್ಜರಿ ಜಯ ಗಳಿಸಿತ್ತು. ಸಾಲು ಸಾಲು ಆತ್ಮಹತ್ಯೆಗಳು ನಡೆಯುತ್ತಿದ್ದರೂ, ಮೈಷುಗರ್ ಮುಳುಗುತ್ತಿದ್ದರೂ, ಅಂಬರೀಷ್‍ರ ಸ್ವಂತ ವಸತಿ ಖಾತೆಯಡಿ ಸ್ಲಂ ಜನರಿಗೆ ಅನ್ಯಾಯವಾಗುತ್ತಿದ್ದರೂ ಅಂಬರೀಷ್ ಪತ್ತೆ ಇರಲಿಲ್ಲ. ಹಾಗಾಗಿ ಎಲ್ಲರಿಗೂ ಸ್ಪಷ್ಟವಿದ್ದದ್ದು ಈ ಸಾರಿ ಎಂ.ಶ್ರೀನಿವಾಸ್ ನಿರಾಯಾಸವಾಗಿ ಗೆಲ್ಲುತ್ತಾರೆಂದು.

ಹೀಗಿದ್ದೂ ಗೌಡರ ಕುಟುಂಬದ ಆಟ ನೋಡುತ್ತಿದ್ದರೆ ಈ ಬಾರಿಯ ಚುನಾವಣೆಯಲ್ಲೂ ಅಂಬರೀಶ್ ಗೆಲ್ಲಿಸಲು ಸಜ್ಜಾಗಿರುವ ಅನುಮಾನ ಎದ್ದು ಕಾಣುತ್ತಿದೆ. ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರಕ್ಕೆ ಕಳುಹಿಸುವ ಬದಲು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡ್ತೇವೆ ಅಂತ ಹೇಳುತ್ತಾ ಕುಮಾರಪರ್ವ, ರೈತ ಚೈತನ್ಯ ಯಾತ್ರೆ ಅಂತೆಲ್ಲಾ ಸುತ್ತುತ್ತಿದ್ದಾರೆ. ಕಳೆದ ಬಾರಿಯಂತೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನ ಹರಕೆಯ ಕುರಿಯನ್ನಾಗಿ ಎಂ.ಶ್ರೀನಿವಾಸ್‍ರನ್ನು ಅಭ್ಯರ್ಥಿ ಮಾಡಿ ಅಂಬರೀಶ್ ಎದುರು ನಿಲ್ಲಿಸಿ ಬಲಿಕೊಟ್ಟಂತೆಯೇ ಈ ಬಾರಿಯೂ ಅಂಬಿ ಎದುರು ಬಲಿಕೊಡುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆಂಬ ಸುದ್ದಿ ದಟ್ಟವಾಗಿದೆ.

ಡಜನ್ ಆಕಾಂಕ್ಷಿಗಳು

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗೆ ಭಾರೀ ಪೈಪೋಟಿಯೇ ನಡೆದಿದೆ. ಮಾಜಿ ಶಾಸಕ ಎಂ.ಶ್ರೀನಿವಾಸ್, ಜಿಪಂ ಸದಸ್ಯ ಚಂದಗಾಲು ಶಿವಣ್ಣ, ಮಾಜಿ ಸಚಿವ ಎಸ್.ಡಿ.ಜಯರಾಂ ಪುತ್ರ ಅಶೋಕ್‍ಜಯರಾಂ, ಕೆ.ವಿ.ಶಂಕರಗೌಡರ ಮೊಮ್ಮಗ ವಿಜಯಾನಂದ, ಐದು ರೂ. ವೈದ್ಯ ಶಂಕರೇಗೌಡ, ಬಡ್ಡಿ ದಂಧೆಯ ಡಾ. ಕೃಷ್ಣ, ಗುತ್ತಿಗೆದಾರ ಕೀಲಾರ ರಾಧಾಕೃಷ್ಣ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಸೇರಿದಂತೆ ಡಜನ್‍ಗಟ್ಟಲೆ ಆಕಾಂಕ್ಷಿಗಳು ರೇಸಿನಲ್ಲಿದ್ದಾರೆ. ತನ್ನಲ್ಲಿರುವ ಹಡಬಿಟ್ಟಿ ದುಡ್ಡಿನ ಬಲದಿಂದಲೇ ನನಗೆ ಟಿಕೆಟ್ ಎಂದು ಸುತ್ತುತ್ತಿರುವ ಕೀಲಾರ ರಾಧಾಕೃಷ್ಣ ಹಾಗೂ ಹಿಂದೊಮ್ಮೆ ಕೆರಗೋಡು ಶಾಸಕರಾಗಿದ್ದ ತಮ್ಮಣ್ಣನವರ ಕುಟುಂಬದ ಚಂದಗಾಲು ಶಿವಣ್ಣ ಬಹಳ ಸೀರಿಯಸ್ಸಾಗಿ ಟಿಕೆಟ್ ಪಡೆಯಲು ಕಸರತ್ತು ಮಾಡುತ್ತಿದ್ದಾರೆ. ಇವರಲ್ಲಿ ಕನಿಷ್ಠ ಇಬ್ಬರಾದರೂ ನೇರವಾಗಿ ಗೌಡರ ಕುಟುಂಬದ ಸೂಚನೆಯ ಮೇರೆಗೇ ಬಹಿರಂಗವಾಗಿ ಫೀಲ್ಡಿಗಿಳಿದಿರುವುದು ಗ್ಯಾರಂಟಿ. ಕೀಲಾರ ರಾಧಾಕೃಷ್ಣ ಯಾರು ಎಂಬುದು ಕೇವಲ ಒಂದು ವರ್ಷದ ಕೆಳಗೆ ಕೀಲಾರದ ನೆಂಟರಿಷ್ಟರಿಗೆ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಈಗ ಎಂ.ಶ್ರೀನಿವಾಸ್‍ರು ಕೊಟ್ಟ ಟಿಕೆಟ್‍ನಿಂದಲೇ ನಗರಸಭೆ ಸದಸ್ಯರಾಗಿದ್ದವರೂ ಅವರ ಪರ ಬ್ಯಾಟಿಂಗ್ ಮಾಡುವುದಕ್ಕೆ ಒಂದು ಕಾರಣ ಅಮೇಧ್ಯದ ಹಣವಾದರೆ, ಇನ್ನೊಂದು ಗೌಡರ ಕುಟುಂಬದ ಶ್ರೀರಕ್ಷೆಯೇ ಆಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಅಂಬರೀಶ್ ಸೋಲಿಸಿ ಮನೆಗೆ ಕಳುಹಿಸಲು ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರೇ ಸೂಕ್ತ ಅಭ್ಯರ್ಥಿಯಾಗಿದ್ದರು. ಅವರಿಗೆ ಟಿಕೆಟ್ ನಿರಾಕರಣೆಯಾದರೆ ಸಹಜವಾಗಿ ಬಂಡಾಯವೇಳುತ್ತಾರೆ. ಈಗಾಗಲೇ ಬಿಜೆಪಿ ಅವರೊಂದಿಗೆ ಎರಡು ಸುತ್ತಿನ ಮಾತುಕತೆಯನ್ನೂ ನಡೆಸಿದೆ. ಎಂ.ಶ್ರೀನಿವಾಸ್ ಬಿಟ್ಟು ಉಳಿದ ಯಾರಿಗೇ ಟಿಕೆಟ್ ನೀಡಿದರೂ ಅಂಬರೀಶ್ ಮತ್ತೆ ಮಂಡ್ಯದ ಶಾಸಕರಾಗುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಿಸಲು ನೆರವು ಪಡೆದ ಅಪ್ಪ-ಮಗ ಪುಟ್ಟರಾಜುರನ್ನು ಐದು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡರು. ಅಂಬರೀಶ್ ನೆರವು ನೀಡದಿದ್ದರೆ ಪುಟ್ಟರಾಜು ಸೋತು ರಮ್ಯಾ ಗೆಲ್ಲುತ್ತಿದ್ದರು ಎಂಬ ಮಾತು ಸುಳ್ಳಲ್ಲ.

ಹೀಗೆ ಎಲ್ಲಾ ಚುನಾವಣೆಯಲ್ಲೂ ಅಂಬರೀಶ್ ಜೊತೆಗೆ ಒಳಗೊಳಗೆ ಡೀಲ್ ಕುದುರಿಸುವ ಅಪ್ಪ-ಮಗ ಈ ಬಾರಿಯೂ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್ ಗೆಲ್ಲಿಸಿ ಚಲುವರಾಯಸ್ವಾಮಿಗೆ ಜಿಲ್ಲಾ ಕಾಂಗ್ರೆಸ್ ನಾಯಕತ್ವ ಸಿಗದಂತೆ ಹುನ್ನಾರ ಮಾಡಿದ್ದಾರೆ. ಅನಾರೋಗ್ಯದಿಂದ ಕ್ಷೇತ್ರದತ್ತ ಮುಖಮಾಡದಿರುವ ಅಂಬರೀಶ್ ಮತ್ತೆ ಚುನಾವಣೆಗೆ ನಿಲ್ಲುವಂತೆ ಮಾಡಿರುವುದೇ ಅಪ್ಪ-ಮಗನ ಜೋಡಿ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಅಪಖ್ಯಾತಿಯನ್ನು ತೊಡೆದುಹಾಕಿಕೊಳ್ಳಬೇಕಿತ್ತು

ಎಂ. ಶ್ರೀನಿವಾಸ್

ಒಳ ಒಪ್ಪಂದ ಮಾಡಿಕೊಂಡು ಡಬ್ಬಲ್‍ಗೇಮ್ ಆಡುವುದರಲ್ಲಿ ದೇವೇಗೌಡರ ಕುಟುಂಬ ಎತ್ತಿದ ಕೈ ಎಂಬ ಭಾವನೆ ಬರಲು ಮಂಡ್ಯದ್ದೇ ಉದಾಹರಣೆಗಳಿವೆ. 2004ರ ಚುನಾವಣೆಯಲ್ಲಿ ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೀಗ ಡಿ.ಸಿ.ತಮ್ಮಣ್ಣನನ್ನು ಗೆಲ್ಲಿಸಲು ದೇವೇಗೌಡರು ತಮ್ಮ ಮಾನಸಪುತ್ರ ಎಂದೇ ಕರೆಸಿಕೊಳ್ಳುತ್ತಿದ್ದ ಎಂ.ಎಸ್.ಸಿದ್ದರಾಜುರನ್ನು ಬಲಿಕೊಟ್ಟರು. ಬೀಗ ಡಿ.ಸಿ.ತಮ್ಮಣ್ಣನನ್ನು ಎಂಎಲ್‍ಎ ಮಾಡಲೇಬೇಕೆಂದು ದೇವೇಗೌಡರ ಕುಟುಂಬ ತೀರ್ಮಾನಿಸಿತ್ತು. ಇತ್ತ ದೇವೇಗೌಡರು ಸಿದ್ದರಾಜುಗೆ ಜೆಡಿಎಸ್ ಬಿ ಫಾರಂ ಕೊಟ್ಟು ಕಳುಹಿಸಿದರೆ ಅತ್ತ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರಮೇಶ್ (ತಮ್ಮಣ್ಣನ ಅಳಿಯ) ಮತ್ತೊಂದು ಬಿ ಫಾರಂ ಅನ್ನು ಮಾಜಿ ಜಿ.ಪಂ. ಅಧ್ಯಕ್ಷ ಬಿ ವಿವೇಕಾನಂದರಿಗೆ ಕೊಟ್ಟು ನಾಮಪತ್ರ ಹಾಕುವಂತೆ ನೋಡಿಕೊಂಡರು. ಇಬ್ಬರೂ ಕಣದಲ್ಲಿ ಉಳಿಯುವುದರಿಂದ ಜೆಡಿಎಸ್ ಮತಗಳು ಛಿದ್ರಗೊಂಡು ಬೀಗ ಡಿ.ಸಿ.ತಮ್ಮಣ್ಣ 10,735 ಮತಗಳ ಅಂತರದಿಂದ ಗೆದ್ದು ಎಂಎಲ್‍ಎ ಆಗುತ್ತಾರೆ.

ಇನ್ನು 2008ರ ಚುನಾವಣೆ ವೇಳೆಗೆ ದೇವೇಗೌಡರಿಗೆ ಸಿದ್ದರಾಜುರನ್ನು ಗೆಲ್ಲಿಸುವುದು ಅನಿವಾರ್ಯವಾಗಿತ್ತು. ಆದರೆ ಗೆದ್ದ ಮೂರೇ ತಿಂಗಳಿಗೆ ಅನಾರೋಗ್ಯದಿಂದ ಸಿದ್ದರಾಜು ನಿಧನರಾಗುತ್ತಾರೆ. ಆಗ ನಡೆಯುವ ಉಪಚುನಾವಣೆಯಲ್ಲಿ ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು ಕಣಕ್ಕಿಳಿಸಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೀಗ ಡಿ.ಸಿ.ತಮ್ಮಣ್ಣರ ವಿರುದ್ಧ ಬಹಿರಂಗ ವಾಗ್ದಾಳಿಯನ್ನು ಜೆಡಿಎಸ್ ಕುಟುಂಬ ಮಾಡುತ್ತದೆ. 2013ರ ಚುನಾವಣೆ ವೇಳೆಗಾಗಲೇ ಮತ್ತೆ ಎಲ್ಲವೂ ಉಲ್ಟಾ ಆಗುತ್ತದೆ. 5 ವರ್ಷ ಅಧಿಕಾರವಿಲ್ಲದೆ ಮನೆಯಲ್ಲಿ ಕುಂತಿದ್ದ ಡಿ.ಸಿ.ತಮ್ಮಣ್ಣ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರುತ್ತಾರೆ. ಯಾವುದೇ ತಪ್ಪು ಮಾಡದ ಅಪ್ಪ-ಮಗನ ಮಾತನ್ನೇ ವೇದವಾಕ್ಯದಂತೆ ಪಾಲಿಸುತ್ತಿದ್ದ ಕಲ್ಪನಾ ಸಿದ್ದರಾಜುರನ್ನು ಮುಲಾಜಿಲ್ಲದೆ ಪಕ್ಷ ಬಿಟ್ಟು ಹೋಗುವಂತೆ ಮಾಡುತ್ತಾರೆ. ಜೆಡಿಎಸ್ ಅಭ್ಯರ್ಥಿಯಾಗುವ ತಮ್ಮಣ್ಣ ಕಾಂಗ್ರೆಸ್‍ನ ಮಧುಮಾದೇಗೌಡ, ಪಕ್ಷೇತರ ಅಭ್ಯರ್ಥಿ ಕಲ್ಪನಾ ಸಿದ್ದರಾಜುರನ್ನು ಸೋಲಿಸಿ 31,958 ಮತಗಳ ಭಾರೀ ಅಂತರದಿಂದ ಗೆದ್ದು ಬರುತ್ತಾರೆ.

ಸಿದ್ದರಾಜುರನ್ನೂ, ನಂತರ ಅವರ ನಿಧನಾನಂತರ ಕಲ್ಪನಾರನ್ನೂ ಗೆಲ್ಲಿಸುವ ಮೂಲಕ ಅಪಖ್ಯಾತಿ ಕಳೆದುಕೊಳ್ಳಲು ಸಾಧ್ಯವಿದ್ದ ಗೌಡರಿಗೆ ಕುಟುಂಬ ವ್ಯಾಮೋಹ ಮತ್ತೆ ಇಂತಹ ಅವಕಾಶವಾದಿ ಕ್ರಮಕ್ಕೆ ದೂಡಿತು.

ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ವೀರಪ್ಪ ಮೊಯ್ಲಿ ಅವರ ಜೊತೆ ಡೀಲ್ ಕುದುರಿಸಿಕೊಂಡ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರ ಸೋಲಿಗೆ ಕಾರಣರಾಗಿದ್ದರು. ಒಕ್ಕಲಿಗ ಮತಗಳು ಬಚ್ಚೇಗೌಡ ಹಾಗೂ ಕುಮಾರಸ್ವಾಮಿ ಮಧ್ಯೆ ವಿಭಜನೆ ಆದ ಕಾರಣ ವೀರಪ್ಪ ಮೊಯ್ಲಿ ಗೆದ್ದು ಸಂಸದರಾಗುವಂತಾಯಿತು. ಹಿಂದಿನ ಸಾರಿ ರಾಮನಗರದಿಂದ ಗೆದ್ದು ಎಂಪಿಯಾಗಿದ್ದ ಕುಮಾರಸ್ವಾಮಿ ಚಿಕ್ಕಬಳ್ಳಾಪುರಕ್ಕೆ ಹೋದದ್ದು ಗೆಲ್ಲಲು ಅಲ್ಲ. ವೀರಪ್ಪ ಮೊಯ್ಲಿ ಕೊಡುವ ದುಡ್ಡು ಪಡೆದು ಒಕ್ಕಲಿಗ ಜನಾಂಗದ ಬಚ್ಚೇಗೌಡರನ್ನು ಹಣಿಯಲು. ಅದರಲ್ಲಿ ಕುಮಾರಸ್ವಾಮಿ ಯಶಸ್ವಿಯಾದರು. ಮಾಜಿ ಮುಖ್ಯಮಂತ್ರಿಯಾಗಿದ್ದು, ಜೆಡಿಎಸ್ ಬೆಲ್ಟೇ ಆಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೋಗಿ 3ನೇ ಸ್ಥಾನ ಪಡೆದುಕೊಂಡರೂ ಅವರಿಗೆ ಯಾವ ಬೇಸರವೂ ಆಗಲಿಲ್ಲ.

ನಂಬಿದವರನ್ನು ಮೂಲೆಗುಂಪು ಮಾಡುವುದು. ಎಲ್ಲೋ ಇದ್ದವರನ್ನು ಎಂಎಲ್‍ಎ, ಎಂಎಲ್‍ಸಿ, ಎಂಪಿ ಮಾಡುವುದು ದೇವೇಗೌಡ- ಕುಮಾರಸ್ವಾಮಿಗೆ ನೀರು ಕುಡಿದಷ್ಟೇ ಸಲೀಸು. ರಾಜ್ಯಸಭೆ ಚುನಾವಣೆಯಲ್ಲಿ ಇವರ ತಿಜೋರಿಗೆ ಕೋಟಿಕೋಟಿ ದುಡ್ಡು ಹಾಕಿಯೇ ವಿಜಯ್‍ಮಲ್ಯ, ರಾಮಸ್ವಾಮಿ, ರಾಜೀವ್ ಚಂದ್ರಶೇಖರ್ ಅಂತಹವರೆಲ್ಲಾ ರಾಜ್ಯಸಭಾ ಸದಸ್ಯರಾಗಿ ಹೋದರು. ಕನ್ನಡಿಗನಲ್ಲದ, ರೇಸು ಕುದುರೆಗಳ ಮಾಲೀಕ ತಮಿಳುನಾಡಿನ ರಾಮಸ್ವಾಮಿ ರಾಜ್ಯಸಭೆ ಮೆಂಬರ್ ಆದದ್ದು. ಅಪ್ಪ-ಮಗನಿಗೆ ಕೋಟಿಗಟ್ಟಲೆ ಹಣ ಕೊಟ್ಟಿದ್ದರಿಂದಲೇ ಎಂಬುದನ್ನು ಕನ್ನಡಿಗರ್ಯಾರು ಇನ್ನು ಮರೆತಿಲ್ಲ. ಆದರೆ ತಮ್ಮದು ಪ್ರಾದೇಶಿಕ ಪಕ್ಷ ಎಂಬ ಟ್ರಂಪ್‍ಕಾರ್ಡ್ ಮಾತ್ರ ಆಗಾಗ ಉದುರಿಸುತ್ತಲೇ ಇರುತ್ತಾರೆ.

ಇಂತಹ ಅಪಖ್ಯಾತಿಗಳನ್ನೆಲ್ಲಾ ಕಳೆದುಕೊಳ್ಳಲು ಗೌಡರ ಕುಟುಂಬ ಈಗಲಾದರೂ ಮನಸ್ಸು ಮಾಡಬೇಕು. ಇಲ್ಲದಿದ್ದರೆ, ಕಣ್ಣೆದುರಿಗೆ ಇಂತಹ ಸ್ಪಷ್ಟ ನಿದರ್ಶನಗಳು ಇರುವುದರಿಂದ ಗೌಡರು ಪುಂಖಾನುಪುಂಖವಾಗಿ ಸುರಿಸುವ ಅವರ ತ್ಯಾಗದ ಉದಾಹರಣೆಗಳನ್ನು ಜನ ನಂಬುವುದಿಲ್ಲ. ಜಾತಿಯೂ ಸಹ ದೇವೇಗೌಡರ ಕುಟುಂಬದ ಶ್ರೀರಕ್ಷೆಗಾಗಿ ಬಳಸಲ್ಪಡುವ ಒಂದು ಸಾಧನ ಅಷ್ಟೇ ಆಗಿದೆ ಎಂಬುದಕ್ಕೆ ಇನ್ನೂ ಹೆಚ್ಚಿನ ನಿದರ್ಶನಗಳ ಅಗತ್ಯವಿಲ್ಲ.

– ಮಂಡ್ಯ ನಾಗೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...