ಸ್ಪಾಟ್‍ಲೈಟ್ ಎನ್ನುವ ಸಿನೆಮಾ

ನಾವೆಲ್ಲ ಸಿನೆಮಾದ ವಿದ್ಯಾರ್ಥಿಗಳಾಗಿ ಅದರ ಅನೇಕ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಆಯಾ ಸಿದ್ಧಾಂತಗಳಿಗೆ ತನ್ನದೇ ಆದ ನಿಯಮಗಳಿರುತ್ತವೆ. ನಮ್ಮಲ್ಲಿ ಫಾರ್ಮುಲಾ ಫಿಲ್ಮ್ ಎನ್ನುವುದು ಕೇಳಿಬರುತ್ತದೆ.

| ರಾಜಶೇಖರ್ ಅಕ್ಕಿ |

ನಾವೆಲ್ಲ ಸಿನೆಮಾದ ವಿದ್ಯಾರ್ಥಿಗಳಾಗಿ ಅದರ ಅನೇಕ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಆಯಾ ಸಿದ್ಧಾಂತಗಳಿಗೆ ತನ್ನದೇ ಆದ ನಿಯಮಗಳಿರುತ್ತವೆ. ನಮ್ಮಲ್ಲಿ ಫಾರ್ಮುಲಾ ಫಿಲ್ಮ್ ಎನ್ನುವುದು ಕೇಳಿಬರುತ್ತದೆ. ಒಂದು ಸಿನೆಮಾ ಇಂತಿಷ್ಟು ಅಂಶಗಳನ್ನು ಹೊಂದಿರಬೇಕು, ಆ ಚಿತ್ರದ ನಾಯಕಿ/ನಾಯಕಿ ಹೀಗಿರಬೇಕು, ಅವಳ ವೈಯಕ್ತಿಕ ಜೀವನದ ಅಂಶಗಳನ್ನು ತೋರಿಸಿ ಅವಳ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಬೇಕು, ಸಿನೆಮಾದ ಪ್ರಾರಂಭದ ಅರ್ಧ ಗಂಟೆಯಲ್ಲಿ ಸಿನೆಮಾದ ಪರಿಪೇಕ್ಷೆಯನ್ನು ಸ್ಪಷ್ಟಪಡಿಸಬೇಕು, ಅಷ್ಟರಲ್ಲೇ ಪ್ರಮುಖ ಪಾತ್ರ ಮತ್ತು ಎದುರಾಳಿ ಯಾರು ಎನ್ನುವುದನ್ನು ಸ್ಪಷ್ಟಪಡಿಸಬೇಕು, ಅರ್ಧಗಂಟೆಯ ನಂತರ ಸಂಘರ್ಷ ಪ್ರಾರಂಭವಾಗಬೇಕು ಇತ್ಯಾದಿ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅನೇಕ ಸಿನೆಮಾಗಳು ಇದರಲ್ಲಿ ಹೆಚ್ಚಿನ ನಿಯಮಗಳನ್ನು ಪಾಲಿಸಿ, ಅದ್ಭುತ ಫಲಿತಾಂಶ ನೀಡುತ್ತವೆ. ಆದರೆ ಕೆಲವೊಮ್ಮೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಒಂದು ಸಿನೆಮಾ ನೋಡಿದಾಗ ಈ ಯಾವ ನಿಯಮಗಳನ್ನು ಪಾಲಿಸುವುದು ಕಂಡುಬರುವುದಿಲ್ಲ. ಚಿತ್ರ ಮಾತ್ರ ಅದ್ಭುತವಾಗಿರುತ್ತದೆ. ಅಂತಹ ಒಂದು ಅದ್ಭುತ ಉದಾಹರಣೆ ಸ್ಪಾಟ್‍ಲೈಟ್. ಹಾಗೆಂದ ಮಾತ್ರಕ್ಕೆ ಈ ಚಿತ್ರದಲ್ಲಿ ಯಾವ ನಿಯಮಗಳನ್ನೂ ಪಾಲಿಸಿಲ್ಲ ಎಂತಲ್ಲ. ಪಾಲಿಸಿದ ನಿಯಗಳೆಲ್ಲವೂ ಗೌಣವಾಗಿರುತ್ತವೆ. ಹತ್ತಾರು ಬಾರಿ ಆ ಚಿತ್ರವನ್ನು ನೋಡಿದಾಗಲೂ ಆ ಚಿತ್ರದ ಕಥೆ/ವಿಷಯದ ಕಡೆಗೆ ಗಮನವಿರುತ್ತದೆಯೇ ಹೊರತು ಈ ಚಿತ್ರವನ್ನು ಹೇಗೆ ಮಾಡಿದರು ಎನ್ನುವುದು ಲಕ್ಷಕ್ಕೆ ಬರುವುದಿಲ್ಲ.

ಸ್ಪಾಟ್‍ಲೈಟ್ ಚಿತ್ರ ಪ್ರಾರಂಭವಾಗುವುದು 1976ರ ಒಂದು ಘಟನೆಯಿಂದ. ಅಮೆರಿಕದ ಬೋಸ್ಟನ್‍ನ ಒಂದು ಪೊಲೀಸ್ ಠಾಣೆಯಲ್ಲಿ ಒಂದೆಡೆ ನಾಲ್ಕು ಮಕ್ಕಳು ಮತ್ತು ಅವರ ತಾಯಿ ಕುಳಿತಿದ್ದರೆ ಇನ್ನೊಂದು ಕೋಣೆಯಲ್ಲಿ ಆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಒಬ್ಬ ಕ್ಯಾಥೋಲಿಕ್ ಪಾದ್ರಿ ಕುಳಿತಿದ್ದಾನೆ. ಇಬ್ಬರು ಪೊಲೀಸ್ ಅಧಿಕಾರಿಗಳು ವಿಷಯವನ್ನು ಚರ್ಚಿಸಲು ಶುರು ಮಾಡುತ್ತಿದ್ದಂತೆ ಡಿಸ್ಟ್ರಿಕ್ಟ್ ಅಟಾರ್ನಿ ಬಂದು ವಿಷಯವನ್ನು ಬಹಿರಂಗಪಡಿಸಬಾರದೆಂದು ಸೂಚಿಸುತ್ತಾನೆ. ಮಾರನೆಯ ಕ್ಷಣ ಆ ಪಾದ್ರಿಯನ್ನು ಬಿಡುಗಡೆ ಮಾಡಿ ಆ ವಿಷಯವನ್ನು ಅಲ್ಲಿಯೇ ಮುಚ್ಚಿಹಾಕಲಾಗುತ್ತದೆ.

2001ರಲ್ಲಿ ಬೋಸ್ಟನ್ ಗ್ಲೋಬ್ ಪತ್ರಿಕೆಗೆ ಒಬ್ಬ ಹೊಸ ಸಂಪಾದಕ ನೇಮಕವಾಗುತ್ತಾನೆ. ಆ ಪತ್ರಿಕೆಯಲ್ಲಿ ತನಿಖಾ ಪತ್ರಿಕೋದ್ಯಮದಲ್ಲಿ ನಿರತವಾಗಿರುವ ಒಂದು ತಂಡವಿದೆ; ಅದುವೆ ಸ್ಪಾಟ್‍ಲೈಟ್ ತಂಡ. ಓರ್ವ ಪಾದ್ರಿಯಿಂದ ಮಕ್ಕಳ ಮೇಲೆ ಆದ ಲೈಂಗಿಕ ಕಿರುಕುಳ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಬಗ್ಗೆ ಹೊಸದಾಗಿ ಬಂದ ಸಂಪಾದಕನು ವಿಚಾರಿಸಿ, ಅದರ ಸರಿಯಾದ ಫಾಲೋ ಅಪ್ ಆಗಿಲ್ಲವಾದುದರಿಂದ ಸ್ಪಾಟ್‍ಲೈಟ್ ತಂಡ ಆ ವಿಷಯವನ್ನು ಕೈಗೆತ್ತಿಕೊಳ್ಳಬೇಕೆಂದು ಸೂಚಿಸುತ್ತಾನೆ. ತಕ್ಷಣ ಆ ತಂಡ ಕಾರ್ಯನಿರತವಾಗುತ್ತದೆ. ಆ ಒಂದು ಪ್ರಕರಣ, ಒಬ್ಬ ಪಾದ್ರಿಯಿಂದ ಶುರುವಾದ ತನಿಖೆಯ ಪಯಣ ಎಲ್ಲಿಗೆ ಕೊಂಡೊಯ್ಯುವುದು, ಆ ನಗರದ ಮೇಲೆ, ದೇಶದ ಮೇಲೆ, ಚರ್ಚ್ ಎನ್ನುವ ಇಡೀ ಸಂಸ್ಥೆಯ ಮೇಲೆ, ಇಡೀ ಪ್ರಪಂಚಾದ್ಯಂತ ಆಗುವ ಪರಿಣಾಮಗಳ ಬಗ್ಗೆ ಅವರಿಗ್ಯಾರಿಗೂ ತಿಳಿದಿರುವುದಿಲ್ಲ; ಪ್ರೇಕ್ಷಕರಿಗೂ ಗೊತ್ತಿರುವುದಿಲ್ಲ. ತನಿಖೆ ಮುಂದುವರೆದಂತೆ ವಿಷಯದ ಆಳ ಎಳೆಎಳೆಯಾಗಿ ಬಿಚ್ಚುತ್ತಾ ಹೋಗುತ್ತದೆ. ಹಾಗಾಗಿ ಈ ಚಿತ್ರದ ಸ್ಟ್ರಕ್ಚರ್‍ಅನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಹೇಳಲಾಗುವುದಿಲ್ಲ.

ಚಿತ್ರದಲ್ಲಿ ಒಬ್ಬ ನಾಯಕನಿಲ್ಲ. ಸ್ಪಾಟ್‍ಲೈಟ್ ತಂಡದ ಸದಸ್ಯರಾದ ರೆಝೆಂಡಸ್ (ಮಾರ್ಕ್ ರಫಲೋ) ರಾಬಿ, ರಾಬಿನ್ಸನ್ (ಮೈಕಲ್ ಕೀಟನ್) ಸಾಷಾ ಪೈಫರ್ (ರೇಷಲ್ ಮಾಕ್‍ಅಡಮ್ಸ್) ಮತ್ತು ಮ್ಯಾಟ್ ಕೆರಲ್(ಬ್ರ್ಯಾನ್ ಜೇಮ್ಸ್), ಈ ನಾಲ್ವರೂ ನಾಯಕರೇ, ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎಡೆಬಿಡದೇ ನಡೆಸುತ್ತಿರುವ ವಕೀಲ ಮಿಚ್ ಗೆರಬಿಡಿಯನ್ (ಸ್ಟ್ಯಾನ್ಲಿ ಟುಚಿ) ಸಹ ನಾಯಕನೇ, ಪತ್ರಿಕೆಯ ಸಂಪಾದಕನೂ ನಾಯಕನೇ. ಸಾಷಾ ಪೈಫರ್ ಪಾತ್ರದ ಅಜ್ಜಿ ಮತ್ತು ಅವಳ ಸಂಗಾತಿ ಒಂದೆರಡು ದೃಶ್ಯಗಳಲ್ಲಿ ಕಂಡುಬರುವುದನ್ನು ಹೊರತುಪಡಿಸಿದರೆ ಇತರ ಯಾವ ಪಾತ್ರಗಳ ವೈಯಕ್ತಿಕ ಜೀವನವನ್ನು ತೋರಿಸುವ ಗೋಜಿಗೇ ಹೋಗಿಲ್ಲ ಚಿತ್ರದ ನಿರ್ದೇಶಕ. ಪಾತ್ರಗಳು ತಮ್ಮಷ್ಟಕ್ಕೇ ಎಷ್ಟು ಆಳವನ್ನು ಹೊಂದಿವೆಯೆಂದರೆ, ಅವರನ್ನು ರಕ್ತ ಮಾಂಸ ತುಂಬಿದ ಮನುಷ್ಯರಾಗಿ ಚಿತ್ರಿಸಲು ಇತರ ಹತಾರಗಳ ಆಸರೆಯೇ ಬೇಕಿಲ್ಲ.

ಬದ್ಧತೆ – ಸ್ಪಾಟ್‍ಲೈಟ್ ಚಿತ್ರಕ್ಕೆ ಸಂಬಂಧಪಟ್ಟಂತೆ ಎರಡು ರೀತಿಯ ಬದ್ಧತೆ ಪ್ರಾಮಾಣಿಕತೆಗಳು ಕಾಣಿಸಿಕೊಳ್ಳುತ್ತವೆ. ಮೊದಲನೆಯದು, ಈ ಚಿತ್ರ ನೈಜಘಟನೆಗಳಿಂದ ಪ್ರೇರಿತವಾಗಿದ್ದರಿಂದ ಆಯಾ ಪತ್ರಗಳ ಬದ್ಧತೆ. ಬೋಸ್ಟನ್ ಗ್ಲೋಬ್ ಪತ್ರಿಕೆಯ ಸ್ಪಾಟ್‍ಲೈಟ್ ತಂಡವು ಪಾದ್ರಿಗಳಿಂದ ಆಗುತ್ತಿವೆ ಎನ್ನಲಾದ ಲೈಂಗಿಕ ಕಿರುಕಳದ ಬಗ್ಗೆ, ಕಿರುಕುಳಕ್ಕೆ ಒಳಗಾದ ಮಕ್ಕಳ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿದ್ದರು. ಅದನ್ನು ಹೇಗಾದರೂ ಮಾಡಿ ಜಗತ್ತಿನೆದುರು ಬಯಲಿಗೆಳೆಯಬೇಕು, ಇದು ಒಂದು ಅಥವಾ ಕೆಲವು ಪಾದ್ರಿಗಳಿಗೆ ಸೀಮಿತವಲ್ಲ, ಇಡೀ ವ್ಯವಸ್ಥೆಯೇ ಇದರ ಭಾಗವಾಗಿದೆ ಎನ್ನುವುದನ್ನು ಬಯಲಿಗೆಳೆದು ಆ ಸಾಂಸ್ಥಿಕ ಲೈಂಗಿಕ ಕಿರುಕುಳವನ್ನು ನಿಲ್ಲಿಸಬೇಕು ಎನ್ನುವ ನೈಜ ಉದ್ದೇಶವನ್ನು ಹೊಂದಿದ್ದವರಾಗಿದ್ದರು. ಅದರೊಂದಿಗೆ ತಮ್ಮ ಗುರಿ ಮುಟ್ಟಲು ಎಡೆಬಿಡದೇ ಕೆಲಸವನ್ನು ಮಾಡಲು ತಯಾರಿದ್ದರು. ಬರೀ ಒಂದು ಅಥವಾ ಹಲವು ಪ್ರಕರಣಗಳನ್ನು ಬಯಲಿಗೆಳೆದರೆ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ ಎನ್ನುವುದನ್ನು ಅರಿತ ಆ ಪತ್ರಕರ್ತರು, ಈ ಹಗರಣಗಳಲ್ಲಿ ಚರ್ಚ್ ಎನ್ನುವ ಸಂಸ್ಥೆ, ಕಾನೂನು ಮತ್ತು ಇಡೀ ವ್ಯವಸ್ಥೆ ಹೇಗೆ ಒಳಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳುವ ತನಕ ತಮ್ಮ ಮೊದಲ ವರದಿಯನ್ನು ಪ್ರಕಟಿಸಲಿಲ್ಲ. ಮೊದಲ ವರದಿ ಪ್ರಕಟವಾದ ಕೂಡಲೇ ಸಾವಿರಾರು ಜನರು ತಮ್ಮೆ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಹಂಚಿಕೊಂಡರು. 2002ರಲ್ಲಿ ಮೊದಲ ವರದಿಯ ನಂತರ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಇನ್ನೂರು ಫಾಲೋಅಪ್ ವರದಿಗಳನ್ನು ಪ್ರಕಟಿಸಿದರು.

ಇನ್ನು ಈ ಚಿತ್ರವನ್ನು ಮಾಡಿದವರ ಬದ್ಧತೆ. ನಿರ್ದೇಶಕ ಟಾಮ್ ಮೆಕಾರ್ತಿ (ಖಿom ಒಛಿಅಚಿಡಿಣhಥಿ) ಮತ್ತು ಅವರ ತಂಡದ ಬದ್ಧತೆ ಹಾಗೂ ಪ್ರಾಮಾಣಿಕತೆ. ಇವರಿಗೂ ಆ ವಿಷಯದ ಬಗ್ಗೆ ಕಾಳಜಿ ಇಲ್ಲದಿದ್ದರೆ ಜಗತ್ತು ಈ ಸಿನೆಮಾದಿಂದ ವಂಚಿತವಾಗುತ್ತಿತ್ತು. ಚಿತ್ರದ ತಂಡಕ್ಕೆ ಚರ್ಚಿನಲ್ಲಾಗುತ್ತಿರುವ ಲೈಂಗಿಕ ಕಿರುಕುಳದೊಂದಿಗೆ ಸ್ಪಾಟ್‍ಲೈಟ್ ತಂಡದವರು ತೋರಿಸಿದ ವೃತ್ತಿಪರತೆ, ಅವರ ಈ ಕಾರ್ಯದಿಂದ ಆದ ಪರಿಣಾಮಗಳ ಬಗ್ಗೆಯೂ ಅಷ್ಟೇ ಬದ್ಧತೆಯನ್ನು ಹೊಂದಿದವರಾಗಿದ್ದರು. ಸ್ಪಾಟ್‍ಲೈಟ್ ತಂಡದವರು ಮಾಡಿದ ತನಿಖೆಯಷ್ಟೇ ತೀವ್ರವಾದ ಅಧ್ಯಯನವನ್ನು ಚಿತ್ರಕಥೆಯನ್ನು ಬರೆಯುವಾಗ ಟಾಮ್ ಮೆಕಾರ್ತಿ ಮತ್ತು ಇನ್ನೊಬ್ಬ ಲೇಖಕ ಜಾಶ್ ಸಿಂಗರ್ ಮಾಡಿದರು. ಇವರಿಗೆ ಚರ್ಚಿನಲ್ಲಿ ಮಕ್ಕಳ ಮೇಲೆ ಆದ ಲೈಂಗಿಕ ಕಿರುಕುಳದೊಂದಿಗೆ ಈ ಪತ್ರಕರ್ತರು ತೋರಿಸಿದ ಬದ್ಧತೆ, ವೃತ್ತಿಪರತೆಯೊಂದಿಗೆ ಪತ್ರಿಕೋದ್ಯಮದಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆಯೂ ಕಾಳಜಿ ಹೊಂದಿದ್ದವರಾಗಿದ್ದರು ಎನ್ನುವುದು ಚಿತ್ರವನ್ನು ನೋಡಿದ ಮಾತ್ರಕ್ಕೇ ಸ್ಪಷ್ಟವಾಗುತ್ತದೆ. ಅದರೊಂದಿಗೆ ಈ ವಿಷಯಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕು ಎನ್ನುವ ಕಾರಣದಿಂದ ಚಿತ್ರದ ನಟರು ಆಯಾ ಪತ್ರಕರ್ತರನ್ನು ಅಭ್ಯಸಿಸಿದರು. ಮೈಕೆಲ್ ಕೀಟನ್ ನಿಜವಾದ ರಾಬಿ ರಾಬಿನ್ಸನ್ ಅನ್ನು ಭೇಟಿಯಾದಾಗ ‘ನಿನಗೆ ನನ್ನ ಬಗ್ಗೆ ಎಲ್ಲವೂ ಹೇಗೆ ಗೊತ್ತು? ಈಗ್ತಾನೆ ಭೇಟಿಯಾಗ್ತಿರೋದು’ ಎಂದನಂತೆ. ಪಾತ್ರಗಳಲ್ಲಿ ಮತ್ತು ಚಿತ್ರದಲ್ಲಿ ನೈಜತೆಯನ್ನು ತರಲು ಚಿತ್ರದ ತಂಡ ಪತ್ರಕರ್ತರೊಂದಿಗೆ ಸಾಕಷ್ಟು ಸಮಯ ಕಳೆದರು.

ಸ್ಪಾಟ್‍ಲೈಟ್ ಚಿತ್ರ ಬಿಡುಗಡೆಯಾದ ನಂತರ ಕ್ಯಾಥೋಲಿಕ್ ಚರ್ಚ್ ಮಕ್ಕಳ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಕಾಯಿತು. ಚಿತ್ರವನ್ನು ನೋಡಿದ ನಂತರ ಕೆಲವರಿಗೆ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಕೆಲಸ ಮಾಡುವಂತೆ ಪ್ರೇರೇಪಿಸಿದರೆ, ಕೆಲವರಿಗೆ ನಿಜವಾದ ಪತ್ರಿಕೋದ್ಯಮ ಮಾಡಲು ಪ್ರೇರೇಪಿಸಿದೆ ಹಾಗೂ ಇನ್ನೂ ಕೆಲವರಿಗೆ ಸ್ಪಾಟ್‍ಲೈಟ್‍ನಂತಹ ಪ್ರಾಮಾಣಿಕ ಚಿತ್ರಗಳನ್ನು ಮಾಡಬೇಕು ಎಂದು ಪ್ರೇರೇಪಿಸಿದೆ. ಕಲೆಯ ಉದ್ದೇಶ ಇದಕ್ಕಿಂತಲೂ ಮೀರಿದ್ದೇನಿದೆ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here