ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೇಲುಗೈ ಕಾಯ್ದುಕೊಂಡ ಕಾಂಗ್ರೆಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಳೀಯ ನಾಯಕತ್ವದ ಆಧಾರದಲ್ಲಿ ನಡೆಯುತ್ತದೆ

| ನಾನುಗೌರಿ ಡೆಸ್ಕ್ |

ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. ಪುರಸಭೆ, ಪಟ್ಟಣ ಪಂಚಾಯತ್ ಮತ್ತು ನಗರಸಭೆ ಸೇರಿದಂತೆ ಇದುವರೆಗೆ ಒಟ್ಟು 1361 ಕ್ಷೇತ್ರಗಳಲ್ಲಿ ಕಾಂಗ್ರೆಸ್ 562 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ 406 ಕಡೆ ಗೆಲುವಿನ ನಗೆ ಬೀರಿದೆ. ಇನ್ನು ಜೆಡಿಎಸ್ 202 ಬಿಎಸ್‍ಪಿ 04, ಸಿಪಿಎಂ 02 ಮತ್ತು ಇತರರು 172 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

 

ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಒಂದು ಕೆಲವು ದಿನಗಳಷ್ಟೇ ಆಗಿದೆ. ಬಿಜೆಪಿ ಭರ್ಜರಿ ಜಯದ, ನೂತನ ಸಚಿವರ ಪ್ರಮಾಣ ವಚನದ ಸಂಭ್ರಮದಲ್ಲಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇನ್ನು ಸೋಲಿನ ಸುಳಿಯಿಂದ ಹೊರಬಂದಿಲ್ಲ. ಇದರ ನಡುವೆಯೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದಿದ್ದು ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ಬಿಜೆಪಿ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಎರಡೇ ಗೇಣು ಎಂಬ ಖುಷಿಯಲ್ಲಿರುವಾಗಲೇ ಈ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅವರಿಗೆ ಸಣ್ಣ ಮಟ್ಟಿಗಿನ ಶಾಕ್ ಕೊಟ್ಟಾಂತಾಗಿದೆ.

ಒಟ್ಟಾರೆ ನೋಡಿದರೆ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ ಸಹ ಗಮನಾರ್ಹ ಸಾಧನೆ ಮಾಡಿದೆ. ಇದು ಒಂದು ರೀತಿಯಲ್ಲಿ ಸಾಮಾನ್ಯ ಸಂಗತಿಯೇ ಹೌದು ಇದರಲ್ಲಿ ಆಶ್ಚರ್ಯಪಡಬೇಕಾದುದ್ದೇನು ಇಲ್ಲ. ಏಕೆಂದರೆ ಜನ ಯೋಚಿಸುವ, ಮತ ಹಾಕುವ ರೀತಿಯೇ ಹಾಗೆ.

ರಾಜಸ್ಥಾನ ಅಸೆಂಬ್ಲಿಯಲ್ಲಿ ಒಟ್ಟು 199 ಸ್ಥಾನಗಳಲ್ಲಿ ಹೆಚ್ಚು ಕಮ್ಮಿ 100 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಒಟ್ಟು 25 ಕ್ಷೇತ್ರಗಳಲ್ಲಿ ಒಂದನ್ನು ಗೆಲ್ಲಲಾಗಲಿಲ್ಲ. ಗುಜರಾತ್, ಮಧ್ಯಪ್ರದೇಶದಲ್ಲಿಯೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ ಇದೆ.

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ 7ಕ್ಕೆ 7ಸೀಟುಗಳನ್ನು ಬಿಜೆಪಿ ಗೆದ್ದ 8 ತಿಂಗಳಲ್ಲೇ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 67ನ್ನು ಗೆದ್ದುಕೊಂಡು ಅಪೂರ್ವ ಸಾಧನೆ ಮಾಡಿತು. ಅಲ್ಲಿ ಬಿಜೆಪಿ ಕೇವಲ 03 ಸ್ಥಾನಕಷ್ಟೇ ಸೀಮಿತವಾಯಿತು. ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅದೇ ಸಾಧನೆ ಮಾಡಿ 7ಕ್ಕೆ 7ಸೀಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇನ್ನು 8 ತಿಂಗಳಲ್ಲೇ ವಿಧಾನಸಭಾ ಚುನಾವಣೆಯಿದೆ. ಅಲ್ಲಿಯ ಮತದಾರರು ವಿಧಾನಸಭೆಯ ಚುನಾವಣೆಯಲ್ಲಿ ಆಪ್ ಗೆ ಮತ ಹಾಕುತ್ತೇವೆ, ಆದರೆ ಲೋಕಸಭೆಯಲ್ಲಿ ಮಾತ್ರ ನಮ್ಮ ಮತ ಬಿಜೆಪಿಗೆ ಎಂದು ಬಹಿರಂಗವಾಗಿ ಹೇಳುತ್ತಾರೆ.

ಪ್ರತಿ ಚುನಾವಣೆಗಳಿಗೂ ವ್ಯತ್ಯಾಸವಿರುತ್ತದೆ ಮತ್ತು ಬೇರೆ ಬೇರೆ ಸಂದರ್ಭಕ್ಕನುಗುಣವಾಗಿ ಚುನಾವಣೆಗಳಿಗೆ ಮತದಾರರು ಪ್ರತಿಕ್ರಿಯಿಸುತ್ತಾರೆ. ಲೋಕಸಭಾ ಚುನಾವಣೆ ರಾಷ್ಟ್ರೀಯ ಚುನಾವಣೆಯಾದ್ದರಿಂದ ಜನ ಅಲ್ಲಿನ ಬಲಿಷ್ಠ ನಾಯಕತ್ವ, ಅವರ ಘೋಷಣೆಗಳಿಗೆ ಮಾರು ಹೋಗುತ್ತಾರೆ. ವಿಧಾನ ಸಭಾ ಚುನಾವಣೆಗಳಲ್ಲಿ ರಾಜ್ಯದ ಹಿತಾಸಕ್ತಿಗೆ ಯಾರು ಪೂರಕ ಎಂಬುದರ ಜೊತೆಗೆ ಚುನಾವಣೆಗಳು ನಡೆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಳೀಯ ನಾಯಕತ್ವದ ಆಧಾರದಲ್ಲಿ ನಡೆಯುತ್ತದೆ. ಇಲ್ಲಿ ಪರಸ್ಪರರ ಸಂಬಂಧಗಳು, ಜಾತಿ, ಹಣ, ಪ್ರಭಾವ ಕೆಲಸ ಮಾಡುತ್ತದೆ.

ಇನ್ನು ಕೆಲವು ಮಾಧ್ಯಮಗಳು ಬೆಳಿಗ್ಗೆ ಇಂದಿನ ಫಲಿತಾಂಶ ತೋರಿಸಲು ನಿರಾಸಕ್ತಿ ವಹಿಸಿದ್ದವು. ಬೆಳಿಗ್ಗೆ ಸ್ಕ್ರೋಲ್ ಗಳಲ್ಲಿ ಈ ಸುದ್ದಿ ಕಾಣಿಸಿಕೊಂಡರು, ಕಾಂಗ್ರೆಸ್ ಹೆಚ್ಚು ಸೀಟು ಗಳಿಸುತ್ತಿದ್ದಂತೆ ನಿಧಾನಕ್ಕೆ ಸುಮ್ಮನಾಗಿವೆ. ಕೆಲ ಕಾಂಗ್ರೆಸ್ ಕಾರ್ಯಕರ್ತರು ಈ ಫಲಿತಾಂಶದಿಂದ ವಿಶ್ವಾಸ ಪಡೆದುಕೊಂಡು ನಮ್ಮ ಕಾಲ ಮುಗಿದಿಲ್ಲ ಎಂದು ಉಚ್ಛರಿಸಿದ್ದಾರೆ. ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ನಡೆದರೆ ಬಿಜೆಪಿ ಸೋಲುತ್ತದೆ. ಇವಿಎಂನಲ್ಲಿ ಮತದಾನ ನಡೆದರೆ ಬಿಜೆಪಿಯೇ ಗೆಲ್ಲುತ್ತದೆ ಹಾಗಾಗಿ ಇವಿಎಂ ಬ್ಯಾನ್ ಮಾಡಬೇಕು ಎಂಬ ವಾದವೂ ಸೋಷಿಯಲ್ ಮಿಡೀಯಾದಲ್ಲಿ ಜೋರಾಗಿ ಕೇಳಿ ಬಂದಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here