ಪ್ಯಾರಲಲ್ ಸಿನೆಮಾ V/S ಕಮರ್ಷಿಯಲ್ ಸಿನಿಮಾ ಸಿನಿಮಾ ಎಂಬ ಹುಸಿ ವೈರುಧ್ಯ

| ರಾಜಶೇಖರ್ ಅಕ್ಕಿ |

ಸಿನಿಯಾನ ಅಂಕಣ ಶುರುವಾದ ನಂತರ ಕೆಲವು ಪ್ರಶ್ನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಉತ್ತರಿಸುವ ಪ್ರಯತ್ನ ಮಾಡುವೆ.

ಸಿನೆಮಾದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಅಂಶ ಯಾವುದು? ಕಥೆಯೇ, ಚಿತ್ರಕಥೆಯೇ, ಸಂಭಾಷಣೆಯೇ, ನಾಯಕ ನಾಯಕಿಯೇ, ನಟರೇ, ಹಾಡುಗಳೆ ಇತ್ಯಾದಿಗಳಲ್ಲಿ ಯಾವುದು ಒಂದು ಸಿನೆಮಾದ ಯಶಸ್ಸನ್ನು ನಿರ್ಧರಿಸುತ್ತದೆ?

ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾಗಳ ವ್ಯತ್ಯಾಸವೇನು? ಹಿಂದಿಯಲ್ಲಿ ಅನೇಕ ಪ್ಯಾರಲೆಲ್ ಸಿನೆಮಾಗಳು ಬರುತ್ತಿವೆ, ಯಶಸ್ಸೂ ಗಳಿಸುತ್ತಿವೆ, ಕನ್ನಡದಲ್ಲಿ ಏಕೆ ಆಗುತ್ತಿಲ್ಲ?

ಎರಡನೇ ಪ್ರಶ್ನೆಯನ್ನೇ ಮೊದಲು ಎತ್ತಿಕೊಳ್ಳುವ. ಹೌದು ಕೆಲ ದಶಕಗಳ ಹಿಂದೆ ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾ ಎನ್ನುವ ಬೇರೆ ಬೇರೆ ಹೊನಲುಗಳಿದ್ದದ್ದು ನಿಜ. 60ರ ಮತ್ತು 70ರ ದಶಕಗಳಲ್ಲಿ ರಾಜೇಶ್ ಖನ್ನಾ ಸೂಪರ್‍ಸ್ಟಾರ್ ಆಗಿ ಮೆರೆದು, 70ರ ದಶಕದಲ್ಲಿ ಆ್ಯಂಗ್ರಿ ಯಂಗ್‍ಮ್ಯಾನ್ ಅಮಿತಾಭ್ ಬಚ್ಚನ್ ಎರಡನೆಯ ಮತ್ತು ಭಾರತೀಯ ಚಿತ್ರರಂಗದ ಕೊನೆಯ ಸೂಪರ್‍ಸ್ಟಾರ್ ಆಗಿ ಒಂದಾದಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದಾಗಿನ ಸಮಯ ಮತ್ತು ಆಗಿನ ಸಾಮಾಜಿಕ ಪರಿಸ್ಥಿತಿಗಳು ವಿಶಿಷ್ಟವಾಗಿದ್ದವು (ಇದರ ಬಗ್ಗೆ ಅನೇಕ ಅಧ್ಯಯನಗಳಾಗಿವೆ.) ಅದಾದನಂತರ ಬಂದ 80ರ ದಶಕವನ್ನು ಹಿಂದಿ ಚಿತ್ರರಂಗದ ಅತ್ಯಂತ ಕೆಟ್ಟ ದಶಕವೆಂದೇ ಕರೆಯಲಾಗುತ್ತದೆ. ಆ ಸಮಯದಲ್ಲಿಯೇ ಫಾರ್ಮುಲಾ ಸಿನೆಮಾ ಎನ್ನುವ ಪದ ಚಾಲ್ತಿಯಲ್ಲಿ ಬಂತು. ಸಿನೆಮಾ ಅಂದರೆ ಒಂದು ಊಟದ ಥಾಲಿ ಇದ್ದಂತೆ, ರೊಟ್ಟಿ ಅನ್ನ ಪಲ್ಯದಂತಹ ಸಾತ್ವಿಕ ಪದಾರ್ಥದೊಂದಿಗೆ ಉಪ್ಪಿನಕಾಯಿಯಂತಹ ಪದಾರ್ಥಗಳೂ ಇರಬೇಕು ಎನ್ನುವ ಮೂರ್ಖ ಅಸಂಬದ್ಧ ಮಾತುಗಳೂ ಕೇಳಿಬಂದವು. ಆ ಫಾರ್ಮುಲಾಗಳಿಗೆ ಅನುಗುಣವಾಗಿಯೇ ಹಾಡುಗಳು ಫೈಟ್‍ಗಳು, ಪ್ಯಾಥೋ ಎಮೋಷನ್‍ಗಳು, ಹೀರೋನ ಬಾಲ್ಯವಿರುವ, ಉದ್ರೇಕಕಾರೀ ದೃಶ್ಯಗಳನ್ನು ಒಳಗೊಂಡ ಅನೇಕ ಚಿತ್ರಗಳು ಬಂದವು. ಅದರಲ್ಲಿ ಹೆಚ್ಚಿನವು ಕೆಟ್ಟ ಚಿತ್ರಗಳಾಗಿದ್ದವು ಎಂದರೆ ಬಹುತೇಕರು ಆಕ್ಷೇಪಿಸಲಾರರು. ಆ ಸಮಯದಲ್ಲಿ ಇಂಥ ಚಿತ್ರಗಳನ್ನು ನೋಡಿ ಬೇಸತ್ತು, ತಮ್ಮಲ್ಲಿಯ ಕಥೆಗಳನ್ನು ಹೇಳಬೇಕೆನ್ನುವ ತುಡಿತ ಇರುವ ನಿರ್ದೇಶಕರು ಈ ಪ್ಯಾರಲಲ್ ಸಿನೆಮಾದ ಪಯಣವನ್ನು ಶುರುಮಾಡಿದರು. ಅಂದಹಾಗೆ, ಈ ‘ಪ್ಯಾರಲಲ್ ಸಿನೆಮಾ’ ಎನ್ನುವ ಪದ ನನ್ನನ್ನೂ ಒಳಗೊಂಡಂತೆ ಯಾವ ನಿರ್ದೇಶಕನಿಗೂ ಇಷ್ಟ ಇಲ್ಲ. 1975ರಲ್ಲಿ ಸ್ಥಾಪಿತವಾದ ನ್ಯಾಷನಲ್ ಫಿಲ್ಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ NFDC ಇದರಲ್ಲಿ ಪ್ರಮುಖ ಪಾತ್ರ ವಹಿಸಿತು (ಇನ್ನೂ ಕೆಲಸ ಮಾಡುತ್ತಿದೆ). ಶ್ಯಾಮ್ ಬೆನಗಲ್, ಅಡೂರ್ ಗೋಪಾಲಕೃಷ್ಣ, ಸುಧೀರ್ ಮಿಶ್ರ, ಮಣಿ ಕೌಲ್, ಎಮ್ ಎಸ್ ಸತ್ಯು, ಬಾಸು ಚಟರ್ಜಿ ಮತ್ತು ಗಿರೀಶ್ ಕಾಸರವಳ್ಳಿಯಂತಹ ಅನೇಕರು ಹಲವಾರು ಉತ್ಕೃಷ್ಠ ಸಿನೆಮಾಗಳನ್ನು ನೀಡಿದರು.

ಅನೇಕರು ಪ್ಯಾರಲಲ್ ಸಿನೆಮಾ ಎಂದರೆ ಬೋರು ಹೊಡೆಸುವ, ಮಂದಗತಿಯ, ಹೆಚ್ಚಿನ ಬೆಳಕಿರದ ಸಿನೆಮಾಗಳು ಎಂತಲೇ ಭಾವಿಸಿದ್ದಾರೆ. ಇದು ಸತ್ಯಕ್ಕೆ ದೂರ. ಹೌದು ಅನೇಕ ಪ್ಯಾರಲಲ್ ಸಿನೆಮಾಗಳು ಹಾಗಿದ್ದಿರಬಹುದು ಆದರೆ ಕಮರ್ಷಿಯಲ್ ಸಿನೆಮಾದ ಬ್ರ್ಯಾಕೆಟ್‍ನಲ್ಲಿ ಬರುವ ಸಿನೆಮಾಗಳೂ ಬೋರು ಹೊಡೆಸುವ ಸಿನೆಮಾಗಳು ಆಗಿದ್ದವು. ಪ್ಯಾರಲಲ್ ಸಿನೆಮಾ ಎನ್ನುವ ಹೆಚ್ಚಿನ ಸಿನೆಮಾಗಳು ಖಂಡಿತವಾಗಿಯೂ ಸಿನಿಮೀಯ ಅಂಶಗಳನ್ನು ಹೊಂದಿದ್ದವು. ಕಥೆಯನ್ನು ಹೇಳುವ ತಂತ್ರಗಾರಿಕೆಯೊಂದಿಗೆ ಹಲವಾರು ನಿರ್ದೇಶಕರು ಆಟವಾಡಿದರು. ಗಟ್ಟಿಯಾದ ನಿರೂಪಣೆಯೊಂದಿಗೆ ಆಯಾ ಚಿತ್ರಗಳ ಛಾಯಾಗ್ರಹಣ, ಅಭಿನಯ, ಹಿನ್ನೆಲೆ ಸಂಗೀತ ಇವೆಲ್ಲವುಗಳೊಂದಿಗೂ ಪ್ರಯೋಗಗಳನ್ನು ಮಾಡಲಾಯಿತು. ಅನೇಕ ಕಾದಂಬರಿ ಮತ್ತು ಸಣ್ಣಕಥೆಗಳನ್ನು ಆಧರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದ ಕಥೆಗಳನ್ನು ಹೆಣೆದರು. ಹಾಡು ಫೈಟ್‍ಗಳೇ ಮನೋರಂಜನೆ ಎಂದುಕೊಂಡವರಿಗೆ ಬಹುಶಃ ಬೋರ್ ಹೊಡೆಸಿರಬಹುದು. ಆದರೆ ಹಾಡು ಫೈಟ್‍ಗಳೇ ಬೋರು ಹೊಡೆಸುವುದಕ್ಕೆ ಕಾರಣವಾಗಬಲ್ಲವು ಎನ್ನುವ ಅಂಶ ಮರೆಯಬಾರದು.

ಕಮರ್ಷಿಯಲ್ ಸಿನೆಮಾ ಮತ್ತು ಪ್ಯಾರಲಲ್ ಸಿನೆಮಾ ಎಂದು ಸಿನೆಮಾಗಳನ್ನು ಪ್ರತ್ಯೇಕಿಸುವುದೇ ತಪ್ಪು ಎನ್ನುವ ಒಮ್ಮತಕ್ಕೆ ಇತ್ತೀಚಿಗೆ ಎಲ್ಲರೂ ಬಂದಿದ್ದಾರೆ. ಕಮರ್ಷಿಯಲ್ ಎನ್ನುವ ಸಿನೆಮಾಗಳಲ್ಲೂ ಅನೇಕ ಅತ್ಯುತ್ತಮ ಸಿನೆಮಾಗಳು ಬಂದವು ಎನ್ನುವುದನ್ನು ಮರೆಯಬಾರದು ಹಾಗೂ ಹೆಚ್ಚಿನ ಕಮರ್ಷಿಯಲ್ ಸಿನೆಮಾಗಳನ್ನೂ ಜನರು ನೋಡುವುದಿಲ್ಲ ಎನ್ನುವುದನ್ನೂ ಗಮನಿಸಬೇಕು.

ತೊಂಭತ್ತರ ದಶಕದಲ್ಲಿ ಟಿವಿಯ ಆಗಮನ, ಎನ್‍ಎಫ್‍ಡಿಸಿಯೊಂದಿಗೆ ಆದ ಸಮಸ್ಯೆಗಳು ಹಾಗೂ ಸ್ವತಃ ನಿರ್ದೇಶಕರ ಸಮಸ್ಯೆಗಳಿಂದಾಗಿ ಪ್ಯಾರಲಲ್ ಸಿನೆಮಾ ಎನ್ನುವ ಪ್ರಕ್ರಿಯೆ ಕೊನೆಗೊಳ್ಳುತ್ತ್ತಾ ಬಂತು.

ಆದರೆ ಈ ವರ್ಷಗಳಲ್ಲಿ ಅನೇಕ ಪ್ಯಾರಲಲ್ ಸಿನೆಮಾಗಳು ಬಂದಿವೆ ಹಾಗೂ ಯಶಸ್ಸನ್ನೂ ಕಂಡಿವೆ, ಕನ್ನಡದಲ್ಲಿ ಏಕೆ ಅಂತಹ ಸಿನೆಮಾಗಳು ಬರುತ್ತಿಲ್ಲ ಎನ್ನುವ ಪ್ರಶ್ನೆ ಬಂತು. ನಾನೂ ಆ ಚಿತ್ರಗಳಿಗೆ ಉದಾಹರಣೆಗಳನ್ನು ಕೇಳಿದಾಗ ಮುಲ್ಕ್, ತಲ್ವಾರ್ ಅಲಿಗಢ, ವಿಕಿ ಡೋನರ್ ಪಿಂಕ್, ಪೀಕು ಹಾಗೂ ಇಂತಹ ಉದಾಹರಣೆಗಳನ್ನು ನೀಡಿದರು. ನಾನು ಪ್ಯಾರಲಲ್ ಸಿನೆಮಾ ಎನ್ನುವ ಪದದ ಬಳಕೆಗೆ ಆಕ್ಷೇಪಿಸಿದಾಗ ‘ಬ್ರಿಜ್ ಸಿನೆಮಾ’ ಎನ್ನುವ ಮತ್ತೊಂದು ಪದ ಬಳಸಿದರು, ಅದಕ್ಕೆ ಕಾರಣ ಕೇಳಿದಾಗ ಆ ಚಿತ್ರಗಳಲ್ಲಿ ಹಾಡುಗಳಿರುವುದಿಲ್ಲ, ಫೈಟ್‍ಗಳೂ ಇರುವುದಿಲ್ಲ, ಕ್ಯಾಬರೆ ಇರುವುದಿಲ್ಲ ಎಂದು ಹೇಳಿದರು.

ಇವುಗಳೇ ಮೊದಲ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಒಂದು ಚಿತ್ರ ಯಶಸ್ಸಿಗೆ ಮೂಲ ಕಾರಣಗಳೇನು? ಕಥೆ, ಚಿತ್ರಕಥೆ, ಸಂಭಾಷಣೆ, ಅಭಿನಯ, ಸಂಗೀತ, ಛಾಯಾಗ್ರಹಣ ಇವೆಲ್ಲವುಗಳನ್ನೂ ಪ್ರತ್ಯೇಕಿಸಿ ನೋಡಬಾರದೆಂದು ನನ್ನ ಅನಿಸಿಕೆ. ಒಂದು ಯಶಸ್ವೀ ಚಿತ್ರವು ಈ ಎಲ್ಲ ಅಂಶಗಳನ್ನೂ ಒಳಗೊಂಡು ಸಮಗ್ರವಾಗಿ ಕೆಲಸ ಮಾಡಿರುತ್ತದೆ. ಖಂಡಿತವಾಗಿಯೂ ಚಿತ್ರದ ಸ್ಟ್ರಕ್ಚರ್ ಆ ಚಿತ್ರಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಆ ಅಡಿಪಾಯ ಗಟ್ಟಿಯಿದ್ದು ಮಿಕ್ಕ ಎಲ್ಲ ಅಂಶಗಳೂ ಸರಿಯಾಗಿದ್ದಾಗ ಚಿತ್ರ ಗೆಲ್ಲುವುದು ಖಚಿತ. ಆಗ ಆ ಚಿತ್ರಗಳಲ್ಲಿ ಹಾಡು ಫೈಟ್ ಕ್ಯಾಬರೆ ಇವೆಯೇ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಮನರಂಜನೆಗೆ ಹಾಡು ಫೈಟ್‍ಗಳು ಮಾನದಂಡವೂ ಅಲ್ಲ.

ಜನರು ಕಲಾತ್ಮಕ ಚಿತ್ರಗಳನ್ನು ನೋಡಲಿಚ್ಛಿಸುವುದಿಲ್ಲ, ಬರೀ ಹಾಡು ಫೈಟ್‍ಗಳ ಚಿತ್ರಗಳೇ ಅವರಿಗೆ ಇಷ್ಟ ಎಂದು ಕೆಲವರು ವಾದಿಸುವವರಿದ್ದಾರೆ; ಅದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಕೆಲದಿನಗಳ ಹಿಂದೆ ಇಂಥದ್ದೇ ಚರ್ಚೆ ನಡೆದಾಗ ನನ್ನ ಸ್ನೇಹಿತರೊಬ್ಬರು ಇತರರಿಗೆ ಚಾಲೆಂಜ್ ಮಾಡಿದರು. ಕಳೆದ ಒಂದು ದಶಕದಲ್ಲಿ ಯಶಸ್ಸು ಕಾಣದ ಒಂದು ಶ್ರೇಷ್ಠ ಚಿತ್ರವನ್ನು ಹೆಸರಿಸಿ, ಆಗ ನಾನು ಪ್ರೇಕ್ಷಕರ ಮನಸ್ಥಿತಿಯ ಬಗ್ಗೆ ನೀವು ಹೇಳುವುದನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಅಲ್ಲಿದ್ದ ಯಾರಿಗೂ ಸುಲಭವಾದ ಉತ್ತರ ಸಿಗಲಿಲ್ಲ. ಕಲಾತ್ಮಕ ಚಿತ್ರದ ಪರಿಧಿಯಲ್ಲಿ ಬರುವ ಹಲವಾರು ಚಿತ್ರಗಳ ಹೆಸರು ಕೇಳಿಬಂದವು ಆದರೆ ಅವೆಲ್ಲವೂ ಕಳಪೆ ಚಿತ್ರಗಳು ಎನ್ನುವುದನ್ನು ಯಾರೂ ನಿರಾಕರಿಸಲಾಗಲಿಲ್ಲ. ಹಾಗಾಗಿ ನಿಷ್ಕರ್ಷವಿಷ್ಟೆ; ಕಲಾತ್ಮಕ, ಪ್ಯಾರಲಲ್, ಬ್ರಿಜ್ ಸಿನೆಮಾ, ಕ್ರಾಸ್‍ಓವರ್ ಸಿನೆಮಾ, ಅವಾರ್ಡ್ ಸಿನೆಮಾ ಹಾಗೂ ಕಮರ್ಷಿಯಲ್ ಸಿನೆಮಾ, ಇವೆಲ್ಲವೂ ಹುಸಿ ಕಪ್ಪುಬಿಳುಪುಗಳು (false binaries). ಒಳ್ಳೇ ಚಿತ್ರ ಗೆದ್ದೇ ಗೆಲ್ಲುವುದು, ಸಿನೆಮಾ ರಚನೆಯ ಕಲೆ ಮತ್ತು ವಿಜ್ಞಾನವನ್ನು ಅರಿಯುವ. ಇಲ್ಲಿಯೂ ಮತ್ತೇ ಶ್ರೇಷ್ಠ ಸಿನೆಮಾಗಳನ್ನು ಮಾಡುವ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here