ಸಂವರ್ತ ಚಿಂತನೆ

ರಹಮತ್ ತರೀಕೆರೆ |

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹುಲುಸಾಗಿ ಬೆಳೆಯುತ್ತಿರುವ ಪ್ರಕಾರಗಳಲ್ಲಿ ಅಂಕಣವೂ ಒಂದು. ಈ ಅಂಕಣಗಳು ಮುದ್ರಿತ ಪತ್ರಿಕೆಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್ ಮಾಧ್ಯಮದಲ್ಲೂ ಇವೆ. ರಾಜಕಾರಣಿಗಳು, ಪರಿಸರವಾದಿಗಳು, ಕೃಷಿವಿಜ್ಞಾನಿಗಳು, ಆಹಾರ ತಂತ್ರಜ್ಞರು, ಸಮಾಜವಿಜ್ಞಾನಿಗಳು, ವೈದ್ಯರು, ವ್ಯಕ್ತಿತ್ವವಿಕಸನ ಚಿಂತಕರು, ಬಲಪಂಥೀಯ ಪ್ರವಚನಕಾರರು, ಮಠಾಧೀಶರು, ನಟರು, ಮಾಹಿತಿತಂತ್ರಜ್ಞರು, ಅಧ್ಯಾಪಕರು-ಹೀಗೆ ಬಾಳಿನ ಹಲವು ವಲಯಗಳಿಂದ ಬಂದವರು ಈ ಪ್ರಕಾರದಲ್ಲಿ ತೊಡಗಿದ್ದಾರೆ. ಇದರಿಂದ ಈ ಪ್ರಕಾರವು ಕನ್ನಡದ ಇತರ ಪ್ರಕಾರಗಳಿಗೆ ಹೋಲಿಸಿದರೆ ವಸ್ತು ಮತ್ತು ಧೋರಣೆ ವಿಷಯದಲ್ಲಿ ಹೆಚ್ಚಿನ ಬಹುತ್ವವನ್ನು ಪ್ರಕಟಿಸುತ್ತಿದೆ. ಇದು ಈಚಿನ ವರ್ಷಗಳಲ್ಲಿ ಹೊಸತಲೆಮಾರಿನಿಂದ ತೀಕ್ಷ್ಣವಾಗಿ ಚಿಂತನೆ ಮಾಡುತ್ತಿರುವ ಅನೇಕ ಪ್ರತಿಭಾವಂತರನ್ನು ಪರಿಚಯಿಸಿದೆ. ಇವರಲ್ಲಿ ಹೆಚ್ಚಿನವರಿಗೆ ವಿಶಿಷ್ಟಾನುಭವ ಮತ್ತು ತೀಕ್ಷ್ಣತೆ ಇರುವ ಪ್ರಮಾಣದಲ್ಲಿ, ರಾಜಕೀಯ ಪ್ರಬುದ್ಧತೆ, ಸಾಮಾಜಿಕ ನ್ಯಾಯಪ್ರಜ್ಞೆ, ಸಾಹಿತ್ಯಕ ಸಂವೇದನೆ, ಆರೋಗ್ಯಕರ ಸಮಾಜ ಕಟ್ಟುವ ದರ್ಶನಗಳು ಇವೆಯಾ ಎಂದರೆ ನಿರಾಶೆಯಾಗುತ್ತದೆ. ವರ್ತಮಾನದ ವಿದ್ಯಮಾನಗಳ ವಿಶ್ಲೇಷಣೆಯ ಮೂಲಕ ಜನಾಭಿಪ್ರಾಯ ರೂಪಿಸಬಲ್ಲ ಕಸುವುಳ್ಳ ಅಂಕಣ ಬರೆಹಗಳ ದುಃಸ್ಥಿತಿ, ನಮ್ಮ ಸಮಾಜ ಪ್ರಜಾಪ್ರಭುತ್ವ ಸಂಸ್ಕೃತಿಗಳ ದುರುವಸ್ಥೆಯ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ `ಬಾಳ್ಕಟ್ಟೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಂವರ್ತ ಸಾಹಿಲ್ ಅವರ ಅಂಕಣ ಬರೆಹಗಳನ್ನು ಗಮನಿಸಬೇಕು. ಅವು ನಮ್ಮ ಕಾಲದ ಪ್ರತಿಭಾವಂತ ಮತ್ತು ಸೂಕ್ಷ್ಮ ಮನಸ್ಸೊಂದು ಸಮಕಾಲೀನ ಆಗುಹೋಗುಗಳಿಗೆ ಮಾಡಿರುವ ಅಪೂರ್ವ ಸ್ಪಂದನೆಗಳು.

ಸಂವರ್ತ, ಸಾಹಿತ್ಯ ಸಿನಿಮಾ ಚಿತ್ರಪಟ ರಾಜಕಾರಣ ಧರ್ಮ ತತ್ವಶಾಸ್ತ್ರ ರಂಗಭೂಮಿ ಭಾಷೆ ಮುಂತಾದ ವಿಷಯಗಳ ಮೇಲೆ ಬರೆದಿದ್ದಾರೆ. ಅವರೊಬ್ಬ ಮೂಲತಃ ಸಿನಿಮಾಶಾಸ್ತçದ ವಿದ್ಯಾರ್ಥಿ ಆಗಿರುವುದರಿಂದ, ಸಹಜವಾಗಿಯೇ ಸಿನಿಮಾ ವಿಶ್ಲೇಷಣೆಗಳು ಹೆಚ್ಚಿವೆ. ಅವರು ಉರ್ದುವಿನಲ್ಲಿ ಕವಿತ್ವ ಮಾಡುವುದರಿಂದಲೂ ಉರ್ದುಸಾಹಿತ್ಯವನ್ನು ಓದಿಕೊಂಡಿರುವುದರಿಂದಲೂ, ಅದರ ಮೇಲಿನ ಬರೆಹಗಳು ವಿಶೇಷವಾಗಿವೆ. ಇದರ ಜತೆಗೆ ಅವರ ಬರೆಹಗಳ ವಸ್ತುವೈವಿಧ್ಯಕ್ಕೆ ಅವರು ಹಲವಾರು ಕ್ಷೇತ್ರದ ಕೃತಿಗಳನ್ನು ಓದಿರುವ ಹಿನ್ನೆಲೆಯೂ ಕಾರಣವಾಗಿದೆ. ಅವರ ಬರೆಹಗಳಲ್ಲಿ ಉಲ್ಲೇಖಗೊಳ್ಳುವ ಕೃತಿ ಮತ್ತು ಲೇಖಕರನ್ನು ಗಮನಿಸಿದರೂ, ಜಗತ್ತಿನ ಶ್ರೇಷ್ಠ ಬರೆಹಗಾರರನ್ನು ಓದಿಸಿಕೊಂಡಿರುವ ಅರಿವು ಭಿತ್ತಿಯಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗುತ್ತದೆ.

ಕನ್ನಡದಲ್ಲಿ ಸಾಹಿತ್ಯ ಕೃತಿಗಳ ವಿಶ್ಲೇಷಣೆಗಳು ಸಾಕಷ್ಟು ಸಿಗುತ್ತವೆ. ಆದರೆ ಸಿನಿಮಾ ವಿಶ್ಲೇಷಣೆಗಳು ಅಷ್ಟಾಗಿಲ್ಲ. ಅದರಲ್ಲೂ ಛಾಯಾಚಿತ್ರಗಳನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಿದವರು ತೀರ ಕಡಿಮೆ. ಇಲ್ಲಿನ ಸಿನಿಮಾ ಮತ್ತು ಛಾಯಾಚಿತ್ರಗಳ ವಿಶ್ಲೇಷಣೆಯ ವಿಶೇಷತೆಯೆಂದರೆ, ಅವು ಕಲಾಮೀಮಾಂಸೆಯ ಪ್ರಮೇಯಗಳಲ್ಲಿ ಕೊನೆಗೊಳ್ಳುವುದು.

ಲೋಕಪ್ರೀತಿ ಇರುವ ಅಂಕಣಕಾರರಿಗೆ, ಬದುಕಿನ ಬಗ್ಗೆ ಚಿಂತನೆ ಹುಟ್ಟಿಸಲು `ಘನ’ವಾದ ವಿಷಯವೇ ಬೇಕಿಲ್ಲ. `ಸಣ್ಣ’ ಎಂದು ಕರೆಯಲಾಗುವ ಯಾವುದೊ ಒಂದು ಸುದ್ದಿ, ಬದುಕಿನ ಒಂದು ಚಿಕ್ಕೆಎಳೆ ಅಥವಾ ಮನುಷ್ಯರ ಒಂದು ವರ್ತನೆಯೂ ಸಾಕು. ಅಂತಹ `ಚಿಕ್ಕಪುಟ್ಟ’ ವಸ್ತುಗಳನ್ನು ಇಟ್ಟುಕೊಂಡು, ಅದರ ಸುತ್ತ ಗೀಜಗ ಗೂಡುಕಟ್ಟಿದಂತೆ ಆಲೋಚನೆ ಮಾಡುವುದು ಸಂವರ್ತರ ವಿಧಾನವಾಗಿದೆ. ಇದರಿಂದ ಅವರ ಬರೆಹಕ್ಕೆ ಚಿತ್ರ ಮತ್ತು ಕಾವ್ಯ ಎರಡೂ ಗುಣಗಳು ದೊರೆಕೊಂಡಿವೆ. ಅವರ ಕನ್ನಡವು ವರ್ಣನೆಗೂ ಚಿಂತನೆಗೂ ಚೆನ್ನಾಗಿ ಹದಗೊಂಡಿದೆ. ಅನಗತ್ಯವಾದ ಒಂದು ಪದವೂ ಇಲ್ಲ. ಅವಸರದಲ್ಲಿ ಹುಟ್ಟುವ ಅಂಕಣ ಬರೆಹಗಳಲ್ಲಿ ಸಾಮಾನ್ಯವಾಗಿರುವ ಶಿಥಿಲತೆ ಮತ್ತು ಪುನರುಕ್ತಿಗಳಿಲ್ಲ. ಕೆಲವು ಲೇಖನಗಳಂತೂ ಗದ್ಯದ ಭಾವಗೀತೆಯನ್ನು ಓದಿದ ಅನುಭವ ಕೊಡುತ್ತವೆ. ಕಲಾತ್ಮಕ ಪ್ರಜ್ಞೆ, ಭಾಷೆಯ ಜತೆಗಿನ ಆಟ, ರೂಪಕಗಳಲ್ಲಿ ಚಿಂತನೆ ಮಾಡುವುದು ಇಲ್ಲಿನ ಗುಣ. ಪ್ರತಿ ಲೇಖನವೂ ಕುಸುರಿ ಕೆತ್ತನೆಯಾಗಿದೆ. ಕನ್ನಡದ ಸೃಜನಶೀಲ ಜೀವಂತಿಕೆಯ ಭಾಗವಾಗಿ ಅವರ ಅಂಕಣ ಬರೆಹಗಳು ರೂಪು ತಳೆದಿವೆ.

ಸಂವರ್ತರ ಬರೆಹಗಳ ಚಿಂತನೆಯ ವಿಧಾನವೆಂದರೆ, ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಸ್ಥಳೀಯ ಎನ್ನಬಹುದಾದ ವಿಷಯಗಳ ಜತೆ `ತಗುಳ್ಚಿ’ ನೋಡುವುದು. ಅಂತಾರಾಷ್ಟ್ರೀಯ ತಿಳುವಳಿಕೆಗೆ ಜೀವ ಬರುವುದೇ ಸ್ಥಳೀಯತೆಯಲ್ಲಿ ಬೇರು ತಳೆದಾಗ; ಹಾಗೆಯೇ ದೈನಿಕವಾದುದು ಚಿರಂತನೆಯ ಆಗಸದಲ್ಲಿ ಹೂಬಿಡಲು ಯತ್ನಸದಿದ್ದರೂ ವ್ಯರ್ಥ. ತಿಳಿವಿಗೆ ಸಂಬಂಧಿಸಿದ ಇವೆರಡೂ ಹೋಳುಗಳನ್ನು ಅವರ ಬರೆಹ ಚೆನ್ನಾಗಿ ಬೆಸೆಯುತ್ತದೆ. ಕಣ್ಣೆದುರು ನಿತ್ಯಬದುಕಿನಲ್ಲಿ ಕಾಣುವ ನಿದರ್ಶನಗಳ ಮೂಲಕ ಅಮೂರ್ತವಾದ ತಾತ್ವಿಕ ಜಿಜ್ಞಾಸೆಗೆ ಹರಿಯುವ ಹಾಗೂ ಅಮೂರ್ತ ಚರ್ಚೆಯನ್ನು ದೈನಿಕಗಳಿಗೆ ಲಗತ್ತಿಸುವ ಅವರ ಕುಶಲತೆ ಅಪೂರ್ವವಾಗಿದೆ. ತರುಣ ಸಂಶೋಧಕರು ವಸ್ತುವಿನ ವಿಶ್ಲೇಷಣೆ, ವ್ಯಾಖ್ಯಾನ ಮತ್ತು ತಾತ್ವೀಕರಣದ ಕಲೆಗಳನ್ನು ಇಲ್ಲಿ ಕಲಿಯಬಹುದು.

ಸಂವರ್ತ, ವಿನೋದ ಪ್ರಜ್ಞೆ ಕಡಿಮೆಯಿರುವ, ತುಸು ಹೆಚ್ಚೇ ಗಂಭೀರತೆಯನ್ನು ಆವಾಹಿಸಿಕೊಂಡ ಚಿಂತಕರು. ಅವರಲ್ಲಿ ಲೋಕದ ವಿದ್ಯಮಾನಗಳನ್ನು ಸ್ಥಾಯಿ ಎನ್ನಬಹುದಾದ ವ್ಯಂಗ್ಯ ಮತ್ತು ವಿಷಾದಪ್ರಜ್ಞೆಯ ಮೂಲಕ ನೋಡುವ ಗುಣವಿದೆ. ಹೀಗಾಗಿಯೇ ಅವರ ಬರೆಹಗಳಲ್ಲಿ ದಾರ್ಶನಿಕತೆಯ ಆಯಾಮ ಗಾಢವಾಗಿದೆ. ನಮ್ಮ ಕಾಲದ ಅನೇಕ ಜಟಿಲವಾದ ಸಾಮಾಜಿಕ ಬಿಕ್ಕಟ್ಟುಗಳ ಮೇಲೆ ಅವರ ಬರೆಹಗಳು ಬೆಳಕನ್ನು ಹಾಯಿಸುತ್ತವೆ. ಅವರು `ಪ್ರಗತಿಪರ’ ಎನ್ನಲಾಗುವ ರಾಜಕೀಯವಾಗಿ ಸರಿ (ಪೊಲಿಟಿಕಲಿ ಕರೆಕ್ಟ್) ಎನ್ನಬಹುದಾದ ಚೌಕಟ್ಟುಗಳನ್ನು ಮೀರಿಕೊಂಡು ವಿದ್ಯಮಾನಗಳನ್ನು ನೋಡಬಲ್ಲರು; ಒಪ್ಪಿತ ಗ್ರಹಿತಗಳನ್ನು ಅಲುಗಿಸುವಂತೆ ಹೊಸ ನೋಟಗಳನ್ನು ಹೊಳೆಸಬಲ್ಲರು. ಅವರ ರಾಜಕೀಯ ವಿಶ್ಲೇಷಣೆಗಳು ಮನುಷ್ಯರಲ್ಲಿರುವ ದ್ವಂದ್ವ ಕ್ರೌರ್ಯ ಪ್ರೇಮ ಅಂತಃಕರಣಗಳನ್ನು ಕುರಿತೂ ವಿವೇಚಿಸುತ್ತವೆ. ಮನುಷ್ಯರನ್ನು ಅವರ ಅರೆಕೊರೆಗಳಲ್ಲೇ ಒಪ್ಪಿಕೊಳ್ಳಬೇಕು ಮತ್ತು ವಿಮರ್ಶಾತ್ಮಕ ಎಚ್ಚರದಲ್ಲಿ ಪ್ರೀತಿಸಬೇಕು ಎಂಬ ನಿಲುವು ಇಲ್ಲಿದೆ. ಈ ಕಾರಣಗಳಿಂದ ಅವರ ಅಂಕಣಗಳು ಅತ್ಯುತ್ತಮ ರಾಜಕೀಯ ಚಿಂತನೆಗಳೂ ಆಗಿವೆ. ಇಲ್ಲಿನ ರಾಜಕೀಯ ಪ್ರಜ್ಞೆಯಲ್ಲಿ ಕಲಾಪ್ರೀತಿ, ಮಾನವೀಯತೆ ಪ್ರೇಮತತ್ವ ಜೀವನಪ್ರೀತಿ, ಆದರ್ಶ ಸಮಾಜದ ಕನಸುಗಳು ಅಂತರ್ಗತವಾಗಿವೆ. ಇಲ್ಲಿ ಪ್ರಖರ ಬೌದ್ಧಿಕತೆಯಲ್ಲಿ ಅಂತಃಕರಣವಿದೆ. ಇಲ್ಲೆಲ್ಲೂ ಬುದ್ಧನ ಹೆಸರಿಲ್ಲ, ಆದರೆ ಆತನ ಜೀವಕರುಣೆ ಹರಿದಾಡಿದೆ.

ಜಗತ್ತಿನ ಹತ್ತು ಹಲವು ಸಂಗತಿಗಳನ್ನು ತಂದು ವಿಶ್ಲೇಷಿಸಿ ಕನ್ನಡ ಓದುಗರ ಸಂವೇದನೆ ಬೆಳೆಸುವ ಕೆಲಸವನ್ನು ಕನ್ನಡದ ಅತ್ಯುತ್ತಮ ಮನಸುಗಳು ಉದ್ದಕ್ಕೂ ಮಾಡಿಕೊಂಡು ಬಂದಿವೆ. ಇಂದಿನ ವಿಷಮಗಳಿಗೆಯಲ್ಲಿ ಇಂತಹ ಮನಸುಗಳು ಹೆಚ್ಚಾಗುವ ಜರೂರತ್ತಿದೆ. ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲಿ ಹೇಳುವುದಾದರೆ, ಶಿವರಾಮ ಕಾರಂತರಿಂದ ಆರಂಭಗೊಂಡು ಈಚಿನ ಜಿ. ರಾಜಶೇಖರ, ಫಣಿರಾಜ ಅಮೀನಮಟ್ಟು ಅವರ ತನಕ, ಈ ಮನಸ್ಸು ಕಟ್ಟುವ ಕೆಲಸ ನಡೆದಿದೆ. ಸಂವರ್ತರ ಬರೆಹಗಳು ಈ ಪರಂಪರೆಯ ಸಮರ್ಥ ಮುಂದುವರಿಕೆಯಾಗಿವೆ. ಕನ್ನಡದ ಚಿಂತನಶೀಲತೆಯ ಮಟ್ಟವನ್ನು ಹೀಗೆ ತಮ್ಮ ಮೊದಲ ಘಟ್ಟದ ಬರೆಹಗಳಲ್ಲೇ ಎತ್ತರಿಸುವ ಪ್ರತಿಭೆ ಮತ್ತು ಕಸುಬುದಾರಿಕೆಗಳನ್ನು ಪ್ರಕಟಿಸಿದ ಲೇಖಕರು ಬಹಳ ಇಲ್ಲ. ಕನ್ನಡದ ಅತ್ಯುತ್ತಮ ಮನಸ್ಸು ಸೃಷ್ಟಿಸಿರುವ, ಪುನರಪಿ ಮನನ ಮಾಡಬೇಕಿರುವ ಅಮೂಲ್ಯ ಬರೆಹಗಳು ಇಲ್ಲಿವೆ.

ಸಂವರ್ತ ತಮ್ಮ ಖಾಸಗಿ ಬದುಕಿನ ಒಂದು ಸಂಗತಿಯನ್ನು- ಸ್ವತಃ ಅವರೇ ಸಾರ್ವಜನಿಕವಾಗಿ ಪ್ರಸ್ತಾಪಿಸಿರುವುದರಿಂದ-ಉಲ್ಲೇಖಿಸಬಹುದು ಎಂದು ಕಾಣುತ್ತದೆ: ಅವರೊಮ್ಮೆ ಸ್ವಹತ್ಯೆಗೆ ಯತ್ನಿಸಿದ್ದರು. ಈ ಘಟನೆಯನ್ನು ಅದಕ್ಕೆ ಹತ್ತುವರ್ಷ ತುಂಬಿದ ಸಂದರ್ಭದಲ್ಲಿ ಅವರು ಫೇಸ್‌ಬುಕ್ಕಿನಲ್ಲಿ ಪ್ರಸ್ತಾಪ ಮಾಡಿದಾಗ ಅದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಂದು ಪ್ರ‍್ರತಿಕ್ರಿಯೆ ವಿಶಿಷ್ಟವಾಗಿತ್ತು. “ನಾವು ಬದುಕುವ ಕಲೆಯನ್ನೂ ಜೀವನ ಪ್ರೀತಿಯನ್ನೂ ನಿಮ್ಮ ಬರೆಹಗಳಿಂದ ಕಲಿತೆವು. ಅಂಥ ಬರೆಹ ಕೊಟ್ಟ ನೀವೂ ಸಾಯಲು ಯತ್ನಿಸಿದ್ದಿರಾ?”. ಸಂವರ್ತರ ಚಿಂತನೆಯಲ್ಲಿ ಲೋಕವರ್ತನೆಯ ಬಗ್ಗೆ ಖಿನ್ನತೆ ಮತ್ತು ಅಸ್ತಿತ್ವವಾದಿ ದುಗುಡದ ಎಳೆಯಿದೆ, ನಿಜ. ಆದರೆ ಅದನ್ನು ದಾಟಿಕೊಂಡು ಬದುಕಿನಲ್ಲಿ ಪ್ರೀತಿಯನ್ನು ಹೆಚ್ಚಿಸುವ ಸಂಗತಿಗಳು ತುಂಬಿವೆ. ನಿಘಂಟಿನಲ್ಲಿ `ಸಂವರ್ತ’ ಎಂದರೆ ನಾಶ, ಪ್ರಳಯ ಎಂಬ ಅರ್ಥಗಳಿವೆ. ಆದರೆ ಅವರ ಚಿಂತನೆಗಳು ಪ್ರಳಯ ಕಾಲದಲ್ಲಿ ಮುಳುಗುವವರಿಗೆ ಒದಗುವ ನಾವೆಗಳಂತಿವೆ. `ಸಾಹಿಲ್’ ಎಂದರೆ ಉರ್ದುವಿನಲ್ಲಿ ಹಾದಿ ತೋರಿಸುವವನು. ಅವರ ಚಿಂತನೆಗಳು ಬದುಕುವ ಪ್ರೀತಿಸುವ ಹೊಸಹೊಸ ಹಾದಿಗಳನ್ನು ಕಾಣಿಸಬಲ್ಲ ತಾಕತ್ತನ್ನೂ ಮೃತಪ್ರಜ್ಞೆಯನ್ನು ಬದುಕಿಸುವ ಮರುಜೇವಣಿಗೆಯ ಗುಣವನ್ನೂ ಹೊಂದಿವೆ.

ಸಂವರ್ತ ಅವರು ನನ್ನನ್ನು `ಪೀರ್’ (ಸೂಫಿ ಪರಿಭಾಷೆಯಲ್ಲಿ ಗುರು) ಎಂದು ಕರೆವುದುಂಟು. ನಾನು ಪೀರನಲ್ಲ. ತರ್ಕಕ್ಕಾಗಿ ಈ ಪರಿಭಾಷೆಯನ್ನು ಒಪ್ಪಿಕೊಂಡು ಹೇಳುವುದಾದರೆ, ಈ ಮುರೀದನ (ಸೂಫಿ ಪರಿಭಾಷೆಯಲ್ಲಿ ಶಿಷ್ಯ) ಬರೆಹಗಳಿಂದ ಚಿಂತಿಸುವುದನ್ನೂ ಬರೆಯುವುದನ್ನೂ ಬಹಳಷ್ಟು ಕಲಿತಿದ್ದೇನೆ. ಕನ್ನಡದಲ್ಲಿ ಮೂಡಿರುವ ಅವರ ಅಪರೂಪದ ಚಿಂತನೆಗಳು ಕಾಲೇಜಿನ ಪಠ್ಯಪುಸ್ತಕಗಳಲ್ಲಿ ಸೇರುವಂತಾಗಬೇಕು, ವಿದ್ಯಾರ್ಥಿಗಳು ಓದುವಂತಾಗಬೇಕು. ಅವರ ಸಂವೇದನೆಯನ್ನು ರೂಪಿಸುಗಬೇಕು ಎಂದು ನಾನು ಬಯಸುತ್ತೇನೆ. ಇಂತಹ ವಿಶಿಷ್ಟ ಚಿಂತನೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಸಂವರ್ತ ಅವರಿಗೆ ಕೃತಜ್ಞತೆಗಳು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here