ಮೈಸೂರಲ್ಲೂ ಸಾಹಸಸಿಂಹನ ಬೆಂಬಿಡದ ಪಜೀತಿ

| ಅನಿಲ್.ಎಸ್ ಚಲ್ಯ |

ಆತ ಒಬ್ಬ ನಟ ಅಥವಾ ಬೇರೆ ಯಾರೇ ಆಗಿರಲಿ ಸರ್ಕಾರ ತಾನೇ ಸ್ಮಾರಕ ನಿರ್ಮಾಣ ಮಾಡುವುದಾಗಿಯೋ ಅಥವಾ ಬೇರೇನೋ ಒಂದು ನಿರ್ಧಾರವನ್ನು ಘೋಷಿಸಿದ ಮೇಲೆ ಅದಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಹೀಗೆ ಹತ್ತಾರು ವರ್ಷಗಳ ಕಾಲ ಒಂದು ವಿಷಯವನ್ನು ಚರ್ಚಾ ಸಾಮಗ್ರಿಯನ್ನಾಗಿಸುವುದು ಶೋಭೆಯಲ್ಲ. ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಾಗುತ್ತಿರುವ ಚರ್ಚೆ ವಿಳಂಬಗಳು ಅಭಿಮಾನಿಗಳಿಗಷ್ಟೇ ಅಲ್ಲ ಸಾಮಾನ್ಯವಾಗಿ ನೋಡುವವರಿಗೂ ಅಸಹನೆಯನ್ನು ಮೂಡಿಸುತ್ತದೆ

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡುಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಎಂದು ಹಾಡಿ ಜೀವನದ ಸೂಕ್ಷ್ಮತೆಯನ್ನು ಸಾರಿದ್ದ ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅಭಿಮಾನಿಗಳನ್ನಗಲಿ ಹತ್ತು ವರ್ಷಗಳೇ ಕಳೆದಿವೆ. ವಿಷ್ಣುವಿನ ಸ್ಮಾರಕಕ್ಕೆ ಅಂಗೈ ಅಗಲ ಜಾಗವೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚÀನೀಯ. ಸರ್ಕಾರ, ಅಭಿಮಾನಿಗಳು ಮತ್ತು ಕುಟುಂಬದವರ ಅಸಮಾಧಾನ ಅಸಹಕಾರಗಳಿಂದ ಒಬ್ಬ ಧೀಮಂತ ನಟ ದಿನನಿತ್ಯದ ಚರ್ಚೆಯ ವಿಷಯವಾಗಿದ್ದಾರೆ. ವಿಷ್ಣು ಕುಚುಕು ಗೆಳೆಯ ಅಂಬರೀಶ್ ಕೆಲವು ತಿಂಗಳುಗಳ ಹಿಂದೆ ಇಹಲೋಕ ತ್ಯಜಿಸಿದಾಗ ಅಂಬರೀಶ್ ಸ್ಮಾರಕ ನಿರ್ಮಾಣದ ವಿಷಯ ಪ್ರಸ್ತಾಪವಾಗಿತ್ತು. ಆಗಲೂ ಸಹ ವಿಷ್ಣು ಸ್ಮಾರಕ ನಿರ್ಮಾಣದ ಚರ್ಚೆ ಮುನ್ನೆಲೆಗೆ ಬಂದಿತ್ತು..

ಅಂಬರೀಶ್ ಸ್ಮಾರಕದ ಜೊತೆಗೆ ಕಂಠೀರವ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕವನ್ನು ನಿರ್ಮಿಸುವ ನಿರ್ಧಾರವನ್ನು ಸರ್ಕಾರ ವ್ಯಕ್ತಪಡಿಸಿತ್ತು. ಇದಕ್ಕೆ ಅಭಿಮಾನಿಗಳು ಮತ್ತು ವಿಷ್ಣು ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಸರ್ಕಾರ ಆ ವಿಚಾರದಲ್ಲಿ ತುಟಿ ಬಿಚ್ಚಲಿಲ್ಲ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ನೋಡಿ ಬೇಸರಗೊಂಡ ಅಭಿಮಾನಿಯೊಬ್ಬ ತಾನೆ ಸ್ಮಾರಕಕ್ಕೆ ಜಾಗ ಕೊಡುವುದಾಗಿ ಹೇಳಿ ಸರ್ಕಾರದ ಮೇಲಿನ ಆಕ್ರೋಶ ವ್ಯಕ್ತಪಡಿಸಿದ್ದ. ಈ ಮಧ್ಯೆ ವಿಷ್ಣು ಅಳಿಯ ಅನಿರುದ್ ಮೈಸೂರಿನಲ್ಲಿ ದಿಢೀರನೆ ಭೂಮಿ ಪೂಜೆಗೆ ಮುಂದಾಗಿರುವುದರಿಂದ ಸ್ಮಾರಕದ ವಿಚಾರ ಮತ್ತೆ ವಿವಾದದ ರೂಪ ಪಡೆದಿದೆ..

ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿ 2009ರಲ್ಲಿ ವಿಷ್ಣು ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಜಾಗವನ್ನು ಸರ್ಕಾರವೇ ಬಾಲಕೃಷ್ಣವರಿಗೆ ಮಂಜೂರು ಮಾಡಿತ್ತು. ಅದರಲ್ಲಿ 10 ಎಕರೆ ಜಾಗವನ್ನು ಬಾಲಕೃಷ್ಣರ ಮಗ ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅಭಿಮಾನ್ ಸ್ಟುಡಿಯೋ ಬಾಲಣ್ಣನ ಕುಟುಂಬದ ವ್ಯಾಜ್ಯವಾಗಿ ಹೈ ಕೋರ್ಟ್ ಮೆಟ್ಟಿಲೇರಿತ್ತು. ಆದರೂ ಅಭಿಮಾನ್ ಸ್ಟುಡಿಯೋದಲ್ಲೇ ಸಂಸ್ಕಾರ ಮಾಡಿದ್ದರಿಂದ ವಿಷ್ಣು ಸ್ಮಾರಕವನ್ನು ಅಲ್ಲಯೇ ಕಟ್ಟಲು ಸರ್ಕಾರ ಮುಂದಾಗಿತ್ತು. ವ್ಯಾಜ್ಯವಿದ್ದರಿಂದ ಹೈ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿತ್ತು. ಹೀಗಾಗಿ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಅದರಂತೆ 2016 ಮೈಸೂರಿನಲ್ಲಿ 5 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಹೀಗೆ ಅವರ್ ಬಿಟ್ ಇವರ್ ಬಿಟ್ ಇನ್ಯಾರು ಎಂಬಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಾ ಸರ್ಕಾರ ಕಣ್ಣಾಮುಚ್ಚಾಲೆಯ ಆಟವಾಡುತ್ತಿದರೆ, ಇತ್ತ ಮೈಸೂರಿನಲ್ಲಿ ರೈತರು ತಮ್ಮ ಜಾಗವನ್ನು ಬಿಟ್ಟುಕೊಡಲು ನಿರಾಕರಿಸಿ, ಕೋರ್ಟ್ ಮೆಟ್ಟಿಲೇರಿದ್ದರು.

ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೆ ರೈತರ ಅನುಮತಿಯೊಂದಿಗೆ, ಆ ಜಾಗದ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಕೊಟ್ಟು, ಅದು ಕೃಷಿ ಭೂಮಿಯಾಗಿದ್ದಲ್ಲಿ ಬೇರೆಡೆ ಭೂಮಿಯನ್ನೂ ಕೊಟ್ಟು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಆ ಜಾಗಕ್ಕೆ ಇದಾವುದೂ ಅಪ್ಲೈ ಆಗಿಲ್ಲ. ಕಡಿಮೆ ಬೆಲೆ ಕೊಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹೆಚ್ಚಿನ ಕಾಂಪೆನ್ಸೇಷನ್ ಕೊಡಬೇಕು ಎಂದು ಆ ಭೂಮಿಯ ಮಾಲೀಕರಾದ ರೈತರು ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ಸದ್ಯಕ್ಕೆ ಆ ವಿಚಾರ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೆಲ್ಲದರ ನಡುವೆ ವಿಷ್ಣು ಅಳಿಯ ಅನಿರುದ್ ಮೈಸೂರಿನಲ್ಲಿ ಭೂಮಿ ಪೂಜೆ ಮಾಡಲು ಹೋಗಿದ್ದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಕೋರ್ಟ್‍ನಲ್ಲಿ ಕೇಸು ನಡೆಯುತ್ತಿರುವಾಗಲೇ ಭೂಮಿ ಪೂಜೆ ಮಾಡಲು ಹೇಗೆ ಸಾಧ್ಯ ಎಂದು ರೈತರು ತಡೆಯೊಡ್ಡಿದ್ದಾರೆ. ಇಲ್ಲ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ಅನಿರುದ್ ಇಂಗ್ಲಿಷ್‍ನಲ್ಲಿದ್ದ ಒಂದು ಲೆಟರ್ ತೋರಿಸಿದ್ದಾರೆ. ಅದು ಕೋರ್ಟ್ ಆದೇಶ ಅಲ್ಲ, ಆಗಿದ್ದರೂ ನಮಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ ಕನ್ನಡದಲ್ಲಿ ಲೆಟರ್ ತೆಗೆದುಕೊಂಡು ಬನ್ನಿ ಎಂದು ರೈತರು ವಾಪಸ್ ಕಳಿಸಿದ್ದಾರೆ.

ಕೋರ್ಟ್ ಆದೇಶ ಬರದೆ, ತಮಗೆ ಕಾಂಪೆನ್ಸೇಷನ್ ಸಿಗದೆ ಭೂಮಿ ಪೂಜೆ ಮಾಡಿ ಸ್ಮಾರಕ ಕಟ್ಟಿದರೆ ತಮಗೆ ನ್ಯಾಯ ಸಿಗುವುದಿಲ್ಲ, ಪರಿಹಾರವೂ ಬರುವುದಿಲ್ಲ, ಆ ವಿಚಾರ ಹಾಗೇ ಮುಚ್ಚಿಹೋಗುತ್ತದೆ ಎಂಬುದು ರೈತರ ಆತಂಕ. ಅದಷ್ಟೇ ಅಲ್ಲದೆ ಕೋರ್ಟ್ ಆದೇಶ ನೀಡಿದ್ದೇ ಆದಲ್ಲಿ ಪ್ರತಿವಾದಿಗೂ ಆದೇಶದ ಕಾಪಿ ನೀಡಲಾಗುತ್ತದೆ. ಆದರೆ ರೈತರಿಗೆ ಕೋರ್ಟ್‍ನಿಂದಾಗಲಿ ಅಥವಾ ತಮ್ಮ ಲಾಯರ್‍ನಿಂದಗಲೀ ಯಾವುದೇ ಆದೇಶದ ಪ್ರತಿ ದೊರೆತಿಲ್ಲ. ಇದು ಅನಿರುದ್ ಯಾವುದೋ ಅರ್ಥವಾಗದ ಲೆಟರ್ ತಂದು ನಮ್ಮನ್ನು ಯಾಮಾರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಬಹುಶಃ ರೈತರ ಆತಂಕ ಸತ್ಯವೂ ಆಗಿರಬಹುದು. ಹಾಗೊಂದು ವೇಳೆ ಅನಿರುದ್ ರೈತರಿಗೆ ಯಾವುದೋ ಪತ್ರವನ್ನು ತೋರಿಸಿದ್ದೇ ಆಗಿದ್ದಲ್ಲಿ ಅದು ರೈತರಿಗಷ್ಟೇ ಅಲ್ಲ ವಿಷ್ಣು ಜೀವಿಸಿದ್ದ ಆದರ್ಶದ ಬದುಕಿಗೆ ಮಾಡುವ ಮೋಸವೂ, ಅವಮಾನವೂ ಆಗಿರುತ್ತದೆ. ಈಗಾಗಲೇ 10 ವರ್ಷ ಕಳೆದಿದ್ದು ಇನ್ನೂ ಸ್ಮಾರಕ ನಿರ್ಮಾಣವಾಗದೇ ಇರುವುದು ವಿಷ್ಣು ಕುಟುಂಬ ಮತ್ತು ಅಭಿಮಾನಿಗಳಿಗೆ ಬೇಸರದ ವಿಚಾರವೇ ಆಗಿದ್ದರೂ, ಆ ಕಾರಣಕ್ಕೆ ಮೋಸ ಮಾಡಿ ಸ್ಮಾರಕ ಕಟ್ಟುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

ರೈತರೂ ಭೂಮಿಯನ್ನು ಕೊಡುವುದೇ ಇಲ್ಲ ಎಂದೇನು ಹೇಳುತ್ತಿಲ್ಲ, ಇನ್ನೂ ಹೆಚ್ಚಿನ ಪರಿಹಾರವನ್ನಷ್ಟೇ ಕೇಳುತ್ತಿದ್ದಾರೆ. ಹಾಗಾಗಿ ಕೋರ್ಟ್‍ನಲ್ಲಿ ಆ ವಿಚಾರ ತೀರ್ಮಾನವಾಗಬೇಕಿದೆ. ಹೀಗಿರುವಾಗ ದುಡುಕಿನ ತೀರ್ಮಾನದಲ್ಲಿ ಕೋರ್ಟ್ ವಿಚಾರಣೆಯಲ್ಲಿರುವಾಗಲೇ ಭೂಮಿ ಪೂಜೆಗೆ ಮುಂದಾಗಿರುವುದು ಕಾನೂನು ಉಲ್ಲಂಘನೆಯೂ ಆಗುತ್ತದೆ. ಹಾಗಾಗಿ ಕಾನೂನು ಉಲ್ಲಂಘಿಸುವುದು, ರೈತರಿಗೆ ಮೋಸ ಮಾಡುವುದು ವಿಷ್ಣು ಬದುಕಿನ ಘನತೆಗೆ ಕಪ್ಪು ಚುಕ್ಕೆಯನ್ನು ತಂದೊಡ್ಡುತ್ತದೆ. ಕೋರ್ಟ್ ವ್ಯಾಜ್ಯ ಮುಗಿಯುವವರೆಗೆ ವಿಷ್ಣು ಕುಟುಂಬ ಕಾಯಬೇಕು.

ಆತ ಒಬ್ಬ ನಟ ಅಥವಾ ಬೇರೆ ಯಾರೇ ಆಗಿರಲಿ ಸರ್ಕಾರ ತಾನೇ ಸ್ಮಾರಕ ನಿರ್ಮಾಣ ಮಾಡುವುದಾಗಿಯೋ ಅಥವಾ ಬೇರೇನೋ ಒಂದು ನಿರ್ಧಾರವನ್ನು ಘೋಷಿಸಿದ ಮೇಲೆ ಅದಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಹೀಗೆ ಹತ್ತಾರು ವರ್ಷಗಳ ಕಾಲ ಒಂದು ವಿಷಯವನ್ನು ಚರ್ಚಾ ಸಾಮಗ್ರಿಯನ್ನಾಗಿಸುವುದು ಶೋಭೆಯಲ್ಲ. ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಾಗುತ್ತಿರುವ ಚರ್ಚೆ ವಿಳಂಬಗಳು ಅಭಿಮಾನಿಗಳಿಗಷ್ಟೇ ಅಲ್ಲ ಸಾಮಾನ್ಯವಾಗಿ ನೋಡುವವರಿಗೂ ಅಸಹನೆಯನ್ನು ಮೂಡಿಸುತ್ತದೆ.

ವಿಷ್ಣು ನಿಧನದ ಸಮಯದಲ್ಲಿ ನಮ್ಮ ಗೌರಿ ಮೇಡಂ ‘ವಿಷ್ಣು ಬಗ್ಗೆ ಜಗತ್ತು ಇನ್ನಷ್ಟು ಔದಾರ್ಯ ತೋರಬೇಕಿತ್ತು’ ಎಂದು ಬರೆದಿದ್ದರು. ಅಂತೆಯೇ ಸರ್ಕಾರ ವಿಷ್ಣು ಸ್ಮಾರಕಕ್ಕೂ ಔದಾರ್ಯ ತೋರಬೇಕಾಗಿದೆ ಎಂದೆನಿಸುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here