ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ – ಮಾಜಿ ಸಿಎಂ ಸಿದ್ದರಾಮಯ್ಯ

ಬಾಲಾಕೋಟ್ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇದುವರೆಗೂ ದೊರೆತಿಲ್ಲ. ಬರೀ ಅಂತೆ ಕಂತೆಗಳನ್ನೇ ತೋರಿಸಿ ಚುನಾವಣೆ ಗೆದ್ದು ಅವರು ಅಧಿಕಾರ ಹಿಡಿದಿದ್ದಾರೆ

| ನಾನುಗೌರಿ ಡೆಸ್ಕ್ |

“ದೇಶದ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದಿದೆ, ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಗರಿಷ್ಟ ಮಟ್ಟ ತಲುಪಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಫೇಸ್ ಬುಕ್ ನಲ್ಲಿ ಇಂದು ಬರೆದುಕೊಂಡಿದ್ದಾರೆ.

ಪುಲ್ವಾಮ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಕಾರಣ. ದೇಶದ ಸಾವಿರಾರು ಸೈನಿಕರನ್ನು ಸ್ಥಳಾಂತರಿಸುವಾಗ ಕನಿಷ್ಟ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಸರ್ಕಾರದ ತಪ್ಪು. ಇದನ್ನ ಪ್ರಶ್ನಿಸಬೇಕಾಗಿದ್ದ ಮಾಧ್ಯಮಗಳು ಕೂಡ ಜಾಣ ಕುರುಡು ಪ್ರದರ್ಶಿಸಿದವು. ಪುಲ್ವಾಮ ದುರಂತದಲ್ಲಿ ಮಡಿದ ನಮ್ಮ ಸೈನಿಕರ ಸಾವಿಗೆ ಮೋದಿಯವರೇ ನೇರಹೊಣೆ. ಬಾಲಾಕೋಟ್ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇದುವರೆಗೂ ದೊರೆತಿಲ್ಲ. ಬರೀ ಅಂತೆ ಕಂತೆಗಳನ್ನೇ ತೋರಿಸಿ ಚುನಾವಣೆ ಗೆದ್ದು ಅವರು ಅಧಿಕಾರ ಹಿಡಿದಿದ್ದಾರೆ ಎಂದು ಹಲವು ತಿಂಗಳುಗಳ ನಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮೋದಿಯವರು ಪ್ರಧಾನಿ ಆಗಿರುವುದರಿಂದ ಯಾರಿಗೆ ಸಂತೋಷವಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಸೆ ಮಾತ್ರ ಈಡೇರಿದೆ” ಎಂದು ಚುನಾವಣಾ ಸಂದರ್ಭದಲ್ಲಿ ಇಮ್ರಾನ್ ಖಾನ್ ಹೇಳಿದ್ದು ಮಾತು ನೆನಪಿಸಿ ವ್ಯಂಗ್ಯವಾಡಿದ್ದಾರೆ.

ರೈತರ, ಬಡವರ, ಸೈನಿಕರ ಕಷ್ಟದ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿ ಎನ್ನುತ್ತಾರಲ್ಲ, ಈ ರೈತರು, ಬಡವರು, ದಲಿತರು, ಸೈನಿಕರು ಇವರೆಲ್ಲ ಅನ್ಯಗ್ರಹ ಜೀವಿಗಳೇ? ಇವರ ಸಮಸ್ಯೆ ಬಗ್ಗೆ ಪ್ರಶ್ನಿಸಬಾರದೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಪ್ರಶ್ನಿಸುವವರನ್ನೆಲ್ಲ ದೇಶದ್ರೋಹಿ ಎನ್ನುವುದು ತಪ್ಪು ಎಂದು ಬರೆದಿದ್ದಾರೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ನೀಡಿದೆ. ಎಸ್‌ಐಟಿ ತಂಡ ಸೂಕ್ತ ಮತ್ತು ಪಾರದರ್ಶಕ ತನಿಖೆ ನಡೆಸಿ ಸತ್ಯವನ್ನು ಹೊರತರಲಿದೆ ಎಂಬ ಭರವಸೆಯಿದೆ. ಇದು ತಮ್ಮ ವಿರುದ್ಧ ರೂಪಿಸಿದ ಷಡ್ಯಂತ್ರ ಎಂದು ಅನಿಸಿದವರು ಎಸ್‌ಐಟಿ ತಂಡದ ಎದುರು ಹೋಗಿ ತಮ್ಮ ಅನುಮಾನ ಹೇಳಿಕೊಳ್ಳಲಿ ಎಂದು ಸಹ ಫೇಸ್ ಬುಕ್ ಪೋಸ್ಟ್ ನಲ್ಲಿದೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಕಳೆದ ಚುನಾವಣೆಯಲ್ಲಿ ನಮ್ಮರಾಜ್ಯದಲ್ಲಿ ಭಾಜಪಕ್ಕೆ ಬಹುಮತ ಬರುವಂತೆ ಮತದಾನ ಪಡೆಯಲು ಭಾಜಪ ಕಾರ್ಯಕರ್ತರ ಪ್ರಯತ್ನ ಎಷ್ಟು ಕಾರಣವೋ ಅಷ್ಟೇ ಕಾರಣ ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಅದರ ಕಾರ್ಯಕರ್ತರು ಜನರನ್ನು ತಲುಪಲು ವಿಫಲರಾದದ್ದು.
    ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಭಾಜಪಕ್ಕೆ ಅದ್ಭುತ ಗೆಲುವು ದೊರೆತದ್ದು ಹೇಗೆ?
    ಎಲ್ಲಾ ರೀತಿಯ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ಕಾಂಗ್ರೆಸ್ ನಾಯಕರುಗಳು ಪಕ್ಷದ ಪದವಿಗಳಿಗೆ ರಾಜಿನಾಮೆ ಕೊಟ್ಟು ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷವನ್ನು ಮತ್ತೆ ಬಲಪಡಿಸುವ ಅಗತ್ಯವಿದೆ.
    ಆದರೆ ಈಗಿನ ಸ್ವಾರ್ಥಿ ನಾಯಕರಿಂದ ಅದು ಸಾಧ್ಯವಿಲ್ಲ. ಹಾಗಾಗಿ ಭಾಜಪ ಮೆರೆಯುತ್ತಿದೆ. ನಾವು ದಕ್ಷಿಣದ ಇತರ ರಾಜ್ಯಗಳ ಜನರಿಂದ ಮತ್ತು ಅಲ್ಲಿನ ನಾಯಕರುಗಳಿಂದ ಕಲಿಯುವುದು ಬಹಳಷ್ಟಿದೆ. ಮಾನ್ಯ ಸಿದ್ದರಾಮಯ್ಯ ಅವರು ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಪಡಲಿ. ಮಾದರಿಯಾಗಿ ನಾಯಕ ಪಟ್ಟ ಬಿಟ್ಟು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಿ ಎಂದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here