ಗೋವಾ ಗ್ಯಾಂಬ್ಲಿಂಗ್: ಬಿಜೆಪಿಯಲ್ಲಿ ಕಾಂಗ್ರೆಸ್ಸೋ, ಕಾಂಗೆಸ್ಸಲ್ಲಿ ಬಿಜೆಪಿಯೋ?

ಮಾಹಿತಿ: ಅನಿಲ್ ಅಲ್ಬುಕರ್ಕ್, ಮಡಗಾಂವ್

ಗೋವಾದಲ್ಲಿ 2017ರ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ 13 ಸ್ಥಾನ ಗಳಿಸಿದ್ದ ಬಿಜೆಪಿ ಆಪರೇಷನ್ ಕಮಲ ನಡೆಸಿ ಅಧಿಕಾರ ಕಬಳಿಸಿತ್ತು. ಆಗ ಸರ್ಕಾರ ಸ್ಥಾಪಿಸಲು ನೆರವಾಗಿದ್ದ ಗೋವಾ ಫಾರ್ವರ್ಡ್ ಪಾರ್ಟಿಯನ್ನು ಈಗ ದೂರ ತಳ್ಳಿರುವ ಬಿಜೆಪಿ ಹತ್ತು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮೂಲಕ ಡೆಮಾಕ್ರಸಿಯನ್ನು ಗ್ಯಾಂಬ್ಲಿಂಗ್ ಮಟ್ಟಕ್ಕೆ ಇಳಿಸಿದೆ. ಈ ಎಲ್ಲದರ ತೆರೆಮರೆ ಸೂತ್ರದಾರ ಅಮಿತ್ ಶಾ!

ಈಗ ಗೋವಾದಲ್ಲಿ ಯಾವ ಪಕ್ಷದ ಆಡಳಿವಿದೆ? ನೌ ಡೌಟ್ ಬಿಜೆಪಿ. ಆದರೆ ಈಗ ಆ ಪಾರ್ಟಿಯಲ್ಲಿ ಬೇರೆ ಚಿಹ್ನೆಗಳಿಂದ ಗೆದ್ದು ಬಂದವರ ಸಂಖ್ಯೆಯೇ ಜಾಸ್ತಿ! ಗೋವಾ ಬಿಜೆಪಿ ಶಾಸಕರ ಸಂಖ್ಯೆ ಈಗ 27, ಅದರಲ್ಲಿ 15 ಜನ ಹೊರಗಿಂದ ಬಂದವರು! ನಾಲ್ಕು ದಿನಗಳ ಹಿಂದಷ್ಟೇ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಈಗ ಕ್ಯಾಬಿನೆಟ್ ಪುನರ್ ರಚನೆಯಾಗಿದ್ದು, ಮೊನ್ನೆ ಬಂದ 10ರಲ್ಲಿ ಮೂವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ. ಜೊತೆಗೆ ಉಪಸಭಾಪತಿಯಾಗಿದ್ದ ಕಾಂಗ್ರೆಸ್ ಶಾಸಕನಿಗೂ ಸಚಿವಗಿರಿ ಲಭಿಸಿದೆ.

ಶನಿವಾರ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕಾಂಗ್ರೆಸ್‍ನಿಂದ ಬಂದವರಿಗೆ ಸ್ಥಾನ ಕಲ್ಪಿಸಲು ಮಿತ್ರ ಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿಯ ಮೂವರು ಹಾಗೂ ಒಬ್ಬ ಪಕ್ಷೇತರ ಸಚಿವರನ್ನು ಕೈಬಿಟ್ಟಿದ್ದಾರೆ. ಅತೃಪ್ತ ಕಾಂಗ್ರೆಸ್ ಬಣದ ನಾಯಕ ಮತ್ತು ಈವರೆಗೆ ವಿರೋಧ ಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕವಳೇಕರ್‍ಗೆ ಡಿಸಿಎಂ ಸ್ಥಾನವೂ ಪ್ರಾಪ್ತಿಯಾಗಿದೆ.

2017ರ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿಗೆ 13, ಕಾಂಗ್ರೆಸ್‍ಗೆ 17 ಸ್ಥಾನ ಸಿಕ್ಕಿದ್ದವು. ಕಾಂಗ್ರೆಸ್‍ನ ಸೋಮಾರಿತನ ಬಳಸಿಕೊಂಡ ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರ ಮಾಡಿತ್ತು. ಈಗ ಮತ್ತೆ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಈಗ ಅಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕೇವಲ ಐದು. ಇದರಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳಿದ್ದಾರೆ! ಈ ಐದು ಶಾಸಕರ ತಂಡ ತಮ್ಮಲ್ಲಿ ಒಬ್ಬರನ್ನು ಈಗ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದೆ!

ಸದ್ಯ ಗೋವಾದಲ್ಲಿ ಬಿಜೆಪಿ ಸರ್ಕಾರವಿದೆಯಾದರೂ, ಅದನ್ನು ಭಾರತೀಯ ಕಾಂಗ್ರೆಸ್ ಪಾರ್ಟಿ ಸರ್ಕಾರ ಎನ್ನುವುದೇ ಸೂಕ್ತವೇನೋ? ಈಗ ಬಿಜೆಪಿಯ 27 ಶಾಸಕರಲ್ಲಿ 15 ಶಾಸಕರು ಬೇರೆ ಚಿಹ್ನೆಯಿಂದ ಗೆದ್ದು ಬಂದವರೇ! ಇನ್ನೂ ಆಳಕ್ಕೆ ಇಳಿದು ನೋಡಿದರೆ 27 ಶಾಸಕರಲ್ಲಿ ಮೂಲ ಬಿಜೆಪಿಗರು ಕೇವಲ ಆರು ಜನ ಮಾತ್ರ!
ಈಗ ಕಾಂಗ್ರೆಸ್‍ನಿಂದ ಹತ್ತು ಶಾಸಕರನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಂಗ್ರೆಸ್ ಶಾಸಕ ಮೊನ್ಸೆರಾಟ್.

ಈತನ ಪತ್ನಿಗೆ ಈಗ ಕ್ಯಾಬಿನೆಟ್ ಸಚಿವ ಸ್ಥಾನ ಸಿಕ್ಕಿದೆ. ಬಾಬುಶ್ ಮೊನ್ಸೆರಾಟ್ ಎಂತಲೇ ಫೇಮಸ್ ಇರುವ ಈತ ಡ್ರಗ್ಸ್ ಮಾಫಿಯಾದ ಕಿಂಗ್‍ಪಿನ್ ಎಂಬ ಆರೋಪವೂ ಇದೆ. ಅಪ್ರಾಪ್ತ ಬಾಲಕಿಯೊಬ್ಬಳನ್ನು ರೇಪ್ ಮಾಡಿದ ಆರೋಪವನ್ನೂ ಈತ ಎದುರಿಸುತ್ತಿದ್ದಾನೆ. ಎರಡು ತಿಂಗಳ ಹಿಂದಷ್ಟೇ ನಡೆದ ಉಪ ಚುನಾವಣೆಯಲ್ಲಿ ಈತ, ಗೋವಾ ಮಾಜಿ ಸಿಎಂ ಮನೋಹರ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಗೆದ್ದಿದ್ದಾನೆ. ಮುಖ್ಯಮಂತ್ರಿ ಸೇರಿ ಗೋವಾ ಬಿಜೆಪಿಯ ನಾಯಕರೆಲ್ಲ ಈತನ ವಿರುದ್ಧ ಪ್ರಚಾರ ಮಾಡಿ, ರೇಪಿಸ್ಟ್ ಅಭ್ಯರ್ಥಿಗೆ ಮತ ಹಾಕಬೇಡಿ ಎಂದಿದ್ದರು. ಆದರೆ ಕೇವಲ ಎರಡೇ ತಿಂಗಳಲ್ಲಿ ಈ ಬಾಬುಶ್ ಮೊನ್ಸೆರಾಟ್‍ನನ್ನು ಈಗ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಪ್ಪಿಕೊಂಡಿದ್ದಾರೆ.

ಅಸ್ಥಿರ ಸರ್ಕಾರಕ್ಕೆ ಗೋವಾ ಸದಾ ಹೆಸರುವಾಸಿ. ಪರಿಕ್ಕರ್ ಇದ್ದಾಗ ಒಂದಿಷ್ಟು ಕಾಲ ಸ್ಥಿರ ಸರ್ಕಾರವಿತ್ತು. ಈಗ ಮತ್ತೆ ಸ್ಥಿರ ಸರ್ಕಾರ ಎಂದು ಬಿಜೆಪಿ ಹೇಳುತ್ತಿದೆ. ಆದರೆ 2017ರಲ್ಲಿ ಸರ್ಕಾರ ರಚನಗೆ ಸಹಾಯ ಮಾಡಿದ ಗೋವಾ ಫಾರ್ವರ್ಡ್ ಪಾರ್ಟಿಗೆ ವಂಚಿಸುವ ಮೂಲಕ ಅದು ಈಗ ಕಾಂಗ್ರೆಸ್ ಅನ್ನು ಅಪ್ಪಿಕೊಂಡಿದೆ.
ಈಗ ಅಲ್ಲಿ ಹೆಸರಿಗಷ್ಟೇ ಬಿಜೆಪಿ ಸರ್ಕಾರವೇನೋ? ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿಯ ಬೋರ್ಡು ತಗುಲಿ ಹಾಕಿದಂತೆ ಆಗಿದೆಯಷ್ಟೇ. ಹೀಗಾಗಿ ಇದನ್ನು ‘ಭಾರತೀಯ ಕಾಂಗ್ರೆಸ್ ಪಾರ್ಟಿ ಆಫ್ ಗೋವಾ’ದ ಸರ್ಕಾರ ಎನ್ನಬಹುದು. ಸದ್ಯಕ್ಕೆ ಅಲ್ಲಿ ಡೆಮಾಕ್ರಸಿ ಅಸಹಾಯಕ ಸ್ಥಿತಿಯಲ್ಲಿ ಕಣ್ ಕಣ್ ಬಿಡುತ್ತಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here