ದಲಿತ ಯುವಕನ ಬೆತ್ತಲೆ ಪ್ರಕರಣ ಖಂಡಿಸಿ ಜೂನ್ 18 ರಂದು ಗುಂಡ್ಲುಪೇಟೆಯಲ್ಲಿ ಬೃಹತ್ ಜಾಥ

ಇಡೀ ಘಟನೆಯನ್ನು ಅವಲೋಕಿಸಿದರೆ ಮನುಷ್ಯರು ಎಷ್ಟು ಜಾತಿಗ್ರಸ್ಥರಾಗಿದ್ದಾರೆ ಎಂಬ ಆತಂಕ ಮೂಡುತ್ತಿದೆ. ಒಬ್ಬ ಯುವಕನನ್ನು ದಲಿತ ಎಂಬ ಕಾರಣಕ್ಕಾಗಿ ಬೆತ್ತಲೆ ಮೆರವಣಿಗೆ ಮಾಡುವಷ್ಟು ಕ್ರೂರ ಮನಸ್ಸುಗಳನ್ನು ಬದಲಾಯಿಸುವುದಾದರೆ ಹೇಗೆ?

| ನಾನುಗೌರಿ ಡೆಸ್ಕ್ |

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಇತ್ತೀಚಗೆ ನಡೆದ ದಲಿತ ಯುವಕನ ಅಮಾನುಷ ಬೆತ್ತಲೆ ಮೆರವಣಿಗೆ ಪ್ರಕರಣ ವಿರೋಧಿಸಿ, ಈ ರೀತಿಯ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸಲು ಇದೇ ಜೂನ್ 18 ರಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಜಾಥ ಹಮ್ಮಿಕೊಳ್ಳಲಾಗಿದ್ದು, ಇದೇ ವೇಳೆ ಹಲವು ಮಂದಿ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಗುಂಡ್ಲುಪೇಟೆಯ ಪ್ರವಾಸಿ ಮಂದಿರದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳ ವತಿಯಿಂದ ನಿನ್ನೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಘಟನೆ ನಡೆದ ಶನಿ ಮಹಾತ್ಮ ದೇವಸ್ಥಾನದಿಂದಲೇ ಬೃಹತ್ ಮೆರವಣಿಗೆ ಆರಂಭವಾಗಲಿದ್ದು, ಗುಂಡ್ಲುಪೇಟೆ ವರಗೆ ಕಾಲು ನಡಿಗೆ ಜಾಥಾ ಮತ್ತು ಗುಂಡ್ಲುಪೇಟೆ ಬಂದ್ ನಡೆಸಲು ಈ ಮೊದಲು ಎಲ್ಲರೂ ಒಕ್ಕೊರಲಿನಿಂದ ನಿರ್ಧರಿಸಿಲಾಗಿತ್ತು. ಆದರೆ 18ರಂದು ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಬಂದ್ ಹಿಂತೆಗೆದುಕೊಂಡು ದೊಡ್ಡ ಜಾಥ ಮತ್ತು ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.

ಸಂತ್ರಸ್ತ ಪ್ರತಾಪ್ ರವರು ಐ.ಎ.ಎಸ್ ಪರೀಕ್ಷೆ ಬರೆಯಲು ಹೋಗಿ ತಡವಾದ ಕಾರಣಕ್ಕೆ ಖಿನ್ನನಾಗಿದ್ದಾನೆ. ಆನಂತರ ನಡೆಯಬಾರದ ಘಟನೆಗಳೆಲ್ಲಾ ನಡೆದು ಮನನೊಂದಿದ್ದಾನೆ. ಇಂತಹ ಸಂದರ್ಭದಲ್ಲಿ ನಾವು ಬಂದ್ ಮಾಡಿ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ಬರೆಯುವವರಿಗೆ ತೊಂದರೆ ಕೊಡಬಾರದೆಂದು ಬಂದ್ ಹಿಂತೆಗೆದುಕೊಂಡಿದ್ದೇವೆ. ಬದಲಿಗೆ ದೊಡ್ಡ ಜಾಥಾ ನಡೆಸಿ ಬಂತೇಜಿಗಳ ನೇತೃತ್ವದಲ್ಲಿ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದಾರೆ. ಇಷ್ಟೊಂದು ತಾರತಮ್ಯ ಮತ್ತು ಅವಮಾನ ಮಾಡುವ ಈ ಧರ್ಮ ನಮಗ ಬೇಡ ಎಂದು ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ ತಿಳಿಸಿದ್ದಾರೆ.

ಸದರಿ ಘಟನೆಗೆ ಸಂಬಂಧಿಸಿದಂತೆ ನಾಡಿನೆಲ್ಲಾ ಪ್ರಗತಿಪರ ಸಂಘಟನೆಗಳು, ಪ್ರಜ್ಞಾವಂತರು, ದಲಿತ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿವೆ. ಗುಂಡ್ಲುಪೇಟೆಯ ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ದೂರು ದಾಖಲಿಸಿ ಎಲ್ಲಾ ಆರೋಪಿಗಳನ್ನೂ ಬಂಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. 
ಆದರೆ, ಅಷ್ಟಕ್ಕೇ ಸುಮ್ಮನಾದರೆ ಇದೊಂದು ಮಾಮೂಲಿ ಪ್ರಕರಣವಾಗಿ ಮರೆಯಾಗುತ್ತದೆ. ಜಾತಿವಾದಗಳಿಗೆ, ಧರ್ಮಾಂಧರಿಗೆ ಹಾಗೂ ಅಮಾನುಷವಾಗಿ ವರ್ತಿಸಿದ ಜನಗಳಿಗೆ ಹಾಗೂ ಜಡ್ಡುಹಿಡಿದ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಆತ್ಮಸಾಕ್ಷಿ ಬಡಿದೆಬ್ಬಿಸಲು ಈ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ದಲಿತ ಹೋರಾಟಗಾರ ಡಾ. ಕೃಷ್ಣಮೂರ್ತಿ ಚಮರಂ ತಿಳಿಸಿದ್ದಾರೆ. 

ಕೃಷ್ಣಮೂರ್ತಿ ಚಮರಂ

ಈ ಹೋರಾಟ ಯಶಸ್ವಿಯಾಗಲು ಎಲ್ಲರ ಸಹಕಾರ ಭಾಗವಹಿಸುವಿಕೆ ಅಗತ್ಯ. ಆದ್ದರಿಂದ ನಾಡಿನೆಲ್ಲಾ ಪ್ರಜ್ಞಾವಂತ ಜನಪರ ಸಂಘಟನೆಗಳು ಎಂದಿನಂತೆ ಸ್ವಯಂಪ್ರೇರಿತವಾಗಿ ಗುಂಡ್ಲುಪೇಟೆಗೆ ಆಗಮಿಸಿ ಚಳವಳಿಗೆ ಬೆಂಬಲ ಸೂಚಿಸಿ, ಯಶಸ್ಸುಗೊಳಿಸಬೇಕೆಂದು ಚಮರಂ ರವರು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಹಿರಿಯ ಹೋರಾಟಗಾರರಾಗ ಹರಿಹರ ಆನಂದ ಸ್ವಾಮಿ, ಎಂ.ಬಿ.ಶ್ರೀನಿವಾಸ್. ಡಾ. ಕೃಷ್ಣಮೂರ್ತಿ ಚಮರಂ, ಡಾ.ಮಹದೇವ ಭರಣಿ, ಸಿ.ಎಂ.ಕೃಷ್ಣಮೂರ್ತಿ, ಯರಿಯೂರು ಸಿ.ರಾಜಣ್ಣ, ಸೋಮಯ್ಯ ಮಲೆಯೂರು, ಅಶೋಕ ಪುರಂ ಪುನೀತ್.ಕೆಂ.ಎಂ, ನಾಗರಾಜ್, ಕಂದಹಳ್ಳಿ ನಾರಾಯಣ, ಅಣಗಳ್ಳಿ ಬಸವರಾಜ್, ಚೋರನಹಳ್ಳಿ ಶಿವಣ್ಣ, ಮುರುಡಗಳ್ಳಿ ಮಹದೇವು, ಎಡದೊರೆ ಮಹದೇವ, ಆಲಗೂಡು ಚಂದ್ರಶೇಖರ್, ಪುಟ್ಟಸ್ವಾಮಿ, ಸುರೇಶ್ ಮೌರಿ, ಕಾಗಲವಾಡಿ ಶಿವಣ್ಣ, ರಾಮ ಸಮುದ್ರ ಮಹೇಶ, ಸುಭಾಷ್ ಮಾಡ್ರಹಳ್ಳಿ, ಆರ್.ಸೋಮಣ್ಣ,  ಹೊನ್ನೆಗೌಡನಹಳ್ಳಿ ನಾಗಯ್ಯ, ಹಂಗಳ ಪ್ರಸಾದ್, ಗಿರೀಶ್ ಲಕ್ಕೂರು, ಕಂದೆಗಾಲ ಎಂ ಶಿವಣ್ಣ, ಉಮೇಶ ಮಂಗಲ, ರಂಗಸ್ವಾಮಿ, ಮುಂತಾದ ಅನೇಕರು ಭಾಗವಹಿಸಿದ್ದರು ಬೆಂಬಲ ಸೂಚಿಸಿದ್ದಾರೆ.

ಮನುಷ್ಯತ್ವ ಮರೆತಿರುವುದೇ ಈ ಅಮಾನವೀಯ ಘಟನೆಗೆ ಕಾರಣ- ಚಮರಂ

ಇಡೀ ಘಟನೆಯನ್ನು ಅವಲೋಕಿಸಿದರೆ ಮನುಷ್ಯರು ಎಷ್ಟು ಜಾತಿಗ್ರಸ್ಥರಾಗಿದ್ದಾರೆ ಎಂಬ ಆತಂಕ ಮೂಡುತ್ತಿದೆ. ಒಬ್ಬ ಯುವಕನನ್ನು ದಲಿತ ಎಂಬ ಕಾರಣಕ್ಕಾಗಿ ಬೆತ್ತಲೆ ಮೆರವಣಿಗೆ ಮಾಡುವಷ್ಟು ಕ್ರೂರ ಮನಸ್ಸುಗಳನ್ನು ಬದಲಾಯಿಸುವುದಾದರೆ ಹೇಗೆ? ಆ ಕ್ರೂರ ಮನಸ್ಸುಗಳು ಈಗಲೂ ತಮ್ಮ ಘೋರ ತಪ್ಪನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಆತ ಮಾನಸಿಕ ಅಸ್ವಸ್ಥ, ವಿಗ್ರಹ ಕದಿಯಲು ಬಂದಿದ್ದ, ನಾವೇ ಪಂಚೆ ಕೊಟ್ಟೆವು, ದಲಿತ ಅಂತ ಗೊತ್ತಿರಲಿಲ್ಲ ಎಂಬೆಲ್ಲಾ ಕಟ್ಟುಕಥೆಗಳನ್ನು ಕಟ್ಟಿ ತಾವು ಕೇಸಿನಿಂದ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ. ಆತ ಯಾವ ಜಾತಿಯೇ ಆಗಿರಲಿ, ಆ ಯುವಕನ ಸ್ಥಿತಿಯಲ್ಲಿ ತಾವಿದ್ದರೆ ಹೀಗೆ ಮಾಡುತ್ತಿದ್ದೇವೆ ಎಂದು ಆ ಜಾತಿವಾದಿಗಳು ಯೋಚಿಸದಷ್ಟರ ಮಟ್ಟಿಗೆ ದುಷ್ಟರಾಗಿಬಿಟ್ಟಿದ್ದಾರೆ.

ಇನ್ನು ಪೊಲೀಸ್ ಇಲಾಖೆ ಯಥಾಪ್ರಕಾರ ನಿರ್ಲಕ್ಷ್ಯ ತೋರಿದೆ. ವಿಷಯ ತಿಳಿದರೂ ತುಂಬಾ ತಡವಾಗಿ ಪೊಲೀಸರು ಬಂದಿದ್ದು ಮಾತ್ರವಲ್ಲದೇ ಪೊಲೀಸ್ ವಾಹನ ಚಾಲಕ ಶ್ರೀನಿವಾಸ ಸಂತ್ರಸ್ಥ ಯುವಕನಿಗೆ ಒದ್ದಿರುವುದು ಏನನ್ನು ಸೂಚಿಸುತ್ತದೆ? ಇನ್ನು ಪ್ರಕರಣದ ಎಒನ್ ಆರೋಪಿ ಅರ್ಚಕ ಶಿವಪ್ಪ ಎಂಬುವವರ ಹೆಸರನ್ನು ಎಫ್.ಐ.ಆರ್ ನಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಸರ್ವಥಾ ಸರಿಯಲ್ಲ. ಈಗಾದಲ್ಲಿ ಇಂತಹ ಕ್ರೂರ ಆಚರಣೆಗಳು ಮರಕಳಿಸುವುದರಲ್ಲಿ ಸಂದೇಹವೇ ಇಲ್ಲ.

ದುಷ್ಕೃತ್ಯದ ಆರೋಪಿಗಳು

ಈಗ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಎ.ಎಸ್.ಐ ಮತ್ತು ವಾಹನ ಚಾಲಕ ಶ್ರೀನಿವಾಸನನ್ನು ಅಮಾನತು ಮಾಡಲಾಗಿದೆ. ಆದರೆ ಸಂತ್ರಸ್ತ ಪ್ರತಾಪ್ ಗೆ ಇಷ್ಟರಿಂದ ನ್ಯಾಯ ಸಿಗುವುದೇ? ತಪ್ಪಿತಸ್ಥರು ತಮ್ಮ ತಪ್ಪನ್ನು ಅರಿತು ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆಯೇ? ಇದು ಗುಂಡ್ಲುಪೇಟೆ ತಾಲ್ಲೂಕಿಗೆ ಮಾತ್ರವಲ್ಲ ಇಡೀ ಕರ್ನಾಟಕ, ದೇಶಕ್ಕೆ ಒಂದು ಸಂದೇಶ ನೀಡಬೇಕಿದೆ. ಜಾತಿವಾದಿಗಳಿಗೆ ಎಚ್ಚರಿಕೆ ನೀಡುವಂತೆ ಮಾಡಬೇಕಿದೆ. ಹಾಗಾಗಿ ಬಂದ್ ನಡೆಸಿ ಮುಂದಕ್ಕೂ ಕಾನೂನು ಮತ್ತು ಬೀದಿ ಹೋರಾಟವನ್ನು ಮುಂದುವರೆಸುತ್ತೇವೆಂದು ಡಾ.ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಹಲವು ಕಡೆ ಘಟನೆ ಖಂಡಿಸಿ ತೀವ್ರ ಪ್ರತಿಭಟನೆಗಳು ನಡೆದಿವೆ. ಅವುಗಳ ಕೆಲ ಚಿತ್ರಗಳು ಇಲ್ಲವೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here