`ಗಿರಿ’ ನೋಡಲು ಹೋದಾಗ ಕಂಡದ್ದು…

| ಗೌರಿ ಲಂಕೇಶ್ |
03 ಡಿಸೆಂಬರ್ 2003 (ಸಂಪಾದಕೀಯದಿಂದ)

ಚಿಕ್ಕಮಗಳೂರು ಮತ್ತು ಬಾಬಾಬುಡನ್‍ಗಿರಿಯಲ್ಲಿ ಕೋಮುಸೌಹಾರ್ದ ಸಭೆ ನಡೆಸಿ, ಆ ಮೂಲಕ ಕೇಸರಿ ಬಳಗದವರು ಕರ್ನಾಟಕವನ್ನು ಮತ್ತೊಂದು ಗುಜರಾತ್ ಆಗಿ ಪರಿವರ್ತಿಸುವುದನ್ನೂ, ಬಾಬಾ ಬುಡನ್‍ಗಿರಿಯನ್ನು ಅಯೋಧ್ಯೆಯನ್ನಾಗಿಸುವುದನ್ನೂ ತಡೆಯೋಣ ಬನ್ನಿ ಎಂದು ಕರೆ ನೀಡಿದ ಈ ಎರಡು ವಾರಗಳಲ್ಲಿ ಅದೆಂತಹ ಅದ್ಭುತ ಬೆಳವಣಿಗೆಗಳಾಗಿವೆ ಎಂದರೆ…. ಎಲ್ಲಿಂದ ಪ್ರಾರಂಭಿಸಲಿ ಎಂಬುದೇ ಗೊಂದಲವಾಗಿಬಿಟ್ಟಿದೆ.

ಭಾವೈಕ್ಯತೆಯ ಸಂಕೇತವಾಗಿರುವ ಬಾಬಾಬುಡನ್‍ಗಿರಿಯ ಸಾಮರಸ್ಯವನ್ನು ಕಾಪಾಡಲು ಈಗಾಗಲೇ ತಮ್ಮ ಬೆಂಬಲವನ್ನು ಸೂಚಿಸಿರುವ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್‍ರವರು ಬುಧವಾರ ಬೆಳಗ್ಗೆ ನನಗೆ ಫೋನ್ ಮಾಡಿ: “ಡಿಸೆಂಬರ್ 7 ಮತ್ತು 8ರಂದು ಅಲ್ಲಿ ಸೌಹಾರ್ದ ಸಮಾವೇಶ ನಡೆಸುವ ಮುನ್ನ ನಾವು ಹಲವರು ಅಲ್ಲಿಗೆ ಭೇಟಿ ನೀಡಿ, ಅಲ್ಲಿನ ವಾಸ್ತವಸ್ಥಿತಿಯನ್ನು ಪರಿಶೀಲಿಸಿ ಬರೋಣವಾ? ಎಂದು ಕೇಳಿದರು.

“ಬ್ಯೂಟಿಫುಲ್ ಐಡಿಯಾ, ಹೋಗೋಣ” ಅಂದೆ. ಅದರಂತೆ ಗುರುವಾರ ಕಾರ್ನಾಡ್, ಡಾ.ಕೆ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್, ಶೂದ್ರ ಶ್ರೀನಿವಾಸ್, ಪ್ರೊ.ವಿ.ಎಸ್.ಶ್ರೀಧರ್ ಮತ್ತು ನಾನು ಎಲ್ಲರೂ ಟಾಟಾ ಕ್ವಾಲಿಸ್ ಒಂದನ್ನು ಏರಿ ಚಿಕ್ಕಮಗಳೂರಿಗೆ ಹೊರಟೆವು.

ದಾರಿಯಲ್ಲಿ ಬಾಬಾಬುಡನ್‍ಗಿರಿಯ ವೈಶಿಷ್ಟ್ಯತೆ ಮತ್ತು ಈಗ ಕೇಸರಿ ಬಳಗ ಅದರ ಸುತ್ತಲೂ ಹರಡಿರುವ ವಿಷಮಯ ವಾತಾವರಣದ ಬಗ್ಗೆ ಚರ್ಚಿಸಿದೆವು.

ಈ ವರ್ಷ ಭಜರಂಗದಳದ ಮಂಗಗಳು ಬಾಬಾ ಬುಡನ್‍ಗಿರಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಲು ಅಣಿಯಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಹೋದ ವರ್ಷ ಭಜರಂಗದಳ ನೀಡಿದ್ದ ಕರೆಯೇ ಸಾಕ್ಷಿಯಂತಿದೆ. ಅಂದು ತೆಗೆದಿದ್ದ ಫೋಟೋಗಳನ್ನು ಶ್ರೀಧರ್ ತೋರಿಸಿದರು. ಅವುಗಳಲ್ಲಿ ಒಂದು ಬ್ಯಾನರ್‍ನ ಫೋಟೋ ಇದ್ದು ಅದರಲ್ಲಿ ಹೀಗೆ ಕರೆ ನೀಡಲಾಗಿತ್ತು: “ಸ್ನೇಹಕ್ಕೆ ಬದ್ಧ, ಸಂಹಾರಕ್ಕೆ ಸಿದ್ಧ.”

ಇದನ್ನು ಓದಿ ಕಾರ್ನಾಡ್ ಕುಪಿತರಾದರು. “ಯಾರ ಸಂಹಾರ ಮಾಡುತ್ತಾರಂತೆ ಇವರು? ಇದರಲ್ಲಿ ಬಳಸಿರುವ ಪದಗಳನ್ನು ನೋಡಿ ‘ಮಾಂಸ ಖಂಡ’, ‘ರಕ್ತದ ಕೋಡಿ’, ‘ಶತ್ರುಗಳ ಸಂಹಾರ’. ಇದು ಕನ್ನಡ ಭಾಷೆಯೇ?” ಎಂದು ಗುಡುಗಿದರು.

ಇಂತಹ ಸ್ಥಳದಲ್ಲಿ ಪುರೋಹಿತಶಾಹಿ ಪಕ್ಷವಾದ ಬಿಜೆಪಿ ಮತ್ತದರ ಅಂಗವಾಗಿರುವ ಭಜರಂಗದ ಮಂಗಗಳು ಇಲ್ಲಿ ಅರ್ಚಕ(ಆತ ಬ್ರಾಹ್ಮಣನೇ ಆಗಿರುತ್ತಾನೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ)ನ ನೇಮಕ, ಗೋರಿಗಳ ನಿರ್ಮೂಲನೆ, ‘ಹಿಂದೂ ಪುಣ್ಯಕ್ಷೇತ್ರ’ಗಳನ್ನು ಘೋಷಿಸಲು ಮುಂದಾಗಿರುವುದು ನಿಜವಾಗಲು ಕಿಡಿಗೇಡಿತನ……

ಕಾರ್ನಾಡ್‍ರವರು “ಈ ದತ್ತ ಜಯಂತಿ, ದತ್ತಮಾಲೆ, ಇವ್ಯಾವೂ ನಮ್ಮ ಸಂಸ್ಕೃತಿಯಲ್ಲಿಲ್ಲ, ಇವುಗಳ ಆಚರಣೆಯ ಹಿಂದೆ ಇರುವುದು ಧರ್ಮವಲ್ಲ, ಬದಲಾಗಿ ಧರ್ಮದ ಹೆಸರಿನಲ್ಲಿ ರಾಜಕಾರಣ. ನಾಥ ಪಂಕ್ತಿಗೆ ಸೇರಿದ್ದ ದತ್ತಾತ್ರೇಯ ಜಾತಿ ಪದ್ದತಿಯನ್ನು ತಿರಸ್ಕರಿಸಿದ್ದರೂ, ಆತನನ್ನು ಬ್ರಾಹ್ಮಣೀಕರಿಸುತ್ತಿರುವುದರಲ್ಲ ಹಿಂದಿನ ಸಂಚು ಅರ್ಥೈಸುವುದು ಸುಲಭ” ಎಂದು ಲೇವಡಿ ಮಾಡಿದರು.

ಈ ‘ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ’ಕ್ಕೆ ತನ್ನದೇ ಇತಿಹಾದವಿದೆ. ಅರೆಬಿಯಾದಿಂದ ಚಂದ್ರ ದ್ರೋಣ ಪರ್ವತಕ್ಕೆ ಬಂದ ದಾದಾ ಹೈಯತ್ ಇಲ್ಲಿನ ಪಾಳೆಗಾರರ ದಬ್ಬಾಳಿಕೆಯಡಿ ನರಳುತ್ತಿದ್ದ ಶೂದ್ರರಿಗೂ, ದೀನ ದಲಿತ ವರ್ಗಕ್ಕೂ ಸಹಾಯ ಮಾಡಿ ಅವರ ಮೆಚ್ಚುಗೆಯನ್ನು ಗಳಿಸಿದರು. ದಾದಾ ಹೈಯತ್‍ನ ಪ್ರೀತಿ, ದಯೆ ಮತ್ತು ಸೈರಣೆಯನ್ನು ಕಂಡು ಹಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ, ಇನ್ನು ಹಲವರು ತಮ್ಮ ಪುರಾತನ ಧರ್ಮವನ್ನು ತ್ಯಜಿಸದೇ, ದಾದಾ ಹೈರತ್‍ನನ್ನು ದತ್ತಾತ್ರೇಯನ ಅವತಾರವೆಂದೇ ಭಾವಿಸಿ ಆತನ ಭಕ್ತಾಧಿಗಳಾದರು. ಇದಕ್ಕೆ ಕಾರಣವೂ ಇತ್ತು. ಹಿಂದೂ ಪುರಾಣಗಳಲ್ಲಿ ವಿಷ್ಣು ದತ್ತಾತ್ರೇಯನ ಅವತಾರವನ್ನು ತಾಳಿ ಜನರನ್ನು ದಾಸ್ಯದಿಂದ ಪಾರು ಮಾಡುತ್ತಾನೆಂದು ಹೇಳಲಾಗಿದೆ. ಆದ್ದರಿಂದಲೇ ಹಿಂದೂ ಭಕ್ತಾದಿಗಳು ದಾದಾ ಹೈರತ್‍ನಲ್ಲಿ ದತ್ತಾತ್ರೇಯನನ್ನೇ ಕಂಡು ಆತನಿಗೆ ಹಿಂದೂ ಹೆಸರಿಟ್ಟು ಪುನರ್ ನಾಮಕರಣ ಮಾಡಿದರು. ಓರ್ವ ಮುಸ್ಲಿಂ ಸೂಫಿ ಸಂತನಿಗೆ ಆಗೆಲ್ಲ ಹಿಂದೂ ಹೆಸರನ್ನಿಡುವುದು ಸಾಮಾನ್ಯವಾಗಿತ್ತು. ಉದಾಹರಣೆಗೆ: ಬಿಜಾಪುರದ ಸೂಫಿ ಸಂತ ಖ್ವಾಜ ಅಮಿನುದ್ದೀನ್ ಅಲ್ಲಾನನ್ನು ಹಿಂದೂ ಭಕ್ತಾದಿಗಳು ಬ್ರಹ್ಮಾನಂದಯಿಕೆ ಸ್ವಾಮಿ ಎಂದೂ, ತಿಥಿನಿಯ ಮೊಯಿದ್ದೀನ್ ಅವರನ್ನು ಮುನಿಯಪ್ಪರೆಂದೂ ‘ಹಿಂದೂ’ಕರಿಸಲಾಗಿತ್ತು.

ಅಂತೂ ಚಿಕ್ಕಮಗಳೂರನ್ನು ತಲುಪಿದೆವು. ಅಲ್ಲಿ ನಮಗಾಗಿ ಹಲವರು ಕಾದಿದ್ದರು. ಅನೇಕ ಸಂಘಗಳಿಗೆ ಸೇರಿದ್ದ ಅವರೆಲ್ಲಾ ಎಂತಹ ಉತ್ಸಾಹಿ ತರುಣರೆಂದರೆ, ನಾಲ್ಕೈದು ವರ್ಷಗಳ ಕಾಲ ಅವರೆಲ್ಲಾ ಚಿಕ್ಕಮಗಳೂರಿನ ಆಸುಪಾಸಿನಲ್ಲಿ ಸಂಘ ಪರಿವಾರದ ಷಡ್ಯಂತ್ರದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.

ಬಾಬಾಬುಡನ್‍ಗಿರಿಯಲ್ಲಿರುವ ಪೀಠಕ್ಕೆ ಭೇಟಿನೀಡಿ, ಅಲ್ಲಿನ ಶಾಖಾದ್ರಿಯವರನ್ನು ಮಾತನಾಡಿಸಿ, ಇತ್ತೀಚೆಗೆ ಗಿರಿಗೆ ಹೋಗಿದ್ದ ಮಂಗ ಪರಿವಾರದವರು ಅಲ್ಲಿ ನಾಶ ಮಾಡಿದ್ದ ಮುಸ್ಲಿಮರ ಹೋಟೆಲುಗಳನ್ನು, ಮುಸ್ಲಿಂ ಗುರುಗಳೊಬ್ಬರ ಗೋರಿಯ ಮೇಲಿರುವ ಹರಕೆಯ ಮರದ ಕೊಂಬೆಯನ್ನು ಕಡಿದು ಹಾಕಿರುವುದನ್ನೂ ಪರಿಶೀಲಿಸಿದೆವು.

ಚಿಕ್ಕಮಗಳೂರಿಗೆ ಹಿಂದಿರುಗಿದ ನಂತರ ಒಂದು ಪತ್ರಿಕಾಗೋಷ್ಠಿ. “ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದು ಎಂದರೇನು? ಗುಜರಾತ್, ಅಯೋಧ್ಯೆ ನಮಗೆ ಯಾಕೆ, ಯಾವಾಗ ಮಾದರಿಯಾದವು? ನಮಗೆ ನಮ್ಮದೇ ಮಾದರಿ, ಪರಂಪರೆಗಳಿಲ್ಲವೆ?” ಕಾರ್ನಾಡ್‍ರವರಿಂದ ಪ್ರಶ್ನೆ. “ನಮ್ಮ ಮಾರ್ಗದರ್ಶಕರು ಬಸವಣ್ಣ, ಕುವೆಂಪು ಅಂಥವರೇ ವಿನಃ ತೊಗಾಡಿಯಾ, ಮೋದಿ ಅಂಥವರಲ್ಲ,” ಮರುಳು ಸಿದ್ದಪ್ಪನವರಿಂದ ಸ್ಪಷ್ಟನೆ. “ನ್ಯಾಯಾಲಯದ ತೀರ್ಪಿನ ಪ್ರಕಾರ 1975ರ ಹಿಂದಿನ ಸ್ಥಿತಿಯನ್ನೇ ಗಿರಿಯ ಮೇಲೆ ಸ್ಥಾಪಿಸಬೇಕು” ಎಂಬುದು ನಮ್ಮೆಲ್ಲರ ಒತ್ತಾಯ.

ಪತ್ರಿಕಾಗೋಷ್ಠಿಯ ನಂತರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್‍ರವರೊಂದಿಗೆ ಭೇಟಿ. “ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಗಿರಿಯ ಮೇಲ ಹೋಮ ನಡೆಸಲು ಯಾಕೆ ಅನುಮತಿ ನೀಡಿದಿರಿ?” ಎಂದು ಕಾರ್ನಾಡ್ ಕೇಳಿದರೆ ಆ ಅಧಿಕಾರಿಯಿಂದ ಬಂದ ಉತ್ತರ “75ರ ಹಿಂದೆಯೂ ಅಲ್ಲಿ ಹೋಮ ಮಾಡಲಾಗುತ್ತಿತ್ತು” ಇದಕ್ಕೆ ಯಾವ ದಾಖಲೆ ಇದೆ ತೋರಿಸಿ,” ಎಂದು ಮರುಪ್ರಶ್ನಿಸಿದರೆ ಆತನಲ್ಲಿ ಯಾವ ಉತ್ತರವೂ ಇಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here