ಸಂತಾಲರ ಹಳ್ಳಿಯಲ್ಲಿ

| ಹಾಸುಹೊಕ್ಕು – ರಹಮತ್ ತರೀಕೆರೆ |

ಇದು ಎಲ್ಲ ಬಂಗಾಳಿ ಹಳ್ಳಿಗಳ ಅನುಭವವಲ್ಲ. ಶಾಂತಿನಿಕೇತನದಿಂದ ಬಹಳ ದೂರ ಇರುವ ಕೊಂಕಳಿತಲಾ ಎಂಬ ಹಳ್ಳಿಯಲ್ಲಿ ನನಗೆ ಬೇರೆಯೇ ಅನುಭವವಾಯಿತು. ಶಿವನು ದಾಕ್ಷಾಯಣಿಯ ಶವವನ್ನು ಹೊತ್ತು ಹೋಗುತ್ತಿದ್ದಾಗ ಆಕೆಯ ಕಂಕಾಲಬಿದ್ದ ಊರಂತೆ ಅದು. ಬಂಗಾಳದಲ್ಲಿ ತಿರುಗುವಾಗ ಎದ್ದುಕಾಣುವಂತೆ ಇಲ್ಲೂ ಊರುಮಗ್ಗುಲಿಗೆ ಇರುವ ಪುಟ್ಟಪುಟ್ಟ ಕೊಳ (ಫುಕೂರ್)ಗಳು; ತಮ್ಮ ಮೈತುಂಬ ಬೆರಣಿಯನ್ನು ತಟ್ಟಿಸಿಕೊಂಡು, ಮೆಡಲುಗಳನ್ನು ಎದೆಮೇಲೆ ಹಚ್ಚಿಕೊಂಡ ಮೇಜರನಂತೆ ಕಾಣುವ ತಾಳೆಮರಗಳ ಸಾಲು; ಭತ್ತ ಒಕ್ಕಲು ಮಾಡುವ ಜನ…

ಹತ್ತು ವರ್ಷಗಳ ಕೆಳಗೆ ಕೊಲ್ಕತ್ತಾದಲ್ಲಿದ್ದ ಮಿತ್ರರಾದ ದಿ.ಕುಮಾರಪ್ಪನವರ ಆಹ್ವಾನದ ಮೇರೆಗೆ ಹೋಗಿ, ಅವರೊಟ್ಟಿಗೆ ಬಂಗಾಳವನ್ನು ಎರಡು ವಾರಗಳಷ್ಟು ತಿರುಗಾಟ ಮಾಡಿದೆ. ಹರಟೆಯ ಕಾಲದಲ್ಲಿ ಕುಮಾರಪ್ಪನವರು ಬಂಗಾಳಿಗಳನ್ನು `ಥೋಥೋ! ಸೋಮಾರಿಗಳು ಕಣ್ರೀ. ಗಂಟೆ ಕೆಲಸಾನ ಮೂರು ದಿನ ಮಾಡ್ತಾರೆ. ರಾತ್ರಿ ಹತ್ತು ಗಂಟೆಗೆ ಅಡುಗೆ ಶುರು ಮಾಡ್ತಾರೆ. ದಿನಾ ಮಾರ್ಕೆಟ್ಟಿಗೆ ಹೋಗಿ ಎರಡು ಬದನೆಕಾಯಿ ಹಿಡಿದುಕೊಂಡು ಬರೋದನ್ನು ಘನಕಾರ್ಯದಂತೆ ಮಾಡ್ತಾರೆ’ ಎಂದೆಲ್ಲ ಟೀಕಿಸುತ್ತಿದ್ದರು. ನನಗೆ ಇಷ್ಟೊಂದು ಜನ ಬುದ್ಧಿಜೀವಿಗಳನ್ನು ಕವಿಗಳನ್ನು ಸಿನಿಮಾ ನಿರ್ದೇಶಕರನ್ನು ಸಂಗೀತಗಾರರನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತಕ್ಕೆ ಕೊಟ್ಟಿರುವ ಬಂಗಾಳದ ಬಗ್ಗೆ ಇವರು ಹೀಗೆ ಹೇಳುತ್ತಿದ್ದಾರಲ್ಲ ಎಂದು ಶಂಕಾಸ್ಪದವಾಗಿ ಕೇಳಿಸಿಕೊಳ್ಳುತ್ತಿದ್ದೆ. ಕುಮಾರಪ್ಪ ಹೇಳುತ್ತಿರುವುದು ಬಹುಶಃ ಕೊಲ್ಕತ್ತೆಯ ಮಧ್ಯಮವರ್ಗದ ಬಂಗಾಳಿಗಳ ದೈಹಿಕ ಶ್ರಮವನ್ನು ಕುರಿತ ಆಲಸ್ಯ ಇರಬಹುದು. ಅದರಲ್ಲೂ ಊಳಿಗಮಾನ್ಯ ವ್ಯವಸ್ಥೆಯಲ್ಲಿದ್ದವರಿಗೆ `ವಿರಾಮ’ ಸಿಗುವುದು ಸಹಜ. ಟಾಗೂರರು ತಮ್ಮ ಮನೆಯಲ್ಲಿ ಹತ್ತಾರು ಆಳುಕಾಳು ಕೆಲಸ ಮಾಡುವ ಚಿತ್ರಗಳನ್ನು ಕೊಡುತ್ತಾರೆ. ಆದರೆ ಈ ವಿರಾಮಸ್ಥಿತಿಯೆ ಬಂಗಾಳಿಗಳನ್ನು ಬೌದ್ಧಿಕವಾಗಿ ಚಿಂತಿಸುವ ಬುದ್ಧಿವಂತ ಜನಾಂಗ ಮಾಡಿರಬಹುದೇ? ಈ `ಭದ್ರಲೋಗ್’ ವರ್ಗದವರೂ ತಮ್ಮ ವಿರಾಮದಲ್ಲಿ ಸಾಹಿತ್ಯ ಕಲೆ ಚಿಂತನೆ ತತ್ವಶಾಸ್ತ್ರಗಳಲ್ಲಿ ಕೆಲಸ ಮಾಡಿದ್ದನ್ನು ಹೇಗೆ ಮರೆಯುವುದು? ಆದರೆ ಚಹತೋಟಗಳಲ್ಲಿ ಹೊಲಗದ್ದೆಗಳಲ್ಲಿ ಮನೆಹಿತ್ತಲುಗಳಲ್ಲಿ ಇರುವೆಗಳಂತೆ ನಿರಂತರ ದುಡಿಮೆಯಲ್ಲಿ ತೊಡಗಿರುವ ಬಂಗಾಳಿಗಳನ್ನು ನಾನು ಹಳ್ಳಿಗಳಲ್ಲಿ ಕಾಣುತ್ತಿದ್ದೆ. ಸದಾ ಕೆಲಸ ಮಾಡುವ ಗ್ರಾಮೀಣ ರೈತಾಪಿ ಮನೆಯಿಂದ ಹೋದ ಕುಮಾರಪ್ಪ ಬಂಗಾಳವನ್ನು ಗ್ರಹಿಸುವಲ್ಲಿ ಎಡವಟ್ಟು ಮಾಡಿಕೊಂಡಿರಬಹುದು ಅನಿಸಿತು.

ಅವರನ್ನು ಬಿಟ್ಟು ನಾನು ಕಲ್ಕತ್ತೆಯಿಂದ ದೂರದಲ್ಲಿರುವ ಟಾಗೂರರು ಕಟ್ಟಿದ `ಶಾಂತಿನಿಕೇತನ’ ನೋಡಲು ಹೋದೆ. ಅಲ್ಲಿದ್ದಾಗ ಸಮೀಪದ ಯಾವುದಾದರೂ ಒಂದು ಬಂಗಾಳದ ಹಳ್ಳಿಯನ್ನು ನೋಡಲು ಇಚ್ಛಿಸಿದೆ. ಅಲ್ಲಿದ್ದವರು ಸಮೀಪದಲ್ಲಿದ್ದ ಎರಡು ಹಳ್ಳಿಗಳನ್ನು ಸೂಚಿಸಿದರು. ಒಂದು ಗೋಲ್‍ಪಾಡ-ಎಲ್ಲ ಜಾತಿಯ ಬಂಗಾಳಿಗಳಿದ್ದ ಸಾಂಪ್ರದಾಯಿಕ ಹಳ್ಳಿ. ಇನ್ನೊಂದು ತುಸು ದೂರದಲ್ಲಿದ್ದ ಬಂಡ್ಲೂಡಂಗ್. ಸಂತಾಲಿ ಬುಡಕಟ್ಟಿನವರಿದ್ದ ಹಾಡಿ. ಇದನ್ನು ತಲುಪಲು ಒಂದು ಸಣ್ಣಹೊಳೆಯನ್ನು ದಾಟಿ ಹೋಗಬೇಕಿತ್ತು. ಗೋಲಪಾಡ ವಿಶ್ವವಿದ್ಯಾಲಯಕ್ಕೆ ಸಮೀಪವಿದ್ದು ಆಧುನಿಕತೆಗೆ ತನ್ನನ್ನು ತೆರೆದುಕೊಂಡಿತ್ತು. ಬಂಡ್ಲೂಡಂಗ್ ತನ್ನ ಪಾರಂಪರಿಕ ರಚನೆಯನ್ನು ಉಳಿಸಿಕೊಂಡಂತೆ ತೋರಿತು. ಬಾಡಿಗೆ ಮಾಡಿಕೊಂಡು ಬಂದಿದ್ದ ಸೈಕಲ್‍ರಿಕ್ಷಾವನ್ನು ಊರ ಹೊರಗೆ ನಿಲ್ಲಿಸಿ ನಾನೂ ಹಾಡಿಯೊಳಗೆ ಹೋದೆ. ಅದಕ್ಕೆ ಇದ್ದುದು ಒಂದೇ ಬೀದಿಗಳು. ಹತ್ತು ನಿಮಿಷದಲ್ಲಿ ಹೊಕ್ಕು ಬಂದೆ.

ನಾನು ಹೋದಾಗ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿತ್ತು. ಯಾರೂ ನನ್ನನ್ನು ದೂರದಿಂದ ಬಂದ ಸುಂದರಾಂಗ ಜಾಣ ಎಂದು ಕರೆದು ಕೂರಿಸಲಿಲ್ಲ. ಮಾತ್ರವಲ್ಲ, ಯಾರೀ ಹೊಸಬ ಎಂದು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕರೆಸಿಕೊಳ್ಳದೆ ಯಾರದಾದರೂ ಮನೆಯೊಳಗೆ ಹೋದಾಗ, ಅವರು ಸುಮ್ಮನೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುವಾಗ ಆಗುವ ಮುಜುಗರ ಆಗುತ್ತಿತ್ತು. ಈ ಮುಜುಗರಕ್ಕೆ ನಾನು ಅರ್ಹನಾಗಿದ್ದೆ. ಯಾಕೆಂದರೆ, ನನ್ನ ತಿರುಗಾಟವು, ಅಪರಿಚಿತ ನಗರದ ಬೀದಿಯಲ್ಲಿ ಅಜ್ಞಾತನಾಗಿ ತಿರುಗುವವರಿಗಿಂತ ಬೇರೆಯಾಗಿರಲಿಲ್ಲ. ಅದು ಅಚ್ಚರಿ ಕುತೂಹಲದಿಂದ ಕೂಡಿದ ಪಕ್ಕಾ ಪ್ರವಾಸಿಗ ನೋಟ. ಕೆಲವೊಮ್ಮೆ ಈ ನೋಟವು ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡುವ ಪರಿಗಿಂತ ಭಿನ್ನವಾಗಿರುವುದಿಲ್ಲ. ಅಲ್ಲಿದ್ದ ಯಾರ ಜತೆಗೂ ನನಗೆ ಅರ್ಥಪೂರ್ಣ ಮಾತುಕತೆ ಸಾಧ್ಯವಾಗಲಿಲ್ಲ. ಒಂದು ಭಾಷೆಯ ತೊಡಕಾದರೆ, ಇನ್ನೊಂದು ನನ್ನ ನೋಟಕ್ರಮದ ತೊಡಕು.

ಕಷ್ಟಪಟ್ಟು ಒಬ್ಬ ಮುದುಕಿಯ ಹತ್ತಿರ ಮಾತಾಡಿದೆ- ಹಿಂದಿಯಲ್ಲಿ. ನಾನು ಹೇಳಿದ್ದು ಅವಳಿಗೂ ಅವಳು ಹೇಳಿದ್ದು ನನಗೂ ಅರ್ಥವಾಗಲಿಲ್ಲ. ಆಕೆಗೆ ಸಂತಾಲಿ ಬಿಟ್ಟು ಬೇರೆ ನುಡಿ ಗೊತ್ತಿರಲಿಲ್ಲ. ಮುಂದೆ ಒಬ್ಬ ಮಧ್ಯವಯಸ್ಕ, ಚಕ್ರ ತಿರುಗಿಸುವ ಕತ್ತಿಯಲ್ಲಿ ಹುಲ್ಲನ್ನು ಕತ್ತರಿಸಿ ದನಕ್ಕೆ ಹಾಕುತ್ತಿದ್ದ. ಮಾತಾಡಲು ಯತ್ನಿಸಿದೆ. ಅವನಿಗೆ ಬಂಗಾಳಿ ಮತ್ತು ಸಂತಾಲಿ ಬಿಟ್ಟರೆ ಬೇರೆ ಭಾಷೆ ಗೊತ್ತಿರಲಿಲ್ಲ. ಮುಂದೆ ಬರಲು, ಇಬ್ಬರು ತರುಣರು ಬೀದಿಯಲ್ಲಿ ಬೃಹದಾಕಾರವಾಗಿದ್ದ ಒಂದು ಪಣತಕ್ಕೆ ಭತ್ತ ತುಂಬುತ್ತಿದ್ದರು. ಅವರ ಜತೆ ಮಾತಾಡಲು `ಬಾಂಗ್ಲಾಮೆ ಬೋಲೊ’ ಎಂದು ಹೇಳಿದರು. ಅವರಿಗೆ ಬಹುಶಃ ಅರ್ಧಂಬರ್ಧ ಹಿಂದಿ ತಿಳಿಯುತ್ತಿತ್ತು. ಆದರೆ ಮಾತುಕತೆಗೆ ಬೇಕಾದಷ್ಟು ಗೊತ್ತಿರಲಿಲ್ಲ. ಮುಖ್ಯವಾಗಿ ಕೆಲಸದಲ್ಲಿ ಮಗ್ನರಾಗಿದ್ದ ಅವರು ನನ್ನನ್ನು ದೂರ ಅಟ್ಟಲು ಹೀಗೆ ಉಪಾಯದಿಂದ ಹೀಗೆಂದಿರಬೇಕು. ಬಹುಶಃ ಶಾಂತಿನಿಕೇತನಕ್ಕೆ ಬರುವ ವಿದ್ವಾಂಸರು ಸಂತಾಲರನ್ನು ನೋಡಲು ಬಂದುಹೋಗಿ ಅವರಿಗೆ ಸಾಕು ಮಾಡಿರಬೇಕು. ನಾನು ಅವರ ಮೌನ ಮತ್ತು ನಿರಾಸಕ್ತಿಯಿಂದ, ತಮಾಶೆಯ ವಸ್ತುವಾಗಿಬಿಟ್ಟಿದ್ದೆ.

ಜಗತ್ತಿನ ಜ್ಞಾನದ ವಿನಿಮಯಕ್ಕೆಂದು ಟಾಗೂರರು ಸ್ಥಾಪಿಸಿದ ಶಾಂತಿನಿಕೇತನಕ್ಕೆ ಪಕ್ಕವಿದ್ದೂ ಬಂಡೂಡಂಗ್ಲ ಹೆಚ್ಚಿನ ಪರಿವರ್ತನೆ ಪಡೆದಿರಲಿಲ್ಲ. ಹಾಗೆಂದು ಅಲ್ಲಿನ ಜನ ಬಡವರಲ್ಲ. ಮೈಕೈ ನೋಡಿದರೆ ತುಂಬಿಕೊಂಡಿತ್ತು. ಒಳ್ಳೆಯ ಭತ್ತ ಬೆಳೆಯುತ್ತಿದ್ದರು. ಆಧುನಿಕತೆಯ ವಿರೋಧಿಗಳಾಗಿರಲಿಲ್ಲ. ಭತ್ತ ಒಕ್ಕಲು ಮಾಡಲು ಯಂತ್ರವನ್ನು ಬಳಸುತ್ತಿದ್ದರು. ಊರಿಗೆ ವಿದ್ಯುತ್ ಬಂದಿತ್ತು. ಆದರೆ ಗೋಲಪಾಡದಲ್ಲಿರುವಷ್ಟು ಆಧುನಿಕ ಶಿಕ್ಷಣವನ್ನು ಅವರು ಪಡೆದಂತೆ ತೋರಲಿಲ್ಲ. ಸಂತಾಲರನ್ನು ನಾನು ತಿರುಗಾಡಿದ ಬಹುತೇಕ ಜಿಲ್ಲೆಗಳಲ್ಲಿ ನೋಡುತ್ತಿದ್ದೆ. ಅವರು ರೈಲಿಗೆ ಗುಂಪಾಗಿ ಏರುತ್ತಿದ್ದರು. ನೆಲದಮೇಲೆ ಸೀಟಿನಮೇಲೆ ಕುಳಿತು ಮಧುರವಾಗಿ ಹಾಡುತ್ತಿದ್ದರು. ನಾನು ನನ್ನ ಜಾಗಬಿಟ್ಟು ಅವರಲ್ಲಿ ನಿಂತು ಹಾಡನ್ನು ಆಲಿಸುತ್ತಿದ್ದೆ. ಒಬ್ಬ ಗಾಯಕನ ಫೋಟೊ ತೆಗೆದುಕೊಳ್ಳಲು ಅನುಮತಿ ಕೇಳಿದೆ. ಕಟುವಾಗಿ `ನ’ ಎಂದನು. ಕ್ಯಾಮೆರಾ ಕಂಡರೆ ಸಂಭ್ರಮದಿಂದ ಪೋಸುಕೊಡುವ ಹಳ್ಳಿಗರನ್ನು ಕಂಡಿರುವ ನನಗೆ ಅವನ ತಿರಸ್ಕಾರದಿಂದ ಪೆಚ್ಚಾಯಿತು. ಆದರೆ ಆದರ ಮೂಡಿತು.

ಇದು ಎಲ್ಲ ಬಂಗಾಳಿ ಹಳ್ಳಿಗಳ ಅನುಭವವಲ್ಲ. ಶಾಂತಿನಿಕೇತನದಿಂದ ಬಹಳ ದೂರ ಇರುವ ಕೊಂಕಳಿತಲಾ ಎಂಬ ಹಳ್ಳಿಯಲ್ಲಿ ನನಗೆ ಬೇರೆಯೇ ಅನುಭವವಾಯಿತು. ಶಿವನು ದಾಕ್ಷಾಯಣಿಯ ಶವವನ್ನು ಹೊತ್ತು ಹೋಗುತ್ತಿದ್ದಾಗ ಆಕೆಯ ಕಂಕಾಲಬಿದ್ದ ಊರಂತೆ ಅದು. ಬಂಗಾಳದಲ್ಲಿ ತಿರುಗುವಾಗ ಎದ್ದುಕಾಣುವಂತೆ ಇಲ್ಲೂ ಊರುಮಗ್ಗುಲಿಗೆ ಇರುವ ಪುಟ್ಟಪುಟ್ಟ ಕೊಳ (ಫುಕೂರ್)ಗಳು; ತಮ್ಮ ಮೈತುಂಬ ಬೆರಣಿಯನ್ನು ತಟ್ಟಿಸಿಕೊಂಡು, ಮೆಡಲುಗಳನ್ನು ಎದೆಮೇಲೆ ಹಚ್ಚಿಕೊಂಡ ಮೇಜರನಂತೆ ಕಾಣುವ ತಾಳೆಮರಗಳ ಸಾಲು; ಭತ್ತ ಒಕ್ಕಲು ಮಾಡುವ ಜನ; ಕಲ್ಲಿದ್ದಲ ಪುಡಿಗೆ ಮಣ್ಣುಸೇರಿಸಿ ಕಜ್ಜಾಯದಂತೆ ಉಂಡೆಕಟ್ಟಿ ಒಣಗಿಸುವ ಗಿರಣಿಗಳು. ಜನ ಬಂಗಾಳಿಯಲ್ಲದ ನನ್ನೊಂದಿಗೆ ಪ್ರೀತಿಯಿಂದ ಮಾತಾಡಿದರು. ಊರಿನ ಚರಿತ್ರೆ-ದೇವಿಯ ಮಹಿಮೆ ಹೇಳಿದರು. ಭಕ್ತರು ಬಂದು ಹೋಗುವ ಈ ಜನಕ್ಕೆ ಹೊರಗಿನವರ ಬಳಕೆ ಅಭ್ಯಾಸವಾಗಿದೆ. ಸಂತಾಲರು ನಾಗರಿಕರನ್ನು ನೋಡುವ ಬಿಗಿತನ ಇರಲಿಲ್ಲ. ಸಂತಾಲರೇಕೆ ಹೀಗೆ? ತಮ್ಮನ್ನು ಅಧ್ಯಯನಕಾರರು ಅಧ್ಯಯನದ ವಸ್ತುಗಳಂತೆ ನೋಡುವುದು ಅವರಿಗೆ ತಿರಸ್ಕಾರ ಹುಟ್ಟಿಸಿರಬೇಕು. ಅಧ್ಯಯನಕಾರರು ತಮ್ಮ ದೇಶದಲ್ಲೆ ತಮ್ಮ ಸಮಾಜದಲ್ಲೇ ಪರಕೀಯರಾಗುವ ವಿಚಿತ್ರ ಬಗೆಯಿದು. ಈ ಸಮಸ್ಯೆಯ ಮೂಲ ಎಲ್ಲಿದೆ? ಅವರ ಅಧ್ಯಯನದ ವಿಧಾನದಲ್ಲೇ ಇರುವ ಪರಕೀಯತನದಲ್ಲೇನು? ನನ್ನ ಮನಶ್ಶಾಂತಿ ಕದಡಿಹೋಗಿತ್ತು.

ಬಂಡ್ಲೂಡಂಗ್ ಬಿಟ್ಟು ಶಾಂತಿನಿಕೇತನಕ್ಕೆ ಮರಳಿದೆ. ಬರುತ್ತ ಅಡ್ಡಸಿಕ್ಕ ಹೊಳೆಯಲ್ಲಿ ಇಳಿದು ಕೈಕಾಲು ಮುಖ ತೊಳೆದುಕೊಂಡೆ. ಹೊಳೆಯ ಮೊಳಕಾಲುದ್ದದ ನೀರಲ್ಲಿ ಸರಸ್ವತಿಯದೊ ದುರ್ಗೆಯದೊ ವಿಸರ್ಜಿಸಿದ ಕಂಕಾಲವಿತ್ತು. ಬಿದಿರ ತಡಿಕೆಯಲ್ಲಿ ಅಸ್ಥಿಪಂಜರ ಮಾಡಿ, ಬತ್ತದ ಹುಲ್ಲನ್ನು ತುರುಕಿ, ಮೇಲೆ ಮಣ್ಣನ್ನು ಸಾರಿಸಿ ನಿರ್ಮಿಸಿದ್ದ ಪುತ್ಥಳಿಯನ್ನು, ಉತ್ಸವ ಮುಗಿದ ಬಳಿಕ ವಿಸರ್ಜಿಸಿ ಹೋಗಿದ್ದರು. ಅದನ್ನು ಮುಳುಗಿಸುವಷ್ಟು ನೀರಿರದ ಕಾರಣ, ಕೆಳಭಾಗದ ಮಣ್ಣುಬಣ್ಣವೆಲ್ಲ ಹೋಗಿ, ಹುಲ್ಲು ಮತ್ತು ಬಿದಿರಕಡ್ಡಿ ಕಾಣಿಸುತ್ತಿದ್ದವು. ನೀರು ಹರಿಯುತ್ತಿತ್ತು. ತಾವೇ ಮಾಡಿದ ವಿಗ್ರಹವನ್ನು ಭಕ್ತಿಯಿಂದ ಪೂಜಿಸಿ ಉತ್ಕಟವಾಗಿ ಕುಣಿದು ಅದರ ಜತೆ ಸಂಬಂಧವಿಲ್ಲದಂತೆ ವಿಸರ್ಜಿಸಿಹೋಗುವ ಈ ಪರಿ ಸೋಜಿಗ ತಂದಿತು. ಬುಡಕಟ್ಟುಗಳನ್ನು ತನ್ನ ತಿಳಿವಿಗಾಗಿ ಅಧ್ಯಯನ ಮಾಡುವ ನಾಗರಿಕ ಲೋಕವು, ತನ್ನ ಕೆಲಸವಾದ ಬಳಿಕ ಸಂಬಂಧ ಕಡಿದುಕೊಳ್ಳುವುದು ಹೀಗೇಯೇನು? ಅಧ್ಯಯನದ `ವಸ್ತು’ವಾಗುವ, ಯಾವುದೇ ಜೀವಂತ ಸಮುದಾಯವು, ತನ್ನ ದೈನಿಕ ಬದುಕಿನ ಲಯದಲ್ಲಿ ಮಗ್ನವಾಗಿರುವಾಗ, ಕುತೂಹಲಿಗಳಾಗಿ ಬಂದವರಿಗೆಲ್ಲ ಭಾವನಾತ್ಮಕವಾಗಿ ಮಿಡಿಯಬೇಕು ಎಂದು ನಿರೀಕ್ಷಿಸುವುದೇ ಸರಿಯಲ್ಲ. ಕುಮಾರಪ್ಪ ಬಂಗಾಳದಲ್ಲಿ ಮೂರು ದಶಕವಿದ್ದರೂ, ಬಂಗಾಳಿಗಳ ಬಗ್ಗೆ ಸೋಮಾರಿಗಳು ಎಂದಿದ್ದು ಕೂಡ, ಇಂಥ ಪರಕೀಯ ನೆಲೆಯಿಂದ ಹುಟ್ಟಿದ ನಿಲುವಿನಿಂದಲೇ ಇರಬೇಕು. ಯಾವುದೇ ನಾಡಿನ ಅಥವಾ ಸಮುದಾಯದ ಕಷ್ಟಸುಖದ ಭಾಗವಾಗದೆ, ಅವುಗಳ ಬದುಕಿನಲ್ಲಿ ಆಳವಾಗಿ ಬೆರೆಯದೆ ಅಧ್ಯಯನ ಮಾಡಿ ಸೃಷ್ಟಿಸುವ ತಿಳಿವಿಗೆ ಪರಕೀಯತೆಯ ಲೇಪ ಅಂಟುತ್ತದೆ. ವಸ್ತುವಿನಿಂದ ಇಲ್ಲವೇ ಸಮುದಾಯದ ಜೀವನಕ್ರಮದಿಂದ ವಿಮರ್ಶಾತ್ಮಕವಾದ ವೈಚಾರಿಕವಾದ ಅಂತರವನ್ನು ನಿರ್ಮಿಸಿಕೊಳ್ಳದೆ, ಜ್ಞಾನವನ್ನು ಸೃಷ್ಟಿಸಲಾಗದು. ಆದರೆ ಅಧ್ಯಯನ ಕಾಲದಲ್ಲಿ ಕಾದುಕೊಳ್ಳುವ ಈ ದೂರದೊಳಗೆ, ಬೆಸೆಯುವ ಜೈವಿಕ ತಂತುಗಳು ಇರದೆ ಹೋದರೆ, ಆ ಜ್ಞಾನವು ಅವರಿಗೆ ಪರಕೀಯವಾಗಿಯೇ ಉಳಿಯುತ್ತದೆ. ನನಗೆ ಸಂತಾಲರು ತೋರಿದ ಉದಾಸೀನವು ಅವರ ಸ್ವಾಭಿಮಾನದ ಕಾರ್ಯತತ್ಪರತೆಯ ಸಂಕೇತವೆನಿಸಿತು. ಮಾತ್ರವಲ್ಲ, ಸಮುದಾಯಗಳನ್ನು ನೋಡುವ ನಮ್ಮ ಕ್ರಮದಲ್ಲಿ, ವಿಶ್ವವಿದ್ಯಾಲಯಗಳು ಮಾಡುವ ಜ್ಞಾನಸೃಷ್ಟಿಯ ವಿಧಾನದಲ್ಲಿ ಇರುವ ಕಂದರವನ್ನು ಕೂಡ ಎತ್ತಿ ತೋರಿಸಿತು.

ಈ ಜ್ಞಾನೋದಯವು ನನಗೆ ಶಾಂತಿನಿಕೇತನದ ಭೂಮಿಯಲ್ಲಿ ಉಂಟಾಗಿದ್ದು ಒಂದು ಚಾರಿತ್ರಿಕ ವ್ಯಂಗ್ಯವಾಗಿತ್ತು. ಯಾಕೆಂದರೆ, ಪೂರ್ವದ ಭಾರತ ಮತ್ತು ಪಶ್ಚಿಮದ ಯೂರೋಪು ಚಾರಿತ್ರಿಕ ಕಾರಣದಿಂದ ಸಂಭವಿಸಿರುವ ಆಳುವ ಆಳಿಸಿಕೊಳ್ಳುವ ಈ ಕೃತಕ ವಿಭಜನೆಗಳ ಆಚೆಬಂದು, ಸಮಾನ ಸಮಾಜಗಳಾಗಿ ತಮ್ಮಲ್ಲಿರುವ ತಿಳಿವನ್ನು ವಿನಿಮಯ ಮಾಡಿಕೊಳ್ಳಬೇಕು ಎಂಬ ಆಶಯದಲ್ಲಿ ಟಾಗೂರರು ಶಾಂತಿನಿಕೇತನವನ್ನು ಕಟ್ಟಿದ್ದರು. ವಿಶ್ವವಿದ್ಯಾಲಯವನ್ನು ತಮಗೆ ಸಕಲ ಅನುಕೂಲಗಳೂ ಕೈಗೆಟುಕುವಂತಿದ್ದ ಕೊಲ್ಕತ್ತದಲ್ಲಿ ಸ್ಥಾಪಿಸದೆ, ಸಂತಾಲರ ಹಳ್ಳಿಗಳ ನಡುವೆ ಉದ್ದೇಶಪೂರ್ವಕ ಸ್ಥಾಪಿಸಿದ್ದರು. ಅವರಿಗೆ ಆಧುನಿಕ ಶಿಕ್ಷಣವನ್ನು ಕಲಿತವರು, ಸಾಂಪ್ರದಾಯಿಕ ಜೀವನ ಕ್ರಮದಲ್ಲಿರುವ ಸಮುದಾಯದಿಂದ ಕೃತಕ ಕಂದರ ಸೃಷ್ಟಿಸಿಕೊಳ್ಳಬಾರದು ಎಂಬ ಆಶಯವಿತ್ತು. ಎಂತಲೇ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಜನ ತಮ್ಮ ಹಾಡು ಕುಣಿತ ತಿಳಿವನ್ನು ಹಂಚಿಕೊಳ್ಳುವ ಹಬ್ಬಗಳನ್ನು ಏರ್ಪಡಿಸುತ್ತಿದ್ದರು. ಪ್ರಶ್ನೆಯೆಂದರೆ ಭಾರತದ ಆಧುನಿಕ ವಿಶ್ವವಿದ್ಯಾಲಯಗಳು ಈ ಕಂದರಗಳನ್ನು ದಾಟಿದವೇ? ಸಮುದಾಯದೊಂದಿಗೆ ಜೈವಿಕ ಸಂಬಂಧ ಪಡೆದವೇ? ಜನರನ್ನು ಭಾವನಾತ್ಮಕವಾದ ಸಂಗತಿಗಳ ಮೂಲಕ ಮತೀಯವಾದವು ವಶೀಕರಿಸಿಕೊಂಡು, ರಾಜಕೀಯ ಸಫಲತೆ ಪಡೆದಿರುವ ಈ ಕಾಲದಲ್ಲಿ, ಈ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಪರ್ಯಾಯವಾದ ರಾಜಕೀಯ ಸಾಂಸ್ಕೃತಿಕ ಆಶಯವನ್ನು ಸಾಕಾರಗೊಳಿಸಲು ಕೇವಲ ಬೌದ್ಧಿಕ ಚಟುವಟಿಕೆಗಳಿಗೆ ಸಾಧ್ಯವಿಲ್ಲ ಎಂಬ ಅರಿವಿನಲ್ಲೂ ಈ ಪ್ರಶ್ನೆಯನ್ನು ಎತ್ತಬೇಕಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here