Homeಅಂಕಣಗಳುಮುಗಿಯದ ಕೆಲಸ: ರಹಮತ್ ತರೀಕೆರೆಯ ಲೇಖನ

ಮುಗಿಯದ ಕೆಲಸ: ರಹಮತ್ ತರೀಕೆರೆಯ ಲೇಖನ

- Advertisement -
- Advertisement -

1992ರ ಬಳಿಕ, ಬಲಪಂಥೀಯ ರಾಜಕಾರಣವು, ಇಡೀ ದೇಶವನ್ನು ಆವರಿಸಿಕೊಳ್ಳುತ್ತಿದೆ ಎಂಬ ಸನ್ನಿವೇಶದಲ್ಲಿ, ಎಡ ಮತ್ತ ದಲಿತ ಚಳುವಳಿಗಳಲ್ಲಿ ಒಂದು ಹೊಸ ಚಿಂತನೆ ಜ್ಞಾನೋದಯ ರೂಪದಲ್ಲಿ ಕಾಣಿಸಿಕೊಂಡಿತು. ಅದೆಂದರೆ, ಮುಖ್ಯವಾಗಿ ಪಶ್ಚಿಮದ ವಿಚಾರವಾದವನ್ನು ಆಧರಿಸಿ ತರ್ಕದ ಬಲದಲ್ಲಿ ಹುಟ್ಟಿಕೊಂಡ ವೈಚಾರಿಕತೆಯನ್ನೂ ವಿಮೋಚನಾ ಚಳುವಳಿಗಳನ್ನು ತಾತ್ವಿಕವಾಗಿ ಮರುಪರಿಶೀಲಿಸಬೇಕು. ಅದರ ಯುದ್ಧತಂತ್ರಗಳನ್ನು ಮರುಸಂಯೋಜಿಸಬೇಕು. ಭಾರತದ ಬಹುಸಂಖ್ಯಾತ ಮಂದಿ ಮೂಲಭೂತವಾದಿಗಳಲ್ಲ, ಮತೀಯವಾದಿಗಳಲ್ಲ. ಆದರೆ ಧಾರ್ಮಿಕರು. ಅವರ ಜತೆಗಿನ ಸಾಂಗತ್ಯಕ್ಕಾಗಿ ಧರ್ಮವನ್ನು ಕುರಿತ ನಮ್ಮ ಗ್ರಹಿಕೆಯನ್ನು ಮರುಪರಿಶೀಲಿಸಬೇಕು. ಅದೊಂದು ಕೇಡಿನ ಲೋಕ ಸರಳೀಕೃತ, ಶುಷ್ಕ ಮತ್ತು ಜಡ ಗ್ರಹಿಕೆಯಿಂದ ಹೊರಬರಬೇಕು ಎನ್ನುವುದು. ಸಮುದಾಯದ ಜತೆ ಜೈವಿಕ ಸಂಬಂಧವನ್ನು ಪಡೆದುಕೊಳ್ಳಬೇಕು ಎನ್ನುವುದು ಈ ಚಿಂತನೆಯ ಸಾರವಾಗಿತ್ತು. ಜಾಗತೀಕರಣ ಕಾಲಘಟ್ಟದಲ್ಲಿ ಕಾರ್ಮಿಕ ಚಳುವಳಿಗಳಲ್ಲಿ ಉಂಟಾದ ಪಲ್ಲಟಗಳು ಕೂಡ ಹೊಸ ನುಡಿಗಟ್ಟನ್ನು ಹುಡುಕಿ ಕೊಳ್ಳಲು ಒತ್ತಾಸೆ ತಂದವು. ಮುಖ್ಯವಾಗಿ ಧರ್ಮ ಸಂಸ್ಕೃತಿಯ ಪರಿಕಲ್ಪನೆಗಳನ್ನು ಬಳಸುತ್ತ ಬಲಪಂಥೀಯ ರಾಜಕಾರಣವು ಸಾಧಿಸಿದ ದೊಡ್ಡ ಯಶಸ್ಸು ಈ ಪ್ರಶ್ನೆಗಳನ್ನು ತೀವ್ರಗೊಳಿಸಿತು.

ಸವಾಲೆಂದರೆ, ಪಾರಂಪರಿವಾದ ಧರ್ಮ, ಸಂಸ್ಕøತಿಗಳ ಲೋಕವನ್ನು ಪ್ರವೇಶಿಸುವುದು ಮತ್ತು ಬೇರುಬಿಡುವುದು, ಅಲ್ಲಿ ಸಮಾಜವಾದಿ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಬಿತ್ತುವುದು ಹಾಗೂ ಜನಸಮುದಾಯಗಳಲ್ಲಿ ಇರುವ ಪಾರಂಪರಿಕವಾದ ಸಮಾಜವಾದಿ ಕಾಣ್ಕೆಗಳನ್ನು ಪಡೆದುಕೊಂಡು ಬೆಳೆಯುವುದು ಹೇಗೆ ಎನ್ನುವುದು? ಜನಸಮುದಾಯಗಳು ಕಟ್ಟಿಕೊಂಡಿರುವ ಸಾಂಸ್ಕøತಿಕ ಪರಂಪರೆಗಳ ಭಾಗವಾಗುವುದು ಹೇಗೆ? ಸಾಂಸ್ಕøತಿಕ ರಾಜಕಾರಣದ ಈ ಪ್ರಶ್ನೆಗಳಿಗೆ ಸರಳವಾದ ಉತ್ತರವಾಗಲಿ, ಸಿದ್ಧವಾದ ಹಾದಿಗಳಾಗಲಿ ಇರಲಿಲ್ಲ. ಆದರೆ ಈ ದಿಸೆಯಲ್ಲಿ ಅನೇಕ ಪ್ರಯೋಗಗಳು ನಡೆದವು. ಇದನ್ನು ಹೊಸ ವೈಚಾರಿಕತೆಯ ಮತ್ತು ಹೊಸ ಚಳುವಳಿ ನುಡಿಗಟ್ಟಿನ ಹುಡುಕಾಟ ಎಂದು ಕರೆಯಬಹುದು.

ಈ ಯತ್ನವನ್ನು ಮೊದಲು ಆರಂಭಿಸಿದ್ದು ದಲಿತ ಚಳುವಳಿ. ದಲಿತ ಚಳುವಳಿಯ ಮೊದಲ ಘಟ್ಟದ ನಾಯಕರು, 90ರ ದಶಕದಲ್ಲಿ ಚಳುವಳಿಯು ಸೊರಗಿದ ಹೊತ್ತಲ್ಲಿ ಈ ಪ್ರಶ್ನೆ ಎತ್ತಿದರು. ದಲಿತ ಚಳುವಳಿಗೆ ಕೇವಲ ಸಾಮಾಜಿಕ ಆರ್ಥಿಕ ರಾಜಕೀಯ ಬೇಡಿಕೆಗಳ ಮುಖ ಸಾಲದು. ಅದರ ಬುನಾದಿಯಲ್ಲಿ ಆಧ್ಯಾತ್ಮಿಕತೆಯ ಆಯಾಮ ಕೂಡ ಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಇದಕ್ಕೆ ಕಾರಣ- ಅನೇಕ ಆಧ್ಯಾತ್ಮಿಕ ಪಂಥಗಳು ಸಾಮಾಜಿಕ ಆಧ್ಯಾತ್ಮಿಕ ಸಮಾನತೆಯ ಪ್ರಶ್ನೆಯನ್ನು ಎತ್ತಿ, ಪುರೋಹಿತಶಾಹಿ ಶಕ್ತಿಗಳ ವಿರುದ್ಧ ಪ್ರತಿರೋಧ ಮಾಡಿದ ದಟ್ಟವಾದ ಚರಿತ್ರೆಯು ಜೀವಂತ ಪರಂಪರೆಯಾಗಿ ಜನರ ನಡುವೆ ಇದ್ದುದು. ಇದರಲ್ಲಿ ಸೂಫಿ ಶರಣ ಹಾಗೂ ಆರೂಢ(ತತ್ವಪದಕಾರ) ಧಾರೆಗಳು ಮುಖ್ಯವಾಗಿದ್ದವು. ಸಮಾಜಮುಖಿ ಆಂದೋಲನಗಳು, ಹೀಗೆ ಜನಸಮುದಾಯದ ಸಾಂಸ್ಕøತಿಕ ಪರಂಪರೆಯಲ್ಲಿ ತನ್ನನ್ನು ಜೈವಿಕ ಸಂಬಂಧ ಕಂಡುಕೊಳ್ಳುವ ಯತ್ನವು, ವೈಚಾರಿಕ ತರ್ಕದ ಮೂಲಕ ಮೇಲ್ಜಾತಿ ಪುರಾಣಗಳನ್ನು ಭಗ್ನಗೊಳಿಸುವ ಮೂಲಕ ಸಮಾಜ ಅರ್ಥಮಾಡಿಕೊಳ್ಳುವ, ಮುಖಾಮುಖಿಸುವ ಹಾಗೂ ಬದಲಿಸುವ ಅಂಬೇಡ್ಕರ್ ಹಾದಿಗಿಂತ ತುಸು ಭಿನ್ನವಾಗಿತ್ತು. ಆದರೆ ಅಂಬೇಡ್ಕರ್ ತಮ್ಮ ಕೊನೆಯ ದಿನಗಳಲ್ಲಿ ಧಮ್ಮಪಂಥದಲ್ಲಿ ಗುರುತಿಸಿಕೊಂಡು ಹೊಸ ಸಾಧ್ಯತೆಯನ್ನು ಕಲ್ಪಿಸಿತ್ತು. ಇದಕ್ಕೆ ಪೂರಕವಾಗಿ, ದಲಿತರು ಕೆಳಜಾತಿಯವರು ಮಹಿಳೆಯರು ಆಧುನಿಕ ವಿಮೋಚನಾ ಚಳುವಳಿಗಳು ಕಾಣಿಸುವ ಮೊದಲಿಂದಲೂ, ಗುರುಪಂಥಗಳಲ್ಲಿ ಗುರುತಿಸಿಕೊಂಡು, ಆಧ್ಯಾತ್ಮಿಕ ಸಮಾನತೆಯನ್ನು ಅನುಭವಿಸುತ್ತಿರುವ ಜೀವಂತ ಪರಂಪರೆಗಳು ಪರಿಸರದಲ್ಲಿ ಇದ್ದವು. ಚಾರಿತ್ರಿಕವಾಗಿ ಆರೂಢ-ಅವಧೂತ ದರ್ಶನಗಳು ಜಾತಿ-ಮತಗಳ ಬಗ್ಗೆ ಕ್ರಾಂತಿಕಾರಕ ನಿಲುವನ್ನು ತೆಗೆದುಕೊಂಡ ಕಾರಣ, ಭಾರತದ ಕೆಳಜಾತಿಯವರು ಈ ಪಂಥಗಳಲ್ಲಿ ಶಿಷ್ಯರಾಗಿ ಗುರುಗಳಾಗಿ ಪ್ರವೇಶ ಪಡೆದಿದ್ದರು.

ಜನತೆಯ ಸಂಸ್ಕೃತಿಯ ಬೇರುಗಳನ್ನು ತಡಕಾಡುವ ಮತ್ತು ಆಧುನಿಕ ಚಳುವಳಿಗಳಿಗೆ ಅವನ್ನು ಅರ್ಥಪೂರ್ಣವಾಗಿ ಜೋಡಿಸಿಕೊಳ್ಳುವ ಭಾಗವಾಗಿಯೇ ಅನೇಕರು ಆಧ್ಯಾತ್ಮಿಕ ಚಳುವಳಿಗಳನ್ನು ಅಧ್ಯಯನ ಮಾಡಿದರು; ತತ್ವಪದ ಸಂಪುಟಗಳು ಸಂಪಾದನೆಗೊಂಡು ಪ್ರಕಟವಾದವು. `ನವಯಾನ’ ಸಂಸ್ಥೆಯು ಜಾತಿವಿನಾಶ ಹಾಗೂ ಕೋಮುವಾದ ನಿಗ್ರಹ ಚಳುವಳಿಗಳು ಸೂಫಿ ಮತ್ತು ಆರೂಢ ಪರಂಪರೆಗಳ ಚಿಂತನೆ, ಸಾಹಿತ್ಯ ಮತ್ತು ಸಂಗೀತ ಪರಂಪರೆಗಳನ್ನು ಅನುಸಂಧಾನ ಮಾಡಲು ನಿರ್ಧರಿಸಿತು; . ದಲಿತ ಗಾಯಕರು ಉತ್ಕಟವಾಗಿ ಹಾಡುವ ಕೈವಾರ ತಾತಯ್ಯನ ಹಾಡು ಅಥವಾ ಮೈಲಾರ ಲಿಂಗಶರಣರ `ಭಿನ್ನಭೇದವ ಮಾಡಬ್ಯಾಡಿರಿ’ ಪದವು, ಸಭೆಗಳಲ್ಲಿ ಹೋರಾಟದ ಹಾಡಿಗಿಂತಲೂ ಮಿಗಿಲಾದ ಸಂಚಲನ ಹುಟ್ಟಿಸಿದರು. ದೇವನೂರರ ಕುಸುಮಬಾಲೆ `ಪೂರ್ವಿಕ ಮಲೆಮಾದೇಶ್ವರನಿಗೆ ಅರ್ಪಿತ’ ಮಾಡಿದರು; ಕೆ.ಬಿ. ಸಿದ್ಧಯ್ಯ ಅವರು ದಲಿತ ಪುರಾಣಗಳನ್ನು ಹೊಸ ಆಶೋತ್ತರಗಳ ಜತೆ ಶೋಧಿಸುವ ಕೆಲಸ ಮಾಡಿದರು; ದಲಿತ ಚಳುವಳಿಯ ಹಿನ್ನೆಲೆಯಿಂದ ಬಂದ, ಕೋಟಗಾನಹಳ್ಳಿ ರಾಮಯ್ಯ, ಪಿಚ್ಚಳ್ಳಿ ಶ್ರೀನಿವಾಸ್ ಅವರು ಕೋಲಾರದ ತತ್ವಪದಕಾರರ ಜತೆ ಅನುಸಂಧಾನ ಮಾಡಿದರು. ಕೋಲಾರದ ಅರಿವು ಶಿವಪ್ಪ ಅವರು ಕೋಲಾರದಲ್ಲಿ ಕೈವಾರ ನಾರೇಯಣ ಅವರ ಹಾಡುಗಳನ್ನೇ ಬಳಸಿ, ಮಾಡುತ್ತಿರುವ ದಲಿತರ ಗೃಹಪ್ರವೇಶದ ಕಾರ್ಯಕ್ರಮವು ಈ ದಿಸೆಯಲ್ಲಿ ಈಚಿನ ಪ್ರಯೋಗವಾಗಿದೆ. ಅವರ ಕರಪತ್ರವು ಕೆÉೈವಾರ ತಾತಯ್ಯನ `ಏ ಜಾತಿವಾರಮೋ ಯೆರಗೇಲಮಯ್ಯ, ಸ್ತ್ರೀಪುರುಷ ಜಾತುಲಿವಿ ಸೃಷ್ಟಿಲೋ ರೆಂಡು’ ಎಂದು ಆರಂಭವಾಗುತ್ತದೆ. ಇದೇ ರೀತಿಯಲ್ಲಿ, ಉತ್ತರ ಕರ್ನಾಟಕದ ಎಡವಾದಿ ಚಳುವಳಿಯಲ್ಲಿರುವ ಸಂಗಾತಿಗಳು, ಶರಣ ಚಳುವಳಿ ಮತ್ತು ತತ್ವಪದಕಾರರ ಲೋಕಗಳಲ್ಲಿ ಹೊಸನುಡಿಗಟ್ಟನ್ನು ಶೋಧಿಸಿದರು. ಈ ಹಿನ್ನೆಲೆಯಲ್ಲಿ ಮೀನಾಕ್ಷಿ ಬಾಳಿ ಅವರ ಯತ್ನಗಳನ್ನು ನೋಡಬಹುದು. ರಂಜಾನ ದರ್ಗಾ ಬಸವತತ್ವವನ್ನೂ ಗುರುಪೀರಾ ಖಾದರಿಯವರನ್ನು ಅಧ್ಯಯನ ಮಾಡಿ ಹೊಸ ಸಾಧ್ಯತೆ ಮಂಡಿಸಿದರು. ನಟರಾಜ ಬೂದಾಳರು ಬೌದ್ಧದರ್ಶನಗಳನ್ನು ಹೊಸಕಾಲಕ್ಕೆ ಬೇಕಾದ ಲೋಕದೃಷ್ಟಿಯ ಚೌಕಟ್ಟುಗಳನ್ನಾಗಿ ಕಾಣಿಸುವ ಯತ್ನ ಮಾಡಿದರು. ಪ್ರಸನ್ನ ತಮ್ಮ ಕೈಮಗ್ಗದ ಚಳುವಳಿಯನ್ನು ಇಟಗಿಭೀಮವ್ವ, ಜೇಡರ ದಾಸಿಮಯ್ಯ, ಕಬೀರ ಮುಂತಾದ ನೇಕಾರ ಸಮುದಾಯ/ವೃತ್ತಿಯ ಜತೆಯಿದ್ದ ಸಂತರ ಜತೆ ಅನುಸಂಧಾನ ಮಾಡಿದರು. ಕೋಮುವಾದದ ಅಬ್ಬರವನ್ನು ತಡೆಯಲು ಕೋಮುವಾದ ಸೌಹಾರ್ದ ಚಳುವಳಿಯ ಭಾಗವಾಗಿ ಬಾಬಾಬುಡನಗಿರಿ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅದರ ಕಾರ್ಯಕ್ರಮಗಳಲ್ಲಿ ಸೂಫಿಗಾಯನ, ಕಬೀರಬಾಣಿ, ತತ್ವಪದ ಗಾಯನಗಳು ಎದ್ದುಕಂಡವು. ಇದೇ ವರ್ಷ ಗದಗದಲ್ಲಿ ನಡೆದ ಮೇ ಸಮ್ಮೇಳನದಲ್ಲಿ ಸೂಫಿಗಾಯಕ ಮುಕ್ತಿಯಾರ್ ಅಲಿಯವರ ಹಾಡಿಕೆಯು ಇದೇ ಪ್ರಕ್ರಿಯೆಯ ಈಚಿನ ಯತ್ನವೆನ್ನಬಹುದು.

ಅನುಭಾವಿ ಪಂಥಗಳ ಪ್ರತಿರೋಧ ಮತ್ತು ಪ್ರತಿಪಾದನೆಯ ಚಿಂತನೆಯನ್ನು ಹೊಸ ಸಮಾಜದ ಕಟ್ಟುವ ಆಶಯವುಳ್ಳ ಆಧುನಿಕ ಚಳುವಳಿಗಳು ಅರ್ಥಪೂರ್ಣವಾಗಿ ಅನುಸಂಧಾನ ಮಾಡಬೇಕು ಎಂಬ ಆಶಯ ಚೆನ್ನಾಗಿದೆ ಮತ್ತು ಸರಿಯಾಗಿದೆ. ಆದರೆ ಇದು ಪೂರ್ಣವಾದ ಫಲಗಳನ್ನು ದೊಡ್ಡ ಯಶಸ್ಸುಗಳನ್ನು ಕೊಟ್ಟಿಲ್ಲ. ತತ್ವಪದಕಾರರ ಪ್ರಭಾವ ಬಹಳ ದಟ್ಟವಾಗಿರುವ ಕಡೆಗಳಲ್ಲೂ ದಲಿತರ ಮೇಲಿನ ಹಲ್ಲೆಗಳು, ಜಾತಿತಾರತಮ್ಯದ ಘಟನೆಗಳು ಸಹ ನಡೆಯುತ್ತಲೇ ಬಂದಿವೆ. ಈ ಆಧ್ಯಾತ್ಮಿಕ ಲೋಕಗಳು ಬಲಪಂಥೀಯ ರಾಜಕಾರಣದ, ಕಾರ್ಪೊರೇಟ್ ಸಂಸ್ಕೃತಿಯ ಹಾಗೂ ಜಾತಿಮತಗಳ ಸೀಮಿತ ರಾಜಕಾರಣದ ಭಾಗವೂ ಆಗುತ್ತಿರುವ ಕಟುವಾಸ್ತವವೂ ಸಂಭವಿಸುತ್ತಿದೆ. ಯಾವುದೇ ಆಧ್ಯಾತ್ಮಿಕ ಲೋಕಗಳಾಗಲೀ ಅವುಗಳ ಅನುಸಂಧಾನವಾಗಲಿ, ನಾಟಕೀಯ ಬದಲಾವಣೆ ತರಲಾರದು. ದಮನಿತ ಜನರ ಬದುಕನ್ನು ಕ್ರಾಂತಿಕಾರಕವಾಗಿ ಪಲ್ಲಟಿಸುವ ರಾಜಕೀಯ ಆರ್ಥಿಕ ಸಾಮಾಜಿಕ ಚಳುವಳಿಗೆ ಇವು ಪೂರಕವಾದ ಪ್ರಜ್ಞೆಯನ್ನು ನಿರ್ಮಿಸಬಲ್ಲವು ಅಷ್ಟೆ. ಯಾವುದೇ ಬಗೆಯ ಹುಡುಕಾಟವು ಒಂದು ಪ್ರಕ್ರಿಯೆ. ಆಧ್ಯಾತ್ಮಿಕ ಲೋಕಗಳಲ್ಲಿ ಹೊಸ ಸಮಾಜಕ್ಕೆ ಬೇಕಾದ ಸಾಧ್ಯತೆಗಳನ್ನು ಹುಡುಕುವ ಯತ್ನವನ್ನು ಮುಂದುವರೆಸಬೇಕಿದೆ. ಅದರ ವಿಧಾನಗಳನ್ನು ಹುಡುಕಬೇಕಾಗಿದೆ. ಕರ್ನಾಟಕದ ಸೂಫಿ ಅವಧೂತ ಆರೂಢ ಪರಂಪರೆಗಳಲ್ಲಿ ಅನೇಕ ಜಟಿಲವಾದ ಸಮಸ್ಯೆಗಳು ಇವೆ; ಆದರೆ ಅಲ್ಲಿ ಅಪಾರವಾದ ಸಾಮಾಜಿಕ ಆನುಭಾವಿಕ ಸಾಹಿತ್ಯಕ ಭಾಷಿಕ ವೈಚಾರಿಕ ಕಸುವು ಸಹ ನಿಹಿತವಾಗಿದೆ. ಅಲ್ಲಿ ಹೊಸ ಸಮಾಜದ ಕನಸುಗಳಿವೆ. ಹೊಸ ಮನುಷ್ಯರ ಪರಿಕಲ್ಪನೆಗಳಿವೆ. ಸರ್ವಧರ್ಮದ ಜನರು ಸೇರಿ ಅಡುಗೆ ಮಾಡಿ ಉಣ್ಣುವ ಹಾಡುವ; ದಲಿತರು ಸೂಫಿ ಪರಂಪರೆಯನ್ನು ನಡೆಸಿಕೊಂಡು ಬಂದಿರುವ; ಸಂತನ ಪುಣ್ಯತಿಥಿಯಲ್ಲಿ ಸಾವಿರಾರು ಜನ ಕೂಡಿ ಒಟ್ಟಿಗೆ ಉಣ್ಣುವ; ರೈತಾಪಿ ಸಾಮಾನ್ಯಜನ ದಾರ್ಶನಿಕ ಚರ್ಚೆ ಮಾಡುವ; ಜಾತಿಭೇದ ಮರೆತು ಎಲ್ಲರೂ ಕೂಡಿ ಹಾಡುವ ಆಚರಣೆಗಳಿವೆ. ದೊಡ್ಡಿಯ ವೆಂಕಟಗಿರಿಯಪ್ಪ ಕಡಿಮೆ ಬೀಳುವ ಮರುಭೂಮಿಯಂತಹ ಪ್ರದೇಶದಲ್ಲಿ ದೊಡ್ಡ ಮರಗಳ ತೋಪನ್ನು ನಿರ್ಮಿಸಿದ್ದು, `ಸರ್ವಜೀವಿಗಳು ತನ್ನಂತೆ ಮನ್ನಿಸಿ ಮೂಕಾದ ಮೇಲೆ ಇನ್ನೇನಿನ್ನೇನೂ’ ಎಂಬ ಮಾತಿಗೆ ರುಜುವಾತಿನಂತಿದೆ. ಮನುಷ್ಯ ಪ್ರಾಣಿ ಸಸ್ಯಗಳ ನಡುವೆ ಅನೇಕ ಭೇದವೆಣಿಸದ ಇದೊಂದು ಜೀವಿಕೇಂದ್ರಿತ ಪರಿಸರ ಪ್ರಜ್ಞೆ. ದಲಿತರನ್ನು ಅಸ್ಪೃಶ್ಯತೆಯಿಂದ, ಮಹಿಳೆಯರನ್ನು ಪುರುಷವಾದದಿಂದ, ಮುಸ್ಲಿಮರನ್ನು ಮೂಲಭೂತವಾದದಿಂದ, ಬಡವರನ್ನು ಕೀಳರಿಮೆಯಿಂದ ತನ್ನದೇ ಮಿತಿಯಲ್ಲಿ ಪಾರುಮಾಡುವ ಆಧುನಿಕವಾದ ಚಳುವಳಿಗಳು, ವೈಚಾರಿಕ ಪ್ರಜ್ಞೆಯ ಬರೆಹಗಳು ಹಾಗೂ ಸರ್ಕಾರದ ಕಾನೂನುಗಳು ಇವೆ. ಇಂಥದೇ ಪಾರುಮಾಡುವ ಕಾರ್ಯವನ್ನು ಆಧ್ಯಾತ್ಮಿಕ ಪರಂಪರೆಗಳು ಚಾರಿತ್ರಿಕವಾಗಿ ಹೇಗೆ ಮಾಡಿಕೊಂಡು ಬಂದಿವೆ, ನಮ್ಮ ವರ್ತಮಾನ ಎದುರಿಸುತ್ತಿರುವ ಸಮಸ್ಯೆಗಳನ್ನೇ ನಮ್ಮ ಹಿರೀಕರು ಹೇಗೆಲ್ಲ ಎದುರಿಸಿದ್ದಾರೆ, ಎನ್ನುವುದು ನಮಗೆ ಪೂರ್ತಿಯಾಗಿ ತಿಳಿದಿಲ್ಲ. ಇದೊಂದು ಬೆನ್ನಹಿಂದಿನ ಬೆಳಕನ್ನು ಹುಡುಕುವ ಕಾರ್ಯ. ಪರಂಪರೆಯ ಶಕ್ತಿ ಗುಟ್ಟು ಮಿತಿಗಳು ಹಾಗೆ ಸುಲಭವಾಗಿ ಮತ್ತು ಪೂರ್ತಿಯಾಗಿ ಆಧುನಿಕ ಚಳುವಳಿಗಳ ಬಳಕೆಗೆ ಕೈವಶವಾಗುವುದಿಲ್ಲ. ಅದು ಕಡಲಕಿನಾರೆಯಲ್ಲಿ ಕಪ್ಪೆಚಿಪ್ಪು ಆರಿಸಿಕೊಂಡಂತಲ್ಲ. ಸಮುದಾಯಗಳ ಜತೆ ಬೆರೆತು ಕಟ್ಟುವ ಹೊಸ ಪ್ರಯೋಗಗಳಿಂದಲೇ ಸಾಧ್ಯವಾಗಿರಬೇಕಿರುವ ಕೆಲಸ. ಈ ಕೆಲಸದಲ್ಲಿ ತೊಡಕುಗಳಿವೆ. ಸೋಲೂ ಎದುರಾಗಬಹುದು. ಆದರೆ ಈ ಸಾಂಸ್ಕøತಿಕ ರಾಜಕಾರಣದ ಕೆಲಸ ಇನ್ನೂ ಮುಗಿದಿಲ್ಲ; ಇದು ಅಪೂರ್ಣವಾಗಿದೆ ಎಂಬುದು ಮಾತ್ರ ನಿಜ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...