ಅತೃಪ್ತಿಗಿಂತ ಅಕ್ರಮ ದಂಧೆಗಳೇ ಪಕ್ಷಾಂತರಕ್ಕೆ ಕಾರಣ?

ಅಕ್ರಮ ದಂಧೆಯ ಹುಳುಕುಗಳನ್ನು ಮುಂದಿಟ್ಟೇ ಬಿಜೆಪಿಯ ಹೈಕಮ್ಯಾಂಡ್‍ನ ನೇರ ಉಸ್ತುವಾರಿಯಲ್ಲಿ ನಡೆದ ಆಪರೇಷನ್ ಇದು ಎನ್ನುವುದು ಸ್ಪಷ್ಟವಾಗುತ್ತಿದೆ.

ಯಾವ ರೀತಿಯಿಂದ ನೋಡಿದರೂ ಇಂದು ರಾಜೀನಾಮೆ ಕೊಟ್ಟಿರುವ ಶಾಸಕರ ಕಾಂಬಿನೇಷನ್ ಬಹಳ ಆಶ್ಚರ್ಯಕರವಾಗಿ ಕಾಣುತ್ತದೆ.

ಅತೃಪ್ತಿಯೇ ಕಾರಣ ಎನ್ನುವುದಾದರೆ, ಬೈರತಿ ಬಸವರಾಜ್ ಎಂದೂ ಅತೃಪ್ತಿ ವ್ಯಕ್ತಪಡಿಸಿಲ್ಲ. ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಚ್‍ಡಿಕೆ ಮತ್ತು ಡಿಕೆಶಿ ಇಬ್ಬರಿಗೂ ಮುನಿರತ್ನ ಆಪ್ತರು.

ಅಧಿಕಾರ ಸಿಕ್ಕಿಲ್ಲದಿರುವುದು ಎನ್ನುವುದಾದರೆ ಎಂ.ಟಿ.ಬಿ.ನಾಗರಾಜ್‍ರನ್ನು ಸಚಿವರನ್ನಾಗಿಸಲಾಗಿದೆ. ಸಚಿವ ಸ್ಥಾನಕ್ಕೆ ಸಮಾನವಾದ ಬಿಡಿಎ ಅಧ್ಯಕ್ಷ ಸ್ಥಾನ ಸೋಮಶೇಖರ್‍ರಿಗೆ ಮತ್ತು ಹೊಸ ಸರ್ಕಾರ ಬಂದರೂ ಕದಲಿಸಲಾಗದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸುಧಾಕರ್‍ರಿಗೆ ಸಿಕ್ಕಿದೆ. ರಾಕೇಶ್ ಸಿಂಗ್ ಬಿಡಿಎ ಆಯುಕ್ತರಾಗಿ ಮುಂದುವರೆದರೆ ತನಗೆ ಅಡ್ಡಗಾಲು ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದರಿಂದ ಅವರನ್ನೂ ಬದಲಿಸಲಾಗಿದೆ.

ಜಾತಿಯೇ ಕಾರಣ, ಲಿಂಗಾಯಿತರು ಮತ್ತು ವಾಲ್ಮೀಕಿ ಸಮುದಾಯದ ಶಾಸಕರು ಹೆಚ್ಚಾಗಿ ಆ ಕಡೆಗೆ ಹೋಗಿದ್ದಾರೆ ಎನ್ನುವ ಹಾಗೂ ಇಲ್ಲ. ಎಂ.ಟಿ.ಬಿ ನಾಗರಾಜ್ ಮತ್ತು ಬೈರತಿ ಬಸವರಾಜ್ ಇಬ್ಬರೂ ಕುರುಬರು. ಉಳಿದ ಕಾಂಬಿನೇಷನ್ ಸಹಾ ಹಾಗಿಲ್ಲ. ಇನ್ನು ರೋಷನ್‍ಬೇಗ್ ಸ್ಪರ್ಧಿಸುತ್ತಿರುವುದು ಮುಸ್ಲಿಮರೇ ಅಧಿಕವಾಗಿರುವ ಶಿವಾಜಿನಗರದಿಂದ. ಸ್ವತಃ ಬೇಗ್ ವಿರೋಧಿಸಿದರೂ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್‍ರಿಗೇ ಬಹುಮತ ಸಿಕ್ಕಿದೆ.

ಇನ್ನು ಗೋಪಾಲಯ್ಯನವರು ಹಿಂದಿನ ಸಾಲಿನಲ್ಲೇ ಚೆಲುವರಾಯಸ್ವಾಮಿ ಮತ್ತಿತರರ ಜೊತೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದರು. ನಂತರ ಮತ್ತೆ ಪಕ್ಷದಲ್ಲೇ ಉಳಿದು ಜೆಡಿಎಸ್‍ನಿಂದಲೇ ಟಿಕೆಟ್ ಪಡೆದು ಪುನರಾಯ್ಕೆಯಾಗಿದ್ದಾರೆ.

ಹೀಗಿರುವಾಗ ಇವರೆಲ್ಲರನ್ನೂ ಬೆಸೆದ ಕಾರಣವೇನು? ಕೆಲವರಿಗೆ ಅತೃಪ್ತಿಯು ಅವಕಾಶವಾದವಾಗಿ ಪರಿವರ್ತನೆಯಾಗಿರುವುದು ವಾಸ್ತವ. ಅವರಲ್ಲಿ ಎಚ್.ವಿಶ್ವನಾಥ್, ರಾಮಲಿಂಗಾರೆಡ್ಡಿ ಮತ್ತು ಕೆ.ಸಿ.ನಾರಾಯಣಗೌಡರಿದ್ದಾರೆ. ಕುಮಟಳ್ಳಿಯವರು ಜಾರಕಿಹೊಳಿಯವರ ಹಿಂದೆ ಹೋಗುವವರು. ಬಿ.ಸಿ.ಪಾಟೀಲ್ ನಿಜಕ್ಕೂ ಅತೃಪ್ತರೇ. ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಗೆದ್ದು ಬರುತ್ತಿರುವ ಏಕೈಕ ಕಾಂಗ್ರೆಸ್ ಶಾಸಕನಾದ ತನಗೆ ಬಿಜೆಪಿಯಿಂದ ಬಂದ ಆಫರ್ ತಿರಸ್ಕರಿಸಿ ಇಲ್ಲಿ ಉಳಿದರೂ ಅಧಿಕಾರ ಸಿಕ್ಕಿಲ್ಲ ಎಂಬ ಕೊರಗು ಅವರದ್ದು. ಪ್ರತಾಪ್‍ಗೌಡ ಮತ್ತು ಶಿವರಾಮ ಹೆಬ್ಬಾರ್ ಅವರು ಮಾರಿಕೊಳ್ಳಲು ನಿಂತಿರುವುದು ಬಿಟ್ಟರೆ ಹೆಚ್ಚೇನೂ ಕಾಣುತ್ತಿಲ್ಲ. ಇಷ್ಟು ಜನರನ್ನು ಬಿಟ್ಟರೆ ಮಿಕ್ಕೆಲ್ಲರೂ ಅಕ್ರಮ ದಂಧೆಯ ಕಾರಣಕ್ಕೇ ಬಿಜೆಪಿಯಿಂದ ಬೆದರಿಕೆಗೆ ಒಳಗಾಗಿದ್ದಾರೆ ಎಂಬುದು ಹಲವು ರಾಜಕಾರಣಿಗಳ ಆಡಿಟಿಂಗ್ ನಡೆಸುವ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಅನಿಸಿಕೆ.

ಇದನ್ನೂ ಓದಿ: ಮಾನಗೇಡಿ ಶಾಸಕರು, ಹೊಣೆಗೇಡಿ ನಾಯಕರು

ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅವರ ಪ್ರಕಾರ ಎಂಟಿಬಿ ನಾಗರಾಜು, ಸೋಮಶೇಖರ್, ಭೈರತಿ ಮೂರೂ ಜನರೂ ರಿಯಲ್ ಎಸ್ಟೇಟ್ ಕುಳಗಳು. ಮುನಿರತ್ನರಿಗೆ ಸಕ್ರಮ ಮತ್ತು ಅಕ್ರಮ ದಂಧೆಗಳೆರಡೂ ಇವೆ. ರಮೇಶ್ ಜಾರಕಿಹೊಳಿ ಹಲವು ವ್ಯವಹಾರಗಳನ್ನು ನಡೆಸುತ್ತಾ, ದೊಡ್ಡ ಮಟ್ಟದ ಸಾಲ ಮಾಡಿಕೊಂಡಿರುವ ‘ಸಾಹುಕಾರ’. ಆನಂದ್‍ಸಿಂಗ್ ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿರುವ ಉದ್ಯಮಿ. ಇನ್ನು ಸುಧಾಕರ್ ಅವರ ದಿಢೀರ್ ಶ್ರೀಮಂತಿಕೆಯ ಹಿನ್ನೆಲೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ರೋಷನ್‍ಬೇಗ್ ಐಎಂಎ ಕೇಸಿನಲ್ಲಿ ಯಾವಾಗ ಜೈಲಿಗೆ ಹೋಗಬೇಕಾಗಿ ಬರುತ್ತದೋ ಹೇಳಲಾಗದು.

ಹೀಗಾಗಿ ಮೂರ್ನಾಲ್ಕು ಜನರನ್ನು ಬಿಟ್ಟರೆ ಮಿಕ್ಕೆಲ್ಲರೂ ಕನಿಷ್ಠ ನೂರು ಕೋಟಿ ಕುಳಗಳು. ಒಂದಲ್ಲಾ ಒಂದು ಬಗೆಯ ಅಕ್ರಮ ದಂಧೆಗಳು ಇವರ ಹಿಂದೆ ಇದೆ ಎಂಬುದು ಆಡಿಟರ್‍ಅವರ ಅನಿಸಿಕೆ. ಹಾಗಾಗಿಯೇ ಉತ್ತರ ಕರ್ನಾಟಕದ ಅಥವಾ ಬಳ್ಳಾರಿಯ ಶಾಸಕರು ಪಕ್ಷ ಬದಲಿಸುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು, ಅದರಲ್ಲೂ ಲಿಂಗಾಯಿತ ಶಾಸಕರ ದಂಡೇ ಹೊರಹೋಗುತ್ತದೆ ಎಂಬ ನಿರೀಕ್ಷೆಗೆ ವಿರುದ್ಧವಾಗಿ ದಕ್ಷಿಣ ಕರ್ನಾಟಕದ ಶಾಸಕರು ರಾಜೀನಾಮೆ ನೀಡಿದರು. ಅದರಲ್ಲೂ ಬೆಂಗಳೂರಿನ ನಾಲ್ವರು! ಇದನ್ನು ಯಾರೂ ಊಹಿಸಿರಲಿಲ್ಲ. ಇದು ರಾಜೀನಾಮೆಯ ಅಸಲೀ ಕಾರಣ ಅತೃಪ್ತಿಯಲ್ಲ, ಅಕ್ರಮ ದಂಧೆ ಎಂಬ ಆಡಿಟರ್‍ರ ಅಭಿಪ್ರಾಯಕ್ಕೆ ಪುಷ್ಟಿ ಕೊಡುತ್ತದೆ.

ಇದನ್ನೂ ಓದಿ: ಆನಂದ್ ಸಿಂಗ್ ರಾಜೀನಾಮೆ

‘ಆಂಧ್ರದ ಮಲ್ಯರು’ ಎಂದು ಬಿಜೆಪಿಯೇ ಮೂದಲಿಸುತ್ತಿದ್ದ ಟಿಡಿಪಿಯ ರಾಜ್ಯಸಭಾ ಸದಸ್ಯರನ್ನು ಬಿಜೆಪಿಯು ಸೆಳೆದದ್ದು ಅವರ ಅಕ್ರಮ ದಂಧೆಗಳನ್ನು ಮುಂದಿಟ್ಟು ಹೆದರಿಸಿದ್ದರಿಂದ ಎಂಬುದು ದೇಶಕ್ಕೇ ಗೊತ್ತಿದೆ. 2008ರಲ್ಲಿ ಬಿಜೆಪಿಯು ಆಪರೇಷನ್ ಕಮಲ ನಡೆಸಿದ್ದೂ ಅಕ್ರಮ ಹಣದ ಮೂಲಕವೇ ಆಗಿತ್ತು. ಅಂದರೆ ತಮ್ಮ ಜೊತೆ ಇದ್ದರೆ ಎಲ್ಲಾ ಅಕ್ರಮಗಳೂ ಮಾಫ್ ಎಂಬುದು ಬಿಜೆಪಿ ಪಕ್ಷದ ನೀತಿಯಾಗಿದೆ.

ಹೀಗಾಗಿ ಅಕ್ರಮ ದಂಧೆಯ ಹುಳುಕುಗಳನ್ನು ಮುಂದಿಟ್ಟೇ ಬಿಜೆಪಿಯ ಹೈಕಮ್ಯಾಂಡ್‍ನ ನೇರ ಉಸ್ತುವಾರಿಯಲ್ಲಿ ನಡೆದ ಆಪರೇಷನ್ ಇದು ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಶಾಸಕರು ಯಾವ ಪಕ್ಷದಲ್ಲೇ ಇದ್ದರೂ, ಇವರ ಆಸ್ತಿಪಾಸ್ತಿಗಳ ತನಿಖೆಯು ನಡೆದಾಗ ಮಾತ್ರ ಅಸಲೀ ಕಾರಣ ಬಹಿರಂಗಕ್ಕೆ ಬರುತ್ತದೆ. ಅಲ್ಲಿಯವರೆಗೆ ಇಂತಹ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇರುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here